ಒಂದು ಬಯಕೆ ಎದ್ದ ಘಳಿಗೆಯಲ್ಲಿ ನಾವು ಅದನ್ನು ತೃಪ್ತಿಪಡಿಸಲು ಪ್ರಯತ್ನ ಮಾಡುತ್ತೇವೆ. ಬಯಕೆಯನ್ನು ಪೂರೈಸಿಕೊಳ್ಳುವುದು ತೃಪ್ತಿ ಮತ್ತು ಆನಂದವನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ. ಈ ಪ್ರಕ್ರಿಯೆಯಲ್ಲಿ ನಾವು ಅನಂತ ಬಯಕೆಗಳನ್ನು ಹುಟ್ಟುಹಾಕುತ್ತ, ಅವುಗಳನ್ನು ತೃಪ್ತಿಪಡಿಸಲು ಹೆಣಗಾಡುತ್ತ ಇರುತ್ತೇವೆ ~ ಸಾ.ಹಿರಣ್ಮಯಿ
ಬಹುತೇಕರು ಇದೊಂದು ತಪ್ಪು ಮಾಡುತ್ತಾರೆ. ಕೆಲಸ ಮಾಡುವ ಮೊದಲೇ ಅದರ ಫಲದ ನಿರೀಕ್ಷೆ ಶುರುವಿಡುತ್ತಾರೆ. ನಾವು ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ, ಆದರೆ ಫಲಿತಾಂಶವು ನಮ್ಮ ಕೈಯಲ್ಲಿಲ್ಲ ಎಂಬುದನ್ನು ನೆನಪಿಟ್ಟುಕೊಂಡರೆ, ವೈಫಲ್ಯದ ನೋವು ಬಾಧಿಸುವುದಿಲ್ಲ. ಏಕೆಂದರೆ ಆಗ ನಮ್ಮ ಮನಸ್ಸು ಬಯಕೆ ರಹಿತ ಸ್ಥಿತಿಯಲ್ಲಿರುತ್ತದೆ.
ನಮ್ಮಲ್ಲಿ ಪ್ರತಿಯೊಬ್ಬರಿಗೂ ಬಯಕೆಗಳಿವೆ. ಈ ಬಯಕೆಗಳನ್ನು ಈಡೇರಿಸಿಕೊಳ್ಳುವ ಮೂಲಕ ನಮ್ಮ ದೈನಂದಿನ ಬದುಕಲ್ಲಿ ತೃಪ್ತಿ ಕಾಣಲು ನಾವು ಹವಣಿಸುತ್ತೇವೆ. ಆದರೆ ಒಂದು ಬಯಕೆಯು ಅಸಂಖ್ಯಾತ ಬಯಕೆಗಳನ್ನು ಹುಟ್ಟುಹಾಕುತ್ತದೆ. ಈ ಬಯಕೆಗಳು ಪೂರ್ಣಗೊಳ್ಳದಿದ್ದರೆ ಅಥವಾ ಭಾಗಶಃ ಪೂರ್ಣಗೊಂಡರೆ, ಅವು ಅಸಂತೋಷವನ್ನೂ ಯಾತನೆಯನ್ನೂ ಹುಟ್ಟುಹಾಕುತ್ತವೆ. ನಾವು ಅವುಗಳ ಬಗ್ಗೆ ಯೋಚಿಸಿದಂತೆಲ್ಲ ಮತ್ತಷ್ಟು ಸಂಕಟಪಡುತ್ತೇವೆ. ಹೀಗೆ ಮಾಡುತ್ತ ಸ್ವತಃ ನೋವುಂಟು ಮಾಡಿಕೊಳ್ಳುತ್ತೇವೆ.
ಜನರು ಒತ್ತಡದ ಪರಿಸ್ಥಿತಿಯಲ್ಲಿರುವಾಗ ಇಂಥ ಸಮಚಿತ್ತದ ಮನಸ್ಥಿತಿಯನ್ನು ಕಾಯ್ದುಕೊಳ್ಳಬಲ್ಲರೇ? ಅಷ್ಟೆಲ್ಲ ದುರಾಸೆ, ಆತಂಕ ಮತ್ತು ಅಸಂತೃಪ್ತಿಯ ಮಧ್ಯದಲ್ಲಿ ಸಂತೋಷವನ್ನು ಹೇಗೆ ಕಾಣಬಲ್ಲೆವು? ನೈಜ ಸಂತೋಷವು ಬಯಕೆಗಳನ್ನು ಹುಟ್ಟುಹಾಕುವುದರಿಂದ ಬರುವುದಿಲ್ಲ; ಅದು ಬಯಕೆಗಳನ್ನು ನಿಧಾನವಾಗಿ ಕಡಿಮೆಗೊಳಿಸುವುದರಿಂದ ಅಥವಾ ಅವುಗಳನ್ನು ಪೂರ್ಣವಾಗಿ ತೊಡೆದು ಹಾಕುವುದರಿಂದ ಬರುತ್ತದೆ.
ನೋವು ಮತ್ತು ಸಂತೋಷ ಒಂದೇ ನಾಣ್ಯದ ಎರಡು ಮುಖ. ನಿಮಗೆ ನೋವನ್ನು ಅನುಭವಿಸುವ ಸಾಮರ್ಥ್ಯವಿದ್ದರೆ ಸಂತೋಷವನ್ನು ಅನುಭವಿಸುವ ಸಾಮರ್ಥ್ಯವೂ ಇರುತ್ತದೆ. ಆದರೆ ನೋವು ಮತ್ತು ಸಂತೋಷ, ಸುಖ ಮತ್ತು ದುಃಖ, ಎರಡನ್ನೂ ಮೀರಲು ನೀವು ಕಲಿತಾಗಲೇ ನೈಜ ಪ್ರಗತಿ ಸಾಧ್ಯವಿದೆ. ನೋವು ಮತ್ತು ಆನಂದದಿಂದ ನಿಮ್ಮನ್ನು ನೀವು ದೂರ ಇರಿಸಿಕೊಳ್ಳುವುದರಲ್ಲಿಯೇ ಪರಿಹಾರ ಅಡಗಿದೆ.
ನೀವು ನೋವು – ಯಾತನೆಗಳೆರಡರಿಂದಲೂ ದೂರವಿರಬೇಕೆಂದರೆ, ನಿಮ್ಮ ಸಂಕುಚಿತತೆಯನ್ನು ಕಳೆದುಕೊಂಡು ಸಾರ್ವತ್ರಿಕತೆಯನ್ನು ಅಪ್ಪಿಕೊಳ್ಳಬೇಕು. ಅಪೇಕ್ಷೆಗಳನ್ನು ಇಟ್ಟುಕೊಳ್ಳದೆಯೇ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವ ಪ್ರೇರಣೆಯೇ ಬಯಕೆರಹಿತ ಸ್ಥಿತಿಗೆ ತಲುಪುವುದಾಗಿರುತ್ತದೆ. ಇದರರ್ಥ ಹಣ ಗಳಿಸುವುದು ಕೆಟ್ಟದ್ದು ಎಂದಲ್ಲ. ಆದರೆ ಮಿತಿಮೀರಿ ಗಳಿಸುವ ಅಪೇಕ್ಷೆಯು ಮತ್ತಷ್ಟು ಬಯಕೆಗಳನ್ನು ಹುಟ್ಟುಹಾಕುತ್ತದೆ. ಇದು ಒಂದು ರೀತಿ ಕೊನೆಯೇ ಇಲ್ಲದ ಸುರುಳಿಯ ಹಾಗೆ.
ಒಂದು ಬಯಕೆ ಎದ್ದ ಘಳಿಗೆಯಲ್ಲಿ ನಾವು ಅದನ್ನು ತೃಪ್ತಿಪಡಿಸಲು ಪ್ರಯತ್ನ ಮಾಡುತ್ತೇವೆ. ಬಯಕೆಯನ್ನು ಪೂರೈಸಿಕೊಳ್ಳುವುದು ತೃಪ್ತಿ ಮತ್ತು ಆನಂದವನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ. ಈ ಪ್ರಕ್ರಿಯೆಯಲ್ಲಿ ನಾವು ಅನಂತ ಬಯಕೆಗಳನ್ನು ಹುಟ್ಟುಹಾಕುತ್ತ, ಅವುಗಳನ್ನು ತೃಪ್ತಿಪಡಿಸಲು ಹೆಣಗಾಡುತ್ತ ಇರುತ್ತೇವೆ. ಬಯಕೆಯನ್ನು ತೃಪ್ತಿ ಪಡಿಸುವುದು ಎಂದರೆ ಅದಕ್ಕೆ ನಮ್ಮನ್ನು ಕೊಟ್ಟುಕೊಳ್ಳುವುದು, ಅವುಗಳ ದಾಸರಾಗುವುದು ಎಂದೇ ಅರ್ಥ.
ಇದೊಂದು ಅಂತ್ಯವಿಲ್ಲದ ಪ್ರಕ್ರಿಯೆಯಾಗಿದ್ದರಿಂದ, ಈ ಚಕ್ರವು ಯಾತನೆಯನ್ನೇ ತಂದು ಕೊಡುವುದು. ಆದ್ದರಿಂದ ಬಯಕೆಯನ್ನು ತೃಪ್ತಿಪಡಿಸುವ ಬದಲಿಗೆ, ಅದನ್ನು ಜಯಿಸಲು ಪ್ರಯತ್ನಿಸುವುದೇ ಒಳ್ಳೆಯದು.
ನಿಮ್ಮೆಲ್ಲ ಅಸಂಖ್ಯಾತ ಆಸೆಗಳ ಬದಲಿಗೆ ಪರಮ ಸತ್ಯವನ್ನು ಕಂಡುಕೊಳ್ಳುವ ಒಂದು ಯೋಗ್ಯ ಅಪೇಕ್ಷೆ ಇಟ್ಟುಕೊಳ್ಳುವುದು ಅತ್ಯುತ್ತಮ ವಿಧಾನ. ನಿಮ್ಮ ಇಡೀ ಮೈಮನಸ್ಸನ್ನು ಆವರಿಸಿಕೊಳ್ಳುವ ಈ ಅಪೇಕ್ಷೆಯನ್ನು ಬೆನ್ನುಹತ್ತಿದಾಗ ಉಳಿದದ್ದೆಲ್ಲವೂ ತಾನೇತಾನಾಗಿ ಕಳಚಿಹೋಗುತ್ತವೆ. ಸಾಧಕರು ಆಚರಣೆ ಮತ್ತು ಭಕ್ತಿಯಿಂದ ಸಾಕ್ಷಾತ್ಕಾರ ಗಳಿಸುವ ಗುರಿಯನ್ನೇ ಮುಖ್ಯವಾಗಿಟ್ಟುಕೊಂಡಿರುತ್ತಾರೆ. ಮತ್ತು ಅದರತ್ತಲೇ ಮನಸ್ಸು ನೆಟ್ಟು ಆ ಸ್ಥಿತಿಯನ್ನು ತಲುಪುತ್ತಾರೆ ಕೂಡಾ. ಅಲ್ಲಿ ಯಾವ ಯಾತನೆಯೂ ಇರುವುದಿಲ್ಲ. ಶಾಶ್ವತ ಸಂತೋಷ ಅಥವಾ ಮಹದಾನಂದದ ಸ್ಥಿತಿ ಅಲ್ಲಿರುತ್ತದೆ.