ಇನ್ನು ಮೂವತ್ತೇಮೂವತ್ತು ಕಿಲೋಮೀಟರ್ ಹೆಜ್ಜೆ ಹಾಕಿದ್ದರೆ ಹೈಸರ್ ತಲುಪಿಬಿಡುತ್ತಿದ್ದ. ಈ ದುರಿತ ಕಾಲದಲ್ಲಿ ಮುಂಬಯಿಯಿಂದ ಉತ್ತರಪ್ರದೇಶಕ್ಕೆ ಪ್ರಯಾಣಿಸಿ ಮನೆ ತಲುಪುವುದು ಅಂದರೆ ಸುಮ್ಮನೆ ಮಾತೇ? ರಾಮ್ ಕೃಪಾಲ ಮನಸು ಮಾಡಿಬಿಟ್ಟಿದ್ದ. ತಾನು ಆಗಾಗ ಮಾಡುವಂತೆ ಕಬೀರರ ದೋಹೆ ಗುನುಗುತ್ತಾ ಉಲ್ಲಾಸ ತುಂಬಿಕೊಂಡ. ಆದರೆ…. | ಚೇತನಾ ತೀರ್ಥಹಳ್ಳಿ
ಘಾಗ್ಗರ್ ನದಿಯ ದಂಡೆಯಲ್ಲಿ ಚಿತೆ ಉರಿಯುತ್ತಿದೆ. ಸುರೀಂದರ್ ಅನ್ಯಗ್ರಹದಿಂದ ಬಂದವನಂತೆ ಮೈತುಂಬ ಕವಚದಂಥ ಉಡುಗೆ ತೊಟ್ಟು ಅಪ್ಪನ ಕಪಾಲ ಚಿಟ್ಟೆನ್ನುವುದನ್ನೆ ಕಾಯುತ್ತಿದ್ದಾನೆ. ಆ ಬೆಂಕಿಯಲ್ಲಿ ಸುಟ್ಟುಹೋಗುತ್ತಿರುವ ದೇಹ ರಾಮ್ ಕೃಪಾಲನದ್ದು. ಅವನು ತೀರಿಕೊಂಡಿದ್ದು ಕಾಯಿಲೆಯಿಂದಲೋ ನಡೆನಡೆದು ಸುಸ್ತಾಗಿಯೋ ಗೊತ್ತಿಲ್ಲ.
ನಡೆದು ಸಾಯುತ್ತಾರೆಯೇ? “ಆರೋಗ್ಯ ಉತ್ತಮವಾಗಿರಬೇಕೆಂದರೆ ದಿನಾ ಬೆಳಗ್ಗೆ ಮತ್ತು ಸಂಜೆ ಕೊಂಚ ನಡೆಯಿರಿ.” ಅನ್ನುತ್ತಾರಲ್ಲವೆ ಡಾಕ್ಟರ್?
ಹೌದು. ಆದರೆ ಅದು ಹೊಟ್ಟೆ ತುಂಬಿದವರಿಗೆ, ಅದನ್ನು ಕರಗಿಸಲಿಕ್ಕೆ. ಸಮಯವಿದ್ದವರ ವಿಹಾರಕ್ಕೆ. ರಾಮ್ ಕೃಪಾಲ್ ನಡೆದಿದ್ದು ಊರು ಸೇರಲು. ಮುಂಬೈಯಿಂದ ಉತ್ತರಪ್ರದೇಶದ ಸಂತಕಬೀರ ನಗರದ ವರೆಗೆ ಅವನು ಪ್ರಯಾಣಿಸಿದ್ದು ಸುಮಾರು ಸಾವಿರದಾ ಆರುನೂರು ಕಿಲೋಮೀಟರುಗಳು!!
ಇನ್ನು ಮೂವತ್ತೇಮೂವತ್ತು ಕಿಲೋಮೀಟರ್ ಹೆಜ್ಜೆ ಹಾಕಿದ್ದರೆ ಹೈಸರ್ ತಲುಪಿಬಿಡುತ್ತಿದ್ದ.
ಈ ದುರಿತ ಕಾಲದಲ್ಲಿ ಮುಂಬಯಿಯಿಂದ ಉತ್ತರಪ್ರದೇಶಕ್ಕೆ ಪ್ರಯಾಣಿಸಿ ಮನೆ ತಲುಪುವುದು ಅಂದರೆ ಸುಮ್ಮನೆ ಮಾತೇ?
ರಾಮ್ ಕೃಪಾಲ ಮನಸು ಮಾಡಿಬಿಟ್ಟಿದ್ದ. ತಾನು ಆಗಾಗ ಮಾಡುವಂತೆ ಕಬೀರರ ದೋಹೆ ಗುನುಗುತ್ತಾ ಉಲ್ಲಾಸ ತುಂಬಿಕೊಂಡ.
ಮನ್ ಕೆ ಹಾರೇ ಹಾರ್ ಹೈ ಮನ್ ಕೇ ಜೀತೆ ಜೀತ್ / ಕಹ್ ಕಬೀರ್ ಹಾರೀ ಪಾಯೇ ಮನ್ ಕೆ ಹೀ ಪರ್’ತೀತ್…!
ಅದೇ ಹುಮ್ಮಸ್ಸಿನಲ್ಲಿ ಲಕ್ನೋ ಹೆದ್ದಾರಿಯಲ್ಲಿ ತನ್ನನ್ನು ಹೊತ್ತು ತಂದ ಟ್ರಕ್ಕಿಳಿದು ಹೆಂಡತಿಗೆ ಕರೆ ಮಾಡಿದ್ದ, “ಹೆಚ್ಚೆಂದರೆ ಅರ್ಧ ಮುಕ್ಕಾಲು ದಿನ… ಮನೆಸೇರಿಬಿಡುತ್ತೇನೆ!”
ರಾಮ್ ಕೃಪಾಲ್ ಮುಂಬಯಿಯ ಬಣ್ಣ ಮತ್ತು ಪಾಲಿಶ್ ಅಂಗಡಿಯಲ್ಲಿ ಕೆಲಸ ಮಾಡುತ್ತ ಇಪ್ಪತ್ತು ವರ್ಷಗಳೇ ಕಳೆದಿದ್ದವು. ಕರೋನಾ ವೈರಾಣು ಹರಡಿ ಎಲ್ಲೆಡೆ ಕೋವಿಡ್ ರೋಗ ಬಡಿದು ಊರಿಗೆ ಊರನ್ನೆ ಮುಚ್ಚಲಾಯಿತು. ಲಾಕ್ ಡೌನ್ ಘೋಷಣೆಯಾಗಿ ಸಾರಿಗೆ ವ್ಯವಸ್ಥೆ ಬಂದ್ ಆಯಿತು. ಇತ್ತ ಸಂಬಳವೂ ಇಲ್ಲ. ಖಾಲಿ ಹೊಟ್ಟೆ ಮೇಲೆ ಹೇಗಾದರೂ ಮನೆ ಸೇರಿಬಿಡುವ ಕನಸಿನ ತಣ್ಣೀರು ಬಟ್ಟೆ!
ತಿಂಗಳ ಮೇಲಷ್ಟು ದಿನ ಮನೆ ಸೇರುವ ಕಾತರದಲ್ಲೆ ಕಳೆದವು. ರಾಮ್ ಕೃಪಾಲ್ ಇದ್ದ ಚಾಳಿನ ಸುತ್ತಲ ಮಂದಿ ಟ್ರಕ್ಕುಗಳಲ್ಲಿ ತಮ್ಮ ತಮ್ಮ ಊರುಗಳಿಗೆ ಹೊರಟಿದ್ದರು. ಉತ್ತರ ಪ್ರದೇಶದ ಕಡೆ ಹೊರಡುವ ಅಂಥದೊಂದು ಟ್ರಕ್ಕಿನಲ್ಲಿ ರಾಮ್ ಕೃಪಾಲನೂ ಜಾಗ ಗಿಟ್ಟಿಸಿಕೊಂಡ. ಜಾಗ ಅಂದರೆ…. ಒಂಟಿ ಕಾಲೂರುವಷ್ಟು… ಅದೂ ಐದಾರು ಪಟ್ಟು ಬೆಲೆ ತೆತ್ತು.
ಕೈಯಲ್ಲೊಂದು ಮೊಬೈಲು, ನೀರಿನ ಬಾಟಲಿ. ಜೇಬಲ್ಲೊಂದು ಮಾತ್ರೆ ಪಟ್ಟಿ.
ಪ್ರಯಾಣದುದ್ದಕ್ಕೂ ರಾಮ್ ಕೃಪಾಲನ ಕಣ್ಣ ಮುಂದೆ ಮನೆಯೇ ಕುಣಿಯುತ್ತಿತ್ತು. ನಾನು ಬಂದುಬಿಡ್ತೀನಿ ಅಂದಾಗ ಹೆಂಡತಿಯೂ ಮಕ್ಕಳೂ ಇಷ್ಟು ಕಾದಿದ್ದೀರಿ, ಇನ್ನೂ ಚೂರು ಕಾಯಿರಿ… ಸರ್ಕಾರ ಅದೇನೋ ರೈಲು ಬಿಡುತ್ತದಂತಲ್ಲ ಅಂದಿದ್ದರು.
ಸರ್ಕಾರ ರೈಲು ಬಿಡ್ತಲೇ ಇರುವುದನ್ನು ಕಂಡಿದ್ದ ರಾಮ್ ಕೃಪಾಲ್, ಅದನ್ನು ನಂಬಲು ಮತ್ತು ಅದಕ್ಕಾಗಿ ಕಾಯಲು ಸಿದ್ಧನಿರಲಿಲ್ಲ. ಹೇಗಾದರೂ ಸರಿ, ಒಮ್ಮೆ ಊರು ಸೇರಿಕೊಂಡುಬಿಡಬೇಕು. ಸತ್ತರೂ ಹುಟ್ಟಿದ ಮಣ್ಣಲ್ಲಿ ಸಾಯಬೇಕು!
ಈ ಎಲ್ಲ ಫ್ಲಾಶ್’ಬ್ಯಾಕಿನಲ್ಲಿ ಪ್ರಯಾಣದ ಆಯಾಸ ಮನಸಿಗೆ ಬರಲಿಲ್ಲ. ಟ್ರಕ್ ಇಳಿಯುವಾಗ ಕಾಲುಗಳು ಪದ ಹೇಳುತ್ತಿದ್ದವು. ಅರವತ್ತೆಂಟರ ವಯಸ್ಸಲ್ಲಿ ಇಂಥದೊಂದು ಪ್ರಯಾಣ ಹುಡುಗಾಟವಲ್ಲ!
ಹೆಂಡತಿಗೆ ಕರೆ ಮಾಡಿ ತುಂಬಿಕೊಂಡ ಉಲ್ಲಾಸ ಮುಂದಿಟ್ಟ ಹೆಜ್ಜೆಹೆಜ್ಜೆಗೂ ಸೋರುತ್ತ ಹೋಯಿತು. ಬಾಟಲಿಯಲ್ಲಿ ನೀರು ಖಾಲಿ. ಹಿಂದೆ ಮುಂದೆ ಅವನಂತೆಯೇ ಟ್ರಕ್ ಇಳಿದ ಸಾಕಷ್ಟು ಜನ ನಡೆಯುತ್ತಿದ್ದರು. ಇವನು ಅದಾಗಲೇ ದಣಿದುಹೋಗಿದ್ದ. ತಾನೀಗ ಸಂತಕಬೀರ ನಗರದಲ್ಲಿ ಇದ್ದೇನೆ! ಮನೆ ಸೇರಲು ಇನ್ನು ಮೂವತ್ತೇ ಕಿಲೋಮೀಟರು… ಮೈಯಲ್ಲಿ ಶಕ್ತಿ ತುಂಬಿಕೊಳ್ಳಲು ಹೆಣಗಿದ. ಗಂಟಲಾರುತ್ತಿತ್ತು. ಕಣ್ಣು ಕಪ್ಪುಗಟ್ಟಿತು. “ನೀರು… ನೀರು…” ಅಂಗಲಾಚಿದ. ನಡೆಯುತ್ತಿದ್ದವರು ನಿಂತರು. ರಾಮ್ ಕೃಪಾಲ ನೆಲದ ಮೇಲೆ ಕುಸಿದ. ಆಸ್ಪತ್ರೆ ಸೇರುವ ಮೊದಲೇ ಹೆಣವಾಗಿದ್ದ.
ಕೃಪಾಲನ ಹೆಂಡತಿ ತನ್ನ ಗಂಡ ಸತ್ತಿಲ್ಲವೆಂದೇ ವಾದಿಸುತ್ತಿದ್ದಾಳೆ. “ಹತ್ತಿರವಿದ್ದೀನಿ, ಬಂದುಬಿಡ್ತೀನಿ… ನನಗಾಗಿ ಕಾದಿರು ಅಂದಿದ್ದಾರೆ” ಎಂದು ಬಿಕ್ಕುತ್ತಿದ್ದಾಳೆ.
ಚಿತೆಯಲ್ಲಿ ಕಪಾಲ ಚಿಟ್ಟನ್ನುತ್ತಿದೆ…
ಸುರಿಂದರ್ ಬೆಂಕಿಗೆ ಬೆನ್ನು ಹಾಕಿ ಮನೆಯ ಹಾದಿ ಹಿಡಿದಿದ್ದಾನೆ.
ರಾಮ ಕೃಪಾಲನ ಆತ್ಮ ಹಾದಿ ನಡೆನಡೆದು ದಣಿಯುತ್ತಿರುವ ನೂರು ಸಾವಿರ ದೇಹಗಳನ್ನು ನೋಡುತ್ತ ದೋಹೆ ಗುನುಗುತ್ತಿರಬೇಕು;
ಕಬೀರಾ ಹಮಾರ ಕೋಯಿ ನಹೀ ಹಮ್ ಕಹೂ ಕೆ ನಾಯ್ / ಪೋರೆ ಪಹುಂಚೆ ನಾವ್ ಜ್ಯೋ ಮಿಲೀ ಕೆ ಬಿಚುರಿ ಜಾಯ್….
(ನೈಜ ಘಟನೆ ಆಧಾರಿತ ಕಥೆ ; ಆಧಾರ : ಅಂತರ್ಜಾಲ ವರದಿಗಳು| ಚಿತ್ರ: ರಾಮ್ ಕೃಪಾಲ್ ಚಿತೆ ಎದುರು ಪುತ್ರ ಸುರಿಂದರ್) | (ಇದು ನೈಜ ಘಟನೆ ಆಧರಿಸಿದ ಕಾಲ್ಪನಿಕ ಕಥಾ ಸರಣಿ)