ಎದೆಗಿಳಿದ ನೋವಿನ ಚಿತ್ರ : ಕೊರೊನಾ ಕಾಲದ ಕಥೆಗಳು #2

ರಾಮ್ ಪುಕಾರ್ ಪಂಡಿತನಿಗೆ ಅದೊಂದು ಸಂಜೆ ಬರಸಿಡಿಲಿನಂಥ ಸುದ್ದಿ ಎರಗಿತ್ತು. ತನ್ನ ಒಂದು ವರ್ಷದ ಗಂಡು ಮಗು ಅನಾರೋಗ್ಯದಿಂದ ನರಳುತ್ತಿದೆ. “ನಮ್ಮ ಲಲ್ಲಾ…” ಅಂದು ಕಾಲುಗಂಟೆ ಫೋನ್ ಹಿಡಿದೇ ಅತ್ತಿದ್ದ ಹೆಂಡತಿ, “ಕೊನೆ ಸಲ ನೋಡಲಿಕ್ಕಾದರೂ ಬಾ…” ಅಂತ ಬಿಕ್ಕುತ್ತ ಹೇಳಿದ್ದಳು. ಫೋನಿಟ್ಟವನೇ ಹಿಂದೆ ಮುಂದೆ ನೋಡದೆ ನಡೆಯಲು ಶುರುವಿಟ್ಟಿದ್ದ ಪಂಡಿತ್ | ಚೇತನಾ ತೀರ್ಥಹಳ್ಳಿ

ಸುಮಾರು ನಲವತ್ತರ ಆಸುಪಾಸಿನ ಗಂಡಸೊಬ್ಬ ನಿಜಾಮುದ್ದಿನ್ ಸೇತುವೆ ರಸ್ತೆಯ ಬದಿ ಕೂತು ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಮಾಸಲು ಮೊಬೈಲ್ ಫೋನ್ ಅವನ ಕೆನ್ನೆಗಾತುಕೊಂಡು ತೋಯುತ್ತಿತ್ತು.

ಅತುಲ್ ಯಾದವ್ ಎಂದಿನಂತೆ ಕೊರೊನಾ ವಲಸಿಗರ ಚಿತ್ರಗಳನ್ನು ಸೆರೆಹಿಡಿಯಲು ಕಾರಿನಲ್ಲಿ ಹೊರಟಿದ್ದ. ಛಾಯಾಗ್ರಾಹಕರ ಕಣ್ಣುಗಳು ಬರೀ ವ್ಯಕ್ತಿ ಅಥವಾ ವಸ್ತುಗಳನ್ನು ನೋಡುವುದಿಲ್ಲ. ಅರೆಕ್ಷಣದ ಸ್ತಬ್ಧದಲ್ಲಿ ಇಡೀ ಕಥೆಯನ್ನೇ ಹಿಡಿದುಬಿಡುತ್ತವೆ.

ವಲಸೆ ಕಾರ್ಮಿಕರು ದಂಡಿಯಾಗಿ ನಡೆಯುತ್ತ ಹೋಗುವುದು, ಅವರ ಜೋಲು ಮುಖಗಳು, ಸಂಕಟದ ನಿಟ್ಟುಸಿರು ಈ ಯಾವುದೂ ಅತುಲ್ ಯಾದವನಿಗೆ ಹೊಸತಾಗಿರಲಿಲ್ಲ. ಈಗಾಗಲೇ ಅವನು ಅವನ್ನು ಕಾಣಲು ಮಾನಸಿಕವಾಗಿ ಸಿದ್ಧಗೊಂಡೇ ಮನೆಯಿಂದ ಹೊರಗೆ ಕಾಲಿಡುತ್ತಿದ್ದ.

ಆದರೆ ಈ ದಿನ ಇಷ್ಟು ವಯಸ್ಕ ಗಂಡಸೊಬ್ಬ ಬಿಕ್ಕಿಬಿಕ್ಕಿ ಅಳುತ್ತಿರುವುದು ಅವನಿಗೆ ಅಚ್ಚರಿಯ ಜೊತೆ ಆಘಾತವನ್ನೂ ಉಂಟುಮಾಡಿತ್ತು. ತಡಮಾಡದೆ ಕ್ಯಾಮೆರಾದಲ್ಲಿ ಅವನ ದುಃಖವನ್ನು ಸೆರೆಹಿಡಿದು, ಕಾರಿಂದ ಕೆಳಗಿಳಿದ. ಅವನೆದುರು ನಿಂತು, ಕುತ್ತಿಗೆಯನ್ನು ಅವನ ಮುಖದತ್ತ ಬಾಗಿಸಿ ಕೇಳಿದ, “ಭಯ್ಯಾ, ಕಿದರ್ ಜಾನಾ ಹೈ?”

ಆ ಹೊತ್ತಿಗೆ ಮೊಬೈಲ್ ಜಾರಿಸಿ ಕೊನೆಯದೇನೋ ಅನ್ನುವಂತೆ ಸಂಕಟದ ಉಸಿರು ತಳ್ಳುತ್ತಿದ್ದ ಆತ ಕೈ ಚಾಚಿ ‘ಉಧರ್’ ಅಂದ.

ಉಧರ್… ಅಲ್ಲಿ… ಎಲ್ಲಿ!? ನಿಜಾಮುದ್ದೀನ್ ಸೇತುವೆಯಾಚೆಗಾ? ಅಥವಾ ಅದರ ಕೆಳಗೆ ಹರೀತಿರುವ ಯಮುನೆಯ ಆಚೆ ದಡಕ್ಕಾ? ಅಥವಾ ಅಗೋ ಯಮುನೆಯಾಚೆ, ರಸ್ತೆಯಾಚೆ, ದೆಹಲಿಯ ಗಡಿಯಾಚೆ ಕಣ್ ಹಾಯಿಸಿದಷ್ಟೂ ಹಬ್ಬಿಕೊಂಡ ಊರು ದಿಗಂತ ಸೇರಿದೆಯಲ್ಲ, ಆ ಕ್ಷಿತಿಜದ ಕಡೆಗಾ!?

ಆತ ಹೋಗಬೇಕಿದ್ದ ‘ಉಧರ್’, ಅವನಿದ್ದ ಜಾಗದಿಂದ ಸಾವಿರದಾ ಇನ್ನೂರು ಮೈಲುಗಳಾಚೆ ಇದೆ! ಆ ‘ಉಧರ್’, ದೂರದ ಬಿಹಾರದ ಬೇಗುಸರಾಯಿಯ ಒಂದು ಪುಟ್ಟ ಹಳ್ಳಿ, ಬರಿಯಾರಪುರ…!!

ಅತುಲ್ ಯಾದವ್ ಆ ಅಳುವ ಗಂಡಸಿನ ಕಣ್ಣುಗಳಲ್ಲೊಂದಷ್ಟು ಭರವಸೆ ತುಂಬಲು ಬಯಸಿದ್ದ. ಬಾಕಿಯವರಂತೆ ದೆಹಲಿಯ ನಜಫ್’ಗರ್ ಇಂದ ಕಾಲ್ನಡಿಗೆ ಹೊರಟವನನ್ನು ಪೊಲೀಸರು ಮೂರು ದಿನಗಳ ಹಿಂದೆ ನಿಜಾಮುದ್ದಿನ್ ಸೇತುವೆ ಮೇಲೆ ತಡೆದು ನಿಲ್ಲಿಸಿದ್ದರು. ಆತ ಅಂಗಲಾಚಿ ಬೇಡಿಕೊಂಡರೂ ಪ್ರಯೋಜನವಾಗಿರಲಿಲ್ಲ. ಪೂರಾ ಮೂರು ದಿನಗಳ ಕಾಲ ಸೇತುವೆ ರಸ್ತೆಯ ಬದಿಯಲ್ಲಿ ಹಸಿದು, ನಿದ್ದೆಗೆಟ್ಟು, ಆಗಾಗ ಹೆಂಡತಿಗೆ ಫೋನ್ ಮಾಡಿ ಬ್ಯಾಟರಿ ಖಾಲಿಯಾಗದಂತೆ ಪಾಡುಪಡುತ್ತಾ ಕಾಲ ತಳ್ಳಿದ್ದ.

ಮೊದಲಷ್ಟು ಬಿಸ್ಕೀಟು, ನೀರು ಕೊಟ್ಟು ಸಂತೈಸಿದ ಅತುಲ್, “ನೋಡೋಣ, ಪೊಲೀಸರ ಬಳಿ ಹೇಳಿ ಮುಂದೆ ಹೋಗಲಿಕ್ಕೆ ಪರ್ಮಿಶನ್ ಕೊಡಿಸ್ತೀನಿ” ಅಂತ  ಧೈರ್ಯತುಂಬಿದ. ತನ್ನ ಮೀಡಿಯಾ ಕಾರ್ಡು ತೋರಿಸಿ ಅವನಿಗೆ ಮುಂದಕ್ಕೆ ಹೋಗಲು ಅವಕಾಶ ಮಾಡಿಸಿಕೊಟ್ಟ.

ಮುಂದೆ ಆತನಿಗೆ ದೆಹಲಿಯಿಂದ ವಲಸಿಗರ ವಿಶೇಷ ರೈಲಿನಲ್ಲಿ ಬಿಹಾರ ತಲುಪಿಕೊಳ್ಳಲು ಅವಕಾಶ ಸಿಕ್ಕಿತು.

ಆದರೆ,

ಆ ವೇಳೆಗೆ ಹೆಚ್ಚೂಕಡಿಮೆ ಐದು ದಿನಗಳ ಹಿಂದೆ ತೀರಿಕೊಂಡ ವರ್ಷದ ಮಗು ಮಣ್ಣಲ್ಲಿ ಮಲಗಿತ್ತು.

ಹೌದು.

ಅವನ ಹೆಸರು ರಾಮ್ ಪುಕಾರ್ ಪಂಡಿತ್. ನಜಫ್’ಗರ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಕರೋನಾ ಹಾವಳಿಯ ಲಾಕ್ ಡೌನ್ ಕಾರಣದಿಂದ ಕೆಲಸವಿಲ್ಲದೆ ತಿಂಗಳ ಮೇಲಾಗಿತ್ತು. ಹಾಗೂ ಹೀಗೂ ಎಲ್ಲರಿಗೆ ಬಂದ ಕಷ್ಟವೇ ತನಗೂ ಅಂದುಕೊಂಡು ಕಾಲ ತಳ್ಳಿದ್ದ ರಾಮ್ ಪುಕಾರ್ ಪಂಡಿತನಿಗೆ ಅದೊಂದು ಸಂಜೆ ಬರಸಿಡಿಲಿನಂಥ ಸುದ್ದಿ ಎರಗಿತ್ತು. ತನ್ನ ಒಂದು ವರ್ಷದ ಗಂಡು ಮಗು ಅನಾರೋಗ್ಯದಿಂದ ನರಳುತ್ತಿದೆ. “ನಮ್ಮ ಲಲ್ಲಾ…” ಅಂದು ಕಾಲುಗಂಟೆ ಫೋನ್ ಹಿಡಿದೇ ಅತ್ತಿದ್ದ ಹೆಂಡತಿ, “ಕೊನೆ ಸಲ ನೋಡಲಿಕ್ಕಾದರೂ ಬಾ…” ಅಂತ ಬಿಕ್ಕುತ್ತ ಹೇಳಿದ್ದಳು. ಫೋನಿಟ್ಟವನೇ ಹಿಂದೆ ಮುಂದೆ ನೋಡದೆ ನಡೆಯಲು ಶುರುವಿಟ್ಟಿದ್ದ ಪಂಡಿತ್.

ಲಲ್ಲಾನಿಗಾಗಿ ಕೊಂಡಿದ್ದ ಬಣ್ಣದ ತಿರುಗಣಿ, ರಬ್ಬರ್ ಬೊಂಬೆಗಳು, ಸೆಖೆಗೆ ಆದೀತೆಂದು ಆರಿಸಿ ಆರಿಸಿ ಖರೀದಿ ಮಾಡಿದ ಹತ್ತಿಬಟ್ಟೆ ಎಲ್ಲವೂ ಅವನ ಕೋಣೆಯಲ್ಲೇ ಉಳಿದುಹೋದವು. ಹೆಂಡತಿ ಮಗು “ಈಗಲೋ ಆಗಲೋ….” ಅಂದಿದ್ದಾಳಲ್ಲವೆ? ಸಾವಿರ ಕಿಲೋಮೀಟರಿಗಿಂತಲೂ ದೂರದ ಊರು, ಆದರೇನು?ಲಲ್ಲಾನ ಮುಖ ಮತ್ತೆ  ನೋಡಲು ಸಿಗ್ತದೋ ಇಲ್ಲವೋ…. – ಹೀಗಂದುಕೊಂಡವ ಕ್ಷಣ ಹಾಗೇ ನಿಂತ. ನನ್ನ ಲಲ್ಲಾನನ್ನು ನೋಡಿ ಎಷ್ಟು ತಿಂಗಳಾದವು?  ಅವನಿಗೆ ನನ್ನ ನೆನಪಾಗಿರುತ್ತದಾ?

ನಾಮಕರಣಕ್ಕೆ ಬಂದವನು ವಾಪಸು ಹೊರಟಾಗ ಹೆಜ್ಜೆ ಎತ್ತಿಡಲಾಗದಷ್ಟು ಮನಸು ಭಾರವಾಗಿತ್ತು. “ಲಲ್ಲಾ ಅಂಬೆಗಾಲಿಡ್ತಿದಾನೆ…” ಅವಳಂದಾಗ ಬೆನ್ನುಮುರಿಯುವಷ್ಟು ಕೆಲಸದ ನಡುವೆಯೂ ಎಷ್ಟು ಸಂಭ್ರಮವಾಗಿತ್ತು ! “ಈ ಸಲ ಊರಿಗೆ ಹೋದಾಗ ಮಗುವಿನ ಕೈಹಿಡಿದು ನಡೆಸಬೇಕು” ಅದೆಷ್ಟು ಸಲ ಅಂದುಕೊಂಡಿದ್ದನೋ… ಲಲ್ಲಾನ ಜೊತೆ ಆಡುವಂತೆ ಎಷ್ಟು ಸಲ ಕನಸಲ್ಲೆ ಸುಖವುಂಡಿದ್ದನೋ…

ಈ ಎಲ್ಲ ಯೋಚನೆ ಹೊತ್ತು ನಡೆಯುತ್ತಿರುವಷ್ಟೂ ಕಾಲ ಊರು ಸೇರುವ ನಂಬಿಕೆ ಅವನ ದುಃಖವನ್ನು ಬದಿಗೊತ್ತಿತ್ತು. ಯಾವಾಗ ಪೊಲೀಸರು ಸೇತುವೆ ಮೇಲೆ ಅಡ್ಡಹಾಕಿದರೋ, ಪಂಡಿತ್ ಒಳಗಿಂದೊಳಗೆ ಕುಸಿದುಹೋದ. ಅದೇ ಹೊತ್ತಿಗೆ ಮಗು ಶಾಶ್ವತವಾಗಿ ಕಣ್ಮುಚ್ಚಿದ ಸುದ್ದಿ ಬಂತು. ಕೊನೆಯದೊಂದು ದುರ್ಬಲ ಭರವಸೆಯೂ ಕೊಚ್ಚಿಹೋಗಿತ್ತು. ಲೋಕ ಮರೆತವನಂತೆ ಬಿಕ್ಕಿಬಿಕ್ಕಿ ಅಳತೊಡಗಿದ.

ಅತುಲ್ ಯಾದವ್ ಆತನನ್ನು ನೋಡಿದ್ದು ಅವಾಗಲೇ.

ಆ ಹೊತ್ತು ರಾಮ್ ಪುಕಾರ್ ಪಂಡಿತನ ಅಳು ಬರೀ ದುಃಖದ ಅಳುವಾಗಿತ್ತಾ… ಮಗುವನ್ನು ಕಳಕೊಂಡ ನೋವಾಗಿತ್ತಾ? ಏನೂ ಮಾಡಲಾಗದ ಅಸಹಾಯಕತೆಯಾಗಿತ್ತಾ? ಕೊನೆಗೂ ನೋಡಲಾಗದ ಸೋಲಾಗಿತ್ತಾ….?

ಆಮೇಲೆ ಒಂದಷ್ಟು ದೂರ ನಡೆದು, ಮತ್ತಷ್ಟು ದೂರ ರೈಲಿನಲ್ಲಿ, ಆಮೇಲೆ ಟ್ರಕ್ಕಿನಲ್ಲಿ, ಮತ್ತೆ ನಡಿಗೆಯಲ್ಲಿ… ಹೀಗೆ ರಾಮ್ ಪುಕಾರ್ ಪಂಡಿತ್ ತನ್ನ ಮನೆ ಸೇರಿದ; ಮತ್ತು, ತನ್ನ ದುಃಖದ ತೀವ್ರತೆಯಿಂದ ಲಕ್ಷಾಂತರ ಎದೆಗೆಳಲ್ಲಿ ನೋವಿನ ಚಿತ್ರವಾಗಿ ಉಳಿದುಹೋದ.

ಚಿತ್ರ: ಅತುಲ್ ಯಾದವ್, ಪಿಟಿಐ | ಆಧಾರ: ವಿವಿಧ ಅಂತರ್ಜಾಲ ಪತ್ರಿಕೆಗಳು (ಇದು ನೈಜ ಘಟನೆ ಆಧರಿಸಿದ ಕಾಲ್ಪನಿಕ ಕಥಾ ಸರಣಿ)

Leave a Reply