“ ಲೋ… ಬಚ್ಚಾ ಭೂಖಾ ಹೋಗಾ , ಖಿಲಾ ಉಸ್ಕೋ” ಭಯ್ಯಾಜಿ ಗಾಜಿನ ಬೆರಣಿಯೊಳಗಿಂದ ಬನ್ ತೆಗೆದು ದಯಾಲ್ ನ ಕೈಗಿತ್ತ. ದಯಾಲ್ ನ ಕೈ ನಿಂದ ಚಹಾದ ಗ್ಲಾಸ್ ಜಾರಿ ಕೆಳಗೆ ಬಿತ್ತು. ಮಗುವನ್ನು ಎದೆಗೆ ಒತ್ತಿಕೊಂಡು ದಯಾಲ್ ಬಿಕ್ಕಿ ಬಿಕ್ಕಿ ಅಳತೊಡಗಿದ…. | ಚಿದಂಬರ ನರೇಂದ್ರ
ಇನ್ನೂ ಮಧ್ಯಾಹ್ನದ ಬಿಸಿಲು ದಣಿವಾರಿಸಿಕೊಂಡಿರಲಿಲ್ಲ. ರಾಮ್ ಪುರ್ ಹೈವೆಯ ಅಂಚಿನಲ್ಲಿ 30 ರ ಆಸುಪಾಸಿನಲ್ಲಿರಬಹುದಾದ ದಯಾಲ್ ಸಿಂಗ್ ಒಂದು ಹೆಗಲಿಗೆ ಬ್ಯಾಗ್ ಇನ್ನೊಂದು ಹೆಗಲ ಮೇಲೆ 3 – 4 ವರ್ಷ ವಯಸ್ಸಿನ ಪುಟ್ಟ ಮಗು ಹೊತ್ತುಕೊಂಡು ಲಗುಬಗೆಯಿಂದ ಹೆಜ್ಜೆ ಹಾಕುತ್ತಿದ್ದಾನೆ. ಅವನ ಬೆನ್ನಿನ ಬೆವರಿಗೆ ಮಗುವಿನ ಅಂಗಿ ಪೂರ್ತಿಯಾಗಿ ಒದ್ದೆಯಾಗಿತ್ತು. ಗಜ್ರೌಲಾ ದ ಟೋಲ್ ನಾಕಾ ಹತ್ತಿರವಾಗುತ್ತಿದ್ದಂತೆಯೆ ಅವನ ಹೆಜ್ದೆಗಳೂ ನಿಧಾನವಾದವು.
ಟೋಲ್ ನ ಎಡಭಾಗದಲ್ಲಿ ಸಾಲು ಸಾಲು ಖಾಲೀ ಟ್ರಕ್ ಗಳು . ಅಲ್ಲೇ ಐವತ್ತು ಅಡಿ ಅಂತರದಲ್ಲಿ ಪೋಲೀಸಿನವರ ಟೆಂಟ್. ಪೋಲೀಸ್ ಬ್ಯಾರಿಕೇಡ್ ಹಿಂದೆ ತಮ್ಮ ತಮ್ಮ ಕತೆ ಹೇಳಲು ಸರದಿಗಾಗಿ ಕಾಯುತ್ತಿರುವ ಅಟೋಗಳು, ಸ್ಕೂಟರ್ಗಳು, ವ್ಯಾನ್ ಗಳು, ಕಾರುಗಳು.
ದಯಾಲ್ ಸಿಂಗ್, ಚಹಾ ಕಾಯಿಸುತ್ತಿದ್ದ ನೂಕುವ ಗಾಡಿ ಅಂಗಡಿಯ ಮುಂದೆ ಹಾಕಲಾಗಿದ್ದ ಉದ್ದನೆಯ ಬೆಂಚ್ ಮೇಲೆ ಬ್ಯಾಗ್ ಇಟ್ಟು, ಚಹಾ ಸೋಸುತ್ತಿದ್ದ ಮಧ್ಯ ವಯಸ್ಕ ಭಯ್ಯಾನನ್ನು ಮಾತನಾಡಿಸಿದ. “ಭಯ್ಯಾಜಿ ರಾಂಪುರ್ ಯಹಾಂ ಸೆ ಕಿತನೆ ಘಂಟೆ ಕಾ ರಾಸ್ತಾ ಹೈ?”
“ರಾಂ ಪುರ್ ತೋ ಬಹುತ್ ದೂರ್ ಹೈ ಭಾಯಿ, ಕಹಾಂ ಸೆ ಆರಹೇ ಹೋ ?” ಸೋಸಿದ ಚಹಾ ಪುಡಿ ಬೇರೆ ಪಾತ್ರೆಗೆ ಸುರುವಿದ ಭಯ್ಯಾಜಿ.
“ಅಂಬಾಲೆ ಸೆ, ಫಿಲಿಬಿತ್ ಜಾನಾ ಬೈ. ಕೋಯಿ ಗಾಡಿ ನಹೀ ಮಿಲಿ, ಇಸ್ ಲಿಯೆ ಪೈದಲ್ ಜಾರಹಾ ಹೂಂ” ದಯಾಲ್ ಬ್ಯಾಗ್ ಒಳಗಿಂದ ಟಾವಲ್ ತೆಗೆದು ಮಗುವಿನ ಮುಖ ಒರೆಸಿದ.
“ ಲೋ ಪೆಹಲೆ ಚಾಯ್ ಪೀಲೋ, ಕ್ಯಾ ಕಾಮ್ ಕರ್ತೆ ಥೇ ಅಂಬಾಲಾ ಮೇ? ಅಬ್ ತೋ ಸಬ್ ಬಂದ್ ಹುಆ ಹೋಗಾ” ಚಹಾದ ಗ್ಲಾಸ್ ದಯಾಲ್ ನ ಕೈಗಿತ್ತ ಭಯ್ಯಾಜಿ
“ಹಾಂ ಭಾಯಿ ಅಬ್ ತೋ ಸಬ್ ಬಂದ್ ಹೈ , ಏಕ್ ದೋ ದಿನ್ ಲಂಗರ್ ಮೇ ಖಾನಾ ಮಿಲ್ತಾ ಥಾ, ಅಬ್ ವಹಾ ಪರ್ ಪಾಬಂದಿ ಹೈ. ಬಸ್ ಇಸ್ ಬಿನ್ ಮಾ ಕಿ ಬಚ್ಚೇ ಕೋ ನಾನಿ ಕಾ ಘರ್ ಪೊಹುಂಚಾ ದೂ, ಬಾದ್ ಮೇ ಮೇರಾ ಕ್ಯಾ ಹೈ” ಚಹಾದ ಒಂದು ಗುಟುಕೂ ದಯಾಲ್ ನ ಗಂಟಲಿಳಿಯಲಿಲ್ಲ.
“ ಲೋ ಬಚ್ಚಾ ಭೂಖಾ ಹೋಗಾ , ಖಿಲಾ ಉಸ್ಕೋ” ಭಯ್ಯಾಜಿ ಗಾಜಿನ ಬೆರಣಿಯೊಳಗಿಂದ ಬನ್ ತೆಗೆದು ದಯಾಲ್ ನ ಕೈಗಿತ್ತ. ದಯಾಲ್ ನ ಕೈ ನಿಂದ ಚಹಾದ ಗ್ಲಾಸ್ ಜಾರಿ ಕೆಳಗೆ ಬಿತ್ತು. ಮಗುವನ್ನು ಎದೆಗೆ ಒತ್ತಿಕೊಂಡು ದಯಾಲ್ ಬಿಕ್ಕಿ ಬಿಕ್ಕಿ ಅಳತೊಡಗಿದ. “ಆಜ್ ಸುಬಹ್ ಬಚ್ಚಾ ಮರ್ ಗಯಾ ಭಾಯಿ, ಬಿಮಾರ್ ಥಾ, ಅಸ್ಪತಾಲ್ ಜಾನೆ ಸೆ ಪಹಲೇ ಗುಜರ್ ಗಯಾ. ಮೈನೆ ಕಿಸೀ ಕೋ ನಹೀ ಬತಾಯಾ” ಸುತ್ತಲಿನ ಜನ ಗಾಬರಿಯಾದರು.
ಈ ಗದ್ದಲ ನೋಡಿ ಕಾರಿನಿಂದ ಇಳಿದು ಬಂದ ಹುಡುಗನೊಬ್ಬ ಮೋಬೈಲ್ನಿಂದ ಫೋಟೋ ತೆಗೆಯಲು ಮುಂದಾದಾಗ, “ ಫೋಟೋ ಮತ್ ಖೀಚನಾ ಭಾಯಿ, ಸಬ್ ಕೋ ಪತಾ ಚಲ್ ಜಾಯೆಗಾ, ಬಚ್ಚೇ ಕಾ ಪೋಸ್ಟ್ ಮಾರ್ಟಂ ಕರವಾಯೆಂಗೆ, ಹಂ ಸಬ್ಕೋ 14 ದಿನ್ ಅಲಗ್ ರಖೆಂಗೆ. ಮುಝೆ ಜಲ್ದ್ ಸೆ ಜಲ್ದ್ ಫಿಲಿಬಿತ್ ಪೊಹಂಚ್ನಾ ಹೈ”
ಎಲ್ಲ ನೋಡ ನೋಡುತ್ತಿದ್ದಂತೆಯೆ ಮಗುವನ್ನು ಹೆಗಲ ಮೇಲೆ ಹಾಕಿಕೊಂಡು ದಯಾಲ್ ಬಿಕ್ಕುತ್ತಲೇ ಟೋಲ್ ದಾಟಿ ಹೈವೇ ದ ಸದ್ದಿನಲ್ಲಿ ಸುಮ್ಮನೇ ಮರೆಯಾಗಿಬಿಟ್ಟ.
_____________________________________________________________________________________
ಹಿಂದಿ ಸಂಭಾಷಣೆಯ ಅನುವಾದ:
* 1 ರಾಂಪುರಕ್ಕೆ ಇಲ್ಲಿಂದ ಎಷ್ಟು ಗಂಟೆ ಪ್ರಯಾಣ?
*2 ರಾಂಪುರ ತುಂಬಾನೇ ದೂರ ಇದೆ. ಎಲ್ಲಿಂದ ಬರ್ತಿದೀಯ?
*3 ಅಂಬಾಲಾದಿಂದ, ಪಿಲ್’ಭಿತ್ ಗೆ ಹೊರಟಿದೀನಿ. ಯಾವುದೂ ಗಾಡಿ ಸಿಗಲಿಲ್ಲ, ಅದಕ್ಕೆ ನಡ್ಕೊಂಡೇ ಹೋಗ್ತಿದೀನಿ
*4 ತಗೋ, ಸ್ವಲ್ಪ ಚಾ ಕುಡಿ. ಅಂಬಾಲಾದಲ್ಲಿ ಏನು ಕೆಲಸ ಮಾಡ್ತೀಯ? ಈಗಂತೂ ಎಲ್ಲಾ ಬಂದ್ ಆಗಿದೆ ಅಲ್ವಾ?
*5 ಹೌದಣ್ಣಾ, ಎಲ್ಲಾ ಬಂದಾಗಿದೆ. ಒಂದೆರಡು ದಿನ ಲಂಗರಿನಲ್ಲಿ ಊಟ ಸಿಕ್ಕಿತ್ತು, ಈಗ ಅಲ್ಲಿಗೂ ಹೋಗಲು ಬಿಡ್ತಿಲ್ಲ. ಈ ತಾಯಿ ಇಲ್ಲದ ಮಗುವನ್ನ ಅದರ ಅಜ್ಜಿ ಮನೆಗೆ ತಲುಪಿಸಿಬಿಡ್ತೀನಿ. ಆಮೇಲೆ ನಂದು ಹೇಗೋ ಆಗತ್ತೆ.
*6 ತಗೋ, ಮಗುವಿಗೆ ಹಸಿವಾಗಿರತ್ತೆ, ಸ್ವಲ್ಪ ತಿನ್ನಿಸು
* 7 ಇವತ್ತು ಬೆಳಗ್ಗೆ ತೀರಿಕೊಂಡುಬಿಡ್ತು…. ಜೋರು ಜ್ವರ ಇತ್ತು, ಆಸ್ಪತ್ರೆಗೆ ಕರೆದ್ಕೊಂಡು ಹೋಗೋ ಮೊದಲೇ ಜೀವ ಹೊರಟೋಯ್ತು… ನಾನು ಯಾರಿಗೂ ಹೇಳ್ಲಿಲ್ಲ
*8 ಫೋಟೋ ತೆಗೀಬೇಡಣ್ಣಾ, ಎಲ್ರಿಗೂ ಗೊತ್ತಾಗಿಹೋಗತ್ತೆ…. ಆಮೇಲೆ ಮಗುವಿನ ಪೋಸ್ಟ್ ಮಾರ್ಟಮ್’ಗೆ ತಗೊಂಡ್ ಹೋಗ್ತಾರೆ. ನಮ್ಮೆಲ್ರನ್ನೂ 14 ದಿನ ಬೇರೆ ಇಡ್ತಾರೆ…. ನಾನು ಆದಷ್ಟು ಬೇಗ ಪಿಲ್’ಭಿತ್ ಸೇರ್ಕೋಬೇಕು.
ಆಧಾರ: ವಿವಿಧ ಅಂತರ್ಜಾಲ ಪತ್ರಿಕೆಗಳು (ಇದು ನೈಜ ಘಟನೆ ಆಧರಿಸಿದ ಕಾಲ್ಪನಿಕ ಕಥಾ ಸರಣಿ)