ಏಪ್ರಿಲ್ 1ರ ಬೆಳಗ್ಗೆ ಮಹೇಶ ಬೇಗನೆ ಎದ್ದ. ದಿನಾ ಸುಪ್ರಭಾತದಂತೆ ಬೈಗುಳ ಹಾಡಿ ಎಬ್ಬಿಸ್ತಿದ್ದ ಕೋಣೆಯ ಸಂಗಾತಿ ಕಿರುಗಣ್ಣು ಬಿಟ್ಟು ಇವನ ಚಲನವಲನ ಗಮನಿಸುತ್ತಿದ್ದ. ಮಹೇಶ ಒಂದು ಬ್ಯಾಗಿನಲ್ಲಿ ಎರಡು ಜೊತೆ ಬಟ್ಟೆ, ಪರ್ಸ್ ಬಳಿದು ಜೋಡಿಸಿಕೊಂಡ ದುಡ್ಡು ತುರುಕಿಕೊಂಡ. ಸೈಕಲಿನ ಬಾರ್ ನೇವರಿಸುತ್ತಾ ಸಂಗಾತಿಗೆ “ನಾನು ಜೀವಸಹಿತ ಊರು ತಲುಪಿದ್ರೆ, ಹಾಗೇ ನಾನು ವಾಪಸ್ ಬರೋವರೆಗೂ ನೀನು ಬದುಕಿದ್ರೆ ಮತ್ತೆ ಭೇಟಿಯಾಗೋಣ” ಅಂದ…. | ಚೇತನಾ ತೀರ್ಥಹಳ್ಳಿ
ಅಂದಿನ ಬೆಳಗು ಮಹೇಶನ ಪಾಲಿಗೆ ಎಂದಿನಂತಿರಲಿಲ್ಲ. ಮಗ್ಗುಲಾದವನ ಕಿವಿಯಲ್ಲಿ ಕೋಣೆ ಹಂಚಿಕೊಂಡಿದ್ದವ “ಇವತ್ತಿಂದ ಇನ್ನೊಂದು ತಿಂಗ್ಳು ಫ್ಯಾಕ್ಟರಿ ಇರೋದಿಲ್ಲ” ಅಂತ ಉಸುರಿದ್ದು ಕರೆಂಟು ಹೊಡೆದ ಹಾಗಾಗಿತ್ತು. ಬರೀ ಫ್ಯಾಕ್ಟರಿಗಲ್ಲ, ಇಡೀ ಊರಿಗೂರೇ ಬಾಗಿಲು… ಸಾಂಗ್ಲಿಯಿಂದ ಹೊರಗೆ ಯಾವ ಊರಿಗೂ ಹೋಗುವಂತಿಲ್ಲ. ತಿಂಗಳು ಪೂರ್ತಿ ಕೋಣೆಯಲ್ಲಿ ತೆಪ್ಪಗೆ ಕುಳಿತರಬೇಕು!
“ಬೆಳಬೆಳಗ್ಗೆ ತಮಾಷೆ ಮಾಡ್ಬೇಡ ಹೋಗು…” ನಂಬಲು ಇಷ್ಟವಿಲ್ಲದೆ ಕೋಣೆಯ ಸಂಗಾತಿಯನ್ನ ಗದರಿದ ಮಹೇಶ, ಸುಳ್ಳಾಗಿರಲಿ ದೇವರೇ ಅಂತ ಮೊರೆಯಿಡುತ್ತಲೇ ಕೇಳಿದ, “ನಿಜಾನಾ….?”
*
ಅದೇ ಮೊದಲ ಸಲ ಹುಟ್ಟೂರಲ್ಲಿ ವೋಟು ಹಾಕಿ ಸಾಂಗ್ಲಿಗೆ ಬಂದಿಳಿದಿದ್ದ ಮಹೇಶನಿಗಿನ್ನೂ ವಯಸ್ಸು ಇಪ್ಪತ್ತು. ಒಡಿಶಾದ ಜಜ್’ಪುರದ ಬಡಾಸುರಾಯಿ ಅವನ ತವರು. ಯಾವಾಗಲೂ ಏನಾದರೊಂದು ಕ್ಯಾತೆ ಮಾಡುತ್ತ ಇರುತ್ತಿದ್ದ ಹುಡುಗನ್ನ ಸಂಭಾಳಿಸಿ ಸಾಕಾಗಿ ಅಮ್ಮ ಒಂದಿನ ಗದರಿದ್ದಳು, “ಇನ್ನೂ ಎಷ್ಟ್ ದಿನ ಹಿಂಗೆ? ವಯಸಾಯ್ತು ನಿಂಗೂ. ದುಡ್ದು ಅಪ್ಪನ ಜವಾಬ್ದಾರಿ ಹಂಚ್ಕೋ”.
ಮಾಮೂಲು ಅನ್ನಿಸುವ ಕೆಲಸ ಮಾಡಲು ಯಾವತ್ತೂ ಇಷ್ಟವಿಲ್ಲದ ಈ ಹುಡುಗ ಬೇಗನೇ ಕೆಲಸ ಹುಡುಕಿಕೊಂಡ. ಆದರೆ ಎಲ್ಲಿ? ಸಾವಿರದ ಏಳುನೂರು ಕಿಲೋಮೀಟರು ದೂರದದಲ್ಲಿ! ಕೆಲಸ ಹುಡುಕಿಕೊಂಡು ಮಹಾರಾಷ್ಟ್ರದ ಕಡೆಗೆ ದಂಡಿಯಾಗಿ ಹೊರಟಿದ್ದ ಗುಂಪಿನಲ್ಲಿ ಮಹೇಶನೂ ಸೇರಿಕೊಂಡ. ಆ ಗುಂಪಲ್ಲೇ ಒಬ್ಬರು ಅವನಿಗೆ ಸಾಂಗ್ಲಿಯ ಐರನ್ ಫ್ಯಾಕ್ಟರಿಯಲ್ಲಿ ಕೆಲಸವನ್ನೂ ಕೊಡಿಸಿದರು.
ಮಹೇಶ ಪ್ರತಿದಿನ ಮಧ್ಯಾಹ್ನದ ಊಟಕ್ಕೆ ಫ್ಯಾಕ್ಟರಿಯಿಂದ ದೂರದ ಹೋಟೆಲಿಗೆ ಹೋಗಬೇಕಿತ್ತು. ಗಂಟೆಯೊಳಗೆ ಹೋಗಿ ಊಟ ಮುಗಿಸಿಬರಬೇಕಿದ್ದರಿಂದ ವೇಗವಾಗಿ ಸೈಕಲ್ ತುಳಿಯೋದನ್ನು ರೂಢಿ ಮಾಡಿಕೊಂಡಿದ್ದ. ಸೈಕಲ್ ಏರಿ ಪೆಡಲುಗಳನ್ನು ಮೇಲೆ ಕೆಳಕ್ಕೆ ಆಡಿಸುತ್ತಾ, ಆಗಾಗ ಅದರ ಕೆಳಗೆ ಕಾಲು ತೂರಿಸಿ ಸರ್ರನೆ ಇಳಿಜಾರಿನಲ್ಲಿ ಜಾರುತ್ತಾ, ಉಬ್ಬುಗಳಲ್ಲಿ ಜಂಘಾಬಲ ಸವಾಲಿಗೊಡ್ಡಿ ತುಳಿಯುತ್ತ ಸಾಗುವುದೆಂದರೆ ಅವನಿಗೆ ವಿಪರೀತ ಖುಷಿ. ಕಾಲ್ತುಳಿತದಿಂದ ಸಾಗುವ ಸೈಕಲ್ ಚಕ್ರಗಳನ್ನು ಕೈಗಳಲ್ಲಿ ನಿಯಂತ್ರಿಸುವ ತಂತ್ರ ಅವನಲ್ಲಿ ತಾನು ತನ್ನ ಬದುಕನ್ನೇ ನಿಯಂತ್ರಿಸಿಕೊಳ್ಳಬಲ್ಲೆ ಅನ್ನುವ ಆತ್ಮವಿಶ್ವಾಸ ತುಂಬಿತ್ತು.
*
ಮಹೇಶ ಇದ್ದೆರಡು ಪ್ಯಾಂಟುಗಳ ಜೇಬು ತಡಕಿದ. ಷರಟು ಕೊಡವಿ ಕೊಡವಿ ನೋಡಿದ. ಹಾಗೂ ಹೀಗೂ ಎಲ್ಲ ಸೇರಿ ಮೂರೂವರೆ ಸಾವಿರ ಇದ್ದವು. ಕಡಿಮೆ ಅಂದರೂ ಇನ್ನು ಒಂದು ತಿಂಗಳು ಫ್ಯಾಕ್ಟರಿ ಓಪನ್ ಆಗೋದಿಲ್ಲ. ಆಮೇಲೂ ಈ ಪಾಬಂದಿ ತೆಗೆಯುತ್ತಾರೆಂದು ನಂಬೋಹಾಗಿಲ್ಲ. ಕೋಣೆಯಲ್ಲಿ ಉಳೀಬೇಕಂದರೆ ತಿಂಗಳ ಬಾಡಿಗೆ, ಊಟ ಎಲ್ಲ ಸೇರಿ ಆರೇಳು ಸಾವಿರ ಖರ್ಚಾಗುತ್ತೆ…. ಗೆಳೆಯರಲ್ಲಿ ಸಾಲ ಕೇಳಲಾಗದು. ಈ ದಿನಗಳಲ್ಲಿ ಹಾಗೆ ಕೇಳೋದು ಅಂದ್ರೆ ಕೆಂಡ ಕೊಳ್ಳಿಯ ಬಳಿ ಉರಿ ಆರಿಸು ಅಂದ ಹಾಗೆ!
ಆ ವಾರವಿಡೀ ಏನು ಮಾಡೋದು ಅನ್ನುವ ಯೋಚನೆಯಲ್ಲೇ ಕಳೆದುಹೋಯ್ತು. ಸುಮ್ಮನೆ ಕುಳಿತಿದ್ದ ಕ್ಷಣಕ್ಷಣವೂ ಅವನಿಗೆ ಹೆಣಭಾರವಾಗಿ ತೋರುತ್ತಿತ್ತು. ಫೋನ್ ಮಾಡಿದಾಗ ಅಮ್ಮ ಗೊಳೋ ಅಂತ ಅತ್ತಿದ್ದಳು. ಮನೆಯಲ್ಲಿ ಟೀವಿಗೀವಿ ಇಲ್ಲವಾಗಿ ನ್ಯೂಸ್ ನೋಡಿ ಹೆದರುವ ಪ್ರಮೇಯವಿರಲಿಲ್ಲ ಸದ್ಯ! ಆದರೂ ಆಚೀಚೆ ಮನೆಯ ಜನ “ಮಹೇಶನ ಬಗ್ಗೆ ತಿಳೀತಾ? ಮಹಾರಾಷ್ಟ್ರದಲ್ಲಿ ಜಾಸ್ತಿ ಕೇಸುಗಳಿವೆ” ಅಂತ ಸ್ವಯಂಸ್ಫೂರ್ತಿಯಿಂದ ಮಾಹಿತಿ ನೀಡುತ್ತಿದ್ದರು. ಅವರು ಹಾಗೆ ಹೇಳಿದಾಗೆಲ್ಲ ಅಮ್ಮನ ಗುಂಡಿಗೆ ಒಮ್ಮೆ ಹೊರಬಂದು ಹೊಕ್ಕುತ್ತಿತ್ತು.
ಏಪ್ರಿಲ್ 1ರ ಬೆಳಗ್ಗೆ ಮಹೇಶ ಬೇಗನೆ ಎದ್ದ. ದಿನಾ ಸುಪ್ರಭಾತದಂತೆ ಬೈಗುಳ ಹಾಡಿ ಎಬ್ಬಿಸ್ತಿದ್ದ ಕೋಣೆಯ ಸಂಗಾತಿ ಕಿರುಗಣ್ಣು ಬಿಟ್ಟು ಇವನ ಚಲನವಲನ ಗಮನಿಸುತ್ತಿದ್ದ. ಮಹೇಶ ಒಂದು ಬ್ಯಾಗಿನಲ್ಲಿ ಎರಡು ಜೊತೆ ಬಟ್ಟೆ, ಪರ್ಸ್ ಬಳಿದು ಜೋಡಿಸಿಕೊಂಡ ದುಡ್ಡು ತುರುಕಿಕೊಂಡ. ಸೈಕಲಿನ ಬಾರ್ ನೇವರಿಸುತ್ತಾ ಸಂಗಾತಿಗೆ “ನಾನು ಜೀವಸಹಿತ ಊರು ತಲುಪಿದ್ರೆ, ಹಾಗೇ ನಾನು ವಾಪಸ್ ಬರೋವರೆಗೂ ನೀನು ಬದುಕಿದ್ರೆ ಮತ್ತೆ ಭೇಟಿಯಾಗೋಣ” ಅಂದ.
ಆ ಸಂಗಾತಿ “ಹೋಗಬೇಡ” ಅಂತಲೋ, “ಸ್ವಲ್ಪ ದಿನ ಕಾಯಿ, ಏನಾದರೂ ವ್ಯವಸ್ಥೆ ಆಗ್ತದೆ” ಅಂತಲೋ ಹೇಳಲು ಬಯಸಿದ್ದ. ಆದರೆ ಮಹೇಶನ ಜಿದ್ದಿನ ಪರಿಚಯವಿದ್ದ ಅವನು “ಜೋಪಾನ” ಅಂತಷ್ಟೇ ಹೇಳಿ ಮುಸುಕು ಹೊದ್ದು ಮಲಗಿಬಿಟ್ಟ. ಹಾಗವನು ಮಲಗಿದ್ದು ಉಡಾಫೆಯಿಂದಲ್ಲ, ಮಹೇಶನಿಗೆ ವಿದಾಯ ಕೋರಬೇಕಾದ ನೋವಿಂದ. ಅಷ್ಟು ದೂರದ ಪ್ರಯಾಣ, ಇಷ್ಟು ಚಿಕ್ಕ ಹುಡುಗ… ಅದೂ ಸೈಕಲ್ಲಿನಲ್ಲಿ! ಆದರೇನು, ಬೇಡವೆಂದರೆ ಕೇಳುವನೇ?
“ಚಲ್ ಮೇರೆ ಸಾಥೀ…!” ಮಹೇಶ ಕಣ್ಣುಮಿಟುಕಿಸಿ ಸೈಕಲ್ ಏರಿದ ಕ್ಷಣದಿಂದ ಒಂದೇ ಸಮ ತುಳಿಯುತ್ತ ಸಾಗಿದ. ಸೋಲಾಪುರ, ಹೈದರಾಬಾದ್, ವಿಜಯವಾಡ, ಶ್ರೀಕಾಕುಲಮ್, ಗಂಜಾಮ್… ಒಂದಾದಮೇಲೊಂದು ಗಡಿ ದಾಟಿ ಬಂದು ಒಡಿಶಾದ ಕದ ಬಡಿದ.
ದಿನಕ್ಕೆ ಹದಿನಾರು ಗಂಟೆ ತುಳಿತ. ರಾತ್ರಿ ಸ್ವಲ್ಪ ನಿದ್ದೆ. ನಡುನಡುವೆ ಹೊಟ್ಟೆ ತುಂಬಿಸಿಕೊಳ್ಳಲು ಏನಾದರೊಂದಷ್ಟು.
ಹಾಗೂ ಒಮ್ಮೆ ಧಾಬಾದಲ್ಲಿ ಗೂಡ್ಸ್ ಸಾಗಿಸುವ ಟ್ರಕ್ ಡ್ರೈವರನ ಬಳಿ “ನನ್ನನ್ನು ಅಷ್ಟು ದೂರ ಬಿಡ್ತೀರಾ?” ಅಂತ ಕೇಳಿನೋಡಿದ್ದ. ಹುಡುಗನ ಬಗ್ಗೆ ಅನುಕಂಪ ಹುಟ್ಟಿದ್ದರೂ ಲಾಠಿ ಏಟಿನ ರುಚಿ ಕಂಡಿದ್ದ ಡ್ರೈವರ್, ಅದೊಂದನ್ನು ಬಿಟ್ಟು ಬೇರೇನಾದರೂ ಕೇಳು ಅಂದು ಎಳನೀರು ಕುಡಿಸಿ ಕಳಿಸಿದ್ದ. ಗಡಿಗಳಲ್ಲಿ ಸಿಕ್ಕ ಪೊಲೀಸರಿಗೆ ತನ್ನ ಸೈಕಲ್ ಯಾತ್ರೆಯನ್ನು ದಯನೀಯವಾಗಿ ಹೇಳಿ ಹೇಗೆಹೇಗೋ ಮನವೊಲಿಸಿ ಅನುಮತಿ ಗಿಟ್ಟಿಸಿದ್ದ.
ಒಂದಲ್ಲ, ಎರಡಲ್ಲ… ಪೂರಾ ಆರು ದಿನಗಳ ಕಾಲ! ಕಣ್ ಮುಂದೆ ಬಡಾಸುರಾಯಿಯ ಮನೆ. ಅದನ್ನು ತಲುಪಿಯೇ ತೀರುತ್ತೇನೆ ಅಂದುಕೊಂಡಾಗೆಲ್ಲ ತುಳಿತದ ಆವೇಗ ಹೆಚ್ಚುತ್ತಿತ್ತು. ಬೇರೆ ಒಂದೇಒಂದು ಯೋಚನೆಯೂ ಇಲ್ಲದೆ ಮಹೇಶ ಸೈಕಲ್ ತುಳಿದಿದ್ದ, ಎಲ್ಲ ಭಯವನ್ನೂ ತುಳಿದುಹಾಕುವಂತೆ. ಸುಮ್ಮನೆ ಕೂರಲಾರೆ ಅನ್ನುವ ಹಠ, ಸೋಲಲಾರೆ ಅನ್ನುವ ಛಲ, ನೋಡೇಬಿಡೋಣ ಅನ್ನುವ ಹುಂಬ ಧೈರ್ಯ ಇವೆಲ್ಲವೂ ಅವನನ್ನು ಕೊನೆಗೂ ಊರು ಮುಟ್ಟಿಸಿದ್ದವು.
ಮಹೇಶ ಜಜ್’ಪುರದ ಹೊಸ್ತಿಲಲ್ಲಿ ನಿಂತಿದ್ದ. ಒಂದೂವರೆ ಸಾವಿರ ಕಿಲೋಮೀಟರಿಗಿಂತಲೂ ಹೆಚ್ಚು ದೂರ ಸೈಕಲ್ಲಲ್ಲಿ ಒಬ್ಬನೇ ಬಂದಿದ್ದ ಹುಡುಗನ ಬಗ್ಗೆ ಊರಿಗೂರೇ ಬೆರಗಾಗಿತ್ತು. ಕೋವಿಡ್ ಪರೀಕ್ಷೆ ಮತ್ತು ಕ್ವಾರಂಟೈನ್’ಗಾಗಿ ಅವನನ್ನು ಬಿಚಿತ್ರಪುರದ ಶಾಲೆಯೊಂದರಲ್ಲಿ ಇಡಲಾಯ್ತು.
ಅಲ್ಲಿ ಹದಿನಾಲ್ಕು ದಿನ ಸುಮ್ಮನೆ ಕೂರಬೇಕು. ಯಾರ ಮರ್ಜಿಗೂ ಕಾಯದೆ ಸಾಂಗ್ಲಿಯಿಂದ ಸೈಕಲ್ ಏರಿ ಬಂದಹಾಗಲ್ಲ ಇದು!
*
ಮಹೇಶ ಶಾಲೆ ಕಟ್ಟೆಯಲ್ಲಿ ಕಾಲು ಇಳಿಬಿಟ್ಟು ಯೋಚಿಸ್ತಾ ಕೂತಿದ್ದಾನೆ….”ಸಾಂಗ್ಲಿಯ ಫ್ಯಾಕ್ಟರಿ ಮತ್ತೆ ಓಪನ್ ಆಗ್ತದೋ ಇಲ್ಲವೋ… ಇಲ್ಲೇ ಉಳೀಬೇಕಾಗಿ ಬಂದರೆ ಏನೆಲ್ಲ ಮಾಡಬಹುದು…?”
ತಾನು ಸುಮ್ಮನೆ ಕೂರಲಾಗದೆ ಮಾಡಿದ ಸಾಹಸ ಎಷ್ಟು ದೊಡ್ಡದು ಅಂತ ಅವನಿಗೆ ಚೂರೂ ಗೊತ್ತಿಲ್ಲ. ಚಿತ್ರಸಮೇತ ತನ್ನ ಸುದ್ದಿ ಎಲ್ಲೆಡೆ ಹರಿದಾಡ್ತಿರೋದೂ ಗೊತ್ತಿಲ್ಲ.
*
ಏಪ್ರಿಲ್ ತಿಂಗಳ ಕೊನೆಯ ವಾರ…. ಬಿಚಿತ್ರಪುರದಲ್ಲಿ ಮಹೇಶನ ಅನಿವಾರ್ಯ ಬಂಧನ ಮುಗಿದಿದೆ. ಅದೇ ವೇಳೆ ಇಡೀ ದೇಶಕ್ಕೆ ಮತ್ತೊಂದು ಸುತ್ತಿನ ಬೀಗ ಜಡಿಯಲಾಗಿದೆ.
ಸಾಹಸಿ ಮಹೇಶನ ಸದಾ ಚಡಪಡಿಸುವ ಚೈತನ್ಯವನ್ನು ಕೂಡಿಡುವ ಕೀಲಿಕೈ ಎಲ್ಲೂ ಇರದಿರಲಿ…
ಆಮೆನ್!
ಆಧಾರ: ವಿವಿಧ ಅಂತರ್ಜಾಲ ಪತ್ರಿಕೆಗಳು (ಇದು ನೈಜ ಘಟನೆ ಆಧರಿಸಿದ ಕಾಲ್ಪನಿಕ ಕಥಾ ಸರಣಿ) | ಚಿತ್ರ: ಟೈಮ್ಸ್ ಆಫ್ ಇಂಡಿಯಾ