ಕೋಠಿಯಲ್ಲಿ ಕಂಡ ಕನಸು ಕಂಗಳು… : ಕೊರೊನಾ ಕಾಲದ ಕಥೆಗಳು

ನೀನ್ಯಾಕೆ ಕೆಳಗಿಳಿದು ಬರಲಿಲ್ಲ? 15 ದಿನ ಆಯ್ತು ಇಡೀ ಬಾಂಬೆ ಪೂರ್ಣ ಬಂದ್ ಆಗಿ, ನೀವೆಲ್ಲ ಏನ್ಮಾಡ್ತಿದೀರ?” ದೀಪ್ತಿ ಕೂಡ ಕೊಂಚ ದನಿ ಎತ್ತರಿಸಿ ಕೇಳಿದಳು. ದನಿ ಸಣ್ಣದಾಗುತ್ತ ಹೋದಂತೆ ನೆನಪು ಆಳವಾಗುತ್ತ ಹೋಗುತ್ತದೆ. ದೀಪ್ತಿಗೆ ಅದು ಬೇಕಾಗಿರಲಿಲ್ಲ…. | ಚಿದಂಬರ ನರೇಂದ್ರ

ಕಾಮಾಟಿಪುರದ ಸಂದಿಗೊಂದಿಗಳನ್ನು ದಾಟಿ ದೀಪ್ತಿ ಕಾಂಬಳೆಯ ಮಾರುತಿ ವ್ಯಾನ್, ದಸ್ವೀ ಗಲಿಯ ವಿಶಾಲ ಕೋಠಾ ದ ಎದುರು ನಿಂತಾಗ, ಬೆಲ್ಲಕ್ಕೆ ಮುತ್ತುವ ಇರುವೆಗಳಂತೆ ಹೆಂಗಸರು ಓಡಿ ಬಂದು ವ್ಯಾನ್ ಸುತ್ತ ನಿಂತುಕೊಂಡರು. ವಾರಕ್ಕೆ ಎರಡು ಬಾರಿಯಾದರೂ ಈ ಜಾಗೆಗೆ ಭೆಟ್ಟಿಕೊಡುವ ದೀಪ್ತಿಯನ್ನು ಈಗ ಅಲ್ಲಿ ಬಹುತೇಕ ಎಲ್ಲರೂ ದೀಪ್ತಿ ದೀದೀ ಎಂದೇ ಗುರುತಿಸುತ್ತಾರೆ. ಪುಣೆ ಮೂಲದ NGO ಜೊತೆ ತನ್ನನ್ನ ಗುರುತಿಸಿಕೊಂಡಿರುವ ದೀಪ್ತಿ, ಕಾಮಾಟಿಪುರದ ಸಂಸಾರಗಳಿಗೆ ತನ್ನ ಸಂಸ್ಥೆ ಸಂಗ್ರಹಿಸಿದ ರೇಶನ್ ಮತ್ತು ದಿನ ಬಳಕೆಯ ವಸ್ತುಗಳನ್ನು ಹಂಚಿ ಹೋಗುತ್ತಾಳೆ. ದಸ್ವೀಗಲಿಯ ಮಕ್ಕಳಿಗಂತೂ ದೀಪ್ತಿ ದೀದೀ ಎಂದರೆ ಆಕೆ ತನ್ನ ಜೊತೆ ತರುವ ಚಾಕಲೇಟ್ಗಳು, ಕ್ಯಾಂಡಿಗಳು ಮತ್ತು ಬಿಸ್ಕತ್ ಪ್ಯಾಕೇಟುಗಳು.

ಕೋಠಾದ ಹೆಂಗಸರಿಗೆ ಎಲ್ಲ ಹಂಚಿಯಾದ ಮೇಲೆ ದೀಪ್ತಿ ಮತ್ತೆ ವ್ಯಾನ್ ಹತ್ತಿ ಇನ್ನೇನೂ ಸ್ಲೈಡಿಂಗ್ ಡೋರ್ ಎಳೆದುಕೊಳ್ಳಬೇಕು ಎನ್ನುವಾಗ ಕೋಠಾದ ಮೇಲಿನ ಮೆಟ್ಟಿಲ ತುದಿಯಲ್ಲಿ ಒಂದು ನೋಟ್ ಬುಕ್ ತಿರುವಿ ಹಾಕುತ್ತ ಕುಳಿತಿದ್ದ ಹೆಂಗಸೊಬ್ಬಳು ಆಕೆಯ ಕಣ್ಣಿಗೆ ಬಿದ್ದಳು. ವ್ಯಾನ್ ನಿಂದ ಇಳಿದು, ಮೆಟ್ಟಿಲು ಹತ್ತಿ ಆ ಹೆಂಗಸಿನ ಬಾಜೂ ಹೋಗಿ ಕುಳಿತ ದೀಪ್ತಿ, “ನಿನ್ನ ಹೆಸರು? ಯಾವೂರು ನಿಂದು ?” ಎನ್ನುತ್ತ ಆಕೆಯನ್ನ ಮಾತಿಗಳೆದಳು. “ಸೋನಿ, ಸೋನಿ ಸುನಾರ್ ನನ್ನ ಪೂರ್ಣ ಹೆಸರು. ಓಹ್ ನಾವು ಪೂರ್ಣ ಹೆಸರು ಹೇಳಬಾರದಲ್ಲ” ಆಕೆ ನಾಲಿಗೆ ಕಚ್ಚಿಕೊಂಡಳು. ಒಂದು ವಿಚಿತ್ರ ನಗೆ ನಕ್ಕು ಅವಳ ಕಣ್ಣು ಸುಮ್ಮನಾಯಿತು. “ಹಿಮಾಚಲದ ಹುಡುಗಿಯ ನೀನು ?” ದೀಪ್ತಿ ಆಕೆಯ ಗದ್ದ ಮೇಲಕ್ಕೆತ್ತಿದಳು “ಇಲ್ಲ, ನಾನು ಕಾಟ್ಮಾಂಡು ದಿಂದ 60 ಮೈಲಿ ದೂರದ ಹಳ್ಳಿಯವಳು, ನೀನು ಮುಂದಿನ ಪ್ರಶ್ನೆ ಕೇಳುವ ಮೊದಲೇ ನಾನು ಅದಕ್ಕೂ ಉತ್ತರ ಹೇಳಿಬಿಡುತ್ತೇನೆ. ನನ್ನ ಮದುವೆಯಾಗುತ್ತೇನೆಂದು ನಂಬಿಸಿದವ, ನನ್ನ ಇಲ್ಲಿ ಬಿಟ್ಟು ಹೋದ” ಈ ಸಲ ಸೋನಿ ಸ್ವಲ್ಪ ಜೋರಾಗಿಯೇ ನಕ್ಕಳು. “ಹೋಗಲಿ ಬಿಡು, ಹಳೆಯದನ್ನೆಲ್ಲ ಮತ್ತೆ ನೆನಪಿಸುವುದಿಲ್ಲ. ನೀನ್ಯಾಕೆ ಕೆಳಗಿಳಿದು ಬರಲಿಲ್ಲ? 15 ದಿನ ಆಯ್ತು ಇಡೀ ಬಾಂಬೆ ಪೂರ್ಣ ಬಂದ್ ಆಗಿ, ನೀವೆಲ್ಲ ಏನ್ಮಾಡ್ತಿದೀರ?” ದೀಪ್ತಿ ಕೂಡ ಕೊಂಚ ದನಿ ಎತ್ತರಿಸಿ ಕೇಳಿದಳು. ದನಿ ಸಣ್ಣದಾಗುತ್ತ ಹೋದಂತೆ ನೆನಪು ಆಳವಾಗುತ್ತ ಹೋಗುತ್ತದೆ. ದೀಪ್ತಿಗೆ ಅದು ಬೇಕಾಗಿರಲಿಲ್ಲ.

“ನಮ್ದೂ ಅಷ್ಟೇ, ಎಲ್ಲಾ ಬಂದ್. ನಾವೂ ಒಂಥರ ದಿನಗೂಲಿಗಳೇ ನೋಡು. ಅಲ್ಲಾ, ನಿಮ್ಮ ಮೋದಿಗೆ ಹೇಳಿ ನಮ್ಮಂಥವರಿಗೆ ಬೇರೆ ಏನಾದ್ರೂ ಸಹಾಯ ಮಾಡಿರ್ಸಬಾರ್ದಾ ನೀವು? ನಂದು ಹೇಗೋ ಆಗತ್ತೆ ಆದ್ರೆ ಮಗನ್ನ ಗೋರೆಗಾಂವ್ ದ ಹಾಸ್ಟೆಲ್ ಲ್ಲಿ ಇಟ್ಟಿದಿನಿ, ಈಗ 3 ನೇ ಕ್ಲಾಸು, ಇಂಗ್ಲೀಷ್ ಶಬ್ದಗಳನ್ನ ಕೂಡಿಸಿ ಓದ್ತಿದ್ದಾನೀಗ. ಹಾಸ್ಟೆಲ್ ಗೆ 2000 ರೂಪಾಯಿ ಕಟ್ಟಬೇಕು, ಪ್ರತೀ ತಿಂಗಳ 5 ನೇ ತಾರೀಖಿನೊಳಗೆ. ಈ ಮುಂಬೈಯಲ್ಲಿ ಎಷ್ಟೊಂದು ಬಾಂಬ್ ಬ್ಲಾಸ್ಟ್ ಗಳಾಗಿವೆ, ಹಿಂದೂ ಮುಸ್ಲೀಂ ದಂಗೆಗಳಾಗಿವೆ, ನಮ್ಮ ಏರಿಯಾದಲ್ಲಿಯೇ ಏಡ್ಸ್ ಸಿಕ್ಕಾಪಟ್ಟೆ ಹಬ್ಬಿದಾಗ ಕೂಡ ಹೀಗಾಗಿರಲಿಲ್ಲ. ನಾವು ವಾರಕ್ಕೊಮ್ಮೆ ಹಾಸ್ಪಿಟಲ್ ಗೆ ಹೋಗಿ ಚೆಕ್ ಮಾಡಿಸ್ಕೋ ಬೇಕು , ಆದರೆ ಅಲ್ಲಿ ಕೂಡ ಯಾರೂ ನಮ್ಮನ್ನ ಕೇರ್ ಮಾಡ್ತಿಲ್ಲ. ದಿನ ಹೇಗೋ ಕಳ್ದೋಗತ್ತೆ ಆದ್ರೆ ರಾತ್ರಿ ನಿದ್ದೆ ಬರಲ್ಲ. ಮೊದಲಾದ್ರೆ ಎರಡು ಪೆಗ್ ಕುಡ್ದು ಮಲಗಿ ಬಿಡ್ತಿದ್ವಿ. ಈ ಕೋಠಾದಲ್ಲಿ ನಾವು ಒಂದು ರೂಮಲ್ಲಿ ಇಬ್ರಿದಿವಿ. ಮೇಡಂಗೆ ಪ್ರತಿ ತಿಂಗಳು ದುಡ್ಡು ಕೊಡಬೇಕು. ಪಾಪ ಅವರು ಈ ತಿಂಗಳು ದುಡ್ಡು ಕೇಳಿಲ್ಲ ಆದ್ರೆ ಎಷ್ಟು ದಿನಾ ಅಂತ ಸುಮ್ನಿರ್ತಾರೆ? ದುಡ್ಡು ಕೊಡದೇ ಇರೋದು ನಮಗೂ ಮರ್ಯಾದೆ ಅಲ್ಲ. ಎಷ್ಟೋ ಜನ ಇಲ್ಲಿ ಕೆಲ್ಸ ಇಲ್ಲ ಅಂತ ತಂತಮ್ಮ ಊರಿಗೆ ನಡ್ಕೊಂಡೇ ಹೋಗ್ತಿದಾರಂತೆ. ಅಂಥದ್ರಲ್ಲಿ ನಮ್ಮನ್ನ ಯಾರು ಕೇಳ್ತಾರೆ? ನಾವು ಎಲ್ಲಿಗೆ ಹೋಗೋದು?”

ಸೋನಿ ಒಂದೇ ಸವನೆ ಮಾತನಾಡಿದಳು. ದೀಪ್ತಿ ಹತ್ರ ಕೂಡ ಅವಳ ಯಾವ ಪ್ರಶ್ನೆಗೂ ಸಮಾಧಾನ ಇರಲಿಲ್ಲ.

“ ನೀನು ಕತೆ ಕವನ ಬರೀತೀಯಾ ಎಲ್ಲಿ ತೋರ್ಸು ಇಲ್ಲಿ” ಮಾತು ಮರೆಸಬೇಕೆಂದು ಸೋನಿಯ ತೊಡೆಯ ಮೇಲಿದ್ದ ನೋಟ್ ಬುಕ್ ಎತ್ತಿಕೊಂಡಳು ದೀಪ್ತಿ.

“ಉಹೂಂ ಇದು ನಂದಲ್ಲ, ನನ್ನ ಮಗಂದು. ಚಂದ ಚಿತ್ರ ಬರೀತಾನೆ, ಹೋದ ತಿಂಗಳು ಅವ ಬಂದಾಗ ನಾನೇ ಕೇಳಿ ಇಸ್ಕೊಂಡೆ. ಬೇಸರ ಆದಾಗಲೆಲ್ಲ ಚಿತ್ರ ನೋಡ್ತಾ ಕೂತಿರ್ತೀನಿ” ಸೋನಿ ದನಿಯಲ್ಲಿ ಮೊದಲ ಬಾರಿ ಒಂದು ಖುಶಿ, ಒಂದು ಹೆಮ್ಮೆ ಗುರುತಿಸಿದಳು ದೀಪ್ತಿ.

“ವಾವ್ ಮಸ್ತಾಗಿವೆ ಚಿತ್ರಗಳು. ಇದೇನಿದು ಪ್ರತೀ ಚಿತ್ರದಲ್ಲೂ ನಕ್ಷತ್ರ ಬರ್ದಿದಾನಲ್ಲ, ಇಂಟರೆಸ್ಟಿಂಗ್, ನೋಡಿಲ್ಲಿ ಸೂರ್ಯನ ಪಕ್ಕದಲ್ಲೇ ಎರಡು ನಕ್ಷತ್ರ. ಬಣ್ಣ ಇದ್ರೆ ಇನ್ನೂ ಚೆನಾಗಿರೋದು. ಕ್ರೆಯಾನ್ಸ್ ಕೊಡಿಸಬೇಕಿತ್ತು ನೀನು. ಇರು ನಾನೇ ತಂದ್ಕೊಡ್ತೀನಿ.” ದೀಪ್ತಿ ತನ್ನ ಮೋಬೈಲ್ ನಲ್ಲಿ ಎರಡು ಮೂರು ಚಿತ್ರಗಳ ಫೋಟೊ ತೆಗೆದುಕೊಂಡಳು.

“ಪ್ಲೀಸ್ ಮರೀ ಬೇಡ, ಅವ ಚಿತ್ರಗಳಿಗೆ ಬಣ್ಣ ತುಂಬೋದನ್ನ ನಾನು ನೋಡಬೇಕು.” ಕಣ್ಣು ದೊಡ್ಡದು ಮಾಡಿ, ಕಣ್ಣೀರ ಹನಿ ಹೊರಗೆ ಕಾಣಿಸಬಾರದೆಂದು ತಲೇ ಮೇಲೆ ಮಾಡಿದಳು ಸೋನಿ.

“ ಜರೂರ್ ಸೋನಿ, ಖರೆ ಮರೆಯೋದಿಲ್ಲ, ತೊಗೋ ಇದು” ತನ್ನ ಕುರ್ತಾದ ಜೇಬಿನಿಂದ ಎರಡು 5 ಸ್ಟಾರ್ ಚಾಕಲೇಟ್ ತೆಗೆದು, ಸೋನಿಯ ಕೈಯಲ್ಲಿ ತುರುಕಿದಳು ದೀಪ್ತಿ.

ದೀಪ್ತಿಯ ಮಾರುತಿ ವ್ಯಾನ್ ಕಣ್ಣಿಂದ ಮರೆಯಾದ ಮೇಲೂ ಎಷ್ಟೋ ಹೊತ್ತು ಸೋನಿ ಆ ದಿಕ್ಕಿನಲ್ಲಿ ದಿಟ್ಟಿಸುತ್ತ ಕೂತಿದ್ದಳು.

ಆಧಾರ: ವಿವಿಧ ಅಂತರ್ಜಾಲ ಪತ್ರಿಕೆಗಳು (ಇದು ನೈಜ ಘಟನೆ ಆಧರಿಸಿದ ಕಾಲ್ಪನಿಕ ಕಥಾ ಸರಣಿ)

Leave a Reply