ಪಿತೂರಿಕೋರರ ಸಂಚಿನಿಂದ ಗೆಳೆಯನಿಗೆ ಗುರುವಾದ ಅಯಾಜ್!! : ರಾಮತೀರ್ಥರು ಹೇಳಿದ ಕಥೆ

ಹುಲ್ಲು ಕತ್ತರಿಸುವ ಕೆಲಸ ಮಾಡುತ್ತಿದ್ದ ಗೆಳೆಯ ಅಯಾಜನನ್ನು ದೊರೆ ಮಹಮೂದ್, ತನ್ನ ಮುಖ್ಯಮಂತ್ರಿಯನ್ನಾಗಿ ನೇಮಿಸಿಕೊಂಡ. ಸಂಚುಕೋರರ ಪಿತೂರಿಯಿಂದ ಮುಖ್ಯಮಂತ್ರಿ, ಆತನ ಗುರುವೂ ಆದ!!

Mahmud_and_Ayaz_and_Shah_Abbas_Iಯಾಜ್ ಎಂಬುವವನು ಘಜ್ನವಿ ರಾಜ್ಯದ ರಾಜನಾದ ಮಹಮೂದನ ಪ್ರಾಣ ಸ್ನೇಹಿತ. ಅವನು ಮೊದಲು ಹುಲ್ಲು ಕತ್ತರಿಸುವ ಕೆಲಸ ಮಾಡುತ್ತಿದ್ದ. ಮಹಮೂದನ ಪ್ರೀತಿಯಿಂದಲೂ ತನ್ನ ಸ್ವಂತದ ಅರ್ಹತೆಯಿಂದಲೂ ಮುಖ್ಯಮಂತ್ರಿ ಸ್ಥಾನಕ್ಕೇರಿದ.

ಅಯಾಜನಿಗೆ ಒದಗಿ ಬಂದ ಅದೃಷ್ಟವನ್ನು ಕಂಡು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದವರೆಲ್ಲ ಕರುಬಿದರು. ಕೆಲವು ದರ್ಬಾರಿಗಳೂ ಅಯಾಜನನ್ನು ಕಂಡು ಅಸೂಯೆ ಪಟ್ಟರು. ಅವರೆಲ್ಲ ಒಟ್ಟಾಗಿ, ಹೇಗಾದರೂ ಮಾಡಿ ಮಹಮೂದನಿಂದ ಅವನನ್ನು ದೂರ ಮಾಡಬೇಕೆಂದು ಆಲೋಚಿಸಿದರು.

ಮಹಮೂದ್, ಅಯಾಜನ ಮೇಲೆ ವಿಪರೀತ ನಂಬಿಕೆ ಇಟ್ಟುಕೊಂಡಿದ್ದನು. ಹೇಗಾದರೂ ಮಾಡಿ ಈ ನಂಬಿಕೆಯನ್ನು ಕೆಡಿಸಿದರೆ ಆತ ತಾನಾಗಿಯೇ ತನ್ನ ಗೆಳೆಯನನ್ನು ಮಂತ್ರಿ ಸ್ಥಾನದಿಂದ ಮಾತ್ರವಲ್ಲ, ದೇಶದಿಂದಲೇ ಹೊರಗೆಹಾಕುತ್ತಾನೆ ಎಂದು ಸಂಚುಕೋರರು ಚರ್ಚಿಸಿದರು. ಅದಕ್ಕೆ ಸರಿಯಾಗಿ, ಅಯಾಜ್ ಪ್ರತಿ ಸಂಜೆ ಖಜಾನೆಯ ಬಳಿ ಹೋಗುತ್ತಿದ್ದ. ಅಲ್ಲಿ ಅವನು ಏನು ಮಾಡುತ್ತಾನೆ ಬಿಡುತ್ತಾನೆ ಎಂಬುದು ಈ ಸಂಚುಕೋರರಿಗೆ ತಿಳಿದಿಲ್ಲ. ಅವರಿಗೆ ತಿಳಿಯುವುದೂ ಬೇಕಾಗಿಲ್ಲ. ರಾಝನ ಬಳಿ ಹೋಗಿ, “ನಿಮ್ಮ ಪ್ರಾಣಸ್ನೇಹಿತ, ಮುಖ್ಯಮಂತ್ರಿ ಅಯಾಜ್ ಪ್ರತಿನಿತ್ಯ ಖಜಾನೆಯಿಂದ ಕಳವು ಮಾಡುತ್ತಾನೆ” ಎಂದು ಕಿವಿಯೂದಲು ನಿರ್ಧರಿಸಿದರು.

ಅದರಂತೆ ಅವರೆಲ್ಲ ಮಹಮೂದನ ಬಳಿ ತೆರಳಿ ಚಾಡಿ ಹೇಳಿದಾಗ ಮೊದಲು ಆತ ನಂಬಲಿಲ್ಲ. ಕೊನೆಗೆ ಅವರೆಲ್ಲರೂ “ನೀವೇ ಸ್ವತಃ ನೋಡಿ” ಎಂದು ಸಂಜೆ ವೇಳೆ ಖಜಾನೆಯ ಬಳಿ ಅವನನ್ನು ಕಳುಹಿಸಿದರು.

ಮಹಮೂದ್ ಖಜಾನೆಯ ಬಳಿ ಹೋಗುವಾಗ ಅಯಾಜ್ ಅದಾಗಲೇ ಅದರ ಒಳಹೊಕ್ಕಿದ್ದ. ಮಹಮೂದ್ ಕಿಂಡಿಯಿಂದ ಅವನೇನು ಮಾಡುತ್ತಾನೆಂದು ನೋಡತೊಡಗಿದ. ಅಯಾಜ್ ಮೊದಲು ತನ್ನ ಬಟ್ಟೆ ಕಳಚಿಟ್ಟ. ತನ್ನ ಹುಲ್ಲು ಕತ್ತರಿಸುವ ಸಾಧನವನ್ನು ಮುಂದಿಟ್ಟುಕೊಂಡು ಕುಳಿತ. ಕೈಮುಗಿದು ಪ್ರಾರ್ಥಿಸಲಾರಂಭಿಸಿದನು. “ಹೇ ಪ್ರಭು! ಈ ಮುಖ್ಯಮಂತ್ರಿ ಪದವಿ ನನ್ನದಲ್ಲ, ನಿನ್ನದು. ಈ ಶರೀರದಲ್ಲಿರುವ ಕಣ್ಣುಗಳ ಬೆಳಕು ಮತ್ತು ಎಲ್ಲ ವಸ್ತುಗಳ ಬಲ ನಿನ್ನದೇ ಕೃಪೆಯಾಗಿದೆ” ಎಂದು ಕಣ್ಣೀರು ಹರಿಸಿದನು. ಯಾವ ರೀತಿ ಬಿಳಿ ಬಣ್ಣವು ಸೂರ್ಯನ ಕಿರಣಗಳ ಎಲ್ಲ ಏಳು ರಂಗುಗಳನ್ನು ಅವುಗಳ ಸ್ರೋತಕ್ಕೆ ಮರಳಿ ಕೊಡುವುದೋ, ಅದೇ ರೀತಿಯಲ್ಲಿ ತನ್ನದೆಲ್ಲವೂ ನಿನ್ನದೇ ಎಂದು ತನ್ನ ಮೂಲಸ್ರೋತನಾದ ಭಗವಂತನಿಗೆ ಸಮರ್ಪಿಸುತ್ತಿದ್ದನು.  

ಹಾಗೆ ಸ್ವಲ್ಪ ಹೊತ್ತು ಧ್ಯಾನಭಂಗಿಯಲ್ಲಿ ಕುಳಿತಿದ್ದು, ಅಯಾಜ್ ಬಟ್ಟೆಯನ್ನು ಮರಳಿ ತೊಟ್ಟುಕೊಂಡು ಹೊರಟನು. ಅವನು ಹೊರಗೆ ಬರುವಾಗ ಮಹಮೂದ್ ತಾನು ಹನಿಗಣ್ಣಾಗಿ ನಿಂತಿದ್ದನು. ಅಯಾಜ್ ಕಂಡೊಡನೆ ಅವನನ್ನು ಬಿಗಿದಪ್ಪಿ, “ನೀನು ನನ್ನ ಕಣ್ತೆರೆಸಿದೆ. ಪ್ರಾಪಂಚಿಕ ವಸ್ತುಗಳ ಮೋಹವನ್ನು ಕಳಚುವಂತೆ ಮಾಡಿದೆ. ಇಂದಿನಿಂದ ನನಗೆ ನೀನು ಮುಖ್ಯಮಂತ್ರಿ ಮಾತ್ರವಲ್ಲ, ಗುರು – ಮಾರ್ಗದರ್ಶಿ ಕೂಡಾ ಆಗಿರುವೆ” ಎಂದು ಕೃತಜ್ಞತೆಯನ್ನು ಅರ್ಪಿಸಿದನು.

ಎಲ್ಲವನ್ನೂ ಕದ್ದು ನೋಡುತ್ತಿದ್ದ ಪಿತೂರಿಗಾರರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮುಖಮುಚ್ಚಿಕೊಂಡು ಓಡಿಹೋದರು.

(ಸ್ವಾಮಿ ರಾಮತೀರ್ಥರು ಹೇಳಿದ ಕಥೆ. ಮಹಮೂದ್ ಘಜ್ನಿ ಮತ್ತು  ಮಲಿಕ್ ಅಯಾಜ್’ರ ಸ್ನೇಹ ಪರಾಕಾಷ್ಠೆಯ ಕುರಿತು ಹಲವು ದಂತಕಥೆಗಳೂ ಕವಿತೆಗಳೂ ಇವೆ. ಸೂಫಿಗಳಲ್ಲಿ ಇವರಿಬ್ಬರ ಸ್ನೇಹ – ಪ್ರೇಮ ಜನಜನಿತ.  15ನೇ ಶತಮಾನದ ಇರಾನಿ ಸೂಫಿ ಕವಿ ಫರೀದ್ ಅತ್ತಾರ್ ಇವರಿಬ್ಬರ ಕುರಿತು 6 ಪದ್ಯಗಳನ್ನು ರಚಿಸಿದ್ದಾನೆ. )

ಸಂಗ್ರಹ ಮತ್ತು ಅನುವಾದ : ಅಲಾವಿಕಾ

Leave a Reply