ಸಾರವಾಡದ ಭಾಸ್ಕರ ಸ್ವಾಮಿಗಳು

ಸೂಫಿಸಂತನೊಬ್ಬನ ಸೂಚನೆಯ ಮೇರೆಗೆ ಪತ್ನಿ ಸಹಿತವಾಗಿ ಭಾಸ್ಕರ ಸ್ವಾಮಿಗಳ ದರ್ಶನ ಮಾಡಲು ಬಂದ ಮಹಿಪತಿಗೆ ಯೋಗದ ಕೀಲನ್ನು ತೋರಿಸಿಕೊಟ್ಟವರೇ ಭಾಸ್ಕರ ಸ್ವಾಮಿಗಳು. ಭಾಸ್ಕರ ಸ್ವಾಮಿಗಳ ಕುರಿತು ಸ್ವತಃ ಮಹಿಪತಿರಾಯರೇ ತಮ್ಮ ಅನೇಕ ಪದ್ಯಗಳಲ್ಲಿ  ಪ್ರಸ್ತಾಪಿಸಿದ್ದಾರೆ, ಸ್ತುತಿಸಿದ್ದಾರೆ… | ನಾರಾಯಣ ಬಾಬಾನಗರ

ನೇಕ ಸಂತರ, ದಾರ್ಶನಿಕರ , ಹರಿದಾಸರ ಬದುಕಿನ ಘಟ್ಟಗಳಲ್ಲಿ ತಿರುವು ಪಡೆದುಕೊಂಡ ಘಟನೆಗಳನ್ನು ಕಾಣುತ್ತೇವೆ. ಪುರಂದರದಾಸರ ಮೂಲ ಹೆಸರು ಶ್ರೀನಿವಾಸ ನಾಯಕ. ಅಕ್ಕಸಾಲಿಗ ವೃತ್ತಿ. ಧನ ಸಹಾಯ ಯಾಚಿಸಿ ಮನೆಗೆ ಬಂದ ವ್ಯಕ್ತಿ  ಶ್ರೀನಿವಾಸನ ಲೋಭವನ್ನು ಕಳೆಯುವುದರ ಮೂಲಕ ಬದುಕಿನ ದಿಕ್ಕನ್ನೇ ಬದಲಿಸಿ ಹರಿದಾಸವಾಗಲು ಕಾರಣನಾದದ್ದು ಎಂಬ ಪ್ರತೀತಿ ಇದೆ.

ಇಂಥದ್ದೇ ಘಟನೆ ಇನ್ನೊಬ್ಬ ಹರಿದಾಸರ ಬದುಕಿನಲ್ಲಿಯೂ ಆಯಿತು. ವಿಜಯಪುರದ ಆದಿಲ್ ಶಾಹಿ ಅರಸರ ಕಾಲದಲ್ಲಿ ಉನ್ನತ ಹುದ್ದೆಯಲ್ಲಿದ್ದ ಮಹಿಪತಿ, ಮಹಿಪತಿದಾಸರಾಗಿ ಸ್ಥಿತ್ಯಂತರಗೊಳ್ಳಲು ಕಾರಣೀಕರ್ತರಾದದ್ದು ಸಾರವಾಡ ಗ್ರಾಮದಲ್ಲಿದ್ದ ಭಾಸ್ಕರ ಸ್ವಾಮಿಗಳು.

ಸೂಫಿಸಂತನೊಬ್ಬನ ಸೂಚನೆಯ ಮೇರೆಗೆ ಪತ್ನಿ ಸಹಿತವಾಗಿ ಭಾಸ್ಕರ ಸ್ವಾಮಿಗಳ ದರ್ಶನ ಮಾಡಲು ಬಂದ ಮಹಿಪತಿಗೆ ಯೋಗದ ಕೀಲನ್ನು ತೋರಿಸಿಕೊಟ್ಟವರೇ ಭಾಸ್ಕರ ಸ್ವಾಮಿಗಳು. ಭಾಸ್ಕರ ಸ್ವಾಮಿಗಳ ಕುರಿತು ಸ್ವತಃ ಮಹಿಪತಿರಾಯರೇ ತಮ್ಮ ಅನೇಕ ಪದ್ಯಗಳಲ್ಲಿ  ಪ್ರಸ್ತಾಪಿಸಿದ್ದಾರೆ, ಸ್ತುತಿಸಿದ್ದಾರೆ.

ಬಹುಷಃ ಮಹಿಪತಿರಾಯರಿಗೆ ಭಾಸ್ಕರ ಸ್ವಾಮಿಗಳ ದರುಷನವಾದ ಕೂಡಲೇ ರಚಿಸಿರಬಹುದಾದ ಪದ್ಯ ಈ ಸಂಗತಿಯನ್ನು ಹೇಳುತ್ತದೆ :

ಇಂದೆನ್ನ ಜನ್ಮ ಪಾವನವಾಯಿತು

ತಂದೆ ಶ್ರೀ ಗುರು ನಿಮ್ಮ ಚರಣ ದರುಷನದಿ 

……………………………………………………..

……………………………………………………….

ಭಾಸ್ಕರ ಸ್ವಾಮಿಯು ಕರುಣಾಳು ಮೂರ್ತಿಯು

ಮೂಢಮಹಿಪತಿಯ ಕೃಪಾಂಬುಧಿಯು

ಕರುಣದಭಯಹಸ್ತವನು ಶಿರಸದಲ್ಲಿಡಲಾಗಿ

ಧನ್ಯನಾದೆನು ಸತಿಪತಿಸಹಿತವಾಗಿನ್ನು

ಮುಂತಾಗಿ ಗುರುಗಳ ಕಾರುಣ್ಯವನ್ನು ಕೊಂಡಾಡಿದ್ದಾರೆ. ಮಹಿಪತಿದಾಸರ ಅನೇಕ ಪದ್ಯಗಳು ಅನುಭಾವ ಜಗತ್ತನ್ನು ಪ್ರವೇಶಿಸಲು ದಾರಿತೋರಿದ ಭಾಸ್ಕರ ಸ್ವಾಮಿಗಳ ಕುರಿತಾಗಿ ಇವೆ. ಮಹಿಪತಿದಾಸರ ಅನಂತರ ಅವರ ವಂಶದಲ್ಲಿ ಬಂದ ಹರಿದಾಸರೂ ಸಹ ಭಾಸ್ಕರ ಸ್ವಾಮಿಗಳ ಕುರಿತಾಗಿ ಪದ್ಯಗಳನ್ನು, ಸ್ತೋತ್ರಗಳನ್ನು ಬರೆದದ್ದಿವೆ.

ಭಾಸ್ಕರ ಸ್ವಾಮಿಗಳ ವೈಯಕ್ತಿಕ ಬದುಕಿನ ಕುರಿತಾಗಿ ಯಾವುದೇ ಉಲ್ಲೇಖಗಳ ಲಭ್ಯತೆ ಇಲ್ಲ. ವಿಜಯಪುರದಲ್ಲಿ ಆಗಿ ಹೋದ ಇನ್ನೋರ್ವ ದಾರ್ಶನಿಕ ರುಕ್ಮಾಂಗದ ಪಂಡಿತರ ಶಿಷ್ಯ ರುಕ್ಮಜದಾಸ ಬರೆದ ಗುರುಮಾಲಿಕೆ ಎಂಬ ಮರಾಠಿ ಚರಿತ್ರೆಯೊಂದು ಉಪಲಬ್ಧವಿದೆ. ಅದು ಮಹಿಪತಿರಾಯರು ಬಾದಶಹನ ಆಸ್ಥಾನದಿಂದ ಭಾಸ್ಕರ ಸ್ವಾಮಿಗಳನ್ನು ಕಾಣಲು ಬರುವವರೆಗಿನ ಮಾಹಿತಿಯನ್ನು ಒಳಗೊಂಡಿದೆ. ಅದರಲ್ಲಿ ಭಾಸ್ಕರ ಸ್ವಾಮಿಗಳು ಲೋಕಾಪುರದಿಂದ ಸಂಚಾರ ಮಾಡುತ್ತಾ ಸಾರವಾಡದಲ್ಲಿ ಬಂದು ಇದ್ದದ್ದು ಎಂಬ ಪ್ರಸ್ತಾಪವಿದೆ.

ಮಹಿಪತಿರಾಯರು ಭಾಸ್ಕರ ಸ್ವಾಮಿಗಳನ್ನು ಕಾಣಲು ಬಂದಾಗ ಸಮಾಧಿ ಸ್ಥಿತಿಯಲ್ಲಿದ್ದರು ಎಂಬ ಸಂಗತಿಯ ಉಲ್ಲೇಖವಾಗುವುದರಿಂದ ಭಾಸ್ಕರ ಸ್ವಾಮಿಗಳು ಯೋಗಿಗಳಾಗಿದ್ದರು ಎಂದು ಹೇಳಬಹುದು. ಮಹಿಪತಿರಾಯರ ಹೆಂಡತಿಯು ಭಾಸ್ಕರ ಸ್ವಾಮಿಗಳಲ್ಲಿ  ಸಂತಾನಬೇಕೆಂದು ಮೊರೆ ಇಟ್ಟರೆ, ಮಹಿಪತಿರಾಯರು ಭಾಸ್ಕರ ಸ್ವಾಮಿಗಳ ಹತ್ತಿರ ಬಂದಿದ್ದು ಲೌಕಿಕ ಜಗತ್ತಿನಿಂದ ಅಲೌಕಿಕ ಜಗತ್ತಿನೆಡೆಗೆ ನನ್ನನ್ನು ಕರೆದುಕೊಂಡು ಹೋಗು ಎಂಬುದನ್ನು ಕೇಳವುದಕ್ಕಾಗಿ. ಇಬ್ಬರಿಗೂ ಆಶೀರ್ವದಿಸಿದರು ಭಾಸ್ಕರ ಸ್ವಾಮಿಗಳು. ಹಾಲಿನ ಲೋಟವೊಂದನ್ನು ತರಿಸಿ ಅರ್ಧ  ಹಾಲನ್ನು ತಾವು ಕುಡಿದು ಇನ್ನರ್ಧದಷ್ಟು ಹಾಲನ್ನು ಮಹಿಪತಿರಾಯರಿಗೆ ಕುಡಿಯಲು ಕೊಟ್ಟರು. ಅವರ ಆಶೀರ್ವಾದದ ಫಲವಾಗಿ ಮಹಿಪತಿರಾಯ ದಂಪತಿಗಳಿಗೆ ದೇವರಾಯ ಮತ್ತು ಕೃಷ್ಣರಾಯ ಎಂಬ ಶ್ರೇಷ್ಠ ಇಬ್ಬರು ಸುಪುತ್ರರು ಜನಿಸಿದರು.

ಇನ್ನೊಂದೆಡೆ ಮಹಿಪತಿರಾಯರು ಸಂಸಾರದಲ್ಲಿದ್ದರೂ ಆಧ್ಯಾತ್ಮಿಕ ಮೇರು ಶಿಖರವನ್ನು ಏರಿದರು. ಮಹಿಪತಿರಾಯರ ಶ್ರೇಷ್ಠ ಗುರುಗಳು ಭಾಸ್ಕರ ಸ್ವಾಮಿಗಳು. ಭಾಸ್ಕರ ಸ್ವಾಮಿಗಳ ಬಗ್ಗೆ ಹೇಳುವಾಗಲೆಲ್ಲಾ ವಿಜಯಪುರ ಜಿಲ್ಲೆಯಲ್ಲಿ ಆಗಿ ಹೋದ ಭಾಸ್ಕರ ಮುನಿಗಳ ಬಗ್ಗೆ ಅನೇಕ ಕಡೆಗೆ ಪ್ರಸ್ತಾಪ ಮಾಡಲಾಗುತ್ತದೆ. ಭಾಸ್ಕರ ಸ್ವಾಮಿಗಳೇ ಬೇರೆ. ಇವರು ಕಾಲವಾದ ಮೇಲೆ ಅನಂತರ ಕಾಣಿಸಿಕೊಂಡವರು ಭಾಸ್ಕರ ಮುನಿಗಳು. ಇಬ್ಬರೂ ಬೇರೆ, ಬೇರೆ ವ್ಯಕ್ತಿಗಳು ಎಂಬುದನ್ನು ತಿಳಿಯಬೇಕು.

ಭಾಸ್ಕರ ಸ್ವಾಮಿಗಳ ಹುಟ್ಟಿದ ವರ್ಷವಾಗಲೀ ಕಾಲವಾದ ವರ್ಷವಾಗಲೀ ಮಾಹಿತಿ ಲಭ್ಯವಿಲ್ಲ. ಈಗಲೂ ಸಾರವಾಡ ಗ್ರಾಮದಲ್ಲಿ ಭಾಸ್ಕರ ಸ್ವಾಮಿಗಳು ಕುಳಿತು ಅನುಷ್ಠಾನ ಮಾಡುತ್ತಿದ್ದ ಸ್ಥಳವಿದೆ. ಅವರು ಗುಹೆಯಲ್ಲಿ ಪ್ರವೇಶಮಾಡಿದರು ಎಂದು ಹೇಳಲಾಗುವ ಗೋಡೆಯೊಂದರಲ್ಲಿ ಇರುವ ಒಂದು ಚಿಕ್ಕದಾದ ಮಾಡಿದೆ. ಭಾಸ್ಕರ ಸ್ವಾಮಿಗಳು ಪೂಜೆಗೈದ ವಸ್ತುವೊಂದಿದೆ. ಪ್ರತಿ ವರ್ಷ ಭಾಸ್ಕರ ಸ್ವಾಮಿಗಳ ಆರಾಧನೆಯನ್ನು ಸಾರವಾಡ ಮತ್ತು ಕಾಖಂಡಕಿ ಗ್ರಾಮಗಳಲ್ಲಿ ಆಚರಿಸಲಾಗುತ್ತದೆ.

Leave a Reply