ಹಳಿಯ ಮೇಲೆ ಹಾದುಹೋಯ್ತು ಸಾವಿನ ರೈಲು : ಕೊರೊನಾ ಕಾಲದ ಕಥೆಗಳು #6

ಬೇರೆ ದಾರಿಯಾದರೂ ಏನಿತ್ತು? ಅಷ್ಟು ದೂರ ಜೊತೆ ಸಾಗಿ ಬಂದಿದ್ದ ಗೆಳೆಯರು ಈಗ ಇಲ್ಲ… ಅದೂ ಎಂಥಾ ದುರಂತ ಸಾವು! ಶಿವಬಾನನ ಕಣ್ಣೆದುರೇ ಮುನ್ನುಗ್ಗಿ ಬಂದ ಗೂಡ್ಸ್ ರೈಲು ಅವನು ಬಾಯಿ ತೆರೆಯುವುದರೊಳಗೆ ಆ ಹದಿನಾಲ್ಕು ಜನರ ಮೇಲೆ ಹರಿದುಹೋಗಿತ್ತು. ಅವರ ದೇಹಗಳು ಕತ್ತರಿಸಿ ಹಳಿಯ ಆಚೀಚೆ ಛಿದ್ರವಾಗಿ ಬಿದ್ದವು. ಆ ಹೊಡೆತಕ್ಕೆ ಅವರು ಕೂಗಿದರೋ ಇಲ್ಲವೋ…. ಅದು ಕೆಳದಷ್ಟು ದೂರದಲ್ಲಿ ಒಂದು ಮರದ ಕೆಳಗೆ ಉಸಿರುಗಟ್ಟಿಕೊಂಡು ನೋಡುತ್ತಿದ್ದ ಶಿವಬಾನ್… | ಚೇತನಾ ತೀರ್ಥಹಳ್ಳಿ

“ಬೇಗ ಹೆಜ್ಜೆ ಹಾಕು ವಿರೇಂದರ್… ಅವ್ರೆಲ್ಲ ಮಹಾರಾಷ್ಟ್ರ ಗಡಿ ದಾಟಿಬಿಟ್ಟಿರ್ತಾರೆ ಇಷ್ಟೊತ್ತಿಗೆ… ನೋಡು! ಎಷ್ಟು ದೂರ ಕಣ್ಣು ಹಾಯ್ಸಿದರೂ ಯಾರೂ ಕಾಣ್ತಿಲ್ಲ…” ಅಷ್ಟೊತ್ತೂ ಮೌನವಾಗಿದ್ದ ಶಿವಬಾನ್ ಇದ್ದಕ್ಕಿದ್ದಂತೆ ಎಚ್ಚೆತ್ತು ಬಡಬಡಿಸತೊಡಗಿದ. ಕಾಲೆಳೆದು ನಡೆಯುತ್ತಿದ್ದ ಇಂದಲಾಲ್ ಒಂದು ಕ್ಷಣ ನಿಂತು ಅವನ ಹೆಗಲ ಮೇಲೆ ಕೈಯಿಟ್ಟು ಕಣ್ಣಲ್ಲಿ ಕಣ್ಣು ನೆಟ್ಟ. ಸಂಗಾತಿಗಳಿಬ್ಬರೂ ನಡಿಗೆ ನಿಲ್ಲಿಸಿದ್ದು ನೋಡಿ ವೀರೇಂದ್ರ ಸಿಂಗ್ ಹೆಜ್ಜೆ ಹಿಂತಿರುಗಿಸಿ ಬಂದ. ಇಂದಲಾಲನ ನೋಟದಲ್ಲಿ ತೋರಿದ ವಾಸ್ತವ ಶಿವಬಾನನ ಕೆನ್ನೆ ಮೇಲೆ ಕಣ್ಣೀರಾಗಿ ಹರಿಯಿತು. ಚೀಲವನ್ನು ರಸ್ತೆ ಮೇಲೆ ಬಿಸಾಡಿ ಕುಸಿದು ಕೂತು ಬಿಕ್ಕತೊಡಗಿದ. ವೀರೇಂದರ್ ಮತ್ತು ಇಂದಲಾಲ್ ಅವನ ಪಕ್ಕ ಕುಕ್ಕರುಗಾಲಲ್ಲಿ ಕೂತು ಸಮಾಧಾನ ಮಾಡತೊಡಗಿದರು.

ಬೇರೆ ದಾರಿಯಾದರೂ ಏನಿತ್ತು? ಅಷ್ಟು ದೂರ ಜೊತೆ ಸಾಗಿ ಬಂದಿದ್ದ ಗೆಳೆಯರು ಈಗ ಇಲ್ಲ… ಅದೂ ಎಂಥಾ ದುರಂತ ಸಾವು! ಶಿವಬಾನನ ಕಣ್ಣೆದುರೇ ಮುನ್ನುಗ್ಗಿ ಬಂದ ಗೂಡ್ಸ್ ರೈಲು ಅವನು ಬಾಯಿ ತೆರೆಯುವುದರೊಳಗೆ ಆ ಹದಿನಾಲ್ಕು ಜನರ ಮೇಲೆ ಹರಿದುಹೋಗಿತ್ತು. ಅವರ ದೇಹಗಳು ಕತ್ತರಿಸಿ ಹಳಿಯ ಆಚೀಚೆ ಛಿದ್ರವಾಗಿ ಬಿದ್ದವು. ಆ ಹೊಡೆತಕ್ಕೆ ಅವರು ಕೂಗಿದರೋ ಇಲ್ಲವೋ…. ಅದು ಕೆಳದಷ್ಟು ದೂರದಲ್ಲಿ ಒಂದು ಮರದ ಕೆಳಗೆ ಉಸಿರುಗಟ್ಟಿಕೊಂಡು ನೋಡುತ್ತಿದ್ದ ಶಿವಬಾನ್.

ಹಳಿಗೆ ಆತುಕೊಂಡು ಮಲಗಿದ್ದ ಇನ್ನಿಬ್ಬರ ಜೀವ ಹೋಗಿರಲಿಲ್ಲ. ಅವು ಇನ್ನೂ ಮಿಸುಕಾಡುತ್ತಿರುವುದನ್ನು ನೋಡಿದ ಶಿವಬಾನ್ ಕೂಡಲೇ ತನ್ನಂತೆಯೇ ಬಿಡುಗಣ್ಣಾಗಿ ಮಾತು ಕಳಕೊಂಡು ಕೂತಿದ್ದ ಇಂದಲಾಲ್ ಮತ್ತು ವೀರೇಂದ್ರ ಸಿಂಗರನ್ನು ಹೊರಡಿಸಿ ಸಹಾಯಕ್ಕೆ ಧಾವಿಸಿದ. ಆ ಹೊತ್ತಿಗೆ ರೈಲ್ವೆ ಸಿಬ್ಬಂದಿ ಜಮಾಯಿಸತೊಡಗಿದ್ದರು. ಆ ಎರಡು ಅರೆಜೀವ ದೇಹಗಳನ್ನು ಆಸ್ಪತ್ರೆಗೆ ಕೊಂಡುಹೋದರು. ಅವರತ್ತ ಕೈಬೀಸುವಾಗಲೇ ಶಿವಬಾನನಿಗೆ ಅದು ಕೊನೆಯ ವಿದಾಯವೆಂದು ಅರಿವಾಗಿತ್ತು.

ದುಃಖಿಸಲು ಕೂಡ ಪುರುಸೊತ್ತು ಸಿಗದಂತೆ ಪೊಲೀಸರ ಪ್ರಶ್ನೆಗಳು, ವಿಚಾರಣೆ, ಕೋವಿಡ್ ಪರೀಕ್ಷೆ ಮೊದಲಾಗಿ ಹತ್ತು ಹಳವಂಡದಲ್ಲಿ ದಿನ ಕಳೆದುಹೋಯ್ತು. ಬದುಕುಳಿದಿದ್ದ ಆ ಮೂವರಿಗೆ ಸತ್ತವರ ವಿವರ ನೀಡುವುದೇ ಒಂದು ಕೆಲಸವಾಗಿಹೋಯ್ತು.

**

ಆ ಸಾಥಿಗಳು ಒಬ್ಬೊಬ್ಬರೂ ಬಿಟ್ಟುಬಂದ ಅರೆಬರೆ ಕೆಲಸ ಪೂರೈಸಲೆಂದು ತಮ್ಮ ತಮ್ಮ ಹಳ್ಳಿಗೆ ಹೊರಟಿದ್ದರು. ಒಬ್ಬನಂತೂ ತನ್ನ ಕಚ್ಚಾಮನೆಯನ್ನು ಪಕ್ಕಾಮನೆ ಮಾಡಿಯೇ ಮರಳೋದು ಅನ್ನುವ ಹುಮ್ಮಸ್ಸಿನಲ್ಲಿದ್ದ. ಮತ್ತೊಬ್ಬ ಇದ್ದ ಅಂಗೈಯಗಲ ತೋಟದ ಕಳೆ ತೆಗೆದು ಹೊಸ ಬೆಳೆ ಹಾಕುವ ಕನಸು ಕಂಡಿದ್ದ. ಮತ್ತೊಬ್ಬ ತನ್ನ ಗುಪ್ತಪ್ರೇಯಸಿಯನ್ನು ಕಾಣುವ ಕಾತರದಲ್ಲಿದ್ದ. ಜಲ್ನಾದಿಂದ ಕರ್ಮಾಡ್’ವರೆಗೂ ದಾರಿಯುದ್ದ ಅವನನ್ನು ಛೇಡಿಸಿಕೊಂಡೇ ಬಂದಿದ್ದ ಶಿವಬಾನ್.

ನಡುರಾತ್ರಿ ಸುಮಾರಿಗೆ ಅವರೆಲ್ಲ ಒಟ್ಟು ಕೂತು ರೊಟ್ಟಿ ಚಟ್ನಿ ತಿಂದಿದ್ದರು. ಆಮೇಲೆ ಕಾಲು ಸೋತು ಹಿಂದೆ ಬಿದ್ದಿದ್ದ ಅವನೊಟ್ಟಿಗೆ ವಿರೇಂದರ್ ಮತ್ತು ಇಂದ್ ಲಾಲ್ ಉಳಿದುಕೊಂಡರು. ಬಾಕಿಯವರು ರೈಲುಹಳಿ ತಲುಪುತ್ತಲೇ ಸಪಾಟಾದ ಈ ಜಾಗ ಮಲಗಲಿಕ್ಕೆ ಅರಾಮು ಅಂತ ಮಾತಾಡಿಕೊಂಡು ಹಾಗೇ ಅಡ್ಡಲಾದರು. ಒಬ್ಬರಾದಮೇಲೆ ಒಬ್ಬರಂತೆ ಹದಿನಾಲ್ಕು ಮಂದಿ ತಮ್ಮ ಪಕ್ಕ  ಚೀಲಗಳನ್ನಿಟ್ಟುಕೊಂಡು ನಿರುಮ್ಮಳ ಮಲಗಿದರು.

ಬೆಳಗ್ಗೆ ಬೇಗನೆದ್ದು ಹೊರಟ್’ಬಿಡೋದು. ಆಮೇಲೆ ಹೆಚ್ಚಂದ್ರೆ ಎರಡು ದಿನ, ಊರು ತಲುಪಿಬಿಡ್ತೀವಿ!

ಸುಸ್ತಿನ ಕತ್ತಲಲ್ಲಿ ಅವರ ಬಳಿ ಕನಸುಗಳೂ ಸುಳಿಯಲಿಲ್ಲ… ಅಷ್ಟು ಗಾಢ ನಿದ್ದೆ. ಎಚ್ಚರವಿದ್ದ ಒಬ್ಬಿಬ್ಬರು ತಮ್ಮನ್ನು ಹುಡುಕುತ್ತ ಬಂದ ಶಿವಬಾನ್ ತಂಡಕ್ಕೆ ಮೊಬೈಲಿನ ಬೆಳಕು ಬೀರಿ ಸನ್ನೆ ಮಾಡಿದರು. ನಡೆನಡೆದು ಹೈರಾಣಾಗಿದ್ದ ಅವರು ವಾಪಸು ಕೈಬೀಸಿ ಅಲ್ಲೇ ಮರದ ಕೆಳಗೆ ಮಲಗಿಬಿಟ್ಟರು.

ಬೆಳಗಿನ ಜಾವದ ಬೇಸಗೆ ಗಾಳಿ ಕಿವಿ ಕೊರೆಯುತ್ತಿದೆ. ಜಬರೆದ್ದ ಕಲ್ಲೊತ್ತಿಗೆ ನಿದ್ರೆ ಕಳಕೊಂಡ ಶಿವಬಾನ್ ಮೈಮುರಿದು ಹಳಿಯ ಕಡೆ ನೋಡುತ್ತಾನೆ… ದೂರದಲ್ಲಿ ದೀಪದ ಕಣ್ಣು ಬಿಟ್ಟುಕೊಂಡು ಸಾವು ಮುನ್ನುಗ್ಗಿ ಬರುತ್ತಿದೆ!

ಎದ್ದುನಿಂತು ಕೂಗುತ್ತಾನೆ…. ಅದು ಹಳಿಯವರೆಗೂ ತಲುಪುತ್ತಿಲ್ಲ… ಗಾಬರಿಯಿಂದ ಫೋನ್ ಮಾಡಲು ಮೊಬೈಲ್ ತೆಗೆದರೆ ಸ್ವಿಚ್ ಆಫ್ ಆಗಿದೆ… ಆನ್ ಮಾಡುವಷ್ಟು ಸಮಯವಿಲ್ಲ…. ಗೆಳೆಯರು ಮಲಗಿದ ಹಳಿ ಮೇಲೆ ಗೂಡ್ಸ್ ರೈಲು ಧಾವಿಸಿಬರುತ್ತಿದೆ… ಶಿವಬಾನ್ ಕೂಗಾಡುತ್ತಿದ್ದಾನೆ… ಅವನ ಗದ್ದಲಕ್ಕೆ ಎಚ್ಚರಾದ ವಿರೇಂದರ್ ಮತ್ತು ಇಂದಲಾಲ್ ಏನಾಗ್ತಿದೆ ಅಂತ ತಲೆ ಕೆರೆದುಕೊಳ್ತಾ ನೋಡ್ತಿದ್ದಾರೆ. ಅವರಿಗದು ಅರ್ಥವಾಗುವಷ್ಟರಲ್ಲಿ, ಸಾವಿನ ರೈಲು ಸಂಗಾತಿಗಳನ್ನು ಕೊಂದು ತೇಗಿದಂತೆ ದೊಡ್ಡ ಸದ್ದು ಮಾಡುತ್ತಾ ನಿಲ್ಲುತ್ತಿದೆ….

**

 ವಿಚಾರಣೆಗಳ ಧಾವಂತದಲ್ಲಿ ಅಲ್ಲೀತನಕ ನಡೆದುದನ್ನು ನೆನೆಯಲಿಕ್ಕೂ ಅವರಿಗೆ ಸಮಯವಾಗಿರಲಿಲ್ಲ, ಇನ್ನು ದುಃಖ ದೂರದ ಮಾತು. ಅಷ್ಟೆಲ್ಲ ಕತೆ ಕೇಳಿದ ಮೇಲೂ ಅವರ ಕಷ್ಟಕ್ಕೆ ಮರುಗಿ ವಾಹನ ವ್ಯವಸ್ಥೆ ಮಾಡಲು ಯಾರೂ ಮುಂದೆ ಬರಲಿಲ್ಲ.

ನಡಿಗೆಯ ಪುರುಸೊತ್ತಿನಲ್ಲಿ ಎದೆಯೊಳಗೆ ಹೂತಿದ್ದ ಆಘಾತವನ್ನು ಪ್ರಜ್ಞೆಗೆಳೆದುಕೊಂಡ ಶಿವಬಾನ್, ವಾಸ್ತವದ ಅರಿವಾಗ್ತಲೇ ಕುಸಿದು ಕುಳಿತುಬಿಟ್ಟಿದ್ದಾನೆ. 

“ಏಳು, ಬೇಗ ಊರು ಸೇರಿಕೊಳ್ಬೇಕು.  ಅಳ್ತಾ ಕೂರಕ್ಕೆ ಬೇಕಾದಷ್ಟು ಸಮಯ ಸಿಗತ್ತೆ…. ಫ್ಯಾಕ್ಟರಿಯವ್ರು ಮತ್ತೆ ಕರೀತಾರೋ ಇಲ್ವೋ… ಬಾ, ಬಾ….” ಶಿವಬಾನ್’ನನ್ನು ವಿರೇಂದರ್ ಎಬ್ಬಿಸ್ತಿದ್ದಾನೆ. ಒಂದಲ್ಲ, ಎರಡಲ್ಲ, ಹದಿನಾರು ಹೆಣಗಳ ನೆನಪಿನ ಭಾರ ಹೊತ್ತು ಅವರಿನ್ನು ಹೆಜ್ಜೆ ಹಾಕಬೇಕಿದೆ.

ಆಧಾರ: ವಿವಿಧ ಅಂತರ್ಜಾಲ ಪತ್ರಿಕೆಗಳು (ಇದು ನೈಜ ಘಟನೆ ಆಧರಿಸಿದ ಕಾಲ್ಪನಿಕ ಕಥಾ ಸರಣಿ)

Leave a Reply