ವಿಮಾನದ ಟಿಕೀಟು ಖರೀದಿಸಿಕೊಟ್ಟವರು ಯಾರು!? : ಕೊರೊನಾ ಕಾಲದ ಕಥೆಗಳು #9

ಆ 180 ಜನ ಬಡಪಾಯಿಗಳು ತಮ್ಮ ಬದುಕಿನಲ್ಲಿ ಮೊದಲ ಬಾರಿಗೆ ವಿಮಾನದಲ್ಲಿ ಕುಳಿತು ಎರಡು ಗಂಟೆ ಗಾಳಿಯಲ್ಲಿ ಹಾರಾಡಿ 8.15 ಕ್ಕೆ ಜಾರ್ಖಾಂಡಿನ ರಾಂಚಿ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅಲ್ಲಿ ಮತ್ತೊಂದು ಆಶ್ಚರ್ಯ ಕಾದಿತ್ತು! | ಪಂಜು ಗಂಗೂಲಿ

ಜಾರ್ಖಾಂಡಿನ ಸುನೀಲ್ ಕುಮಾರ್ ಮುಂಬೈಯ ಲಕ್ಷಾಂತರ ವಲಸೆ ಕಾರ್ಮಿಕರಲ್ಲೊಬ್ಬ. ಆದಂದಿನಿಂದ ತನ್ನೂರಿಗೆ ವಾಪಾಸಾಗಲು ಹೆಣಗುತ್ತಿದ್ದ ಇವನಿಗೆ ಒಂದು ಮೊಬೈಲ್ ಕರೆ ಬಂದು ಅತ್ತಲಿನ ಸ್ವರ ವಿಮಾನದಲ್ಲಿ ಊರಿಗೆ ಹೋಗಲು ನಿಮ್ಮ ಏರ್ ಟಿಕೇಟ್ ಸಿದ್ಧವಾಗಿದೆ ಎಂದಿತು! ಯಾರೋ ಮಜಾ ಮಾಡಲು ತನ್ನ ಕಾಲೆಳೆಯುತ್ತಿದ್ದಾರೆ ಎಂದಂದು ಕೊಳ್ಳುತ್ತಿದ್ದಾಗ ಅವನ ಹೆಸರಲ್ಲಿ ಏರ್ ಏಷಿಯಾ ವಿಮಾನ ಟಿಕೇಟ್ ಬಂತು! ತನ್ನ ಕಣ್ಣನ್ನು ತಾನೇ ನಂಬದಾದ ಅವನು ಟಿಕೇಟು ಹಿಡಿದು ಗುರುವಾರ ಮುಂಜಾನೆ 6 ಗಂಟೆಗೆ ಮುಂಬೈಯ ವಿಮಾನ ನಿಲ್ದಾಣಕ್ಕೆ ಹೋದಾಗ ಅಲ್ಲಿ ಇನ್ನೂ 179 ಜನ ಅವನಂತಹ ವಲಸೆ ಕಾರ್ಮಿಕ ಪುರುಷರು, ಸ್ತ್ರೀಯರು ಮಕ್ಕಳು ತಮ್ಮ ವಿಮಾನ ಟಿಕೇಟಿನೊಂದಿಗೆ ಅಲ್ಲಿ ಸೇರಿದ್ದರು! ತಮಗೆ ಆ ಟಿಕೇಟುಗಳನ್ನು ಕೊಟ್ಟವರು ಯಾರು ಎಂಬುವುದು ಒಬ್ಬರಿಗೂ ಗೊತ್ತಿರಲಿಲ್ಲ!

ಆ 180 ಜನ ಬಡಪಾಯಿಗಳು ತಮ್ಮ ಬದುಕಿನಲ್ಲಿ ಮೊದಲ ಬಾರಿಗೆ ವಿಮಾನದಲ್ಲಿ ಕುಳಿತು ಎರಡು ಗಂಟೆ ಗಾಳಿಯಲ್ಲಿ ಹಾರಾಡಿ 8.15 ಕ್ಕೆ ಜಾರ್ಖಾಂಡಿನ ರಾಂಚಿ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅಲ್ಲಿ ಮತ್ತೊಂದು ಆಶ್ಚರ್ಯ ಕಾದಿತ್ತು! ಹಲವು ಖಾಸಗೀ ಬಸ್ಸುಗಳು ಸಾಲಾಗಿ ನಿಂತು ಅವರಿಗಾಗಿಯೇ ಕಾಯುತ್ತಿದ್ದವು! ಬಸ್ಸು ಹತ್ತಿ ಕುಳಿತಾಗ ಅವರಿಗೆ ಆಹಾರ ಪೊಟ್ಟಣ, ಕುಡಿಯವ ನೀರಿನ ಬಾಟಲುಗಳು ಕೈಗೆ ಬಂದಾಗಂತೂ ಅವರ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ! ತಾವೇನು ಸಾಮೂಹಿಕ ಕನಸು ಕಾಣುತಿದ್ದೇವೆಯೇ ಎನ್ನುತ್ತ ಪರಸ್ಪರ ಮುಖ ನೋಡುತ್ತ ಆನಂದದಿಂದ ತಮಗಾಗಿ ನಿಗದಿ ಪಡಿಸಿದ್ದ ಕ್ವಾರಂಟೈನ್ ಕೇಂದ್ರಗಳನ್ನು ಸೇರಿಕೊಂಡರು.

ಇಷ್ಟಕ್ಕೂ, ಆ 180 ಬಡಪಾಯಿಗಳ ವಿಮಾನ ಯಾನದ ಖರ್ಚನ್ನು ಭರಿಸಿದವರು ಯಾರು? ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸಿ ವಿಮಾನ ಟಿಕೇಟುಗಳನ್ನು ಖರೀದಿಸಿಕೊಟ್ಟ ಬೆಂಗಳೂರಿನ ನೇಷನಲ್ ಲಾ ಸ್ಕೂಲ್ (NLS) ನ 80 ಜನ ಅನಾಮಧೇಯ ವಿದ್ಯಾರ್ಥಿಗಳು!

(ಆಧಾರ : ಪತ್ರಿಕೆ / ಅಂತರ್ಜಾಲ ವರದಿಗಳು | ಪಂಜು ಗಂಗೂಲಿಯವರ facebook ಸಂಗ್ರಹದಿಂದ…)

Leave a Reply