ಯೇನ ಕೇನ ಪ್ರಕಾರೇಣ… : ಬೆಳಗಿನ ಹೊಳಹು

ಕೆಲವರು ವಿವಾದ ಹುಟ್ಟುಹಾಕಿ, ಆ ಮೂಲಕ ಖ್ಯಾತಿ ಗಳಿಸಲೆಂದೇ ಮಾತನಾಡುತ್ತಾರೆ. ಇನ್ನು ಕೆಲವರು ಸರಿಯಾದ ಮಾತುಗಳನ್ನು ಸುಖಾಸುಮ್ಮನೆ ಖಂಡಿಸುವ/ವಿರೋದಿಸುವ ಮೂಲಕ ಖ್ಯಾತಿ ಗಳಿಸಲು ಹವಣಿಸುತ್ತಾರೆ. ನಾವು ಏನು ಮಾಡಬಾರದು, ಹೇಗೆ ಇರಬಾರದು ಎಂಬುದನ್ನು ಇಂಥವರಿಂದ ತಿಳಿದುಕೊಳ್ಳೋಣ. ಈ ಸುಭಾಷಿತದ ವ್ಯಂಗ್ಯವನ್ನು ಮನವರಿಕೆ ಮಾಡಿಕೊಳ್ಳೋಣ…

ಘಟಂ ಭಿಂದ್ಯಾತ್ ಪಟಂ ಛಿಂದ್ಯಾತ್ ಕುರ್ಯಾದ್ವಾ ಗಾರ್ಧಭಸ್ವನಂ|
ಯೇನ ಕೇನ ಪ್ರಕಾರೇಣ ಪ್ರಸಿದ್ಧ ಪುರುಷೋ ಭವೇತ್ || ಸುಭಾಷಿತ ||

ಅರ್ಥ : ಗಡಿಗೆಯನ್ನಾದರೂ ಒಡೆಯಬೇಕು. ಬಟ್ಟೆಯನ್ನಾದರೂ ಹರಿಯಬೇಕು. ಕತ್ತೆಯಂತಾದರೂ ಕಿರುಚಬೇಕು. ಹೇಗಾದರೂ ಸರಿ… ಪ್ರಸಿದ್ಧಿಗೆ ಬರಬೇಕು. ಇದೇ ಗುರಿಯಾಗಬೇಕು…!!

ತಾತ್ಪರ್ಯ : “ಯೇನಕೇನ ಪ್ರಕಾರೇಣ” ಎಂಬುದು ಒಂದು ನುಡಿಗಟ್ಟಾಗಿ ನಮ್ಮ ನಡುವೆ ಚಾಲ್ತಿಯಲ್ಲಿದೆ ಅಲ್ಲವೆ? ಅದರ ಸಂಪೂರ್ಣ ಸುಭಾಷಿತ ಈ ಮೇಲಿನದು.
ಈ ಕಾಲದ ನಮಗೆ ಈ ಸುಭಾಷಿತದ ತಾತ್ಪರ್ಯವನ್ನು ಹೆಚ್ಚು ವಿವರಿಸಬೇಕಿಲ್ಲ. ರಾಜಕಾರಣಿಗಳು, ಭಾಷಣಕಾರರು, ಪ್ರಚಾರದ ಹುಚ್ಚಿನ ವಿವಿಧ ಕ್ಷೇತ್ರಗಳ ಜನರು, ಟಿವಿ ಪ್ಯನೆಲ್’ನಲ್ಲಿ ಕುಳಿತು ಚರ್ಚೆ ಮಾಡುವ ಬಹುತೇಕರು ನಮಗೆ ಈ ಶ್ಲೋಕವನ್ನು ಚೆನ್ನಾಗಿ ಅರ್ಥ ಮಾಡಿಸಿದ್ದಾರೆ.

ಕೆಲವರು ವಿವಾದ ಹುಟ್ಟುಹಾಕಿ, ಆ ಮೂಲಕ ಖ್ಯಾತಿ (ಅಥವಾ ಕುಖ್ಯಾತಿ) ಗಳಿಸಲೆಂದೇ ಮಾತನಾಡುತ್ತಾರೆ. ಇನ್ನು ಕೆಲವರು ಸರಿಯಾದ ಮಾತುಗಳನ್ನು ಸುಖಾಸುಮ್ಮನೆ ಖಂಡಿಸುವ/ವಿರೋಧಿಸುವ ಮೂಲಕ ಖ್ಯಾತಿ (ಇದು ಕೂಡಾ ಕುಖ್ಯಾತಿಯೇ) ಗಳಿಸಲು ಹವಣಿಸುತ್ತಾರೆ. ಹೆಸರು ಮಾಡಲೆಂದೇ ಕ್ರಿಯೆ – ಪ್ರತಿಕ್ರಿಯೆಗಳನ್ನು ನೀಡುವ ಈ ವಿಭಾಗಗಳ ಜನರು, ಸ್ವತಃ ಯೋಗ್ಯತೆ ಇದ್ದರೂ ಅದನ್ನು ಸಕಾರಾತ್ಮಕವಾಗಿ ಬಳಸಲು ಆಸಕ್ತಿ ತೋರುವುದಿಲ್ಲ. ಅವರಿಗೆ ಅಬ್ಬರದಲ್ಲೇ ಹೆಚ್ಚು ರುಚಿ. ಆದರೆ ಇಂಥಾ ಖ್ಯಾತಿಗಳು ಕೇವಲ ನೀರ ಮೇಲಿನ ಗುಳ್ಳೆ ಅನ್ನುವುದನ್ನು ಅವರು ಗಮನಿಸುವುದೇ ಇಲ್ಲ. ಆ ಕ್ಷಣ, ಆ ಸಂದರ್ಭದಲ್ಲಿ ಅವರು ದೊಡ್ಡ ಜನ ಆಗಿಬಿಡಬೇಕು ಅಷ್ಟೇ!

ನಾವು ಏನು ಮಾಡಬಾರದು, ಹೇಗೆ ಇರಬಾರದು ಎಂಬುದನ್ನು ಇಂಥವರಿಂದ ತಿಳಿದುಕೊಳ್ಳೋಣ. ಈ ಸುಭಾಷಿತದ ವ್ಯಂಗ್ಯವನ್ನು ಮನವರಿಕೆ ಮಾಡಿಕೊಳ್ಳೋಣ. ನಮಗೆ ಈ ಸುಭಾಷಿತದ ಅರ್ಥವನ್ನು ಚೆನ್ನಾಗಿ ಮನವರಿಕೆ ಮಾಡಿಸುತ್ತಿರುವ ಜನರಿಗೆ ಆಭಾರಿಯೂ ಆಗಿರೋಣ. ಆಗದೇ…?

Leave a Reply