ಮೂಲ: ಶಮ್ಸ್ | ಕನ್ನಡಕ್ಕೆ : ಚಿದಂಬರ ನರೇಂದ್ರ
“ ನಿಮ್ಮ ಬಗ್ಗೆ ಆ ಮನುಷ್ಯ
ತುಂಬ ಒಳ್ಳೆಯ ಮಾತುಗಳನ್ನ ಹೇಳಿದ “
ಹೀಗೆ ಯಾರಾದರೂ ನಿಮಗೆ ಸುದ್ದಿ ಮುಟ್ಟಿಸಿದರೆ
ಅವರಿಗೆ ಹೇಳಿ,
“ನಿಜವಾಗಿಯೂ ನನ್ನ ಹೂಗಳುತ್ತಿರುವುದು ನೀನು,
ಅವ ಕೇವಲ ನೆಪ ಮಾತ್ರ “
“ ಆ ಮನುಷ್ಯ ನಿನ್ನ ಕುರಿತು ಸಾಕಷ್ಟು ಕೆಟ್ಟ ಮಾತುಗಳನ್ನಾಡಿದ”
ಹೀಗೆ ಯಾರಾದರೂ ನಿಮ್ಮನ್ನು ಸಂತೈಸಲು ಮುಂದಾದಲ್ಲಿ,
ಅವನ ಕಣ್ಣಲ್ಲಿ ಕಣ್ಣಿಟ್ಟು ಹೇಳಿ
“ ನನ್ನ ಬಗ್ಗೆ , ಕೆಟ್ಟ ಮಾತುಗಳನ್ನಾಡುತ್ತಿರುವುದು ನೀನು,
ಅವ, ಬರೀ ನಿಮಿತ್ತ ಮಾತ್ರ”
“ ಅವರಿಗೆ ನಿನ್ನ ಬಗ್ಗೆ ಅಸೂಯೆ “
ಎಂದವರಿಗೆ, ನಿಮ್ಮ ಪ್ರಶ್ನೆ ಹೀಗಿರಲಿ,
“ ಅಸೂಯೆಗಳಲ್ಲಿ ಎರಡು ವಿಧ,
ಮೊದಲ ರೀತಿಯ ಹೊಟ್ಟೆಕಿಚ್ಚು ಸ್ವರ್ಗದ ದಾರಿ,
ಈ ಅಸೂಯೆ ನಿಮ್ಮಲ್ಲಿ ಮತ್ತಷ್ಟು ಹುರುಪು ತುಂಬುತ್ತದೆ.
ಕಿರ್ರಾ ಗೆ ನನ್ನ ಬಗ್ಗೆ ಅಸೂಯೆ,
ಮೇವ್ಲಾನಾ ಗೆ ನನ್ನ ಕುರಿತು ಹೊಟ್ಟೆ ಕಿಚ್ಚು
ಇದಕ್ಕಿಂತ ಖುಶಿಯ ವಿಚಾರ ಬೇರೆ ಯಾವುದು?
ಇಡೀ ದಿನ ನಾನು ಮಾತಾಡುವುದು
ಈ ಅಸೂಯೆಯ ಬಗ್ಗೆಯೇ,
ಆದರೆ ಆ ಇನ್ನೊಂದು ಮತ್ಸರ ನರಕದ ಹಾದಿ,
ನನ್ನ ಕೆಲಸ ನಿಲ್ಲಿಸಿ
ಅವನ ಹಿಂದೆ ಸಾಗಬೇಕೆನ್ನುವುದು
~
(ಮೇವ್ಲಾನಾ : ರೂಮಿ, ಕಿರ್ರಾ : ರೂಮಿಯ ಹೆಂಡತಿ)