ಆತ್ಮಹತ್ಯೆ ಮಾಡಿಕೊಳ್ಳುವುದಾದರೆ… : ಓಶೋ

ನಾನು ನಿಮಗೆ ನಿಜವಾದ ಆತ್ಮಹತ್ಯೆಯನ್ನು ಕಲಿಸುವೆ: ನೀವು ಶಾಶ್ವತವಾಗಿ ಇಲ್ಲಿಂದ ಪಾರಾಗಿ ಹೋಗಬಹುದು. ನನ್ನ ಮಾತಿನ ಅರ್ಥ ಬುದ್ಧನಾಗುವುದು ಎಂದು – ಶಾಶ್ವತ ವಿದಾಯ ಎಂದರ್ಥ – ಓಶೋ, ಭಾವಾನುವಾದ: ಸ್ವಾಮಿ ಧ್ಯಾನ ಉನ್ಮುಖ್

ಸಂದರ್ಶಕ : ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿರುವೆ.

ಓಶೋ: ಹಾಗಾದರೆ ಮೊದಲು ಸಂನ್ಯಾಸವನ್ನು ಸ್ವೀಕರಿಸು ಆಗ ಆತ್ಮಹತ್ಯೆ ಮಾಡಿಕೊಳ್ಳುವ ಅವಶ್ಯಕತೆಯೇ ಬರುವುದಿಲ್ಲ. ಏಕೆಂದರೆ ಸಂನ್ಯಾಸ ಎಂಬುದು ಮಹೋನ್ನತ ಸಾವಾಗಿದೆ. ಯಾರೇ ಆಗಲಿ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ? ಸಾವು ತಾನಾಗಿಯೇ ಬರುವಾಗ ಅಷ್ಟೊಂದು ಆತುರವೇಕೆ ? ಒಂದು ವೇಳೆ ನೀವು ಬಯಸದಿದ್ದರು ಸಹ ಸಾವು ಬಂದೆ ಬರುವುದು; ನೀವೇನು ಅದನ್ನು ವಿಶೇಷವಾಗಿ ಆಹ್ವಾನಿಸಬೇಕಿಲ್ಲ.

ನಿಮ್ಮ ಜೀವನದ ಸವಿಯನ್ನು ಆಸ್ವಾಧಿಸಿಯೇ ಇಲ್ಲ. ನೀವು ಆತ್ಮಹತ್ಯೆ ಮಾಡಿಕೊಳ್ಳಲು ಬಯಸುವುದು ಕೋಪದಿಂದ, ಹತಾಶೆಯ ಕಾರಣದಿಂದ. ನಿಜವಾದ ಆತ್ಮಹತ್ಯೆಯನ್ನು ನಾನು ನಿಮಗೆ ಕಲಿಸುವೆ: ಸಂನ್ಯಾಸಿಯಾಗಿ. ಸಾಮಾನ್ಯ ಆತ್ಮಹತ್ಯೆ ಹೆಚ್ಚು ಸಹಾಯ ಮಾಡುವುದಿಲ್ಲ, ನೀವು ತಕ್ಷಣ ಇನ್ನೆಲ್ಲೋ ಬೇರೆ ಗರ್ಭದಲ್ಲಿ ಜನಿಸುತ್ತೀರಿ. ಕೆಲವು ಮೂರ್ಖ ದಂಪತಿಗಳು ಎಲ್ಲೋ ಪ್ರೀತಿಯನ್ನು ಮಾಡುತ್ತಾರೆ, ನೆನಪಿರಲಿ, ನೀವು ಮತ್ತೆ ಸಿಕ್ಕಿಹಾಕಿಕೊಳ್ಳುತ್ತೀರಿ. ನೀವು ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ – ಮೂರ್ಖರು ಮೂರ್ಖರಾಗಿಯೇ ಇರುತ್ತಾರೆ. ಈ ದೇಹದಿಂದ ನೀವು ತಪ್ಪಿಸಿಕೊಳ್ಳುವ ಪ್ರಯಾಸದಲ್ಲಿ ಇನ್ನೊಂದು ಸಂಕೋಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ, ನೀವು ಮತ್ತೊಮ್ಮೆ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಕ್ಕೆ ಹೋಗಬೇಕಾಗುತ್ತದೆ – ಆ ಬಗ್ಗೆ ಯೋಚಿಸಿ! ಆ ಎಲ್ಲಾ ಶೋಚನೀಯ ಅನುಭವಗಳ ಬಗ್ಗೆ ಯೋಚಿಸಿ ಹಾಗು ಅದು ನಿಮ್ಮನ್ನು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುತ್ತದೆ.

ಭಾರತೀಯರು ಅಷ್ಟು ಸುಲಭವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಏಕೆಂದರೆ ಅವರು ಪುನರ್ಜನ್ಮದ ಕುರಿತು ನಂಬಿಕೆಯಿದೆ. ಪಶ್ಚಿಮದಲ್ಲಿ, ಹೆಚ್ಚು ಆತ್ಮಹತ್ಯೆಗಳಾಗುತ್ತವೆ, ಮತ್ತು ಅಲ್ಲಿ ಆತ್ಮಹತ್ಯೆಯ ಕಲ್ಪನೆ ಅಸ್ತಿತ್ವದಲ್ಲಿದೆ; ಅನೇಕ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಮತ್ತು ಮನೋವಿಶ್ಲೇಷಕರು ಹೇಳುವ ಪ್ರಕಾರ,ಆತ್ಮಹತ್ಯೆಯ ಬಗ್ಗೆ ಯೋಚಿಸದವರೇ ವಿರಳ. ಸಂಶೋಧನೆಗಳ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ತನ್ನಜೀವಿತಾವಧಿಯಲ್ಲಿ ಕನಿಷ್ಠ ಪಕ್ಷ ನಾಲ್ಕು ಬಾರಿಯಾದರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆಂದು. ಇದು ಪಶ್ಚಿಮದ ಮನೋವಿಜ್ಞಾನ; ಪೂರ್ವದಲ್ಲಿ ಪುನರ್ಜನ್ಮದ ಕಲ್ಪನೆಯ ಕಾರಣದಿಂದಾಗಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳಲು ಬಯಸುವುದಿಲ್ಲ. ಮಾಡಿಕೊಂಡರು ಏನು ಪ್ರಯೋಜನ? ಈ ಬಾಗಿಲಿನಿಂದ ತಪ್ಪಿಸಿಕೊಂಡು ಮತ್ತೊಮ್ಮೆ ಇನ್ನೊಂದು ಬಾಗಿಲಿನಿಂದ ಬರುವಿರಿ; ನೀವು ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ನಾನು ನಿಮಗೆ ನಿಜವಾದ ಆತ್ಮಹತ್ಯೆಯನ್ನು ಕಲಿಸುವೆ: ನೀವು ಶಾಶ್ವತವಾಗಿ ಇಲ್ಲಿಂದ ಪಾರಾಗಿ ಹೋಗಬಹುದು. ನನ್ನ ಮಾತಿನ ಅರ್ಥ ಬುದ್ಧನಾಗುವುದು ಎಂದು – ಶಾಶ್ವತ ವಿದಾಯ ಎಂದರ್ಥ.

ಯಾರು ʼಸಮಾಧಿʼಯಲ್ಲಿ ಸಾಯುವರು ಅವರು ಹಿಂತಿರುಗಿ ಬರಲಾರರು. ಬುದ್ಧ ಅವರನ್ನು ʼಅನಗಾಮಿʼ ಎಂದು ಕರೆದರು.ಯಾರು ಆಚೆಯ ತೀರವನ್ನು ತಲುಪಿರುವರೋ ಅವರು ಮತ್ತೆ ಹಿಂತಿರುಗಿ ಬರುವುದಿಲ್ಲ. ನಾನು ನಿಮ್ಮನ್ನು ಅನಗಾಮಿ ಆಗಿಸುವೆ, ನಂತರ ಯಾವುದೇ ಗರ್ಭವು ನಿಮಗೆ ಬಲೆಯಾಗಿ ಪರಿಣಮಿಸುವುದಿಲ್ಲ.

ನೀವು ಯಾಕೆ ಆತ್ಮಹತ್ಯೆ ಮಾಡಿಕೊಳ್ಳಲು ಬಯಸುತ್ತೀರಿ? ಬಹುಶಃ ನಿಮ್ಮ ಜೀವನವು ನೀವು ಬಯಸಿದಂತೆ ಸಾಗುತ್ತಿಲ್ಲ? ಜೀವನವನ್ನು ಹೀಗೆ ಇರಬೇಕು, ಹೀಗೆಯೇ ಬದುಕಬೇಕೆಂಬ ಹೊರೆಯೇಕೆ ? ಬಹುಶಃ ನಿಮ್ಮ ಆಸೆಗಳನ್ನು ಈಡೇರದೇ ಇರಬಹುದು? ನಿಮ್ಮ ಆಸೆಗಳನ್ನು ಬಿಟ್ಟುಬಿಡಿ , ಪ್ರಾಣಬಿಡುವುದಕ್ಕಿಂತ ಇದು ಒಳ್ಳೆಯದಲ್ಲವೇ? ಬಹುಶಃ ನಿಮ್ಮ ನಿರೀಕ್ಷೆಗಳು ಈಡೇರಲಿಲ್ಲ, ಮತ್ತು ನೀವು ನಿರಾಶೆ ಅನುಭವಿಸುತ್ತಿದ್ದೀರಾ? ಹತಾಶೆಗೆ ಒಳಗಾದ ವ್ಯಕ್ತಿ ನಾಶಮಾಡಲು ಬಯಸುತ್ತಾನೆ, ಅಲ್ಲಿ ಕೇವಲ ಎರಡು ಸಾಧ್ಯತೆಗಳಿವೆ – ಯಾರನ್ನಾದರೂ ಹತ್ಯೆ ಮಾಡುವುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವುದು. ಬೇರೊಬ್ಬರನ್ನು ಕೊಲ್ಲುವುದು ಹೆಚ್ಚು ಅಪಾಯಕಾರಿ ಆದ್ದರಿಂದ ಜನರು ಆತ್ಮಹತ್ಯೆಯ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತಾರೆ;ಇದ ಸಹ ಕೊಲೆಯೇ ಆಗಿದೆ.

Leave a Reply