“ಸತ್ಯ ಗುರಿಯಲ್ಲ” : Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6

ಗೀತೆ, ಉಪನಿಷತ್ತು, ಬೈಬಲ್, ಕುರಾನ್ ಗಳ ಸೌಂದರ್ಯದಲ್ಲಿ ಮುಳುಗಿಹೋಗಬಿಡಬೇಡಿ, ವಿಷಯದ ಬಗ್ಗೆ ಗಮನ ಹರಿಸಿ, ವಿಷಯದ ಬಗ್ಗೆ ತಿಳಿದುಕೊಳ್ಳುವುದೆಂದರೆ ತಾನೇ ಆ ವಿಷಯವಾಗುವುದು. ಏಕೆಂದರೆ ಅರಿವಿನ ಹೊರತಾಗಿ ಬೇರೆ ಸತ್ಯವಿಲ್ಲ ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ಅಧ್ಯಾಯ 6.1
Strive to no goals

ಸೊಸಾನ್ ಕೇವಲ ಕವಿಯಲ್ಲ
ದೃಷ್ಟಾರ ಕೂಡ,
ಆದ್ದರಿಂದಲೇ ಅವನ ಸೂತ್ರಗಳಲ್ಲಿ
ಆಕರ್ಷಕ ಬಂಧ ಅಷ್ಟೇ ಅಲ್ಲ
ಸಾಧಕನಿಗೆ ಅವಶ್ಯಕವಾದ
ಮೂಲಭೂತ ಹೊಳಹುಗಳು ಕೂಡ ಅಡಕವಾಗಿವೆ.

ಒಬ್ಬ ದ್ರಷ್ಟಾರ ಮಾತನಾಡತೊಡಗಿದನೆಂದರೆ
ಅವನ ಮಾತುಗಳೆಲ್ಲವೂ
ಅನನಂತತೆಯ ಬಗೆಗಿನ ಕವಿತೆಗಳೇ,
ಅವನ ಅರಿವನ್ನು ಹೊತ್ತು ಹರಡುತ್ತಿರುವ ಪರಿಮಳಗಳೇ.

ಆದರೆ ಕೇವಲ ಅವನ ಕವಿತೆಯ ಚೆಲುವಿನಲ್ಲಿ
ಕಳೆದುಹೋಗಬಿಡಬೇಡಿ,
ಕವಿತೆ ರೂಹಿಗೆ ಸಂಬಂಧಿಸಿದ್ದು ಆದರೆ
ಸತ್ಯ ರೂಹಿನಿಂದ ಹೊರತು.

ಗೀತೆ, ಉಪನಿಷತ್ತು, ಬೈಬಲ್, ಕುರಾನ್ ಗಳ
ಸೌಂದರ್ಯದಲ್ಲಿ ಮುಳುಗಿಹೋಗಬಿಡಬೇಡಿ,
ವಿಷಯದ ಬಗ್ಗೆ ಗಮನ ಹರಿಸಿ,
ವಿಷಯದ ಬಗ್ಗೆ ತಿಳಿದುಕೊಳ್ಳುವುದೆಂದರೆ
ತಾನೇ ಆ ವಿಷಯವಾಗುವುದು,
ಏಕೆಂದರೆ ಅರಿವಿನ ಹೊರತಾಗಿ ಬೇರೆ ಸತ್ಯವಿಲ್ಲ.

ಸತ್ಯದ ಹಾದಿಯ ಸಾಧಕರಿಗೆ
ಸೋಸಾನ್ ಹೇಳುವ ಮಾತುಗಳನ್ನ ಗಮನಿಸಿ,

“ ತಾವೋ ದಲ್ಲಿ ನಡೆಯುವುದು ಸುಲಭವೂ ಅಲ್ಲ ಕಠಿಣವೂ ಅಲ್ಲ “

ನಿಮ್ಮ ಎದುರು ಗುರಿ ಇದ್ದಾಗ
ಅದು ಸುಲಭವೂ ಆಗಿರಬಹುದು ಕಠಿಣವೂ.
ನೀವು ಆ ದಾರಿಯಲ್ಲಿ ಎಷ್ಟು ದೂರ ಕ್ರಮಿಸಿರುವಿರಿ?
ಗುರಿಗೆ ಎಷ್ಟು ಹತ್ತಿರವಾಗಿರುವಿರಿ?
ಅದು ಹೆದ್ದಾರಿಯೋ, ಕಲ್ಲು ಮುಳ್ಳುಗಳ ಕಾಲು ದಾರಿಯೋ?
ನಿಮ್ಮ ಬಳಿ ವಿಳಾಸ, ನಕಾಶೆ ಉಂಟೆ?,
ದಾರಿ ಕ್ರಮಿಸಲು ನಿಮ್ಮ ಆರೋಗ್ಯ
ಮನಸ್ಥಿತಿ ಅನುಕೂಲಕರವೆ?
ಇವೇ ಮುಂತಾದ ಅಂಶಗಳು
ನಿಮ್ಮ ದಾರಿ ಸುಗಮವೂ ಕಠಿಣವೋ
ಎನ್ನುವುದನ್ನ ನಿರ್ಧರಿಸುತ್ತವೆ.

ಆದರೆ ಸತ್ಯ ಗುರಿಯಲ್ಲವಲ್ಲ,
ಅದು ಹೇಗೆ ಸುಲಭ ಹೇಗೆ ಕಠಿಣ ?

ನೂರಾರು ವರ್ಷಗಳ ಹಿಂದೆ ಪ್ರಯಾಣ ಕಠಿಣವಾಗಿತ್ತು.
ಈಗ ಹಾಗಿಲ್ಲ, ನೀವು ವಿಮಾನ ಹತ್ತಿ
ಒಂದು ಚಹಾ ಕುಡಿದು ಮುಗಿಸುವಷ್ಟರಲ್ಲಿ
ನಿಮ್ಮ ಗುರಿ ಮುಟ್ಟಿರುತ್ತೀರಿ.
ಗುರಿ ಕಠಿಣವಾಗಿದ್ದರೆ ಅದನ್ನು ಸುಗಮ ಮಾಡಬಹುದು.
ಆದರೆ ಸೋಸಾನ್ ಮಾತು ಗಮನಿಸಿ,

ಸತ್ಯ ಗುರಿಯಲ್ಲ.

ಹಾಗಿದ್ದಾಗ ಸತ್ಯ, ಕಠಿಣ ಏಕೆ? ಸುಲಭ ಹೇಗೆ?
ಸತ್ಯ ಗುರಿಯಲ್ಲವಾದ್ದರಿಂದ
ಅದಕ್ಕೊಂದು ದಾರಿ ಹೇಗೆ ಸಾಧ್ಯ?
ಮತ್ತು ಸತ್ಯವನ್ನ ಕಾಣಲು
ಕ್ರಿಯೆಗಳು, ವಿಧಾನಗಳು, ತಂತ್ರಗಳು
ಇರುವುದು ಹೇಗೆ ಸಾಧ್ಯ?

ಸಾಧ್ಯವೇ ಇಲ್ಲ.

ತಾವೋ ಗುರಿಯಲ್ಲ
ಆದ್ದರಿಂದ ಅದನ್ನು ಮುಟ್ಟುವುದು
ಸುಲಭವಲ್ಲ, ಕಠಿಣವೂ ಅಲ್ಲ.

ಹಾಗಾದರೆ ‘ ಸತ್ಯದ ದಾರಿ ‘ ಎಂದರೇನು ?

ಬೇರೇನಲ್ಲ ಇದು ನಿಮ್ಮ ಪ್ರಕೃತಿಯೇ,
ಈಗಾಗಲೇ ನೀವು ಈ ಪ್ರಕೃತಿಯನ್ನು ಧರಿಸಿರುವಿರಿ.
ಆದ್ದರಿಂದಲೇ ಇದು ಗುರಿಯಲ್ಲ,
ಭವಿಷ್ಯದಲ್ಲಿ ಎದುರು ನೋಡುವುಂಥದಲ್ಲ,
ನೀವು ಈಗಾಗಲೇ ಅಲ್ಲಿರುವಿರಿ
ಇದರ ಹೊರತಾಗಿ ನೀವಿರುವುದು ಸಾಧ್ಯವೇ ಇಲ್ಲ,
ಇದರಿಂದ ಕಳಚಿಕೊಳ್ಳುವುದೂ ಆಗದ ಮಾತು.
ನೀವೆಲ್ಲಿಗೆ ಹೋದರೂ
ತಾವೋ ಪ್ರಯಾಣ ನಿಮ್ಮ ಜೊತೆಯಲ್ಲೇ,
ಇದು ನಿಮ್ಮ ಅಂತರ್ಗತ ಪ್ರಕೃತಿ
ಇದರ ಹೊರತಾಗಿ ನೀವು ಸಾಧ್ಯವೇ ಇಲ್ಲ.
ನಿಮಗೆ ಇದರ ಪರಿಚಯ
ಇಲ್ಲದೇ ಇರುವ ಸಾಧ್ಯತೆ ಉಂಟು.
ಆದರೆ ಈ ಪರಿಚಯಕ್ಕಾಗಿ
ಭವಿಷ್ಯದತ್ತ ಎದುರು ನೋಡಬೇಕಿಲ್ಲ.

ನೀವು ನಿಮ್ಮನ್ನು ಮಾತನಾಡಿಸಿ,
ನಿಮ್ಮೊಳಗಿನ ತಾವೋ ನಿಮ್ಮೊಡನೆ ಮಾತಿಗಿಳಿಯುತ್ತದೆ.

ತಾವೋ ಸ್ವಭಾವವೇ ಹಾಗೆ
ಬೇಕೆಂದಾಗ ಸಿಗದು,
ಹುಡುಕುವುದನ್ನು ಬಿಟ್ಟು ನೀವು ಸುಮ್ಮನಾದಾಗ
ಆ ಸುಮ್ಮಾನ ನಿಮ್ಮೊಳಗೆ ಅವತಾರವಾಗುವುದು.

ಈ ತಮಾಷೆ ಆಗ ನಿಮಗೆ ಗೊತ್ತಾಗುವುದು.

ಸೊಸಾನ್ ನ ಸೂತ್ರ ಗಮನಿಸಿ…..

ತಾವೋ ಸುಲಭವೂ ಅಲ್ಲ ಕಠಿಣವೂ ಅಲ್ಲ
ಆದರೆ ಸೀಮಿತ ದೃಷ್ಟಿಯಿರುವವರು
ಭಯಭೀತರು ಮತ್ತು ಹಟವಾದಿಗಳು :
ಅವಸರ ಮತ್ತು ವೇಗ ನಮ್ಮನ್ನು ನಿಧಾನವಾಗಿ ಮುನ್ನಡೆಸುವವು,
ಮತ್ತು ಅಂಟಿಕೊಳ್ಳುವುದು ಕಾಲೆಳೆಯುವುದು;
ನಿರ್ವಾಣದ ಬಗ್ಗೆ ಸಂಭ್ರಮಿಸುವುದೆಂದರೆ
ನಮ್ಮ ಕಣ್ಣಿಗೆ ನಾವೇ ಪಟ್ಟಿ ಕಟ್ಟಿಕೊಳ್ಳುವುದು,
ಸುಮ್ಮನೇ ಎಲ್ಲವನ್ನೂ ಅವುಗಳ ಸಹಜತೆಗೆ ಬಿಟ್ಟಾಗ
ಯಾವ ಬರುವಿಕೆಯೂ ಇಲ್ಲ ಯಾವ ಹೋಗುವಿಕೆಯೂ.

ನೀವೇ ದಾರಿ, ನೀವೇ ಗುರಿ.

ನೀವು ಮತ್ತು ನಿಮ್ಮ ಗುರಿಯ ನಡುವೆ
ಒಂದಿನಿತೂ ಅಂತರವಿಲ್ಲ.
ನೀವೇ ಹುಡುಕಾಡುತ್ತಿರುವವರು ಮತ್ತು
ನೀವೇ ಹುಡುಕಾಟದ ಗುರಿ,
ನೀನೇ ಪೂಜಿಸುವವ ಮತ್ತು
ನೀನೇ ಪೂಜಿಸಲ್ಪಡುವವ,
ನೀನೇ ಶಿಷ್ಯ ನೀನೇ ಗುರು,
ನೀನೇ ದಾರಿ ನೀನೇ ಗುರಿ,
ಇದು ತಾವೋ.

ತಾವೋ ಯಾವಾಗಲೂ ನಿಮ್ಮ ಕಣ್ಣಳತೆಯಲ್ಲಿ,
ಈ ಕ್ಷಣದಲ್ಲಿಯೂ ನೀವು ತಾವೋ ದಲ್ಲಿ ಇರುವಿರಿ,
ಕಣ್ತೆರಿಯಿರಿ ಸಾಕು ಕಣ್ತುಂಬಿಕೊಳ್ಳುವಿರಿ.

ನಿಮ್ಮ ಎಚ್ಚರದಲ್ಲಿ ಅಷ್ಟೇ ಅಲ್ಲ
ನಿಮ್ಮ ನಿದ್ದೆಯಲ್ಲಿಯೂ ತಾವೋ ನಿಮ್ಮ ಜೊತೆ,
ಕುಡುಕನೊಬ್ಬ ತನ್ನ ಮನೆಯ ದಾರಿ ಹುಡುಕುವ ಹಾಗೆ
ದಾರಿ ಎದುರಿಗಿದ್ದರೂ ನೀವು
ಕಂಡ ಕಂಡವರನ್ನು ವಿಚಾರಿಸುತ್ತಿದ್ದೀರಿ.
ನಿಮ್ಮ ಕಣ್ಣುಗಳಿಗೆ
ಅಭಿಪ್ರಾಯಗಳ, ಆಯ್ಕೆಗಳ, ಸಿದ್ಧಾಂತಗಳ
ಪೊರೆ ಕಟ್ಚಿಕೊಂಡಿದೆ.
ನೀವು ಹುಡುಕುತ್ತಿರುವುದು ನಿಮ್ಮ ಕಣ್ಣ ಮುಂದೆಯೇ ಉಂಟು
ನಿಮ್ಮ ಕಣ್ಣಿಗೆ ಕಟ್ಟಿಕೊಂಡಿರುವ ಪೊರೆ ಕಳಚಿಕೊಳ್ಳಬೇಕಷ್ಟೆ.

ಹಿಂದೂಗಳಲ್ಲಿ ಒಂದು ಅದ್ಭುತ ವಿಧಾನವಿದೆ.

ತಮ್ಮ ಮೂಗಿನ ತುದಿಯನ್ನು ಏಕಾಗ್ರತೆಯಿಂದ ಗಮನಿಸುವುದು.

ಸುಮ್ಮನೇ ಶಾಂತವಾಗಿ ಕುಳಿತು
ಎಲ್ಲ ವಿಚಾರಗಳನ್ನು ಬದಿಗೆ ಸರಿಸಿ
ನಮ್ಮ ಮೂಗಿನ ತುದಿಯನ್ನು ಗಮನಿಸುವುದು.
ಇದು ನಿಮಗೆ ಹುಚ್ಚುತನ ಅನಿಸಬಹುದು.
ಹೀಗೆ ಮಾಡುವುದರಿಂದ ಏನು ಪ್ರಯೋಜನ
ಎನ್ನುವ ಸಂಶಯ ಬರಬಹುದು.

ಈ ವಿಧಾನದ ಅರ್ಥ,
ಸತ್ಯ ನಿಮ್ಮ ಕಣ್ಣೆದುರಿಗೆ, ಮೂಗಿನ ತುದಿಯಷ್ಟು ಹತ್ತಿರ.

ನೀವು ಶಾಂತವಾಗಿದ್ದಾಗ ಸತ್ಯ ನಿಮ್ಮ ಮೂಗಿನ ತುದಿಯಲ್ಲಿದೆ,
ನೀವು ಉದ್ವಿಗ್ನರಾಗಿದ್ದಾಗ ಸತ್ಯ ನಿಮ್ಮ ಮೂಗಿನ ತುದಿಯಲ್ಲಿದೆ,
ನೀವು ಸರಿದಾರಿಯಲ್ಲಿ ಪ್ರಯಾಣ ಮಾಡುತ್ತಿರುವಾಗಲೂ ಸತ್ಯ ನಿಮ್ಮ ಮೂಗಿನ ತುದಿಯಲ್ಲಿದೆ,
ನೀವು ತಪ್ಪು ದಾರಿಯಲ್ಲಿ ಪ್ರಯಾಣ ಮಾಡುತ್ತಿರುವಾಗಲೂ ಸತ್ಯ ನಿಮ್ಮ ಮೂಗಿನ ತುದಿಯಲ್ಲಿದೆ,
ನೀವು ಸಂತರಾಗಿದ್ದರೂ ಸತ್ಯ ನಿಮ್ಮ ಮೂಗಿನ ತುದಿಯಲ್ಲಿದೆ,
ನೀವು ಸೈತಾನರಾಗಿದ್ದರೂ ಸತ್ಯ ನಿಮ್ಮ ಮೂಗಿನ ತುದಿಯಲ್ಲಿದೆ,
ನೀವು ಎಚ್ಚರವಿರುವಾಗಲೂ ಸತ್ಯ ನಿಮ್ಮ ಮೂಗಿನ ತುದಿಯಲ್ಲಿದೆ,
ನೀವು ನಿದ್ದೆಯಲ್ಲಿರುವಾಗಲೂ ಸತ್ಯ ನಿಮ್ಮ ಮೂಗಿನ ತುದಿಯಲ್ಲಿದೆ,
ನೀವು ತಲೆಕೆಳಗಾಗಿ ನಿಂತಾಗಲೂ ಸತ್ಯ ನಿಮ್ಮ ಮೂಗಿನ ತುದಿಯಲ್ಲಿದೆ.

ಮೂಗಿನ ತುದಿಯನ್ನು ಗಮನಿಸುವುದರ ಅರ್ಥ ಇದು.

ನೀವು ಸ್ಥಿರವಾಗಿರುವಾಗಲೂ ಸತ್ಯ ನಿಮ್ಮ ಎದುರಿಗೆ ಇದೆ,
ನೀವು ನಡುಗುತ್ತಿರುವಾಗಲೂ ಸತ್ಯ ನಿಮ್ಮ ಎದುರಿಗೆ ಇದೆ,
ಸತ್ಯ ಸದಾ ನಿಮ್ಮೊಡನೆ ಹೆಜ್ಜೆ ಹಾಕುತ್ತಿದೆ,
ಸತ್ಯ ಯಾವಾಗಲೂ ನೀವು ಕಣ್ತೆರೆಯುವುದನ್ನೇ ಕಾಯುತ್ತಿರುತ್ತದೆ.

ನೀವು ಶಾಂತವಾಗಿ ಕೂತು ಮೂಗಿನ ತುದಿಯನ್ನು ಗಮನಿಸಬಲ್ಲಿರಾದರೆ,
ಈ ಜಗತ್ತಿನ ಲೌಕಿಕ ವ್ಯವಹಾರಕ್ಕೆ ತೀರಿಕೊಂಡು
ಒಂದು ಸಹಜ ಪ್ರಕೃತಿಯ ತೆಕ್ಕೆಗೆ ಸೇರಿಕೊಳ್ಳುವಿರಿ.

ಹೌದು ಈ ವಿಧಾನದ ಉದ್ದೇಶವೇ ಅದು.
ಆಚೆ ಈಚೆ ನೋಡದೇ, ನಮ್ಮ ಮೂಗಿನ ತುದಿಯನ್ನು ಗಮನಿಸುವುದು.
ಅಲ್ಲಿ ನಮಗಾಗಿ ಕಾಯುತ್ತಿರುವ ಸತ್ಯವನ್ನು ಭೇಟಿ ಮಾಡುವುದು.

ಇದು ಪ್ರಯತ್ನದ ಪ್ರಶ್ನೆ ಅಲ್ಲ,
ಇದು ಪ್ರಯತ್ನ ಅಲ್ಲ ಎಂದಾದರೆ, ಸುಲಭವೂ ಅಲ್ಲ ಕಠಿಣವೂ ಅಲ್ಲ.
ಪ್ರಯತ್ನವಾದರೆ ಸತ್ಯ ನಿಮಗೆ ದಕ್ಕುವ ಸಾಧ್ಯತೆ ಇಲ್ಲ,
ಪ್ರಯತ್ನ ಕೈಬಿಟ್ಟ ಕ್ಷಣದಲ್ಲಿಯೇ
ತಾವೋ ನಿಮ್ಮನ್ನು ಆವರಿಸಿಕೊಳ್ಳುವುದು.

 

(ಮುಂದುವರೆಯುವುದು….)

1 Comment

Leave a Reply