ಬೆಳವಣಿಗೆಗೆ ಪೂರಕವಾಗಿರಲಿ ಉಲ್ಲಂಘನೆ

ಮೀರಿ ನಡೆಯುವುದು ಅಷ್ಟು ಸುಲಭವಲ್ಲ. ಉಲ್ಲಂಘನೆ ನಮ್ಮ ಒಳ – ಹೊರಗಿನ ಬೆಳವಣಿಗೆಗೆ ಎಷ್ಟು ಸಹಕಾರಿ ಅನ್ನೋದನ್ನ ಮೊದಲು ಯೋಚಿಸಬೇಕು. ಜೊತೆಗೆ, ನಮ್ಮ ಈ ನಡೆಯನ್ನು ಭರಿಸಿಕೊಳ್ಳುವ, ಸರಿದೂಗಿಸಿಕೊಳ್ಳುವ ಆತ್ಮ ವಿಶ್ವಾಸ ನಮ್ಮಲ್ಲಿದೆಯೇ ಎಂದೂ ಪರೀಕ್ಷಿಸಿಕೊಳ್ಳಬೇಕು. ಅನಂತರವಷ್ಟೆ ಹೆಜ್ಜೆ ಎತ್ತುವ ಮಾತು.
~ ಆನಂದಪೂರ್ಣ


ಮೀರುವುದು ಅಥವಾ ಮುರಿಯುವುದು ಯಾವಾಗಲೂ ನಕಾರಾತ್ಮಕವೇ ಆಗಿರಬೇಕು ಎಂದೇನಿಲ್ಲ. ಬಹಳ ಬಾರಿ ಉಲ್ಲಂಘನೆ ಒಂದು ಹೊಸ ಶುರುವಾತಿಗೆ ಕಾರಣವಾಗುತ್ತದೆ. ಕೆಲವು ಉಲ್ಲಂಘನೆಗಳು ಮಹತ್ತಿಗೆ ನಿಮಿತ್ತವಾಗಿ ಘಟಿಸುತ್ತವೆ.
ಉಲ್ಲಂಘನೆಯಲ್ಲಿ ಬಗೆಗಳುಂಟು. ಬಾಹ್ಯ ನಿಯಮಗಳು ಇಲ್ಲದೆಡೆಯೂ ಮೀರುವ ಕ್ರಮ ಒಂದು ಬಗೆಯದಾದರೆ, ಬಾಹ್ಯ ನಿಯಮಗಳನ್ನು ಮೀರುವ ಕ್ರಮ ಒಂದು ಬಗೆಯದು. ಕೆಲವೊಮ್ಮೆ ಉಲ್ಲಂಘನೆ ಆಂತರಿಕವಾಗಿರುತ್ತದೆ. ಕೆಲವೊಮ್ಮೆ ಸಾಮಾಜಿಕ ಸ್ತರದ್ದಾಗಿರುತ್ತದೆ; ಕೆಲ ಬಾರಿ ವೈಯಕ್ತಿಕವಾಗಿದ್ದರೆ, ಕೆಲ ಬಾರಿ ಸಾಮುದಾಯಿಕವಾಗಿರುತ್ತದೆ. ಎಲ್ಲ ಕ್ರಾಂತಿಗಳೂ ಉಲ್ಲಂಘನೆಯ ಕೂಸುಗಳೇ ಅನ್ನುವುದನ್ನು ಗಮನಿಸಿದರೆ ಈ ಹೇಳಿಕೆ ಹೆಚ್ಚು ಸ್ಪಷ್ಟವಾಗುತ್ತದೆ.
ದಬ್ಬಾಳಿಕೆಯ ನಿಯಮಾವಳಿಗಳನ್ನು ಉಲ್ಲಂಘಿಸಿದಾಗಲೆಲ್ಲ ಜಗತ್ತು ಮಗ್ಗಲು ಬದಲಿಸಿ ಎದ್ದಿದೆ. ಸ್ವಾತಂತ್ರ್ಯ ಹೋರಾಟಗಳು, ಕಾರ್ಮಿಕರ ಹೋರಾಟಗಳು, ಜಾತಿ ತಾರತಮ್ಯ – ಲಿಂಗ ತಾರತಮ್ಯದ ವಿರುದ್ಧದ ಹೋರಾಟಗಳೆಲ್ಲವೂ ಆಯಾ ಸಂಗತಿಯಡಿ ಹೇರಲಾಗಿದ್ದ ದರ್ಪದ ನಿಯಮಗಳನ್ನು ಉಲ್ಲಂಘಿಸಿ ಹೊಮ್ಮಿದಂಥವೇ.
ಮೊದಲ ಉಲ್ಲಂಘನೆ
ಸೆಮೆಟಿಕ್ ಮತಗಳ ನಂಬುಗೆಗಳನ್ನೇ ತೆಗೆದುಕೊಂಡರೆ, ಆದಮ್ ಮತ್ತು ಈವ್ (ಅಥವಾ ಹೌವ್ವಾ) ಸೈತಾನನ ಮಾತಿಗೆ ಮರುಳಾಗಿ, ದೇವರ ಆಜ್ಞೆ ಉಲ್ಲಂಘಿಸಿ ಪಾಪ ಫಲವನ್ನು ತಿಂದರು. ಭೂಮಿಯಲ್ಲಿ ಮನುಷ್ಯ ಸಂಕುಲದ ಸೃಷ್ಟಿಯಾಯಿತು. ಇಲ್ಲಿ ಅವರು ಸೈತಾನನ ಮಾತಿಗೆ ಮರುಳಾಗುತ್ತಿದ್ದಾರೆ. ಸಂಗತಿ ಅದಲ್ಲ… ಮರುಳಾದವರು ದೇವರ ಆಜ್ಞೆಯನ್ನು ಉಲ್ಲಂಘಿಸುತ್ತಿದ್ದಾರೆ. ಈವ್ ಆದಮನನ್ನು ಅದಕ್ಕೆ ಹುರಿದುಂಬಿಸುತ್ತಿದ್ದಾಳೆ. ಅವರಿಬ್ಬರೂ ಹೊಸ ಸೃಷ್ಟಿಗೆ ನಿಮಿತ್ತವಾಗುತ್ತಿದ್ದಾರೆ.
ಭಾರತೀಯ ಪುರಾಣಗಳಲ್ಲೂ ಇಂತಹ ಅನೇಕ ನಿದರ್ಶನಗಳನ್ನು ನೋಡಬಹುದು. ಇಲ್ಲಿ ನಿಯಮ ಉಲ್ಲಂಘನೆಯಿಂದ ಶಪಿತರಾದ ದೇವತೆಗಳೆಲ್ಲ ಭೂಮಿಯಲ್ಲಿ ಜನಿಸುತ್ತಾರೆ ಮತ್ತು ಇನ್ನೊಂದರ ಉಗಮಕ್ಕೆ ಕಾರಣರಾಗುತ್ತಾರೆ. ನದಿಯಾಗಿ ಹರಿಯುತ್ತಾರೆ, ಬೆಟ್ಟವಾಗಿ ನಿಲ್ಲುತ್ತಾರೆ, ಮನುಷ್ಯರಾಗಿ ಹುಟ್ಟಿ ಹೊಸ ಕುಲಕ್ಕೆ ಅಡಿಪಾಯ ಹಾಕುತ್ತಾರೆ; ಆ ಮೂಲಕ ಹೊಸ ಸಂಸ್ಕೃತಿಯ ರೂಪುಗೊಳ್ಳುವಿಕೆಗೆ ನಾಂದಿ ಹಾಡುತ್ತಾರೆ.
ಕ್ರಿಯಾಶೀಲವಾಗಿರಬೇಕು
ಸಾಮಾಜಿಕವಾಗಿ, ಸುವ್ಯವಸ್ಥೆಗೆಂದೇ ರೂಪಿತಗೊಂಡ ಕೆಲವು ನಿಯಮಗಳ ಉಲ್ಲಂಘನೆಯ ಕುರಿತು ಇಲ್ಲಿ ಹೇಳುತ್ತಿಲ್ಲ. ಅದು ಸಮರ್ಥನೀಯವೂ ಅಲ್ಲ. ಸರತಿ ಸಾಲನ್ನು ಉಲ್ಲಂಘಿಸುವುದಾಗಲೀ ನಡಾವಳಿಗಳನ್ನು ಉಲ್ಲಂಘಿಸುವುದಾಗಲೀ ನಾಗರಿಕ ವರ್ತನೆ ಎನ್ನಿಸಿಕೊಳ್ಳುವುದಿಲ್ಲ. ಇಲ್ಲಿ ಹೇಳುತ್ತಿರುವ ಉಲ್ಲಂಘನೆ ರಚನಾತ್ಮಕವಾದಂಥದ್ದು. ಸಾರ್ಥಕತೆಯನ್ನು ತಂದುಕೊಡುವಂಥದ್ದು. ನಮ್ಮ ನೆಲ ಕಂಡ ಸಂತ ಪರಂಪರೆಯಲ್ಲಿ ಬಹುತೇಕರು ಕಟ್ಟುಪಾಡುಗಳನ್ನು ಮೀರಿಯೇ ಮುಮುಕ್ಷುಗಳಾಗಿದ್ದು. ಬಹುತೇಕ ಇತರ ವಲಯಗಳ ಸಾಧಕರೂ ಅಷ್ಟೇ. ಅವರೆಲ್ಲರ ಇತಿಹಾಸದಲ್ಲಿ ಒಂದಲ್ಲ ಒಂದು ಕಡೆ ರೂಢಿಗತ ಒಡ್ಡನ್ನು ಒಡೆದು ಬಂದ ಉಲ್ಲೇಖಗಳಿರುತ್ತವೆ.
ಹಾಗೆಂದು ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಮೀರಿ ನಡೆಯುವುದು ಅಷ್ಟು ಸುಲಭವಲ್ಲ. ಉಲ್ಲಂಘನೆ ನಮ್ಮ ಒಳ – ಹೊರಗಿನ ಬೆಳವಣಿಗೆಗೆ ಎಷ್ಟು ಸಹಕಾರಿ ಅನ್ನೋದನ್ನ ಮೊದಲು ಯೋಚಿಸಬೇಕು. ಜೊತೆಗೆ, ನಮ್ಮ ಈ ನಡೆಯನ್ನು ಭರಿಸಿಕೊಳ್ಳುವ, ಸರಿದೂಗಿಸಿಕೊಳ್ಳುವ ಆತ್ಮ ವಿಶ್ವಾಸ ನಮ್ಮಲ್ಲಿದೆಯೇ ಎಂದೂ ಪರೀಕ್ಷಿಸಿಕೊಳ್ಳಬೇಕು. ಅನಂತರವಷ್ಟೆ ಹೆಜ್ಜೆ ಎತ್ತುವ ಮಾತು.
ಉದಾಹರಣೆಗೆ ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣನ ನಡೆಗಳನ್ನೆ ನೋಡಿ. ಆತ ಕರ್ಣನ ಸಂದರ್ಭದಲ್ಲಿ, ದ್ರೋಣನ ಸಂದರ್ಭದಲ್ಲಿ ಯುದ್ಧ ನಿಯಮವನ್ನು ಚಾಣಾಕ್ಷತನದಿಂದ ಉಲ್ಲಂಘಿಸುತ್ತಾನೆ. ಆದರೆ ಅದು ಅವನನ್ನು ಗೆಲ್ಲಿಸುತ್ತದೆ. ದುರ್ಯೋಧನನಂತೂ ಹಲವು ಬಾರಿ ಯುದ್ಧ ನಿಯಮವನ್ನು ಉಲ್ಲಂಘಿಸುತ್ತಾನೆ. ಆದರೆ ಅದು ಅವನನ್ನು ಸೋಲಿನತ್ತ ಒಯ್ಯುತ್ತದೆ. ಕಾರಣ ಇಷ್ಟೇ – ಕೃಷ್ಣ ತನ್ನ ಎಚ್ಚರದಲ್ಲಿ ಹಾಗೂ ಒಂದು ಉತ್ತಮ ಉದ್ದೇಶಕ್ಕಾಗಿ, ಧರ್ಮ ಸ್ಥಾಪನೆಗಾಗಿ ನಿಯಮೋಲ್ಲಂಘನೆ ಮಾಡುತ್ತಾನೆ. ದುರ್ಯೋಧನನಿಗೆ ಅಂತಹ ಯಾವ ಸದುದ್ದೇಶಗಳು ಇರದೆ ಅವೆಲ್ಲವನ್ನೂ ಆತ ಕುರುಡು ಅಹಂಕಾರದಿಂದ, ಸ್ವಾರ್ಥದಿಂದ ಕೈಗೊಂಡ ಪ್ರಮಾದಗಳಾಗಿರುತ್ತವೆ.
ಯಾವುದೇ ಒಂದು ಸಾಧ್ಯತೆಯನ್ನು, ಉಲ್ಲಂಘನೆಯನ್ನು ಕೂಡಾ ವಿಕಸನಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು. ಅದೇನಿದ್ದರೂ ನಮ್ಮ ನಿಲುಕಿಗೆ ಬಿಟ್ಟಿದ್ದು. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಷ್ಟೆ.

Leave a Reply