ದ್ವೇಷ ಮತ್ತು ಸ್ಪರ್ಧೆಗಳಿಲ್ಲದ ಸಂವರ ಕುಮಾರನ ಕಥೆ : ಬೋಧಿಸತ್ವನ ಕಥೆಗಳು

ಸಂವರ ಕುಮಾರನ ಈ ಕಥೆ ಮಕ್ಕಳಿಗೆ ಓದಿ ಹೇಳಿ, ಅದೇ ನೆವದಲ್ಲಿ ದೊಡ್ಡವರೂ ಓದಿಬಿಡಿ…

ಪೂರ್ವಕಾಲದಲ್ಲಿ ಕಾಶೀರಾಜ್ಯವನ್ನು ಪಾಲಿಸಿದ ಬ್ರಹ್ಮದತ್ತ ರಾಜನಿಗೆ ನೂರುಮಂದಿ ಕುಮಾರರಿದ್ದರು. ಎಲ್ಲರಿಗಿಂತಲೂ ಚಿಕ್ಕ ಕುಮಾರನ ಹೆಸರು ಸಂವರ. ರಾಜನು ತನ್ನ ಒಬ್ಬೊಬ್ಬ ಮಗನಿಗೂ ಒಬ್ಬೊಬ್ಬ ಗುರುವನ್ನು ಗೊತ್ತು ಪಡಿಸಿದನು. ಚಿಕ್ಕವನಾದ ಸಂವರನ ಗುರುವು ಬೋಧಿಸತ್ವನ ಅವತಾರದವನೇ.

ಮಹಾಜ್ಞಾನಿಯಾದ ಬೋಧಿಸತ್ವನು ಸಂವರನನ್ನು ಸಕಲ ವಿದ್ಯಾಪಾರಂಗತನನ್ನಾ ಗಿಸಿದನು. ಅವನಲ್ಲಿ ಗರ್ವವೆಂಬುದು ಲವ ಲೇಶವೂ ಇರಲಿಲ್ಲ. ಉಳಿದ ತೊಂಬತ್ತೊಂಬತ್ತು ರಾಜಕುಮಾರರ ಗುರುಗಳೂ ತಮ್ಮ ಶಿಷ್ಯರನ್ನು ರಾಜನ ಬಳಿಗೆ ಕರೆದುಕೊಂಡು ಹೋಗಿ, ರಾಜನಿಂದ ಭಾರಿ ಭಾರಿ ಸನ್ಮಾನಗಳನ್ನು ಪಡೆದು ಹಿಂದಿರುಗಿದರು.

ಆಮೇಲೆ ರಾಜನು ತನ್ನ ಕುಮಾರರನ್ನು ರಾಜ್ಯದೊಳಗಿನ ಒಂದೊಂದು ಪ್ರಾಂತಕ್ಕೆ ಪಾಲಕರನ್ನಾಗಿ ನಿಯಮಿಸಿ, ಕಳುಹಿಸಿದನು. ಈ ಸಮಾಚಾರವನ್ನು ತಿಳಿದು, ಸಂವರನು ಗುರುಗಳಲ್ಲಿ ಪ್ರಸ್ತಾಪಿಸಿದಾಗ ಬೋಧಿಸತ್ವನು, “ನಿನ್ನ ತಂದೆ ಒಂದು ವೇಳೆ ನಿನಗೆ ರಾಜ್ಯವನ್ನು ಕೊಟ್ಟು ಕಳುಹಿಸಲು ನೋಡಿದರೆ ಅದಕ್ಕೆ ನೀನು ಒಪಿಕೊಳ್ಳಬಾರದು. ನಿನ್ನ ಅಣ್ಣಂದಿರೆಲ್ಲಾ ತಂದೆ ಯನ್ನು ಬಿಟ್ಟು ಒಂದೊಂದು ಪ್ರಾಂತದ ಪಾಲಕರಾಗಿ ಹೊರಟು ಹೋದರು. ವೃದ್ಧಾಪ್ಯದಲ್ಲಿ ತಂದೆಯನ್ನು ನೋಡಿ ಕೊಂಡಿರುವ ಪುತ್ರನ ಕರ್ತವ್ಯವು ನಿನ್ನದಾಗಿದೆ” ಎಂದನು.

ಹೀಗಿರಲು ತನ್ನ ಚಿಕ್ಕಮಗನ ವಿದ್ಯಾಭ್ಯಾಸವು ಎಷ್ಟರ ಮಟ್ಟಿಗೆ ಬಂದಿದೆ ಎಂಬುದನ್ನು ತಿಳಿಯಲು ಬ್ರಹ್ಮದತ್ತ ರಾಜನು ಗುರುವಿನ ಆಶ್ರಮಕ್ಕೆ ಬಂದು, ಮಗನನ್ನು ನೋಡಿ “ಕಂದಾ, ನಿನ್ನ ವಿದ್ಯೆ ಪೂರ್ತಿಯಾಯಿತೆ?” ಎಂದು ಕೇಳಿದನು.

“ಗುರುಗಳ ದಯದಿಂದ ಎಲ್ಲಾ ವಿದ್ಯೆಗಳನ್ನೂ ಕಲಿತುಕೊಂಡಿದ್ದೇನೆ, ಅಪ್ಪಾ” ಎಂದನು ಸಂವರನು.

“ಹಾಗಿದ್ದರೆ ನನ್ನ ರಾಜ್ಯದಲ್ಲಿ ನಿನಗೆ ಇಷ್ಟವಾದ ಪ್ರಾಂತವನ್ನು ಹೇಳು. ಅದನ್ನು ನಿನಗೆ ಕೊಡುತ್ತೇನೆ” ಎಂದನು ರಾಜನು.

“ಅಪ್ಪಾ, ನಾನು ನಿಮ್ಮ ಕಡೆಯ ಮಗನು. ಅಣ್ಣಂದಿರಂತೆ ನಾನು ಕೂಡಾ ನಿಮ್ಮನ್ನು ಬಿಟ್ಟು ಹೋಗಿ ಬಿಟ್ಟರೆ ನಿಮ್ಮನ್ನು ನೋಡಿಕೊಳ್ಳುವವರು ಯಾರು? ನನಗೆ ರಾಜ್ಯದಿಂದ ಯಾವ ಉಪಯೋಗವೂ ಇಲ್ಲ. ನಾನು ನಿಮ್ಮ ಸೇವೆ ಮಾಡಿ ಕೊಂಡಿರುತ್ತೇನೆ” ಎಂದನು ಸಂವರನು.

ಅವನ ಮಾತು ಕೇಳಿ ರಾಜನು ಬಹಳ ಸಂತೋಷ ಪಟ್ಟನು. ಅದರಂತೆ ಸಂವರ ಕುಮಾರನು ತಂದೆಯೊಂದಿಗೇ ಇರತೊಡಗಿದನು. ಅಗತ್ಯ ವಿದ್ದಾಗ ಗುರು ಬೋಧಿಸತ್ವನ ಬಳಿಗೆ ಹೋಗಿ ಸಲಹೆ ಪಡೆದು ಬರುತ್ತಿದ್ದನು.

ಒಂದುಸಾರಿ ಸಂವರ ಕುಮಾರನು ಬೋಧಿ ಸತ್ವನ ಸಲಹೆಯಂತೆ ರಾಜಧಾನಿಯ ಸಮೀಪ ದಲ್ಲಿದ್ದ ಒಂದು ಬಂಜರು ಭೂಮಿಯನ್ನು ಹಸನಾಗಿಸಿ, ಅಲ್ಲಿ ಹೂವಿನ ಗಿಡಗಳನ್ನೂ, ಫಲವೃಕ್ಷಗಳನ್ನೂ ಬೆಳೆಯಿಸಿ, ಅದನ್ನೊಂದು ಸುಂದರ ಉದ್ಯಾನವನ್ನಾಗಿ ಮಾಡಿಸಿದನು. ಆ ಉದ್ಯಾನ ವನಕ್ಕೆ ವಿಹರಿಸಲು ಬರುವ ಪುರಪ್ರಮುಖರೊಂದಿಗೆ ಸಂವರ ಕುಮಾರನಿಗೆ ತುಂಬಾ ಪರಿಚಯವಾಯಿತು.

ಮತ್ತೊಂದುಸಾರಿ ಸಂವರನು ತಂದೆಯ ಅನುಮತಿ ಪಡೆದು ನಗರದೊಳಗಿನ ಎಲ್ಲಾ ವರ್ಣದ ವರಿಗೂ ಸಂತರ್ಪಣೆ ಮಾಡಿಸಿದನು. ಆಮೇಲೆ ರಾಜಾಶ್ರಿತರಿಗೂ, ರಾಜ್ಯದ ಚತುರಂಗ ಬಲಕ್ಕೂ ದೊಡ್ಡದೊಂದು ಔತಣ ಮಾಡಿಸಿ ಸಂತೋಷಪಡಿಸಿದನು. ವಿದೇಶಗಳಿಂದ ಬರುವ ರಾಯಭಾರಿಗಳಿಗೂ, ವರ್ತಕರಿಗೂ ವಸತಿ ಸೌಕರ್ಯಕ್ಕಾಗಿ ಭವನಗಳನ್ನು ಕಟ್ಟಿಸಿದನು. ಸಂವರ ಕುಮಾರನ ಹೆಸರು ರಾಜ್ಯದೊಳಗೆಲ್ಲಾ ಬಹಳ ಪ್ರಸಿದ್ಧಿಯಾಯಿತು.

ಕಾಲಕ್ರಮವಾಗಿ ವೃದ್ಧನಾದ ರಾಜನಿಗೆ ಅವಸಾನಕಾಲವು ಸಮೀಪಿಸಿತು. ರಾಜನು ಮಂತ್ರಿಗಳನ್ನು ಕರೆಯಿಸಿ, “ನನ್ನ ನೂರು ಜನ ಪುತ್ರರಿಗೂ ಈ ಸಿಂಹಾಸನದಲ್ಲಿ ಕುಳಿತು ಕೊಳ್ಳುವುದಕ್ಕೆ ಹಕ್ಕಿದೆ, ಆದರೆ ನೀವು ಚೆನ್ನಾಗಿ ಆಲೋಚಿಸಿ ಅರ್ಹನಾದವನಿಗೆ ಪಟ್ಟ ಕಟ್ಟಿರಿ” ಎಂದು ಹೇಳಿ ಸತ್ತುಹೋದನು. ಮಂತ್ರಿಗಳು ಚರ್ಚೆ ಮಾಡಿಕೊಂಡು, ಸಿಂಹಾಸನದಲ್ಲಿ ಕುಳಿತು ಕೊಳ್ಳುವ ಅರ್ಹತೆ ಸಂವರನಿಗೇ ಸರಿ ಎಂದು ನಿರ್ಣಯಿಸಿ, ರಾಜ್ಯಾಭಿಷೇಕ ಮಾಡಿದರು.

ಅಂದಿನಿಂದ ಸಂವರನು ತನ್ನ ಗುರುವಾದ ಬೋಧಿಸತ್ವನ ಸಲಹೆಗಳನ್ನು ಪಡೆಯುತ್ತಾ ನ್ಯಾಯ ಮಾರ್ಗದಲ್ಲಿ ಪ್ರಜೆಗಳಿಗೆಲ್ಲಾ ಹಿತವಾಗು ವಂತೆ ರಾಜ್ಯಪಾಲನೆ ಮಾಡತೊಡಗಿದನು.

ಇದರಿಂದ ಉಳಿದ ತೊಂಬತ್ತೊಂಬತ್ತು ಮಂದಿ ರಾಜಕುಮಾರರಿಗೆ ಕೋಪ ಬಂದಿತು. ಅವರೆಲ್ಲರೂ ಮಾತಾಡಿಕೊಂಡು ಬಂದು ಕೋಟೆಯನ್ನು ಮುತ್ತಿದರು. ಸಂವರನು ಬೋಧಿಸತ್ವನ ಸಲಹೆಯಂತೆ ತಂದೆಯ ಆಸ್ತಿಯನ್ನು ನೂರು ಭಾಗಗಳಾಗಿ ಮಾಡಿ, ಎಲ್ಲಾ ಅಣ್ಣಂದಿರಿಗೂ ಹಂಚಿಕೊಟ್ಟು, ತಾನೂ ಒಂದು ಭಾಗವನ್ನು ಇಟ್ಟು ಕೊಂಡನು.

ಸಂವರನ ಈ ಲೆಕ್ಕಾಚಾರದ ವಿನಿಯೋಗ ಕ್ರಮವನ್ನು ನೋಡಿ ಸೋದರರಲ್ಲಿ ಹಿರಿಯವನಾದ ಉಪೋಸತುವಿಗೆ ತುಂಬಾ ಆಶ್ಚರ್ಯವಾಯಿತು.

ಅವನು ತನ್ನ ತಮ್ಮಂದಿರೊಂದಿಗೆ, “ನಾವೆಲ್ಲಾ ತಿಳಿದ ಹಾಗೆ ನಮ್ಮ ಚಿಕ್ಕ ತಮ್ಮ ಸಂವರನು ಸಿಂಹಾಸನದಲ್ಲಿರುವುದರಿಂದ ನಮಗೆ ಶತ್ರುವಾದನೆಂದು ಭಾವಿಸಿ ದಾಳಿಮಾಡಲು ಬಂದೆವು. ಈಗ ಅವನು ನ್ಯಾಯವಾಗಿ ವರ್ತಿಸುವುದರಿಂದ, ಅವನೊಡನೆ ರಾಜೀ ಮಾಡಿ ಕೊಳ್ಳುವುದೇ ಉತ್ತಮ. ಸಿಂಹಾಸನಕ್ಕೆ ನಾವೆಲ್ಲರೂ ಹಕ್ಕುದಾರರೆಂಬುದು ನಿಜವೇ, ಆದರೆ ಎಲ್ಲರೂ ಒಂದೇ ಸಿಂಹಾಸನವನ್ನು ಏರಿಕೊಳ್ಳಲು ಸಾಧ್ಯ ವಿಲ್ಲವಷ್ಟೆ? ಆದುದರಿಂದ ಸಂವರನನ್ನೇ ರಾಜ ನಾಗಿರುವಂತೆ ಒಪ್ಪಿಕೊಂಡು, ನಮಗೆ ಬಂದ ರಾಜ್ಯಭಾಗಗಳನ್ನೂ ಮತ್ತೆ ಅವನ ವಶಕ್ಕೇ ಒಪ್ಪಿಸಿ ಬಿಡುವುದು ನ್ಯಾಯವೆಂದು ಕಾಣುತ್ತದೆ. ಆಗ ತಂದೆಯ ಸಿಂಹಾಸನದ ಸಾರ್ವಭೌಮತ್ವಕ್ಕೆ ಕುಂದು ಬರುವುದಿಲ್ಲ” ಎಂದನು.

ದೊಡ್ಡಣ್ಣನ ಮಾತುಗಳು ದೀರ್ಘಾಲೋಚನೆ ಯಿಂದ ಕೂಡಿದ್ದುದರಿಂದ ಎಲ್ಲಾ ತಮ್ಮಂದಿರೂ ಸಮ್ಮತಿ ತಿಳಿಸಿದರು. ಕೂಡಲೇ ಅವರೆಲ್ಲರೂ ತಮ್ಮ ಸೇನೆಗಳಿಂದ “ಸಂವರನಿಗೆ ಜಯವಾಗಲಿ!” ಎಂಬ ಘೋಷ ಮಾಡಿಸಿ, ನಗರವನ್ನು ಪ್ರವೇಶಿಸಿದರು.

ಸಿಂಹಾಸನಾರೂಢನಾಗಿದ್ದ ಸಂವರನು ಅಣ್ಣಂದಿರಿಗೆಲ್ಲಾ ಸ್ವಾಗತ ಹೇಳಿ, ಉಚಿತಾಸನಗಳಲ್ಲಿ ಕೂಡಿಸಿ ಗೌರವಿಸಿ ಉಪಚಾರಗಳನ್ನು ಮಾಡಿದನು.

ಉಪೋಸತುವು ಸಂವರನೊಂದಿಗೆ, “ತಮ್ಮಾ, ನಿನ್ನ ಧರ್ಮ ಗುಣವನ್ನು ಸಾವಿರ ಬಾಯಿಗಳಿಂದ ಹೊಗಳಬಹುದು. ಹೀಗೆ ಎಲ್ಲರೊಂದಿಗೂ ಒಳಿತಾಗಿ ನಡೆಯುವಂಥ ಶಕ್ತಿ ನಿನಗೆ ಹೇಗೆ ಬಂತು?” ಎಂದು ಕೇಳಿದನು.

ಸಂವರ ಕುಮಾರನು , “ಅಣ್ಣಾ! ನೀನು ನನ್ನಲ್ಲಿ ಕಾಣುವ ಆ ಶಕ್ತಿ ಬಹುಶಃ ಇತರ ಮಾನವರನ್ನು ದ್ವೇಷಿಸ ಬಾರದೆಂಬ ಕಾರಣವೇ ಆಗಿರಬೇಕು. ಇನ್ನು ರಾಜ್ಯಪಾಲನೆಯ ವಿಷಯದಲ್ಲಿ, ಉದ್ಯೋಗಸ್ಥರಿಗೂ, ಸೈನಿಕರಾದಿಯಾಗಿ ಎಲ್ಲಾ ಪರಿವಾರ ಗಳಿಗೂ ಆಗಿಂದಾಗಲೇ ಸಂಬಳವನ್ನು ಪೂರ್ತಿ ಯಾಗಿ ಕೊಡಿಸಿ ಬಿಡುತ್ತೇನೆ. ನಮ್ಮ ರಾಜ್ಯಕ್ಕೆ ಬರುವ ರಾಯಭಾರಿಗಳನ್ನೂ, ವರ್ತಕರನ್ನೂ ತಕ್ಕ ರೀತಿಯಲ್ಲಿ ಗೌರವಿಸುತ್ತೇನೆ. ಪ್ರಜೆಗಳ ಕ್ಷೇಮವೇ ನನ್ನ ಕ್ಷೇಮವಾಗಿ ಭಾವಿಸುತ್ತೇನೆ” ಎಂದನು.

ಅದನ್ನು ಕೇಳಿ ಉಪೋಸತುವು ಉಳಿದ ತನ್ನ ತಮ್ಮಂದಿರೆಲ್ಲರ ಪರವಾಗಿ ಸಂವರನನ್ನು ಹರಸಿ, “ಇದೇ ವಿಧವಾಗಿ ಧರ್ಮಮಾರ್ಗದಿಂದ ರಾಜ್ಯಪಾಲನೆ ಮಾಡುತ್ತಾ ಕೀರ್ತಿಶಾಲಿಯಾಗು. ನೀನು ನಮ್ಮ ಸಣ್ಮ ತಮ್ಮನಾದರೂ ನೀನು ಕಲಿತ ವಿದ್ಯೆ ಬಹಳ ದೊಡ್ಡದು” ಎಂದನು.

ಬೋಧಿಸತ್ವನ ಶಿಷ್ಯನಾದ ಸಂವರನು ಈ ವಿಧವಾಗಿ ಅಣ್ಣಂದಿರ ಜ್ಞಾತಿವೈರವನ್ನು ಅಳಿಸಿ ಹಾಕಿ, ಪ್ರೇಮಾದರಗಳಿಗೆ ಪಾತ್ರನಾದನು. ಪ್ರಜೆಗಳಿಂದ ಗೌರವ ಮರ್ಯಾದೆಗಳನ್ನು ಹೊಂದುತ್ತಾ ಬಹಳ ಕಾಲದ ವರೆಗೆ ರಾಜ್ಯಭಾರ ವಹಿಸಿ ಕೊಂಡಿದ್ದನು.

ಕೃಪೆ: ಬೋಧಿಸತ್ವನ ಕಥೆಗಳು | ಅನೀಶ್ ಬೋಧ್

 

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.