ಪಯಣ ನಿರಂತರ.. ಇದು ಶ್ರೀ ಎಂ ಅವರ ಆತ್ಮಕಥೆ

‘ಇನ್ನೊಬ್ಬರು ನಾನು ಬರೆದಿರುವುದನ್ನು ನಂಬುವುದು ಬಿಡುವುದು ಅವರಿಷ್ಟ. ನಾನು ಕಂಡುಕೊಂಡ ಸತ್ಯವನ್ನು, ಆಧ್ಯಾತ್ಮದ ತಿರುಳನ್ನು ಪ್ರಾಮಾಣಿಕವಾಗಿ ತಿಳಿಸುವುದೇ ನನ್ನ ಕೆಲಸ. ಇಲ್ಲಿ ನಂಬಿಕೆಯ ಪ್ರಶ್ನೆಯೇ ಬರುವುದಿಲ್ಲ’ ಎನ್ನುತ್ತಾರೆ ಶ್ರೀ ಎಂ । ಬಿ.ಎಂ.ವಿಶ್ವನಾಥ್ 

ಪಯಣ ನಿರಂತರ.. ಇದು ಶ್ರೀ ಎಂ ಅವರ ಆತ್ಮಕಥೆ ‘ಹಿಮಾಲಯದ ಗುರುವಿನ ಗರಡಿಯಲ್ಲಿ’ ಇದರ ಮುಂದುವರೆದ ಭಾಗ.

ಶ್ರೀ ಎಂ ಕೋಟ್ಯಾಂತರ ಜನಕ್ಕೆ ಈಗಾಗಲೇ ಪರಿಚಿತರು. ನನಗೆ ಶ್ರೀ ಎಂ ಅವರ ಬಗ್ಗೆ ಪರಿಚಯ ಆಗಿದ್ದು 2015ರ ಜನವರಿಯಲ್ಲಿ. ಅದು ಆಧ್ಯಾತ್ಮಕ್ಕಾಗಿ ನಾನು ತೀವ್ರವಾಗಿ ತುಡಿಯುತ್ತಿದ್ದ ಅವಧಿ. ಅದೇ ವರ್ಷದ ಜನವರಿ 12ರಂದು ಶ್ರೀ ಎಂ ಅವರು ‘ವಾಕ್ ಆಫ್ ಹೋಪ್’ ಆರಂಭಿಸಿದ್ದರು. ಅದು ಆರಂಭ ಆಗಿದ್ದು ಕನ್ಯಾಕುಮಾರಿಯಿಂದ. ಪ್ರತಿಯೊಬ್ಬರಲ್ಲಿಯೂ ಸೌಹಾರ್ದತೆ ಮತ್ತು ಏಕತೆಯ ಬೀಜ ಬಿತ್ತಲು ಶ್ರೀ ಎಂ ಆ ಮಹಾಸಾಹಸಕ್ಕೆ ಕೈ ಹಾಕಿದ್ದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹಮ್ಮಿಕೊಂಡ 7500 ಕಿ.ಮೀ ದೂರದ ಪಾದಯಾತ್ರೆಯದು.

ಅಷ್ಟಕ್ಕೂ ಶ್ರೀ ಎಂ ಅವರು ಕನ್ಯಾಕುಮಾರಿಯನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ ಅಂತ ಯಾರೋ ಒಬ್ಬರು ಕೇಳಿದಾಗ ಅವರು ಹೇಳಿದ್ದಿಷ್ಟು.. ಕನ್ಯಾಕುಮಾರಿ ಮೂರು ನದಿಗಳ ಸಂಗಮ ಕ್ಷೇತ್ರ. ಅಂದರೆ ವಿವಧತೆಯಲ್ಲಿ ಏಕತೆ. ಮತ್ತೊಂದು ಕಾರಣವೇನೆಂದರೆ, ಜನವರಿ 12 ಸ್ವಾಮಿ ವಿವೇಕಾನಂದ ಜನ್ಮದಿನ. ಅವರು ನೂರು ವರ್ಷಗಳ ಹಿಂದೆ ಮಾನವರ ಏಕತೆಗೆಗಾಗಿ ಪರಿವ್ರಾಜಕರಾಗಿ ದೇಶದ ಉದ್ದಗಲಕ್ಕೂ ಸಂಚರಿಸಿ ಕೊನೆಗೆ ತಲುಪಿದ್ದು ಕನ್ಯಾಕುಮಾರಿಯನ್ನು. ಅಲ್ಲಿನ ಸಮುದ್ರಕ್ಕೆ ಧುಮುಕಿ ಈಜುತ್ತಲೇ ಒಂದು ಬೃಹತ್ ಬಂಡೆಯನ್ನು ತಲುಪಿ ಮೂರು ದಿನಗಳ ಕಾಲ ಧ್ಯಾನಸ್ಥರಾದರು. ನಂತರ ಅವರಿಗೆ ತಮ್ಮ ಮುಂದಿನ ಕಾರ್ಯದ ಕುರಿತು ಸ್ಪಷ್ಟ ಚಿತ್ರಣ ಸಿಕ್ಕಿತ್ತು’ ಎನ್ನುತ್ತಾರೆ ಶ್ರೀ ಎಂ.

ಇದೇ ಕಾರಣಕ್ಕೆ ಶ್ರೀ ಎಂ ಅವರು ತಮ್ಮ ಮಹಾಪಾದಯಾತ್ರೆಗೆ ಕನ್ಯಾಕುಮಾರಿಯನ್ನು ಆರಂಭದ ಕೇಂದ್ರವಾಗಿ ಆಯ್ದುಕೊಂಡಿದ್ದರು. ಇಲ್ಲಿಂದ ಆರಂಭವಾದ ‘ಭರವಸೆಯ ನಡಿಗೆ’ ಕೊನೆಗೆ ದೆಹಲಿ ಸಂಸತ್ ತಲುಪಿತು. ಅಲ್ಲಿ ಸಂಸತ್ತಿನ ಸದಸ್ಯರನ್ನು ಉದ್ದೇಶಿಸಿ ಶ್ರೀ ಎಂ ಭಾಷಣ ಮಾಡಿದ್ದರು. ಆ ಭಾಷಣದಲ್ಲಿ ಅವರು ಪ್ರಸ್ತಾಪಿಸಿದ ಅಂಶಗಳನ್ನು ದೇಶದ ಪ್ರತಿಯೊಬ್ಬ ರಾಜಕಾರಣಿ ಅಳವಡಿಸಿಕೊಂಡಿದ್ದೇ ಆದಲ್ಲಿ ನಿಜಕ್ಕೂ ನಮ್ಮ ದೇಶ ಇನ್ನಷ್ಟು ಸೌಹಾರ್ದತೆಯಿಂದ ಶಾಂತಿಯಿಂದ ಇರುವ ದೇಶ ಆಗುವುದರಲ್ಲಿ ಅನುಮಾನವಿಲ್ಲ.

ಸಂಸತ್ ಉದ್ದೇಶಿಸಿ ಭಾಷಣ ಮಾಡಿ, ನಂತರ ಅಲ್ಲಿಂದ ಶ್ರೀನಗರಕ್ಕೆ ತಲುಪಿದರು. ಒಟ್ಟಾರೆ 500 ದಿನಗಳಲ್ಲಿ ಬರೋಬ್ಬರಿ 7500 ಕಿ.ಮೀ ಭರವಸೆಯ ನಡಿಗೆಯನ್ನು ಶ್ರೀ ಎಂ ಹಾಗೂ ಅವರೊಟ್ಟಿಗೆ ಇದ್ದ ತಂಡ ಪೂರೈಸಿತ್ತು. ದೇಶದಲ್ಲಿ ಸೌಹಾರ್ಧತೆಯ ಬೀಜ ಬಿತ್ತಲು ಇದೊಂದು ಮಹಾನ್ ಪ್ರಯತ್ನವಾಗಿತ್ತು. ಈ ‘ಭರವಸೆಯ ನಡಿಗೆ’ಯಲ್ಲಿಯೇ ಶ್ರೀ ಎಂ ದೇಶದ ಜನರಿಗೆ ಹೆಚ್ಚು ಚಿರಪರಿಚಿತರಾದರು. ದೇಶದ ಅನೇಕ ರಾಜ್ಯಗಳ ಪ್ರಾದೇಶಿಕ ಪತ್ರಿಕೆಗಳಿಂದ ಹಿಡಿದು ರಾಜ್ಯಮಟ್ಟದ, ರಾಷ್ಟ್ರಮಟ್ಟದ ಹಾಗೂ ಅಂತರಾಷ್ಟ್ರ ಮಟ್ಟದ ಪತ್ರಿಕೆಗಳಲ್ಲಿ ಅವರ ಸಂದರ್ಶನಗಳು ಒಂದರ ಮೇಲೆ ಒಂದರಂತೆ ಬರುತ್ತಿದ್ದವು. ಇದಕ್ಕಿಂತಲೂ ಮೊದಲೇ ಅವರು ಹಿಮಾಲಯದ ಗುರುವಿನ ಗರಡಿಯಲ್ಲಿ ಆತ್ಮಕತೆ ಬರೆದಿದ್ದರು. ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಯಾವುದೇ ಹಿಂಜರಿಕೆ ಇಲ್ಲದೇ ಈ ಪುಸ್ತಕದಲ್ಲಿ ಅವರು ದಾಖಲಿಸಿದ್ದರು. ಆದರೆ ‘ಭರವಸೆಯ ನಡಿಗೆ’ಯಿಂದಲೇ ಅವರು ಹೆಚ್ಚು ಜನರಿಗೆ ಹತ್ತಿರವಾದರು.

‘ಇನ್ನೊಬ್ಬರು ನಾನು ಬರೆದಿರುವುದನ್ನು ನಂಬುವುದು ಬಿಡುವುದು ಅವರಿಷ್ಟ. ನಾನು ಕಂಡುಕೊಂಡ ಸತ್ಯವನ್ನು, ಆಧ್ಯಾತ್ಮದ ತಿರುಳನ್ನು ಪ್ರಾಮಾಣಿಕವಾಗಿ ತಿಳಿಸುವುದೇ ನನ್ನ ಕೆಲಸ. ಇಲ್ಲಿ ನಂಬಿಕೆಯ ಪ್ರಶ್ನೆಯೇ ಬರುವುದಿಲ್ಲ’ ಎನ್ನುತ್ತಾರೆ ಶ್ರೀ ಎಂ. ಅನೇಕ ಡೋಂಗಿ ಆಧ್ಯಾತ್ಮ ಜೀವಿಗಳ ಮಧ್ಯ ನಿಜವಾದ ಯೋಗಿಗಳನ್ನೂ ಇದೀಗ ಸಂಶಯದಿಂದ ನೋಡುವಂತ ಕಾಲಘಟ್ಟದಲ್ಲಿ ನಾವಿದ್ದೇವೆ. ಅಲ್ಲದೇ ಯೋಗಿಗಳು ಆತ್ಮಕತೆ ಬರೆಯುವುದು ವಿರಳಾತೀವಿರಳ. ಅವರಿಗೆ ಆತ್ಮಕಥೆಗಳಲ್ಲಿ ಆಸಕ್ತಿ ಇರೋದಿಲ್ಲ. ಅದೊಂದು ಸಮಯ ವ್ಯರ್ಥ ಮಾಡುವ ಕ್ರಿಯೆ ಎಂದು ಅನೇಕ ಯೋಗಿಗಳು ಭಾವಿಸುತ್ತಾರೆ. ಅಲ್ಲದೇ ಆತ್ಮಕತೆಗಳನೇಕವು ಅಹಂ ಪ್ರದರ್ಶನದ ಕಸರತ್ತು ಎನ್ನುವ ಅಭಿಪ್ರಾಯವೂ ಇದೆ.

ಯೋಗಿಗಳ ಆತ್ಮಕತೆ ಎಂದು ಬಂದಾಗ.. ಆತ್ಮಕಥೆ ಬರೆದವರಲ್ಲಿ ಮೊದಲಿಗರೆಂದರೆ ಬಹುಶಃ ಪರಮಹಂಸ ಯೋಗಾನಂದರೇ ಇರಬಹುದು. ಅದೇ ‘ಆಟೋಬಯಾಗ್ರಫಿ ಆಫ್ ಯೋಗಿ’ ಯೋಗಿಗಳು ಆತ್ಮಕಥೆ ಬರೆಬೇಕಾ? ಬೇಡವಾ? ಎನ್ನುವು ಚರ್ಚೆ ಅದೇನೆ ಇರಲಿ, ಆದರೆ ಈ ಆತ್ಮಕಥೆಗಳನ್ನು ನಾವು ನಿರ್ಲಕ್ಷಿಸೋಕೆ ಸಾಧ್ಯವಿಲ್ಲ. ಇನ್ನು ಆತ್ಮಕಥೆ ಎಂದರೆ ಅದೊಂದು ಅಹಂಕಾರದ ಪ್ರದರ್ಶನದ ಕಸರತ್ತು ಎನ್ನುವುದನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳೋಕೆ ಸಾಧ್ಯವಿಲ್ಲ ಎನಿಸುತ್ತದೆ. ಕಾರಣ, ಯೋಗಿ ಎಂದರೇನು ಅಹಂ ಅನ್ನು ಜಯಿಸಿದವನು. ಬಹುಶಃ ಸಾಹಿತಿಗಳ ಆತ್ಮಚರಿತ್ರೆಯಲ್ಲಿ ಈ ಅಹಂಗೆ ಹೆಚ್ಚು ಸ್ಥಳಾವಕಾಶ ಇರಬಹುದು. ಯೋಗಿಗಳಲ್ಲಿ ಅದು ಅಸಾಧ್ಯ. ಇಲ್ಲದೇ ಇದ್ದರೆ ಆತ ಯೋಗಿಯೇ ಅಲ್ಲ. 

ಯೋಗಿಗಳು ಬರೆದಂತ ಆತ್ಮಕತೆ ನಿಜಕ್ಕೂ ಅವಶ್ಯಕತೆ ಇದೆ. ಆಧ್ಯಾತ್ಮ ಕ್ಷೇತ್ರದಲ್ಲಿರುವ ಅನೇಕರಿಗೆ ಇದು ಒಂದು ದಾರೀದೀಪ. ಅವರ ಅನೇಕ ಪ್ರಶ್ನೆಗಳಲ್ಲಿ ಇಂತಹ ಪುಸ್ತಕದಲ್ಲಿ ಉತ್ತರಗಳಿರುತ್ತವೆ. ಹಲವಾರು ವರ್ಷಗಳಿಂದ ಹುಡಕಿದರೂ ಸಿಗದ ಉತ್ತರ ಪುಸ್ತಕದ ಯಾವುದೋ ಒಂದು ಹಾಳೆಯ ಮೂಲೆಯಲ್ಲಿರುತ್ತದೆ. ಹೀಗಾಗಿ ಯೋಗಿಗಳ ಆತ್ಮಕಥೆಗಳು ಒಂದು ಮಾರ್ಗದರ್ಶನದ ಮಹಾನ್ ಗುರುವಿನ ರೂಪದಲ್ಲಿಯೂ ಕಾಣಬಹುದು. ಅಷ್ಟೇ ಅಲ್ಲದೇ ಆ ಪುಸ್ತಕದಲ್ಲಿನ ಯಾವುದೋ ಒಂದು ಘಟನೆ ಆಧ್ಯಾತ್ಮ ಪಿಪಾಸುವಿನ ಇಡೀ ಜೀವನವನ್ನೇ ಬದಲಾಯಿಸುವ ತಾಕತ್ತು ಹೊಂದಿರುತ್ತವೆ. ಯೋಗಿಗಳ ಆತ್ಮಕತೆಗಳು ಬೇಕು. ಅವುಗಳು ಇನ್ನಷ್ಟು ಹೊರಪ್ರಪಂಚಕ್ಕೆ ತಲುಪಬೇಕು. 

ಇನ್ನೂ ವಿಜ್ಞಾನ ಮತ್ತು ಆಧ್ಯಾತ್ಮಕ್ಕೆ ಬಾಹ್ಯವಾಗಿ ಸಂಘರ್ಷವಿದ್ದರೂ ಆಂತರ್ಯದಲ್ಲಿ ಅವೆರಡಕ್ಕೂ ಅವಿನಾಭಾವ ಸಂಭಂಧವಿದೆ. ವಿಜ್ಞಾನ ಇನ್ನೂ ಆಧ್ಯಾತ್ಮದ ಅನೇಕ ನಿಗೂಢಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನು ಮಾಡುತ್ತಲೇ ಇದೆ. ಅನೇಕ ವಿಜ್ಞಾನಿಗಳು ಈ ದಿಕ್ಕಿನಲ್ಲಿ ನಿರಂತರ ಸಂಶೋಧನೆ ನಡೆಸುತ್ತಲೇ ಇದ್ದಾರೆ. ಆದರೆ ಉತ್ತರ ಕಂಡುಕೊಳ್ಳೋಕೆ ಇನ್ನೂ ಸಾಧ್ಯವಾಗಿಲ್ಲ. ನಿಮಗೆ ಒಂದು ಉದಾಹರಣೆ ಮೂಲಕ ಇದನ್ನು ವಿವರಿಸೋಕೆ ಬಯಸುತ್ತೇನೆ. ಗುರುತ್ವಾಕರ್ಷಣೆಯನ್ನು ನ್ಯೂಟನ್ ಕಂಡು ಹಿಡಿದರು. ಆದರೆ ನ್ಯೂಟನ್‌ ಕಂಡುಹಿಡಿಯುವ ಮುಂಚೆಯೂ ಗುರುತ್ವಾಕರ್ಷಣೆ ಇರಲಿಲ್ಲವೇ? ಖಂಡಿತ ಇತ್ತು. ಅದನ್ನು ಕಂಡು ಹಿಡಿದಿಲ್ಲ ಎನ್ನುವ ಕಾರಣಕ್ಕೆ ಗುರುತ್ವಾಕರ್ಷಣೆಯೇ ಇಲ್ಲ ಎಂದು ವಾದಿಸುವುದು ಮೂರ್ಖತನ ಅಲ್ಲದೇ ಮತ್ತೇನು?

ಹೀಗೆಯೇ ಸೃಷ್ಟಿಯಲ್ಲಿ ಅನೇಕ ರಹಸ್ಯಗಳಿವೆ. ಈ ರಹಸ್ಯಗಳಿವೆ ಯೋಗಿಗಳಿಗೆ ಸಹಜವಾಗಿ ಗೋಚರ ಆಗುತ್ತವೆ. ಸಾಮಾನ್ಯ ಮನುಷ್ಯನ ತರ್ಕಕ್ಕೆ ನಿಲುಕದ ಜ್ಞಾನ ಯೋಗಿಗೆ ಪ್ರಾಪ್ತವಾಗುತ್ತದೆ. ಸೃಷ್ಟಿಯ ಅನೇಕ ವಿಷಯಗಳು ರಹಸ್ಯ ಎನಿಸುವುದು ಪ್ರಾಪಂಚಿಕರಿಗೆ ಮಾತ್ರ. ಆದರೆ ಯೋಗಿಗಳಿಗೆ ಅವು ರಹಸ್ಯಗಳೇ ಅಲ್ಲ, ಸೃಷ್ಟಿಯ ತೆರೆದ ಪುಟಗಳಷ್ಟೇ. ಹೀಗಾಗಿ ಅವರು ತಾವು ಕಂಡುಕೊಂಡ ಸತ್ಯವನ್ನು, ಸೃಷ್ಟಿಯ ಲೀಲೆಯನ್ನು ತಮ್ಮ ಆತ್ಮಕಥೆಯಲ್ಲಿ ಪ್ರಾಮಾಣಿಕವಾಗಿ ದಾಖಲಿಸಿರುತ್ತಾರೆ. ಅಂತಹ ಯೋಗಿಗಳಲ್ಲಿ ಶ್ರೀ ಎಂ ಅವರು ಪ್ರಮುಖರು. ಅವರ ‘ಹಿಮಾಲದಯ ಗುರುವಿನ ಗರಡಿಯಲ್ಲಿ’ ಈ ಪುಸ್ತಕದಲ್ಲಿ ಬೆರಗುಗೊಳಿಸುವ ಅನೇಕ ಘಟನೆಗಳನ್ನು ವಿವರಿಸಿದ್ದಾರೆ. ಅದರ ಮುಂದುವರೆದ ಭಾಗ ‘ಪಯಣ ನಿರಂತರ’ದಲ್ಲೂ ಅದು ಮುಂದುವರೆದಿದೆ.

ಈ ಪುಸ್ತಕ ಈಗಾಗಲೇ ಇಂಗ್ಲೀಷ್‌ನಲ್ಲಿ ಬಂದು ತುಂಬ ಸಮಯವಾದರೂ, ಕೊಂಚ ತಡವಾಗಿ ಕನ್ನಡಕ್ಕೆ ಅನುವಾದವಾಗಿದೆ. ಆದರೆ ಈಗಲಾದರೂ ಅನುವಾದ ಆಗಿ, ಕನ್ನಡದ ಓದುಗರ ಕೈಗೆ ಇದು ದೊರಕಿದೆ ಎನ್ನುವುದೇ ಸಂತಸದ ವಿಷಯ. ಅಂದಹಾಗೆ ಇದನ್ನು ಕನ್ನಡಕ್ಕೆ ಅನುವಾದ ಮಾಡಿದವರು  ಲೋಹಿತ್ ಆಚಾರ್ ಮತ್ತು ಅಂಬಿಕಾ ಸುಬ್ರಮಣ್ಯ.  

Leave a Reply