ಲಕ್ಷ್ಮೀ ದೇವಿಯು ಬಲಿ ಮಹಾರಾಜನಿಗೆ ರಕ್ಷಾ ಬಂಧನ ಕಟ್ಟಿದ ಕಥೆ

ಇತ್ತ ಪತಿ ವೈಕುಂಠ ತೊರೆದು ಭೂಮಿಯಲ್ಲೇ ಉಳಿದುಬಿಟ್ಟಿದ್ದು ಲಕ್ಷ್ಮೀದೇವಿಯ ಚಿಂತೆಗೆ ಕಾರಣವಾಯಿತು. ಎಷ್ಟು ವಿಧದಲ್ಲಿ ಮನ ಒಲಿಸಿದರೂ ವಿಷ್ಣು ತಾನು ಬಲಿ ಮಹಾರಾಜನಿಗೆ ಮಾತು ಕೊಟ್ಟಿದ್ದೇನೆಂದೂ ಮರಳಿ ಬರಲಾಗುವುದಿಲ್ಲವೆಂದೂ ಹೇಳುತ್ತಿದ್ದ. ಕೊನೆಗೆ ಲಕ್ಷ್ಮಿ ಮಾಡಿದ ಉಪಾಯವೇನು ಗೊತ್ತೆ?

ಪುರಾಣಗಳಲ್ಲಿ ನೇರವಾಗಿ “ರಕ್ಷಾಬಂಧನ”ದ ಆಚರಣೆಯ ಉಲ್ಲೇಖವಿಲ್ಲದೆ ಇದ್ದರೂ ಮನೆಯ ಹೆಣ್ಣುಮಕ್ಕಳು (ಸಹೋದರಿಯರು ಮಾತ್ರವಲ್ಲ, ಹೆಂಡತಿ, ಪ್ರೇಯಸಿ, ತಾಯಿ, ಅಜ್ಜಿ ಕೂಡಾ) ಪೂಜಿಸಿದ ಮಂಗಳಕರ ದಾರವನ್ನು ಮನೆಯ ಗಂಡು ಮಕ್ಕಳಿಗೆ ಕಟ್ಟಿ ಶುಭ ಹಾರೈಸುವ ಕಥನಗಳಿವೆ. ಅವುಗಳಲ್ಲೊಂದು, ಲಕ್ಷ್ಮಿಯು ಬಲಿ ಮಹಾರಾಜನಿಗೆ ರಕ್ಷಾ ಬಂಧನ ಕಟ್ಟಿದ ಕಥೆ :

ಮಹಾರಾಜ ಬಲಿ, ಮಹಜಾನ್  ವಿಷ್ಣುಭಕ್ತ. ಭೂಲೋಕದಲ್ಲಿ ಆಗಿಹೋದ ಶ್ರೇಷ್ಠ ರಾಜರಲ್ಲಿ ಒಬ್ಬ. ತಪಸ್ಸಿನಿಂದ ವಿಷ್ಣುವನ್ನು ಒಲಿಸಿಕೊಂಡಿದ್ದ ಬಲಿ ಮಹಾರಾಜ, “ನೀನು ನನ್ನ ರಾಜ್ಯವನ್ನು ಅನವರತ ರಕ್ಷಿಸಬೇಕು; ಈ ಮೂಲಕ ಅತ್ಯುತ್ತಮ ರೀತಿಯಲ್ಲಿ ಪ್ರಜಾಪಾಲನೆ ನಡೆಸಲು ಅವಕಾಶ ಮಾಡಿಕೊಡಬೇಕು” ಎಂದು ಕೇಳಿಕೊಂಡಿದ್ದ. ತಪೋಫಲವನ್ನೂ ತನ್ನ ಪ್ರಜೆಗಳಿಗಾಗಿಯೇ ವಿನಿಯೋಗಿಸಿದ ಬಲಿ ಮಹಾರಾಜನ ನಿಸ್ವಾರ್ಥ ಗುಣಕ್ಕೆ ಮೆಚ್ಚಿ, ವಿಷ್ಣು ವೈಕುಂಠ ತೊರೆದು, ಬಲಿ ಮಹಾರಾಜನ ರಾಜ್ಯ ಕಾಯಲು ನಿಂತ.

ಇತ್ತ ಪತಿ ವೈಕುಂಠ ತೊರೆದು ಭೂಮಿಯಲ್ಲೇ ಉಳಿದುಬಿಟ್ಟಿದ್ದು ಲಕ್ಷ್ಮೀದೇವಿಯ ಚಿಂತೆಗೆ ಕಾರಣವಾಯಿತು. ಎಷ್ಟು ವಿಧದಲ್ಲಿ ಮನ ಒಲಿಸಿದರೂ ವಿಷ್ಣು ತಾನು ಬಲಿ ಮಹಾರಾಜನಿಗೆ ಮಾತು ಕೊಟ್ಟಿದ್ದೇನೆಂದೂ ಮರಳಿ ಬರಲಾಗುವುದಿಲ್ಲವೆಂದೂ ಹೇಳುತ್ತಿದ್ದ.

ಕೊನೆಗೆ ಲಕ್ಷ್ಮಿ ಒಂದು ಉಪಾಯ ಹೂಡಿದಳು. ಅದರಂತೆ, ಮನುಷ್ಯ ಸ್ತ್ರೀಯಂತೆ ವೇಷ ಮರೆಸಿಕೊಂಡು, ಬಲಿಯ ಅಂತಃಪುರದಲ್ಲಿ ಜಾಗ ಪಡೆದಳು. ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತಾ ಬಲಿಯ ಗಮನ ಸೆಳೆದಳು.

ಹೀಗಿರುತ್ತ, ಶ್ರಾವಣ ಹುಣ್ಣಿಮೆಯ ದಿನ ಬಂತು. ಮನುಷ್ಯ ರೂಪದಲ್ಲಿದ್ದ ಲಕ್ಷ್ಮಿ, ಅರಮನೆಯಿಂದ ಹೊರಗೆ ಹೊರಟಿದ್ದ ಬಲಿಯನ್ನು ತಡೆದು, ತಾನು ಪೂಜಿಸಿದ್ದ ಮಂಗಳ ದಾರವನ್ನು ಅವನ ಮುಂಗೈಗೆ ಕಟ್ಟಿದಳು. ಈ ಶುಭ ಸೂಚಕ ಶಕುನದಂದ ಸಂಪ್ರೀತನಾದ ಬಲಿ ಮಹಾರಾಜನು, “ಸಹೋದರಿ, ನಿನ್ನ ನಡೆಯಿಂದ ನನಗೆ ಸಂತೋಷವಾಗಿದೆ, ನಿನಗೇನು ಬೇಕು ಕೇಳು” ಅಂದನು.

ತಡಮಾಡದೆ ಲಕ್ಷ್ಮಿ ತನ್ನ ನಿಜರೂಪದಲ್ಲಿ ಕಾಣಿಸಿಕೊಂಡು, “ದಯವಿಟ್ಟು ನಿನ್ನ ಭಾವನನ್ನು ಮರಳಿ ವೈಕುಂಠಕ್ಕೆ ಕಳಿಸಿಕೊಡು” ಅಂದಳು!

ಕೊನೆಗೆ ತ್ರಿಮೂರ್ತಿಗಳು ತಲಾ ನಾಲ್ಕು ತಿಂಗಳ ಕಾಲ ಬಲಿಯ ಸಾಮ್ರಾಜ್ಯ ಕಾಯುವುದು ಅನ್ನುವ ಕರಾರಿನ ಮೇಲೆ ವಿಷ್ಣು, ಲಕ್ಷ್ಮಿಯೊಡನೆ ವೈಕುಂಠಕ್ಕೆ ಮರಳಿದನು.

ಅಲ್ಲಿಂದ ಮುಂದೆ, ಪ್ರತಿ ಶ್ರಾವಣ ಹುಣ್ಣಿಮೆಯಂದು ಅಕ್ಕ ತಂಗಿಯರು ಅಣ್ಣ ತಮ್ಮಂದಿರಿಗೆ ರಕ್ಷಾಬಂಧನ ಕಟ್ಟುವ ರೂಢಿ ಚಾಲ್ತಿಗೆ ಬಂತು.

Leave a Reply