ಕೃಷ್ಣನೆಂಬ ಕೊಳಲು, ಪ್ರೇಮವೆಂಬ ಉಸಿರು….

ಇಡಿಯ ಭಾಗವತದಲ್ಲಿ ಕೃಷ್ಣ ರಾಧೆಯನ್ನು ನೆನೆದು ಕಣ್ಣೀರಿಡುವ ವಿವರವಿಲ್ಲ. ಆದರೆ, ಅವನ ಕಥನ ಓದುವ ಸಹೃದಯರು ತಾವೇ ಕೃಷ್ಣನಾಗಿ, ರಾಧೆಯನ್ನು ಭಾವಿಸಿ, ಅವಳಿಗಾಗಿ ಮಿಡಿಯುತ್ತಾರೆ. ಹೀಗೆ ರಾಧಾಪ್ರೇಮದಿಂದ ಕೃಷ್ಣ, ನಮ್ಮೆದೆಗಳಲ್ಲಿ ಮೊಳೆಯುತ್ತಾನೆ ~ ಚೇತನಾ ತೀರ್ಥಹಳ್ಳಿ

ಯಾವ ಪ್ರೇಮ ವಿರಹದಲ್ಲಿ ದುಃಖ ತರುವುದಿಲ್ಲವೋ ಅದು ಅತ್ಯುನ್ನತವಾದದ್ದು. ಯಾವ ಪ್ರೇಮ, ಪ್ರೇಮಿಯನ್ನು ಹೊಂದುವ ಸ್ವಾರ್ಥವನ್ನಾಗಲೀ ಮೋಹವನ್ನಾಗಲೀ ಹುಟ್ಟಿಸುವುದಿಲ್ಲವೋ ಅದು ಅತ್ಯುತ್ಕೃಷ್ಟ ಪ್ರೇಮ. ಇಂಥ ಪ್ರೇಮಕ್ಕೆ ಪರಮೋನ್ನತ ಮಾದರಿ – ರಾಧಾ ಮಾಧವ ಜೋಡಿ.

ಕೃಷ್ಣನಿಗೆ ಇಂಥದೊಂದು ಪ್ರೇಮಪಾಠವನ್ನು ಕಲಿಸಿದವಳು ರಾಧೆ. ಅಕ್ರೂರ ಮಥುರೆಗೆ ಕರೆದೊಯ್ಯಲು ಬಂದಾಗ, ಗೆಳತಿಯರನ್ನು ಬೀಳ್ಕೊಡುವ ಕೃಷ್ಣ, ತನ್ನ ಕೊಳಲನ್ನು ಒಡೆಯುತ್ತಾನೆ. ರಾಧೆಯ ಹೃದಯವನ್ನು ಒಡೆದು ಹೋಗುತ್ತಿದ್ದೇನೆಂಬ ದುಃಖ ಅವನಿಗೆ ಆ ಕ್ಷಣಕ್ಕೆ. ಕೊಳಲೇ ಅವಳ ಹೃದಯವೆಂದು ಅವನ ಭಾವನೆ.

ವಾಸ್ತವದಲ್ಲಿ ಕೊಳಲಾಗಿದ್ದವನು ಕೃಷ್ಣ ! ಅದರಿಂದ ನಾದ ಹೊಮ್ಮಿಸುವ ಉಸಿರಾಗಿದ್ದವಳು ರಾಧೆ !! ಹಾಗೆಂದೇ ರಾಧೆ ದುಃಖಿಸಲಿಲ್ಲ. ಮೌನವಾಗಿದ್ದಳು. ಅಗಲಿಕೆಯ ಅನುಭೂತಿ ಪ್ರೇಮವನ್ನು ಸಂಪೂರ್ಣವಾಗಿ ಅನುಭವಿಸಲು ಅಗತ್ಯವಿತ್ತು. ಕೃಷ್ಣನನ್ನು ಬೀಳ್ಕೊಟ್ಟಳು. ಮತ್ತೆ ಭೇಟಿಗೆ ಬಾರೆಂದು ಜೀವಮಾನದಲ್ಲಿ ಒಮ್ಮೆ ಕೂಡಾ ಸಂದೇಶ ಕಳುಹಿಸಲಿಲ್ಲ.

ಮುಂದೊಮ್ಮೆ ಕೃಷ್ಣನೇ ಉದ್ಧವನನ್ನು ರಾಧೆ ಮತ್ತು ಗೋಪಿಕೆಯರನ್ನು ಮಾತಾಡಿಸಿ ಬಾರೆಂದು ಕಳಿಸುತ್ತಾನೆ ಹೊರತು, ರಾಧೆ ಕೃಷ್ಣನನ್ನು ನೆನಪಿಸಿಕೊಳ್ಳಲೇ ಇಲ್ಲ! ಏಕೆಂದರೆ ರಾಧೆ ಕೃಷ್ಣನನ್ನು ಮರೆತೇ ಇರಲಿಲ್ಲ!! ಅವನನ್ನು ಪ್ರತಿ ಕ್ಷಣ ಜೀವಿಸಿದ್ದಳು. ತನ್ನ ನಿತ್ಯದ ಬದುಕನ್ನು ಸಹಜವಾಗಿ ಬಾಳುತ್ತಲೇ ಕೃಷ್ಣನನ್ನು ಜೀವಿಸಿದ್ದಳು. ಪ್ರೇಮವೆಂದರೆ ಅದೇ ತಾನೆ, ಪ್ರೇಮಿಯನ್ನೆ ಬದುಕೋದು!?

ವಾಸ್ತವದಲ್ಲಿ, ಕೃಷ್ಣಕಥೆಯನ್ನು ಹೇಳುವ ಭಾಗವತ ರಾಧೆಯ ಉಲ್ಲೇಖವನ್ನೇ ಮಾಡುವುದಿಲ್ಲ. ರಾಧಾಪ್ರೇಮದ ಭಾವವನ್ನು ಹೃದಯದಲ್ಲಿ ಧರಿಸಿದ್ದ ಶುಕ ಮುನಿ, ವ್ಯಾಸರಿಂದ ಕೇಳಿ ತಿಳಿದ ಭಾಗವತವನ್ನು ಪರೀಕ್ಷಿತನಿಗೆ ವಾಚಿಸುವಾಗ ರಾಧೆಯ ಪ್ರಸ್ತಾಪ ಬಂದಾಗೆಲ್ಲ ಆನಂದೋನ್ಮತ್ತನಾಗಿ ಮೂರ್ಛೆ ಹೋಗುತ್ತಿದ್ದನಂತೆ. ಮೊದಲೇ ಶಾಪ ತಿಂದು ಸಾಯಲಿದ್ದ ಪರೀಕ್ಷಿತನ ಬಳಿ ಸಮಯವಿರಲಿಲ್ಲ! ಶುಕಮುನಿ ಮೇಲಿಂದ ಮೇಲೆ ಮೂರ್ಛೆ ಹೋದರೇನು ಗತಿ!? ನಿಗದಿತ ಅವಧಿಯಲ್ಲಿ ಭಾಗವತ ಶ್ರವಣ ಮುಗಿಯುವುದು ಹೇಗೆ? ಕೊನೆಗೆ ಸಮಾಲೋಚನೆ ನಡೆಸಿ. ರಾಧೆಯ ಹೆಸರನ್ನೇ ಎತ್ತದೆ ಕೃಷ್ಣಕಥೆಯನ್ನು ಹೇಳುವುದೆಂದು ತೀರ್ಮಾನಿಸಿದರಂತೆ. ಆದರೂ ಒಂದು ಕಡೆ “ಅನಯಾರಾಧಿತೋ ನೂನಂ” ಅನ್ನುವ ಶ್ಲೋಕದಲ್ಲಿ ರಾಧೆಯ ನೇರ ಉಲ್ಲೇಖ ಬರುತ್ತದೆ. ಅನಯಾರಾಧಿತಾ – ಯಾರು ನಿರಂತರ (ಕೃಷ್ಣನ) ಆರಾಧನೆಯಲ್ಲಿ ತೊಡಗಿದ್ದಾಳೋ ಅವಳು – ರಾಧೆ!

ರಾಧೆಯ ಪ್ರೇಮವನ್ನು ಅರಿತವರ ಪಾಲಿಗೆ, ಅವಳು ಸಹಸ್ರಾರ ದಳ ಪದ್ಮವನ್ನು ಅರಳಿಸುವ ತಂಗಾಳಿ. ಮೋಕ್ಷದ ಹಾದಿ ತೋರುವ ಬೆಳಕಿಂಡಿ.

ರಾಧಾಪ್ರೇಮದ ಬಗ್ಗೆ ಇನ್ನೊಂದು ಸುಂದರವಾದ ಕಥೆಯಿದೆ. ಬಂಗಾಳದ ಭಕ್ತಿಪಂಥದ ಅಧ್ವರ್ಯುವಾಗಿ ಚೈತನ್ಯ ಮಹಾಪ್ರಭು ಜನಿಸಿದರಷ್ಟೆ? ಅವರನ್ನು ಭಕ್ತರು ‘ಕೃಷ್ಣಚೈತನ್ಯ’ ಎಂದು ಕರೆಯುತ್ತಾ, ಕೃಷ್ಣನ ಅವತಾರವೆಂದೇ ಭಾವಿಸುತ್ತಾರೆ. ಈ ಅವತಾರ ಕೃಷ್ಣನ ಪ್ರೇಮಾವತಾರ ಎನ್ನುತ್ತಾರವರು. ಅವರ ನಂಬಿಕೆಯ ಪ್ರಕಾರ; ರಾಧೆಯ ಪ್ರೇಮವನ್ನು ಅನುಭವಿಸಬೇಕು ಎಂದು ಕೃಷ್ಣನಿಗೆ ಆಸೆಯಾಯಿತು. ಪ್ರೇಮಿಸುವವನೂ ಪ್ರೀತಿಸುವವನೂ ಆಗಿ ಒಂದೇ ದೇಹದಲ್ಲಿ ಜನ್ಮತಳೆಯುವ ಆಲೋಚನೆ ಮೂಡಿತು. ಹಾಗೆಂದೇ ಕೃಷ್ಣಾವತಾರಿ ಚೈತನ್ಯರಲ್ಲಿ ರಾಧಾಭಾವದ ಆವಾಹನೆ ಮಾಡಿಕೊಂಡು ಅವತಾರ ಜನನವಾಯಿತು!! ಹಾಗೆಂದೇ ಚೈತನ್ಯರ ಕಥನ ಪ್ರೇಮಕಥನ. “ಪ್ರೇಮಾ ಪುಮಾರ್ಥೋ ಮಹಾನ್” – “ಪ್ರೇಮವೇ ಪರಮ ಪುರುಷಾರ್ಥ” ಎಂದು ಸಾರಿದರು ಚೈತನ್ಯರು.
ಗೀತಾಚಾರ್ಯನಾದರೇನು? ಪೂರ್ಣಾವತಾರಿಯಾದರೇನು? ರಾಧಾ – ಗೋಪಿಯರ ಪ್ರೇಮವಿಲ್ಲದೆ ಕೃಷ್ಣ ಪರಿಪೂರ್ಣನಲ್ಲ! ಗೋಪಿಯರೊಡನೆ ಅವನ ರಾಸಕ್ಕೆ, ರಣಾಂಗಣದಲ್ಲಿ ಅವನು ನೀಡಿದ ಬೋಧನೆಯಷ್ಟೇ ಮಹತ್ವ. ರಾಸ, ಕೃಷ್ಣಾವತಾರದ ಅತ್ಯುತ್ಕೃಷ್ಟ ಲೀಲೆ. ಜೀವಾತ್ಮವು ಹಲವು ದೇಹಗಳ ಕನ್ನಡಿಯಲ್ಲಿ ಪ್ರತಿಫಲಿಸಿ ಹಲವಾಗಿ, ಪರಮಾತ್ಮನೊಡನೆ ಆನಂದ ಹೊಂದುವ ಬ್ರಹ್ಮಾನಂದ ನೃತ್ಯವದು!

ಆದ್ದರಿಂದಲೇ, ಪ್ರೇಮಿಸಿ! ರಾಧೆಯಂತೆ ಸಂಪೂರ್ಣ ಪ್ರಜ್ಞೆಯಲ್ಲಿ ಪ್ರೇಮಿಸಿ.
ನಿಮ್ಮ ಪ್ರೇಮ ಸ್ವಯಂ ಪರಮಾತ್ಮನನ್ನೂ ನಾದಮಯಗೊಳಿಸುವ ಉಸಿರಾಗಿದೆ.

2 Comments

  1. ಚೇತನಾ ಅವರೇ,
    ಕೆಲವೇ ಮಾತುಗಳಲ್ಲಿ ರಾಧಾಕೃಷ್ಣರ ನಿಷ್ಕಲ್ಮಶ ಪ್ರೇಮವನ್ನು ತುಂಬಾ ಅರ್ಥಪೂರ್ಣವಾಗಿ ಹೇಳಿದ್ದೀರಿ ಧನ್ಯವಾದಗಳು.
    ಆದ್ರೂ ರಾಧಾಕೃಷ್ಣರ ಬಗ್ಗೆ ಯಾವಾಗಲಾದರೂ ನೀವು ಇನ್ನೂ ವಿವರವಾಗಿ ಬರೆದರೆ ಅದರ ಸೊಗಸೇ ಬೇರೆ

  2. ಚೇತನಾ ಅವರೇ,
    ಕೆಲವೇ ಮಾತುಗಳಲ್ಲಿ ರಾಧಾಕೃಷ್ಣರ ನಿಷ್ಕಲ್ಮಶ ಪ್ರೇಮವನ್ನು ತುಂಬಾ ಅರ್ಥಪೂರ್ಣವಾಗಿ ಹೇಳಿದ್ದೀರಿ ಧನ್ಯವಾದಗಳು.
    ಆದ್ರೂ ರಾಧಾಕೃಷ್ಣರ ಬಗ್ಗೆ ಯಾವಾಗಲಾದರೂ ನೀವು ಇನ್ನೂ ವಿವರವಾಗಿ ಬರೆದರೆ ಅದರ ಸೊಗಸೇ ಬೇರೆ

Leave a Reply