‘ನಿರ್ವಾಣ ಅತ್ಯಂತ ಸಾಧಾರಣ ಸಂಗತಿ’: Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6.7

ನಮ್ಮ ಎಲ್ಲ ಗುರಿಗಳುನಮ್ಮನ್ನು ಕಟ್ಟಿಹಾಕಿರುವ ಸಂಕೋಲೆಗಳು. ಈ ಸಂಕೋಲೆಯ ಕಾರಣವಾಗಿಯೇ ನಾವು ಸದಾ ದುಃಖಿಗಳು.
ಈ ದುಗುಡದಿಂದ ಮುಕ್ತರಾಗುವ ಬಗೆ ಏನು?
ತುಂಬ ಸರಳ, ಗುರಿಗಳನ್ನು ನಮ್ಮ ದಾರಿಯಿಂದ ತೆಗೆದು ಹಾಕುವುದು ~ ಸೊಸಾನ್ | ಓಶೋ ವ್ಯಾಖ್ಯಾನ; ಭಾವಾನುವಾದ : ಚಿದಂಬರ ನರೇಂದ್ರ

ಅಧ್ಯಾಯ 6.7| Strive to no goals

ನೀವು ಒಂದು ನಿರ್ದಿಷ್ಟ ದಾರಿಯಲ್ಲಿ ಸಾಗುವುದು
ನಿಶ್ಚಿತವಾದ ಮೇಲೂ
ಇಂದ್ರಿಯಗಳ ಮತ್ತು ಹೊಳಹುಗಳ ಜಗತ್ತನ್ನು
ಯಾವ ಕಾರಣಕ್ಕೂ ನಿರಾಕರಿಸಬೇಡಿ.

ಇಂದ್ರಿಯಗಳ, ಹೊಳಹುಗಳ ಜಗತ್ತನ್ನು ಒಪ್ಪಿಕೊಳ್ಳುವುದು
ನಿಜದ ನಿರ್ವಾಣವನ್ನು ಸಾಧಿಸಿಕೊಂಡಂತೆ.

ನಿಮ್ಮನ್ನು ನೀವು
ಯಾವ ತಕರಾರುಗಳೂ ಇಲ್ಲದೆಯೆ
ಒಪ್ಪಿಕೊಂಡಾಗಲೇ
ನೀವು ನಿರ್ವಾಣದ ಹಾದಿಯಲ್ಲಿದ್ದೀರಿ.
ದೇಹದಲ್ಲಿ ಶಕ್ತಿಯ ಸಂಚಾರ ಸಾಧ್ಯವಾದಾಗ
ಅಲ್ಲಲ್ಲಿ ಅಡಗಿಕೊಂಡಿರುವ
ಸೂಕ್ಷ್ಮ ಶಕ್ತಿ ಕೇಂದ್ರಗಳು ಕ್ರಿಯಾಶೀಲವಾಗುತ್ತವೆ,
ಆಗ ನೀವು ಹಲವು ಹೊಸ ಅನುಭವಗಳಿಗೆ
ತೆರೆದುಕೊಳ್ಳುತ್ತೀರಿ,
ಇದ್ಯಾವುದು ತಪ್ಪಲ್ಲ, ಆನಂದಿಸಿ ಆದರೆ
ಇದು ಜ್ಞಾನೋದಯ/ನಿರ್ವಾಣ ಎಂದು
ಸಂಭ್ರಮಿಸದಿರಿ ಮಾತ್ರ.

ನಿರ್ವಾಣ ಸಾಧ್ಯವಾಗುವುದು
ನಿಮ್ಮ ತಕರಾರುಗಳೆಲ್ಲ ಮುಗಿದ ಮೇಲೆ,
ನಿಮ್ಮ ಹುಡುಕಾಟ ನಿಂತಾಗ,
ನೀವು ಯಾವುದನ್ನೂ ಬಯಸದಿರುವಾಗ,
ತಿರಸ್ಕರಿಸದಿರುವಾಗ,
ತೀರ್ಮಾನಕ್ಕೆ ಗುರಿಪಡಿಸದಿರುವಾಗ.
ನೀವು ಸುಮ್ಮನೇ ಅಸ್ತಿತ್ವದಲ್ಲಿರುವಿರಿ
ಸಂಪೂರ್ಣ ಒಪ್ಪಿಗೆಯೊಂದಿಗೆ.
ಈ ಕ್ಷಣದಲ್ಲಿ ನಿರ್ವಾಣ ಸ್ಥಾಪಿತಗೊಂಡಿದೆ.

ನಿರ್ವಾಣ ಅತ್ಯಂತ ಸಾಧಾರಣ ಸಂಗತಿ.
ಅಂಥ ಯಾವ ಅಸಾಧಾರಣತೆಯೂ ನಿರ್ವಾಣಕ್ಕಿಲ್ಲ.
ಅಸಾಧಾರಣ ಏನಾದರೂ ಇದ್ದರೆ
ಅದು ಅಹಂ ನ ಹುಡುಕಾಟ.
ನಿರ್ವಾಣಕ್ಕೆ ಯಾವ ಮಹಾ ಸಾಧನೆ ಬೇಕಿಲ್ಲ.
ಯಾವ ಬಯಕೆಗಳಿಲ್ಲಗಿರುವುದು,
ಯಾವುದಕ್ಕೂ ಅಂಟಿಕೊಳ್ಳದಿರುವುದು,
ಕೇವಲ ನೀವಾಗಿರುವುದು,
ಯಾವ ಕಾರಣವೂ ಇಲ್ಲದೆ ಖುಶಿಯಾಗಿರುವುದು,
ಇಷ್ಟು ಸಾಕು.

ಸಂತೋಷ ಮತ್ತು ಆನಂದಗಳ ನಡುವಿನ
ವ್ಯತ್ಯಾಸವನ್ನು ಗಮನಿಸಿ.
ಸಂತೋಷ, ನಿಮಗೆ ಬೇರೆಯವರಿಂದ ಸಾಧ್ಯವಾಗಿರುವುದು,
ನಿಮ್ಮ ಅತ್ಯಂತ ಪೀತಿಯ ಗೆಳೆಯ
ನಿಮ್ಮನ್ನ ಭೇಟಿ ಮಾಡಿದಾಗ ನಿಮಗೆ ಸಂತೋಷವಾಗುತ್ತದೆ,
ಆದರೆ ಗೆಳೆಯನೊಡನೆ ಎಷ್ಟು ಹೊತ್ತು ಸಂತೋಷವಾಗಿರಬಲ್ಲಿರಿ?
ಸ್ವಲ್ಪ ಕಾಲ?
ಆಮೇಲೆ ಗೆಳೆಯ ಬಿಟ್ಟು ಹೋದಾಗ
ನೀವು ನಿರಾಳವಾಗುವಿರಿ.
ಕಾರಣದ ಜೊತೆ ಸಂತೋಷವೂ ಮಾಯ.
ಆದರೆ ‘ಆನಂದ’ ಹಾಗಲ್ಲ
ಇದು ವಿನಾಕಾರಣ ಸಂಭವಿಸುವಂಥದು.

ಗಮನಿಸಿ,
ನೀವು ವಿಷಾದದಲ್ಲಿರುವಿರಿ
ಯಾಕೆ? ಏನು ಕಾರಣ ?
ನೀವು ಯೋಚನೆಯನ್ನೂ ಮಾಡುವುದಿಲ್ಲ.
ಆದರೆ ನಿಮಗೆ ಸಂತೋಷವಾದರೆ ಕಾರಣ ಹುಡುಕುತ್ತೀರಿ,
ವಿಷಾದ ನಿಮ್ಮ ಸಹಜ ಸ್ಥಿತಿಯಾಗಿದೆ,
ಸಂತೋಷ ಎರವಲು ಪಡೆದದ್ದು.

ಹೇಗೆ ವಿಷಾದ ನಿಮ್ಮ ಸಹಜ ಸ್ಥಿತಿಯಾಗಿದೆಯೋ
ಹಾಗೆಯೇ ನಿರ್ವಾಣ ತಲುಪಿದ ಮನುಷ್ಯನಿಗೆ ಆನಂದ.
ಮತ್ತು ಇದು ಆನಂದ ಎಂದು ಕೂಡ ಅವನಿಗೆ ಗೊತ್ತಿಲ್ಲ
ಏಕೆಂದರೆ ವಿಷಾದ ಕೂಡ ಅವನಿಗೆ ಅಪರಿಚಿತ.
ಕೆಲವೊಮ್ಮೆ ಹಾಕಿಕೊಂಡ ಚಪ್ಪಲಿ ಚುಚ್ಚತೊಡಗಿದಾಗ,
ಅದು ಅವನಿಗೆ ಕೇವಲ ದೈಹಿಕ ನೋವು,
ದುಃಖ, ವಿಷಾದವಲ್ಲ,
ಆಗ ಆತ ಪಾದ ಸರಿಯಾಗಿ
ಚಪ್ಪಲಿಯೊಳಗೆ ಸೇರಿಸುವ ಪ್ರಯತ್ನ ಮಾಡುತ್ತಾನೆ
ಅಥವಾ ಚಪ್ಪಲಿ ಸರಿ ಮಾಡುತ್ತಾನೆ
ಸಾಧ್ಯವಾಗದಿದ್ದರೆ, ಚಪ್ಪಲಿ ಕಳಚಿಟ್ಟು
ಬರಿಗಾಲಲ್ಲಿ ಹೊರಟು ಬಿಡುತ್ತಾನೆ.

ನಿರ್ವಾಣ ಸಾಧಿಸಿದ ಮನುಷ್ಯನಿಗೂ
ನೋವು, ಇರುಸುಮುರುಸು ಸಾಮಾನ್ಯ
ಆದರೆ ಇವು ಅವನನ್ನು
ದುಃಖ, ವಿಷಾದ ಕ್ಕೆ ದೂಡುವುದಿಲ್ಲ.
ಅವನಿಗೆ ಆನಂದ ವಿನಾಕಾರಣವಾಗಿರುವಾಗ
ದುಃಖ ಸಕಾರಣವಾಗಿರುವುದು ಹೇಗೆ ಸಾಧ್ಯ?

ಸಂತೋಷಕ್ಕೆ ಕಾರಣವೇ
ಒಳಗಿನ ಒತ್ತಡದ ಬಿಡುಗಡೆ.
ಯಾಕೆ ಒಂದು ಜೋಕ್ ನಿಮ್ಮ ಖುಶಿಗೆ ಕಾರಣವಾಗುತ್ತದೆ?
ಯಾವಾಗ ಪ್ರೇಮ, ಸೆಕ್ಸ್ ನಿಮ್ಮನ್ನ
ಸಂತೋಷದ ಉತ್ತುಂಗಕ್ಕೆ ಕರೆದೊಯ್ಯುತ್ತವೆ?
ನಿಮ್ಮೊಳಗೆ ಒತ್ತಡ ಉಂಟುಮಾಡದ
ಪ್ರೇಮ, ಸೆಕ್ಸ್ ಬಗ್ಗೆ ನಿಮಗೆ ಯಾವ ರೀತಿಯ
ಉತ್ಸುಕತೆ ಸಾಧ್ಯ?
ಇಲ್ಲಿ ಮುಖ್ಯ ಸಾಧನವೇ. ಒಳಗಿನ ಒತ್ತಡ.

ಒಮ್ಮೆ ಕೇಳಿದ ಜೋಕ್ ನಮ್ಮೊಳಗೆ
ಇನ್ನೊಮ್ಮೆ ಅದೇ ಸಂತೋಷ ಹುಟ್ಟಿಸಲು ಸಾಧ್ಯವೆ?
ಪ್ರೇಮ, ಸೆಕ್ಸ್ ರೂಟಿನ್ ಆದಾಗ
ಅದೇ ತಾಜಾತನ ಸಾಧ್ಯವೆ?
ಮೊದಲ ಪ್ರೇಮ, ಮೊದಲ ಕಿಸ್
ನಮ್ಮನ್ನ ಇನ್ನೂ ಪುಳಕಿತವಾಗಿಸುವ
ಸಂಗತಿಯ ಹಿಂದೆ ಯಾವ ಕಾರಣವಿದೆ?

ವಿಷಯ ಅದೇ ಇರುವಾಗಲೂ
ಕೆಟ್ಟದಾಗಿ ಅಥವಾ ಸಪ್ಪೆಯಾಗಿ ಹೇಳಿದ ಜೋಕ್,
ನಮಗೆ ಅದೇ ಸಂತೋಷ ತರಬಲ್ಲದೆ?
ಹಾಗೆಯೇ ಭಾವನೆಗಳು ಮಧುರವಾಗಿರುವಾಗಲೂ
ಸಪ್ಪೆಯಾಗಿ ಅಥವಾ ಯಾವ ಶೃಂಗಾರವೂ ಇಲ್ಲದೆ ಕೈಗೊಂಡ
ಪ್ರೇಮ, ಸೆಕ್ಸ್ ನಮಗೆ ಅದೇ ಉಲ್ಲಾಸವನ್ನು ನೀಡಬಲ್ಲದೆ?

ನಮಗೆ ಸಂತೋಷ ಕೊಡುವ ಎಲ್ಲ ಸಂಗತಿಗಳು
ಒಂದು ಕೌತುಕದ ನಿರ್ಮಿತಿಯನ್ನೂ (build-up) ಮತ್ತು
ಒಂದು ಅನಿರೀಕ್ಷಿತ ಪರಾಕಾಷ್ಠತೆ (climax) ಬಯಸುತ್ತವೆ.
ಕೂಡಿಟ್ಟ ಒತ್ತಡ ಹಠಾತ್ ಆಗಿ ಬಿಡುಗಡೆ ಆದಾಗ
ಉಂಟಾಗುವ ಭಾವನೆ ಈ ಸಂತೋಷ.

ಆದರೆ ಆನಂದ ಹಾಗಲ್ಲ.
ಯಾವ ಒತ್ತಡ, ಯಾವ ಬಿಡುಗಡೆ
ಈ ಆನಂದವನ್ನು ನಿರ್ದೇಶಿಸಲಾರವು.
ಇದು ತಾನೇ ಇರುವಂಥದು.

ಸೊಸಾನ್ ಹೇಳುತ್ತಾನೆ…..

ಸಂಪೂರ್ಣ ಸ್ವೀಕಾರವೇ ನಿಜದ ಜ್ಞಾನೋದಯ.
ಜ್ಞಾನಿ, ಗುರಿಯ ಆಮಿಷದಿಂದ ದೂರ ಆದರೆ
ದಡ್ಡ ಮಾತ್ರ ಗುರಿಯ ಸಂಕೋಲೆಯಲ್ಲಿ
ಸದಾ ಕೈದಿ.

ನಮ್ಮ ಎಲ್ಲ ಗುರಿಗಳು
ನಮ್ಮನ್ನು ಕಟ್ಟಿಹಾಕಿರುವ ಸಂಕೋಲೆಗಳು.
ಈ ಸಂಕೋಲೆಯ ಕಾರಣವಾಗಿಯೇ
ನಾವು ಸದಾ ದುಃಖಿಗಳು.
ಈ ದುಗುಡದಿಂದ ಮುಕ್ತರಾಗುವ ಬಗೆ ಏನು?
ತುಂಬ ಸರಳ,
ಗುರಿಗಳನ್ನು ನಮ್ಮ ದಾರಿಯಿಂದ ತೆಗೆದು ಹಾಕುವುದು.

ಧರ್ಮ, ಸತ್ಯ, ನ್ಯಾಯ ಒಂದು,
ಆದರೆ
ತಿಳಿಗೇಡಿಗಳ ಯಾವುದೋ ಒಂದಕ್ಕೆ
ಜೋತು ಬೀಳುವ ಸ್ವಭಾವದಿಂದಾಗಿ
ಎಲ್ಲ ಬೇರೆ ಬೇರೆ.

ತಾರತಮ್ಯ ಸ್ವಭಾವದ ಬುದ್ಧಿ ಮನಸ್ಸ ನ್ನ ಬಳಸಿ
ಬುದ್ಧಿ ಮನಸ್ಸನ್ನ ಶೋಧ ಮಾಡುವುದು
ಮೂಲಭೂತ ತಪ್ಪು.

ನಿರ್ವಾಣ ಅಥವಾ ಥಾಟ್ ಗಳಿಲ್ಲದ ಸ್ಥಿತಿಯನ್ನ
ನಮ್ಮ ಗುರಿಯಾಗಿ ಸೃಷ್ಟಿ ಮಾಡುವುದು ಯಾರು?
ಗುರಿ ಮುಟ್ಟಲು ಹಾದಿಯನ್ನು ಯಾರು ಸಲಹೆ ಮಾಡುತ್ತಾರೆ?
ಎರಡೂ ಕೆಲಸಗಳು ಬುದ್ಧಿ ಮನಸ್ಸಿನದೆ.
ಮೈಂಡ್ ನ ಸಹಾಯದಿಂದ
ನೋ ಮೈಂಡ್ ಸ್ಥಿತಿ ಮುಟ್ಟುವ
ಪೂರ್ಣ ಪ್ರಕ್ರಿಯೆ ಯೇ ಹಾಸ್ಯಾಸ್ಪದ.

ಬುದ್ಧಿ ಮನಸ್ಸಿನ ಸ್ವಭಾವವೇ ತಾರತಮ್ಯದ್ದು
ಅದು ಯಾವುದನ್ನೂ ಪೂರ್ಣವಾಗಿ ಸ್ವೀಕರಿಸುವುದಿಲ್ಲ.
ಎಲ್ಲವನ್ನೂ ಇದ್ದ ಹಾಗೆಯೇ ಒಪ್ಪಿಕೊಂಡು ಬಿಟ್ಟರೆ
ಆಮೇಲೆ ಯಾವ ಬಿಕ್ಕಟ್ಟೂ ಇಲ್ಲ,
ಯಾವ ದ್ವಂದ್ವಗಳೂ ಇಲ್ಲ,
ಯಾವ ಸಂಘರ್ಷವೂ ಇಲ್ಲ
ಹೀಗಾದಾಗ ಬುದ್ಧಿ ಮವಸ್ಸಿನ ಮಹತ್ವ ಏನು?
ಅದರ ಅಹಂ ಮತ್ತು ಅಸ್ತಿತ್ವದ ದ ಗತಿ ಏನು?
ಆದ್ದರಿಂದಲೇ ಬುದ್ಧಿ ಮನಸ್ಸು
ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ
ಎಲ್ಲವನ್ನೂ ನಿರಾಕರಿಸುತ್ತಲೇ ಹೋಗುತ್ತದೆ.
ಈ ಕಾರಣಕ್ಕಾಗಿಯೇ ಸದಾ ಒತ್ತಡದಲ್ಲಿ
ತೊಳಲಾಡುತ್ತದೆ.

ಇರುವುದನ್ನ ಇದ್ದಹಾಗೆ ಸ್ವೀಕರಿಸಿದಾಗಲೇ
ನೀವು ಇಡೀ ಜಗತ್ತು,
ಯಾವ ಬದಲಾವಣೆಗೂ ಪ್ರಯತ್ನಿಸಬೇಡಿ
ಇದೇ ನಿರ್ವಾಣ.
ಇಂಥ ಸಾಚಾತನದಲ್ಲಿ
ಏನೂ ಸಂಭವಿಸಿದರೂ ಸ್ವೀಕರಿಸಲು ನೀವು ಸಿದ್ಧರು,
ಬದುಕು ಎಲ್ಲಿಗೆ ಕರೆದರೂ ಹೋಗಲು ನೀವು ಸಿದ್ಧರು.
ಆಗ ನೀವು ಈಜುವುದಿಲ್ಲ, ತೇಲುತ್ತೀರಿ.
ಧಾರೆಯ ಜೊತೆಯಲ್ಲ, ನೀವೇ ಧಾರೆಯಾಗಿ.
ಇದು ನಿರ್ವಾಣ.

Leave a Reply