‘ಅಸತ್ಯ ಇರುವುದು ಹೇಗೆ ಸಾಧ್ಯ’: Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 7.1

ನಿಮ್ಮ ಕಣ್ಣುಗಳು ಸ್ಪಷ್ಟವಾಗಿ, ಯಾವ ಅಡತಡೆ ಇಲ್ಲದೆ ನೋಡುತ್ತಿರುವಾಗ, ನಿಮ್ಮ ಬುದ್ಧಿ – ಮನಸ್ಸು ಕನಸಿನಿಂದ ಹೊರತಾಗಿರುವಾಗ, ಸಾಧ್ಯವಾಗೋದು ಒಂದೇ ಅದೇ ಸತ್ಯ. ಆದರೆ ನೀವು ಕನಸಿನಲ್ಲಿ ಮುಳುಗಿರುವಾಗ ಬಾಕಿ ಎರಡು ವರ್ಗೀಕರಣಗಳೂ ಅಸ್ತಿತ್ವದಲ್ಲಿ ಬರುತ್ತವೆ ~ ಸೊಸಾನ್ | ಓಶೋ ವ್ಯಾಖ್ಯಾನ; ಭಾವಾನುವಾದ : ಚಿದಂಬರ ನರೇಂದ್ರ

ಅಧ್ಯಾಯ 7.1| All dreams must cease.

ಮನಸ್ಸಿನ (mind) ಒಂದೇ ಒಂದು
ಸಾಮರ್ಥ್ಯವೆಂದರೆ ಕನಸುವುದು.
ಮತ್ತು ಈ ಕನಸುವುದು,
ನೀವು ಎಚ್ಚರವಾಗಿರುವಾಗಲೂ
ಮುಂದುವರೆದೇ ಇರುತ್ತದೆ.
ಈ ಕಾರಣವಾಗಿಯೇ ಸೊಸಾನ್ ಅಥವಾ ಜೀಸಸ್
ನೀವು ಎಚ್ಚರವಾಗಿದ್ದೀರೆಂದು ನಂಬುವುದಿಲ್ಲ,
ಏಕೆಂದರೆ ಕನಸು ಸಾಧ್ಯವಾಗುವುದೇ
ನೀವು ನಿದ್ದೆಯಲ್ಲಿರುವಾಗ.

ಈ ಎರಡನ್ನು ಮೊದಲು ತಿಳಿದುಕೊಳ್ಳಬೇಕು:
ಮನಸ್ಸು ಎಲ್ಲ ಕನಸುಗಳ ಮೂಲ ಆದರೆ
ಕನಸು ಸಾಧ್ಯವಾಗುವುದು ನಿದ್ದೆಯಲ್ಲಿ ಮಾತ್ರ.
ದಿನದ 24 ಗಂಟೆ ಕನಸು ನೀವು ಕಾಣುತ್ತೀರಿ.
ನೀವು ದಿನದ ವ್ಯವಹಾರಗಳಲ್ಲಿ ತೊಡಗಿಕೊಂಡಾಗ
ಹೊರಗಿನ ಪ್ರಪಂಚಕ್ಕೆ ಎಚ್ಚರವಿದ್ದಂತೆ ಕಾಣುವಿರಿ
ಆದರೆ ನಿಮ್ಮ ಮನಸಿನ ಆಳದಲ್ಲಿ
ಕನಸುವುದು ಸತತವಾಗಿ ಮುಂದುವರೆದಿರುತ್ತದೆ.

ಇದು ನಕ್ಷತ್ರಗಳ ಕಾಣುವಿಕೆಯಂತೆ.
ಹಗಲಿನಲ್ಲಿ ನಮಗೆ ನಕ್ಷತ್ರಗಳು ಕಾಣಿಸುವುದಿಲ್ಲ.
ಅವು ತಮ್ಮ ಜಾಗದಲ್ಲೇ ಇರುವಾಗಲೂ
ಸೂರ್ಯನ ಪ್ರಖರ ಬೆಳಕಿನ ಕಾರಣವಾಗಿ
ನಮಗೆ ನೋಡಲಾಗುವುದಿಲ್ಲ.
ನೀವು ಆಳದ ಬಾವಿಯೆಳಗೆ
ಸುಮಾರು 2೦೦-3೦೦ ಅಡಿ ಇಳಿದು
ಆಕಾಶ ನೋಡಿದರೆ
ಹಗಲಿನಲ್ಲೂ ನಕ್ಷತ್ರಗಳ ಇರುವಿಕೆ
ನಿಮ್ಮ ಗಮನಕ್ಕೆ ಬರುವುದು.
ನಕ್ಷತ್ರಗಳನ್ನು ನೋಡಲು ಕತ್ತಲು ಬೇಕು.

ಕನಸುಗಳ ವಿಷಯದಲ್ಲೂ ಹೀಗೆಯೇ;
ನಿಮ್ಮ ಎಚ್ಚರದಲ್ಲೂ ಕನಸುಗಳು ಉಂಟು,
ಆದರೆ ಅವುಗಳನ್ನ ಕಾಣಲು ಕತ್ತಲಿನಂಥ
ಹಿನ್ನೆಲೆಯೊಂದರ ಅವಶ್ಯಕತೆ ಇದೆ.
ನೀವು ನಿದ್ದೆಗಿಳಿದಾಗ
ಮನಸ್ಸು ತನ್ನ ನಿರಾಳ ಸ್ಥಿತಿಗೆ ಮರಳಿದಾಗ
ಕನಸುಗಳ ಅನುಭವ ನಮಗೆ ಸಾಧ್ಯವಾಗುತ್ತದೆ.

ಕನಸುವುದು ನಿಮ್ಮ ನಿರಂತರತೆ,
ಈ ನಿರಂತರತೆಯನ್ನು ಕತ್ತರಿಸದ ಹೊರತು
ನಿಮಗೆ ಸತ್ಯದ ಪರಿಚಯವಾಗುವುದಿಲ್ಲ.
ನಮ್ಮ ಮುಂದಿರುವ ಮುಖ್ಯ ಪ್ರಶ್ನೆ
ಸತ್ಯ ನಮಗೆ ಹತ್ತಿರವೋ ದೂರವೋ ಎನ್ನುವುದಲ್ಲ
ಬದಲಾಗಿ, ನಮ್ಮ ಮನಸ್ಸು
ಕನಸಿನಲ್ಲಿ ಮುಳುಗಿದೆಯೋ ಇಲ್ಲವೋ ಎನ್ನುವುದು.

ಹೌದು ಮುಖ್ಯ ಸಮಸ್ಯೆ ಸತ್ಯವನ್ನು
ಹೇಗೆ ಕಂಡುಕೊಳ್ಳಬೇಕು ಎನ್ನುವುದಲ್ಲ ;
ಕನಸು ಕಾಣುತ್ತಿರುವ ಬುದ್ಧಿ-ಮನಸ್ಸುಗಳ ನೆರವಿನಿಂದ
ಸತ್ಯವನ್ನು ಹುಡುಕುವುದು ಸಾಧ್ಯವಿಲ್ಲ.
ಏಕೆಂದರೆ ನಿಮ್ಮ ಎದುರು ಏನೇ ಎದುರಾದರೂ
ನೀವು ಅದರ ಮೇಲೆ ನಿಮ್ಮ ಕನಸನ್ನ ಹೇರುವಿರಿ.
ನಿಮ್ಮ ಕನಸುಗಳನ್ನ ಎದುರಿಗಿನ ಸಂಗತಿಯ ಮೇಲೆ
ಪ್ರೊಜೆಕ್ಟ್ ಮಾಡಿ ವಿಷ್ಲೇಷಣೆಗೆ ತೊಡಗುವಿರಿ,
ನಿಮ್ಮ ಕನಸಿಗನುಗುಣವಾಗಿ
ಆ ಸಂಗತಿಯ ಸತ್ಯವನ್ನು ಮಿಥ್ಯೀಕರಿಸುವಿರಿ.
ಆದರೆ,

ಸತ್ಯ ಇರುವುದು
ಕೇವಲ ಸತ್ಯ ಆಗಿರುವ ಕಾರಣಕ್ಕಾಗಿ,
ಮಿಥ್ಯೆಗೆ ಇದು ಸಾಧ್ಯವಿಲ್ಲ.

ಸೊಸಾನ್ ನ ಸೂತ್ರವನ್ನು
ಪ್ರವೇಶಿಸುವ ಮೊದಲು ಇನ್ನೊಂದು ವಿಷಯ.

ಶಂಕರ ರು ನಿಜವನ್ನು
ಮೂರು ವಿಭಾಗಗಳಲ್ಲಿ ವರ್ಗಿಕರಿಸುತ್ತಾರೆ,
ಮತ್ತು ಈ ವರ್ಗೀಕರಣ ಸತ್ಯದ ಸ್ವರೂಪವನ್ನು
ಸುಂದರವಾಗಿ ಪ್ರಸ್ತುತಪಡಿಸುತ್ತದೆ.

ಮೊದಲನೇಯದೇ ಸತ್ಯದ ವಿಭಾಗ.
ಸತ್ಯ ಯಾವುದೋ ಅದು,
ಬೇರಾವುದೂ ಸಾಧ್ಯವೇ ಇಲ್ಲವೋ ಅದು,
ಕೇವಲ ಸತ್ಯ ಮತ್ತು ಸತ್ಯ ಮಾತ್ರ.

ಎರಡನೇಯ ವಿಭಾಗ,
ಯಾವುದು ಅಸತ್ಯವೋ ಅದು.
ಹೀಗೆ ಸಾಧ್ಯವೇ ಇಲ್ಲ.
ಅಸತ್ಯ ಇರುವುದು ಹೇಗೆ ಸಾಧ್ಯ?
ಇರುವಿಕೆಗೆ ಸತ್ಯ ಬೇಕೇ ಬೇಕು.
ಹಾಗಾಗಿ ಅಸತ್ಯ ಇಲ್ಲ, ಸತ್ಯ ಇದೆ.

ಶಂಕರರು ಗುರುತಿಸಿದ ಮೂರನೇ ವಿಭಾಗವೇ, ಕನಸು.
ಅಥವಾ ತೋರುವಿಕೆ, ಭ್ರಮೆ, ಮಾಯೆ.
ಇದೆ ಅನ್ನಿಸಿದರೂ ಇಲ್ಲದಿರುವುದು.

ಹೀಗೆ ಮೂರು ವಿಭಾಗಗಳು.

ನಿಮ್ಮ ಕಣ್ಣುಗಳು ಸ್ಪಷ್ಟವಾಗಿ,
ಯಾವ ಅಡತಡೆ ಇಲ್ಲದೆ ನೋಡುತ್ತಿರುವಾಗ,
ನಿಮ್ಮ ಬುದ್ಧಿ-ಮನಸ್ಸು
ಕನಸಿನಿಂದ ಹೊರತಾಗಿರುವಾಗ,
ಸಾಧ್ಯವಾಗೋದು ಒಂದೇ
ಅದೇ ಸತ್ಯ.
ಆದರೆ ನೀವು
ಕನಸಿನಲ್ಲಿ ಮುಳುಗಿರುವಾಗ
ಬಾಕಿ ಎರಡು ವರ್ಗೀಕರಣಗಳೂ
ಅಸ್ತಿತ್ವದಲ್ಲಿ ಬರುತ್ತವೆ.

ಒಂದು ರೀತಿಯಲ್ಲಿ ಕನಸು ನಿಜ
ನೀವು ಅನುಭವಿಸುತ್ತಿರುವ ಕಾರಣವಾಗಿ,
ಇನ್ನೊಂದು ರೀತಿಯಲ್ಲಿ ನಿಜವಲ್ಲ
ಸತ್ಯದೊಂದಿಗೆ ಸಂಬಂಧ ಇಲ್ಲದಿರುವ ಕಾರಣಕ್ಕಾಗಿ.
ಕನಸಿಗೆ ಸತ್ಯದ ಗುಣ ಇದೆ
ನಿಜವಲ್ಲದಿದ್ದರೂ ಅದು ನಮ್ಮನ್ನ
ನಂಬಿಸಿರುವ ಕಾರಣಕ್ಕಾಗಿ.

ಸತ್ಯ ಇರುವಿಕೆ, ಅಸತ್ಯ ಇಲ್ಲದಿರುವಿಕೆ,
ಈ ಎರಡರ ನಡುವೆ, ಎರಡರ ಗುಣಗಳನ್ನೂ
ಹೊಂದಿರುವ ಕನಸು.

ಕನಸಿನ ಮೂಲ ಬುದ್ಧಿ-ಮನಸ್ಸು (mind)
ಆದ್ದರಿಂದಲೇ ಬುದ್ಧಿ-ಮನಸ್ಸಿಗೆ
ಭ್ರಮೆಯ ಸಂಗಾತ.
ಆದ್ದರಿಂದಲೇ ಬುದ್ಧಿ-ಮನಸ್ಸು
ಮಾಯೆಯ ತವರು.

ಗಂಡ/ಹೆಂಡತಿ, ಮಕ್ಕಳು, ಮನೆ, ಜಗತ್ತು
ಮಾಯೆಯ ಪರೀಧಿಯಲ್ಲಿ.
ಇನ್ನೊಂದು ರೀತಿಯಲ್ಲಿ
ಗಂಡ/ ಹೆಂಡತಿ ಇರುವವರು, ಅವರಿಗೆ ಅಸ್ತಿತ್ವ ಉಂಟು,
ಆದ್ದರಿಂದಲೇ ಅವರು ಬ್ರಹ್ಮ, ಸತ್ಯ,
ಗಂಡ ಅಥವಾ ಹೆಂಡತಿಯಾಗಿ ಅಲ್ಲ,
ಒಂದು ಆತ್ಮವಾಗಿ.

ನಿಮ್ಮ ಬುದ್ಧಿ-ಮನಸ್ಸು
ಅವರನ್ನ ಗಂಡ ಅಥವಾ ಹೆಂಡತಿ ಎಂದು ಗುರುತಿಸುವುದರಿಂದ
ಅಲ್ಲೊಂದು ಕನಸಿನ ನಿರ್ಮಾಣವಾಗಿದೆ.
ಆತ್ಮವಾಗಿ ಅವರು ಒಂದು ನಿಜ
ಆತ್ಮವಾಗಿ ನೀನು ಒಂದು ನಿಜ
ಎರಡು ನಿಜಗಳ ನಡುವೆ
ಒಂದು ಕನಸು ಸಂಭವಿಸುತ್ತಿದೆ.

ನೀನು ಅವರನ್ನ
ಗಂಡ ಅಥವಾ ಹೆಂಡತಿ ಎಂದು ಗುರುತಿಸುತ್ತಿರುವುದರಿಂದ
ನಿಮ್ಮಿಬ್ಬರ ನಡುವೆ ಒಂದು ಕನಸು ಹುಟ್ಟಿಕೊಂಡಿದೆ ಮತ್ತು
ಕನಸು ಭ್ರಮೆಯಾಗಿರುವುದರಿಂದ ಯಾವಾಗಲೂ ಅದು
ದುಸ್ವಪ್ನಗಳಲ್ಲಿ ಕೊನೆಗೊಳ್ಳುತ್ತದೆ.

ನೀವು ಈ ಕನಸಿನ ಭ್ರಮೆಗಳನ್ನು
ಬಹುಕಾಲ ಸಹಿಸುವುದಿಲ್ಲವಾದ್ದರಿಂದ
ಎಲ್ಲ ಸಂಬಂಧಗಳು ದುಸ್ವಪ್ನಗಳಲ್ಲಿ
ಮುಕ್ತಾಯಗೊಳ್ಳುತ್ತವೆ.

ನೀವು ಒಬ್ಬರನ್ನು ಪ್ರೀತಿಸುತ್ತೀರಿ,
ಒಂದು ಕನಸು ಕಟ್ಟಿಕೊಳ್ಳುತ್ತೀರಿ,
ಮಧುಚಂದ್ರ ಮುಗಿಯುವ ಹೊತ್ತಿಗೆ
ಕನಸಿನ ಭ್ರಮಾಗುಣದ ಪರಿಚಯ ನಿಮಗಾಗಿರುತ್ತದೆ.
ಆದರೆ ನೀವು ನಿಮ್ಮ ವಾಗ್ದಾನಗಳ
ಗುಲಾಮರಾಗಿರುವುದರಿಂದ,
ನಟಿಸಲು ಶುರು ಮಾಡುತ್ತೀರಿ.

ನಿನ್ನಷ್ಟು ಸುಂದರ ಯಾರೂ ಇಲ್ಲ,
ನಿನ್ನಂಥ ಒಳ್ಳೆಯ ಮನಸ್ಸು ಯಾರಿಗೂ ಇಲ್ಲ,
ಮುಂತಾಗಿ.

ಆದರೆ ಇದೆಲ್ಲ ಸೋಗು.
ಕನಸು ಮುರಿದುಬಿದ್ದಾಗಲೂ
ಸೋಗು ಮುಂದುವರೆದಿರುವುದರಿಂದ
ಸಂಬಂಧ ಭಾರವಾಗಲು ಶುರುವಾಗುತ್ತದೆ,
ನೀವು ಸಂಕಟದಲ್ಲಿ
ಬದುಕಲು ಆರಂಭ ಮಾಡುತ್ತೀರಿ.

(ಮುಂದುವರೆಯುತ್ತದೆ.....)

Leave a Reply