ಖಲೀಲ್ ಜಿಬ್ರಾನ್ ನ ಎರಡು ಕಥೆಗಳು

ಮೂಲ: ಖಲೀಲ್ ಜಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ಒಳಿತಿನ ದೇವರು ಮತ್ತು ಕೆಡಕಿನ ದೇವರು.

ಒಂದು ದಿನ, ಒಳಿತಿನ ದೇವ ಮತ್ತು ಕೆಡಕಿನ ದೇವ, ಬೆಟ್ಟದ ತುದಿಯ ಮೇಲೆ ಪರಸ್ಪರ ಭೇಟಿಯಾದರು. “ ನಿನಗೆ ಒಳ್ಳೆಯದಾಗಲಿ ಗೆಳೆಯ” ಒಳಿತಿನ ದೇವ ಮಾತಿಗೆ ಇಳಿದ.

ಕೆಡಕಿನ ದೇವ ಯಾವ ಉತ್ತರವನ್ನೂ ಕೊಡದೆ ಸುಮ್ಮನಾದ.

“ಯಾಕೆ ಗೆಳೆಯ ಯಾವ ಬೇಸರದಲ್ಲಿರುವೆ? “
ಒಳಿತಿನ ದೇವ ಮತ್ತೆ ಪ್ರಶ್ನೆ ಮಾಡಿದರು.

“ ಹೌದು ಎಲ್ಲರೂ ನನ್ನ, ನೀನು ಎಂದು ತಪ್ಪು ತಿಳಿದುಕೊಂಡು ನಿನ್ನ ಹೆಸರಿನಿಂದ ಗುರುತಿಸುತ್ತಾರೆ, ಮಾತನಾಡಿಸುತ್ತಾರೆ ಮತ್ತು ಆದರಿಸುತ್ತಾರೆ. ಇದರಿಂದ ನನಗೆ ಬಹಳ ನೋವಾಗುತ್ತದೆ”
ಕೆಡಕಿನ ದೇವ ಸಂಕಟದಿಂದ ಉತ್ತರಿಸಿದ.

“ ಅರೆರೆ, ನನ್ನದೂ ಇದೇ ಸಮಸ್ಯೆ ಗೆಳೆಯ, ನನ್ನನ್ನು ಎಲ್ಲರೂ ನಿನ್ನ ಹೆಸರಿನಿಂದ ಗುರುತಿಸುತ್ತಾರೆ ಮತ್ತು ನೀನು ಎಂದು ತಿಳಿದು ವ್ಯವಹರಿಸುತ್ತಾರೆ”
ಒಳಿತಿನ ದೇವ ತಾನು ಅನುಭವಿಸುತ್ತಿರುವ ಪರಿಸ್ಥಿತಿಯನ್ನು ನಿವೇದಿಸಿಕೊಂಡ.

ಕೆಡಕಿನ ದೇವ ಮನುಷ್ಯನ ಮೂರ್ಖತೆಯ ಬಗ್ಗೆ ಮರುಗುತ್ತ ಯಾವ ಮಾತೂ ಆಡದೇ ಅಲ್ಲಿಂದ ಹೊರಟು ಬಿಟ್ಟ.

ಇಬ್ಬರು ತಿಳುವಳಿಕೆಯ ಮನುಷ್ಯರು.

ಪುರಾತನ ಶಹರ ಅಫ್ಕರ್ ನಲ್ಲಿ ಇಬ್ಬರು ಅಪಾರ ತಿಳುವಳಿಕೆಯ ಮನುಷ್ಯರು ವಾಸವಾಗಿದ್ದರು. ಇಬ್ಬರಿಗೂ ಪರಸ್ಪರರನ್ನು ಕಂಡರೆ ಆಗುತ್ತಿರಲಿಲ್ಲ, ಭೇಟಿಯಾದಾಗಲೆಲ್ಲ ಶರಂಪರ ಜಗಳಾಡುತ್ತಿದ್ದರು. ಒಬ್ಬನಿಗೆ ದೇವರ ಅಸ್ತಿತ್ವದಲ್ಲಿ ಅಪಾರ ನಂಬಿಕೆ, ಇನ್ನೊಬ್ಬ ಭಗವಂತನ ಇರುವಿಕೆಯನ್ನ ಸಾರಾಸಗಟಾಗಿ ನಿರಾಕರಿಸುತ್ತಿದ್ದ.

ಒಂದು ದಿನ ಮಾರುಕಟ್ಟೆಯ ಕೂಡು ರಸ್ತೆಯಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಎದುರಾದರು. ತಮ್ಮ ತಮ್ಮ ಹಿಂಬಾಲಕರಿಂದ ಸುತ್ತುವರೆದು, ಭಗವಂತನ ಇರುವಿಕೆ ಮತ್ತು ಇಲ್ಲದಿರುವಿಕೆಯ ಬಗ್ಗೆ ಭೀಕರವಾಗಿ ಗಂಟೆಗಟ್ಟಲೆ ವಾದ ಮಾಡಿ, ಕೊನೆಗೆ ಚರ್ಚೆ ನಿಲ್ಲಿಸಿ ಪರಸ್ಪರ ವಿದಾಯ ಹೇಳಿದರು.

ಆ ಸಂಜೆ, ಭಗವಂತನ ಅಸ್ತಿತ್ವದಲ್ಲಿ ನಂಬಿಕೆ ಇಲ್ಲದಿರುವವ, ದೇವಾಲಯಕ್ಕೆ ಹೋಗಿ ಭಗವಂತನ ಮೂರ್ತಿಯ ಎದುರು ದಿರ್ಘದಂಡ ನಮಸ್ಕಾರ ಮಾಡಿ ತನಗಿದ್ದ ತಪ್ಪು ತಿಳುವಳುಕೆಯ ಬಗ್ಗೆ ಭಗವಂತನಲ್ಲಿ ಕ್ಷಮೆ ಕೇಳಿದ.

ಮತ್ತು, ಅದೇ ಸಮಯದಲ್ಲಿ ಭಗವಂತನ ಅಸ್ತಿತ್ವದಲ್ಲಿ ಅಪಾರ ನಂಬಿಕೆ ಇದ್ದ ಮನುಷ್ಯ, ತನ್ನ ಬಳಿ ಇದ್ದ ಎಲ್ಲ ಧಾರ್ಮಿಕ , ಪವಿತ್ರ ಗ್ರಂಥಗಳಿಗೆ ಬೆಂಕಿ ಹಾಕಿ, ನಾಸ್ತಿಕನಾದ.


Leave a Reply