ಇಂದಿನ ಸುಭಾಷಿತ, ಪಂಚತಂತ್ರದಿಂದ…
ಯತ್ರೋತ್ಸಾಹಸಮಾರಂಭೋ ಯತ್ರಾಲಸ್ಯವಿಹೀನತಾ| ನಯವಿಕ್ರಮ ಸಂಯೋಗಸ್ತತ್ರ ಶ್ರೀರಚಲಾ ಧ್ರುವಮ್||
ಅರ್ಥ: ಎಲ್ಲಿ ಉತ್ಸಾಹದಿಂದ ಪ್ರಯತ್ನ ನಡೆಯುವುದೋ, ಎಲ್ಲಿ ಸೋಮಾರಿತನ ಇರುವುದಿಲ್ಲವೋ, ಎಲ್ಲಿ ನೀತಿ ಮತ್ತು ಪರಾಕ್ರಮಗಳು ಜೊತೆಗೂಡಿ ಇರುತ್ತದೆಯೋ ಅಲ್ಲಿ ನಿಜವಾಗಿಯೂ ಸಂಪತ್ತು ಸ್ಥಿರವಾಗಿರುತ್ತದೆ.
ಸೋಮಾರಿತನ ಮತ್ತು ನಿರುತ್ಸಾಹಗಳು ಸಂಪತ್ತಿನ ಬಹಳ ದೊಡ್ಡ ಶತ್ರುಗಳು. ಕೂತು ಉಂಡರೆ ಕುಡಿಕೆ ಹೊನ್ನು ಸಾಲದು ಎನ್ನುವ ಗಾದೆಯಂತೆ, ಸೋಮಾರಿತನ ಬೆಳೆಸಿಕೊಂಡು ಕೆಲಸ ಕಾರ್ಯಗಳಿಗೆ ಮುಖ ತಿರುಗಿಸಿದರೆ, ಸದಾ ಉತ್ಸಾಹದಿಂದ ಕಾರ್ಯಪ್ರವೃತ್ತರಾಗಿ ಇರದೇ ಹೋದರೆ, ಎಷ್ಟು ದೊಡ್ಡ ಸಂಪತ್ತಿದ್ದರೂ ಕರಗಿಹೋಗುತ್ತದೆ. ಆದ್ದರಿಂದ ಸದಾ ಉತ್ಸಾಹದಿಂದ ಕೆಲಸ ಮಾಡುತ್ತಾ ಇರಬೇಕು. ಅನ್ಯಾಯದಿಂದ ಮಾಡುವ ಕೆಲಸ ಗಳಿಸಿಕೊಡುವ ಸಂಪತ್ತು ಬಹಳ ಕಾಲ ನಿಲ್ಲಲಾರದು. ಆದ್ದರಿಂದ, ನ್ಯಾಯ – ನೀತಿಯಿಂದ, ಮತ್ತು ಯಾವುದಕ್ಕೂ ಹೆದರದೆ, ಹೇಡಿಯಂತೆ ಹಿಂಜರಿಯದೆ, ಪರಾಕ್ರಮದಿಂದ ಮುಂದುವರೆಯುತ್ತಾರೋ, ಅಂಥವರ ಬಳಿ ಸಂಪತ್ತು ಖಂಡಿತವಾಗಿಯೂ ನೆಲೆಯಾಗುತ್ತದೆ ಎನ್ನುವುದು ಈ ಸುಭಾಷಿತದ ತಾತ್ಪರ್ಯ.