ನಿಮ್ಮಿಂದ ಈ ನೋಟವನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ, ಕಹಿ ಎನ್ನುವ ಭಯ.
ಆದ್ದರಿಂದಲೇ ಈ ನೋಟಕ್ಕೆ ಸಕ್ಕರೆಯ ಲೇಪನ ಮಾಡುತ್ತೀರಿ, ಮನುಷ್ಯರನ್ನು ಕನಸುಗಳಿಂದ ಸಿಂಗರಿಸುತ್ತೀರಿ, ಈಗ ನೀವು ನಿಮಗೇ ಮೋಸ ಮಾಡಿಕೊಳ್ಳುತ್ತಿದ್ದೀರಿ, ಆದ್ದರಿಂದಲೇ ದುಃಖದಲ್ಲಿ ಸಿಕ್ಕಿಹಾಕಿಕೊಂಡಿರುವಿರಿ ~ಸೊಸಾನ್ | ಓಶೋ ವ್ಯಾಖ್ಯಾನ; ಭಾವಾನುವಾದ : ಚಿದಂಬರ ನರೇಂದ್ರ
ಅಧ್ಯಾಯ 7.2| All dreams must cease
ಮನುಷ್ಯನ ಯಾತನೆಗಳಿಗೆ
ಮುಖ್ಯ ಕಾರಣ ಅವನ
ಒಡೆದ ಕನಸುಗಳು, ಚೂರಾದ ಭ್ರಮೆಗಳು.
ನೀವು ಇವುಗಳಲ್ಲಿ ನಿಮ್ಮನ್ನು
ಎಷ್ಟು ತೊಡಗಿಸಿಕೊಂಡಿದ್ದೀರೆಂದರೆ
ನಿಮಗೆ ಸತ್ಯ ಕಾಣುತ್ತಿಲ್ಲ,
ಮೂದಲಿನಿಂದಲೂ ಇವು
ಒಡೆದು ಹೋಗಲಿಕ್ಕೆಯೇ ಸೃಷ್ಟಿಯಾದಂಥವು
ಎನ್ನುವ ಕಲ್ಪನೆ ಕೂಡ ನಿಮಗಿಲ್ಲ.
ಆದರೆ ಸತ್ಯವನ್ನು ಗಮನಿಸುವ ಬದಲಿಗೆ
ನೀವು ಇನ್ನೊಬ್ಬರನ್ನು ನಿಮ್ಮ ಯಾತನೆಗೆ
ಹೊಣೆಗಾರರನ್ನಾಗಿಸುತ್ತೀರಿ,
ಗೆಳತಿ/ಹೆಂಡತಿ ಮೋಸ ಮಾಡಿದಳು ಎನ್ನುತ್ತೀರಿ.
ಆದರೆ ನಿಮಗಿದು ಇನ್ನೂ ಗೊತ್ತಾಗುತ್ತಿಲ್ಲ
ಇದು ಚರ್ಚೆಯ ವಿಷಯವೇ ಅಲ್ಲ.
ನೀವು ಅವಳ ಸುತ್ತ ಕನಸಿನ ಲೋಕ ಕಟ್ಟಿಕೊಂಡಿದ್ದಿರಿ,
ಅವಳೂ ಕೂಡ.
ಮತ್ತು ಈ ಕನಸು ಕಾರಣವಾಗಿಯೇ
ನಿಮ್ಮಿಬ್ಬರಿಗೂ ಸತ್ಯ ಗೊತ್ತಾಗುತ್ತಿಲ್ಲ.
ಆದ್ದರಿಂದಲೇ
ಇಬ್ಬರ ನಡುವೆ ಪ್ರೇಮ ಸಂಭವಿಸಿದಾಗ
ಅಲ್ಲಿ ಇರುವವರು ಇಬ್ಬರಲ್ಲ, ನಾಲ್ವರು :
ಪ್ರೇಮಿ, ಪ್ರಿಯತಮ/ಮೆ,
ಪ್ರೇಮಿಯ ಮೈಂಡ್ ಸೃಷ್ಟಿ ಮಾಡಿಕೊಂಡಿರುವ
ಪ್ರಿಯತಮ/ಮೆ ಯ ವ್ಯಕ್ತಿತ್ವ
ಮತ್ತು ಪ್ರಿಯತಮ/ಮೆ ಯ ಮೈಂಡ್ ಸೃಷ್ಟಿ ಮಾಡಿಕೊಂಡಿರುವ
ಪ್ರೇಮಿಯ ಯ ವ್ಯಕ್ತಿತ್ವ.
ಕೊನೆಯವೆರಡೂ ಕನಸುಗಳು ಮತ್ತು
ಕನಸುಗಳು ಸದಾ ಚಲಿಸುತ್ತಲೇ ಇರುತ್ತವೆ.
ಒಮ್ಮಿಲ್ಲ ಒಮ್ಮೆ ಈ ಕನಸುಗಳು
ಒಡೆದು ಹೋಗುವುದು ಖಂಡಿತ,
ಉಳಿಯುವವರು ನೀವಿಬ್ಬರೇ
ಆಗ ನೀವು ಪರಸ್ಪರರನ್ನು ಸಹಿಸಿಕೊಳ್ಳಲಾರಿರಿ,
ಆಗಲೇ ನೀವು ಒಬ್ಬರನ್ನೊಬ್ಬರು
ದೂಷಿಸಲು ಶುರು ಮಾಡುತ್ತೀರಿ.
ಪ್ರೇಮಿಗಳು ತಮ್ಮ ನಡುವೆ ಇರುವುದನ್ನ
ಅಪ್ಪಿಕೊಳ್ಳುತ್ತಾರೆಯೇ ಹೊರತು
ಪರಸ್ಪರರನ್ನಲ್ಲ, ಎನ್ನುತ್ತಾನೆ ಖಲೀಲ್ ಜಿಬ್ರಾನ್.
ಪ್ರೇಮಿಗಳು ತಾವು ಪರಸ್ಪರರ ಬಗ್ಗೆ
ಕಟ್ಟಿಕೊಂಡಿರುವ ನಿರೀಕ್ಷೆಗಳಿಂದ ಬಿಡಿಸಿಕೊಂಡು
ನೇರವಾಗಿ ಒಬ್ಬರನ್ನೊಬ್ಬರು ತಾಕಿದಾಗಲೇ
ನಿಜದ ಪ್ರೇಮ ಸಾಧ್ಯ.
ಆದರೆ ಬುದ್ಧಿ-ಮನಸ್ಸಿಗೆ (ಮೈಂಡ್)
ಇದು ಗೊತ್ತೇ ಆಗುವುದಿಲ್ಲ,
ಮೂಲಭೂತವಾಗಿ ಬುದ್ಧಿ-ಮನಸ್ಸಿನದು
ಶುದ್ಧ ಮೂರ್ಖ ಸ್ವಭಾವ.
ಮೈಂಡ್ ತನ್ನ ಮೂರ್ಖತನದಲ್ಲಿ
ಕುತಂತ್ರ ಮಾಡುವ ಸಾಧ್ಯತೆಗಳೇ ಹೆಚ್ಚು.
ಮೈಂಡ್ ವಿವೇಕದಿಂದ ವ್ಯವಹರಿಸುವ ಸಾಧ್ಯತೆ
ಬಹುತೇಕ ಕಮ್ಮಿ,
ವಿವೇಕ, ಮೈಂಡ್ ನ ಸಹಜ ಸ್ವಭಾವವಲ್ಲ
ಏಕೆಂದರೆ ವಿವೇಕ ಸಾಧ್ಯವಾಗುವುದು
ಕನಸುಗಳು ಜಾರಿ ಹೋದಾಗಲೇ.
ಬುದ್ಧಿ-ಮನಸ್ಸುಗಳಿಂದ ಅತೀತನಾಗಿದ್ದರಿಂದಲೇ
ಬುದ್ಧ ವಿವೇಕಿಯಾಗಿದ್ದ,
ಬುದ್ಧಿ-ಮನಸ್ಸುಗಳಿಲ್ಲದ ಶೂನ್ಯದಲ್ಲಿ
ವಾಸವಾಗಿದ್ದರಿಂದಲೇ
ಸೊಸಾನ್ ವಿವೇಕಿಯಾಗಿದ್ದ.
ಬುದ್ಧ ಮತ್ತು ಸೊಸಾನ್ ಇರುವುದನ್ನ
ಇದ್ದ ಹಾಗೆಯೇ ನೋಡುವವರಾಗಿದ್ದರು
ಆದರೆ ನೀವು ಇರುವುದಕ್ಕೆ
ನಿಮ್ಮ ಕನಸುಗಳನ್ನು ಸೇರಿಸಿ ನೋಡುತ್ತೀರಿ.
ಇರುವುದನ್ನ ಇದ್ದ ಹಾಗೆ ನೋಡುವುದು
ನಿಮಗೆ ಆತಂಕ, ತುಂಬ ಭಾರ
ನಿಮ್ಮಿಂದ ಈ ನೋಟವನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ,
ಕಹಿ ಎನ್ನುವ ಭಯ.
ಆದ್ದರಿಂದಲೇ ಈ ನೋಟಕ್ಕೆ ಸಕ್ಕರೆಯ ಲೇಪನ ಮಾಡುತ್ತೀರಿ,
ಮನುಷ್ಯರನ್ನು ಕನಸುಗಳಿಂದ ಸಿಂಗರಿಸುತ್ತೀರಿ,
ಈಗ ನೀವು ನಿಮಗೇ ಮೋಸ ಮಾಡಿಕೊಳ್ಳುತ್ತಿದ್ದೀರಿ,
ಆದ್ದರಿಂದಲೇ ದುಃಖದಲ್ಲಿ ಸಿಕ್ಕಿಹಾಕಿಕೊಂಡಿರುವಿರಿ.
ಈ ಎಲ್ಲದರ ಹಿಂದೆ ಇರುವುದು
ಬುದ್ಧಿ ಮನಸಿನ ಕೈವಾಡ.
ಸಿನೇಮಾದ ಪ್ರೊಜೆಕ್ಟರ್,
ಪ್ರೊಜೆಕ್ಟ್ ಮಾಡಿದ ಚಿತ್ರವನ್ನ
ನೀವು ಹೇಗೆ ತೆರೆಯ ಮೇಲೆ ನೋಡುತ್ತೀರೋ,
ಹಾಗೆಯೇ ಮೈಂಡ್ ಪ್ರೊಜೆಕ್ಟ್ ಮಾಡಿದ
ನಿಮ್ಮ ಆಕಾಂಕ್ಷೆಗಳನ್ನ
ಇನ್ನೊಬ್ಬರಲ್ಲಿ ಕಾಣಬಯಸುತ್ತೀರಿ.
ನೀವು ಪ್ರೇಮದಲ್ಲಿರುವಾಗ
ನಿಮ್ಮ ಪ್ರೇಮಿ ಅತ್ಯಂತ ಸುಂದರ,
ಹೋಲಿಕೆಗಳೇ ಇಲ್ಲದಷ್ಟು,
ಆದರೆ ವಿರಸ ಶುರುವಾದಾಗ ಆ ವ್ಯಕ್ತಿಯಷ್ಟು
ಕುರೂಪಿ ಬೇರಾರೂ ಇಲ್ಲ.
ಕ್ಷಣ ಮಾತ್ರಗಳಲ್ಲಿ ಒಬ್ಬ ವ್ಯಕ್ತಿ
ಅತ್ಯಂತ ಸುಂದರ ದಿಂದ ಅತೀ ಕುರೂಪಿಯಾಗುವುದು
ಹೇಗೆ ಸಾಧ್ಯ?
ಸೂಕ್ಷ್ಮವಾಗಿ ಗಮನಿಸಿದಾಗ
ನಿಮಗೆ ಗೊತ್ತಾಗುತ್ತದೆ
ಸಮಸ್ಯೆ ಆ ವ್ಯಕ್ತಿಯಲ್ಲಿಲ್ಲ.
ನೀವು ನಿಮ್ಮ ಬಯಕೆಗಳನ್ನ
ಆ ವ್ಯಕ್ತಿಯ ಮೇಲೆ ಪ್ರೊಜೆಕ್ಚ್ ಮಾಡುತ್ತಿದ್ದೀರಿ,
ನಿಮ್ಮ ಬಯಕೆ ಪ್ರೇಮವಾದಾಗ ಅವನು ನಿಮ್ಮ ಪ್ರೇಮಿ,
ನಿಮ್ಮ ಬಯಕೆ ದ್ವೇಷವಾದಾಗ
ಅದೇ ಪ್ರೇಮಿ ಈಗ ವೈರಿ.
ನಿಮಗೆ ಆ ಮನುಷ್ಯನ ನಿಜದ ಬಗ್ಗೆ
ಏನೂ ಗೊತ್ತಿಲ್ಲ,
ಮೈಂಡ್ ನ ಕಣ್ಣುಗಳಿಂದ
ಯಾರ ನಿಜವನ್ನೂ ಕಾಣಲಾಗುವುದಿಲ್ಲ.
ನಿಮಗೆ ನಿಜವಾಗಿಯೂ
ಒಬ್ಬ ಮನುಷ್ಯನ ಸತ್ಯವನ್ನು ನೋಡಬೇಕಾಗಿದ್ದರೆ,
ಯಾವ ಶಾಸ್ತ್ರ, ಪವಿತ್ರ ಗ್ರಂಥಗಳೂ ಸಹಾಯ ಮಾಡುವುದಿಲ್ಲ,
ಯಾವ ಕಠಿಣತಮ ಸಾಧನೆಯೂ ನೆರವಿಗೆ ಬರುವುದಿಲ್ಲ.
ಸಹಾಯಕ್ಕೆ ಬರುವುದು ಒಂದೇ,
ಮೈಂಡ್ ನ ಸಹಾಯವಿಲ್ಲದೆ
ನೇರವಾಗಿ ಆ ವಸ್ತುವನ್ನ,
ಆ ವ್ಯಕ್ತಿಯನ್ನ ಗಮನಿಸುವುದು.
ಮೈಂಡ್ ಗೆ ಹೇಳುವುದಕ್ಕೆ ಯಾವ ಅವಕಾಶ ಕೊಡದೇ
ಹೂವನ್ನು ನೇರವಾಗಿ ನೋಡುವುದು.
ಆದರೆ ಇದು ಕಷ್ಟ,
ನೋಡುತ್ತಿರುವಾಗಲೇ ನೀವು
ಆ ಹೂವಿನ ಬಗ್ಗೆ, ಆ ವ್ಯಕ್ತಿಯ ಬಗ್ಗೆ
ನಿಮ್ಮ ವ್ಯಾಖ್ಯಾನ ಕ್ಕೆ ಶುರು ಮಾಡಿರುತ್ತೀರಿ.
ಈ ವ್ಯಾಖ್ಯಾನದ ಅವಲಂಬನೆ
ಮೈಂಡ್ ನ ಮೇಲೆ.
ಒಮ್ಮೆ ಹೀಗಾಯಿತು
ಮುಲ್ಲಾ ನಸ್ರುದ್ದೀನ್ ಕೋರ್ಟಿನಲ್ಲಿ
ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ. ವಿಚಾರಣೆಯ ದಿನ ಕೋರ್ಟಿನಲ್ಲಿ ಹಾಜರಾದ ನಸ್ರುದ್ದೀನ್,
ನ್ಯಾಯಾಧೀಶರ ಎದುರು
ತನ್ನ ಅಹವಾಲು ಮಂಡಿಸಿದ.
“ ಮಹಾಸ್ವಾಮಿ,
ಇನ್ನು ನನಗೆ ಹೆಂಡತಿಯ ಜೊತೆ,
ಒಂದೇ ಸೂರಿನ ಕೆಳಗೆ ಬದುಕಲು ಸಾಧ್ಯವಿಲ್ಲ.
ಪ್ರತೀದಿನ ರಾತ್ರಿ ನಾನು
ಮನೆಗೆ ವಾಪಸ್ ಬಂದಾಗ,
ನನ್ನ ಹೆಂಡತಿ ಒಬ್ಬ ಗಂಡಸನ್ನು ಕಪಾಟಿನಲ್ಲಿ ಅಡಗಿಸಿರುತ್ತಾಳೆ.
ಈ ಆಪಾದನೆ ಕೇಳಿ ದಿಗ್ಭ್ರಮೆಗೆ ಒಳಗಾದ ನ್ಯಾಯಾಧೀಶರು,
“ ಪ್ರತೀದಿನ ಅಡಗಿಸುತ್ತಾಳಾ? “
“ ಹೌದು ಸ್ವಾಮಿ, ಒಬ್ಬನೇ ಗಂಡಸಲ್ಲ, ಪ್ರತೀದಿನ ಬೇರೆ ಬೇರೆ ಗಂಡಸರು “
ಮುಲ್ಲಾ ತನ್ನ ವಾದವನ್ನು ಮುಂದುವರೆಸಿದ.
“ ಹಾಗಾದರೆ, ನಿನಗೆ ಬಹಳ ನೋವಾಗಿರಬಹುದು.
ದಿನದ ಶ್ರಮ ಮುಗಿಸಿ ರಾತ್ರಿ ಮನೆಗೆ ಬಂದಾಗ,
ನೀನು ಹೆಂಡತಿಯಿಂದ ಪ್ರೇಮ,
ಆದರಾಥಿತ್ಯ ಬಯಸಿರುತ್ತೀ ಆದರೆ
ನಿನ್ನ ಹೆಂಡತಿ ಪ್ರತೀದಿನ
ಬೇರೆ ಬೇರೆ ಗಂಡಸರನ್ನು
ಕಪಾಟಿನಲ್ಲಿ ಅಡಗಿಸುವುದನ್ನ ಕಂಡು
ನಿನಗೆ ವಿಪರೀತ ಸಿಟ್ಟು ಬಂದಿರಬೇಕಲ್ಲ ?”
ನಸ್ರುದ್ದೀನ್ ನನ್ನು ಸಂತೈಸಲು ನ್ಯಾಯಾಧೀಶರು ಪ್ರಶ್ನೆ ಮಾಡಿದರು.
“ ಹೌದು ಮಹಾಸ್ವಾಮಿ,
ನನಗೆ ಸಿಕ್ಕಾಪಟ್ಟೆ ನೋವಾಗಿದೆ.
ಮನೆಯಲ್ಲಿ ನನಗೆ ಬಟ್ಟೆ ತೂಗು ಹಾಕಲು ಅದೊಂದೇ ಕಪಾಟು ಇರೋದು”
ನಸ್ರುದ್ದೀನ್ ಉತ್ತರಿಸಿದ.
ನೀವು ಘಟನೆಗಳನ್ನ
ಹೇಗೆ ವ್ಯಾಖ್ಯಾನ ಮಾಡುತ್ತೀರಿ ಎನ್ನುವುದು
ನಿಮ್ಮ ಬುದ್ಧಿ ಮನಸಿನ ಮೇಲೆ ನಿರ್ಧರಿತ.
ಒಮ್ಮೆ ಮುಲ್ಲಾ ನಸೃದ್ದೀನ
ತನ್ನ ಹೆಂಡತಿಯನ್ನ ಬಿಟ್ಟು ಓಡಿ ಹೋದ.
ಅವನನ್ನ ಬಂಧಿಸಿ ನ್ಯಾಯಾಲಯಕ್ಕೆ ಕರೆತರಲಾಯಿತು.
“ ನಿನ್ನ ಹೆಂಡತಿಯನ್ನ
ಬಿಟ್ಟು ಓಡಿ ಹೋಗಿರುವ ಕಾರಣ
ನಿನಗೆ ಯಾಕೆ ಶಿಕ್ಷೆ ವಿಧಿಸಬಾರದು “
ನ್ಯಾಯಾಧೀಶರು ಮುಲ್ಲಾ ನಸೃದ್ದೀನನ್ನು ಪ್ರಶ್ನೆ ಮಾಡಿದರು.
“ ತಾಳಿ ನ್ಯಾಯಾಧೀಶರೆ,
ನೀವು ನನ್ನ ಹೆಂಡತಿಯನ್ನ ನೋಡಿದ್ದೀರಾ?
ನೋಡಿದ್ದರೆ ನೀವೇ ಹೇಳುತ್ತಿದ್ದಿರಿ,
ನಸೃದ್ದೀನ್ ನೀನು ಮೋಸಗಾರ ಅಲ್ಲ
ಕೇವಲ ಹೇಡಿ,
ಮತ್ತು ಹೇಡಿಗೆ
ಕಾನೂನಿನಲ್ಲಿ ಯಾವ ಶಿಕ್ಷೆ ಇಲ್ಲ”
ಮುಲ್ಲಾ ನಸೃದ್ದೀನ ಸಮಜಾಯಿಶಿ ನೀಡಿದ. ಮುಂದುವರೆಯುತ್ತದೆ......