ಪರ್ಶಿಯಾದ ದಾರ್ಶನಿಕ ಕವಿ ಉಮರ್ ಖಯ್ಯಾಮನ ರುಬಾಯಿಗಳ ‘ಚಿತ್ರಿಕೆ ಗುಚ್ಛ’ ನಿಮಗಾಗಿ… | ಕನ್ನಡಕ್ಕೆ ಚಿದಂಬರ ನರೇಂದ್ರ
ಹನ್ನೊಂದನೇ ಶತಮಾನದ ಪರ್ಶಿಯಾದ ದಾರ್ಶನಿಕ, ಕವಿ, ತತ್ವಜ್ಞಾನಿ, ಗಣಿತಜ್ಞ, ಖಗೋಳ ಶಾಸ್ತ್ರಜ್ಞ ಉಮರ್ ಖಯ್ಯಾಮ್ ನ ರುಬಾಯಿ ಗಳು ಜಗತ್ತಿನಾದ್ಯಂತ ಕಾವ್ಯಾಸಕ್ತರ ಮನಸೂರೆಗೊಂಡಿವೆ. ಕನ್ನಡಕ್ಕೆ ಈ ಮೊದಲು ಅನುವಾದಗೊಂಡಿರುವ ಉಮರ್ ಖಯ್ಯಾಮ್ ನ ರುಬಾಯಿಗಳು ಬಹುತೇಕ ಫಿಟ್ಸ್ ಜೆರಾಲ್ಡ್ ನ ಇಂಗ್ಲೀಷ್ ಅನುವಾದದ ಮೂಲಕ ಬಂದವು. ಪರ್ಷಿಯನ್ ವಿದ್ವಾಂಸ Peter Avery ಮತ್ತು ಕವಿ John Heath-Stubbs ಅವರ ಇಂಗ್ಲೀಷ್ ಅನುವಾದವನ್ನು ಆಧರಿಸಿ, ಚಿದಂಬರ ನರೇಂದ್ರ ಅರಳಿ ಮರಕ್ಕಾಗಿ ಈ ರುಬಾಯಿಗಳನ್ನು ಕನ್ನಡಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ.
1

ನನ್ನ ಮುಖ ಸುಂದರ, ಬಣ್ಣ ಅಪ್ಪಟ ಬಂಗಾರ
ಗಲ್ಲ ಹೂ ಮಂದಾರ, ರೂಹು ಕೆತ್ತಿದ ಶ್ರೀ ಗಂಧದ ಮರ
ಯಾವ ಹುಕಿಯೋ, ಏನು ಸಂಚೋ, ನೂಕಿದ್ದಾನೆ ನನ್ನ
ನೆಲದ ಧೂಳಿನ ತೆರೆಗೆ, ಆ ಸನಾತನ ಚಿತ್ರಕಾರ.
2

ಇಕ್ಕಟ್ಟುಗಳ ನಡುವೆಯೇ ನನ್ನ ಹುಟ್ಟಿಸಲು ಮೊದಲು ಮಾಡಿದ
ಜೀವ ತುಂಬಿ ಗೊಂದಲವ ಇನ್ನೂ ಹೆಚ್ಚು ಮಾಡಿದ
ಒಲ್ಲದ ಮನಸ್ಸಿನಿಂದ ಬೇರೆಯಾಗಿದ್ದೇವೆ ಇಂದು ನಾವಿಬ್ಬರೂ
ಗೊತ್ತಾಗಿಲ್ಲ ಇನ್ನೂ, ಹುಟ್ಟು -ಬದುಕು-ವಿದಾಯಗಳ ಗಾಳಿ ಗಂಧ.
1 Comment