ಪ್ರೇಮ ಪೋಷಿಸುವ ಸಂಗತಿಯಲ್ಲ: ಜಿಡ್ಡು ಕಂಡ ಹಾಗೆ

ಪ್ರೇಮ ಒಂದು ಮಹಾ ಸ್ವಾತಂತ್ರ್ಯ, ಇಲ್ಲಿ ಹತೋಟಿಗೆ ಜಾಗ ಇಲ್ಲ. ಯಾವಾಗ ಮನಸ್ಸು ಪ್ರಶಾಂತತೆಯಲ್ಲಿ, ಅನಾಸಕ್ತಿಯಲ್ಲಿ, ನಿರಹಂಕಾರದಲ್ಲಿ ನೆಲೆಯಾಗುವುದೋ ಆಗಲೇ ಪ್ರೇಮದ ಬೀಜ ಮೊಳಕೆಯೊಡೆಯುವುದು | ಜಿಡ್ಡು ಕೃಷ್ಣಮೂರ್ತಿ ; ಕನ್ನಡಕ್ಕೆ : ಚಿದಂಬರ ನರೇಂದ್ರ

ಪ್ರೇಮ, ಕಲಿಯುವ ಮತ್ತು ಪೋಷಿಸುವ ಸಂಗತಿಯಲ್ಲ. ಪ್ರೇಮವನ್ನ ದೈವಿಕ ಮತ್ತು ದೈಹಿಕ ಎಂದೆಲ್ಲ ಭಾಗ ಮಾಡಲೂ ಆಗುವುದಿಲ್ಲ; ಅದು ಕೇವಲ ಪ್ರೇಮ ಮಾತ್ರ. “ಪರಿಚಯ ಎಲ್ಲರನ್ನ ಪ್ರೇಮಿಸುವುದು ನಿಮಗೆ ಸಾಧ್ಯವೇ?” ಎನ್ನುವ ಪ್ರಶ್ನೆಯೇ ಅಸಂಗತವಾದದ್ದು. ಹೂವು ತನ್ನ ಸುಗಂಧವನ್ನ ಯಾರಿಗೂ ಮೀಸಲಿಡುವುದಿಲ್ಲ, ಹಾಗೆಯೇ ಪ್ರೇಮ. ಪ್ರೇಮ ನೆನಪು ಕೂಡ ಅಲ್ಲ. ಪ್ರೇಮ, ಬುದ್ಧಿ ಮತ್ತು ಮನಸ್ಸಿನ ವ್ಯವಹಾರವೂ ಅಲ್ಲ. ಮನುಷ್ಯ ತನ್ನ ಅಸ್ತಿತ್ವದ ಸಮಸ್ಯೆಗಳಾದ ಭಯ, ಅಸೂಯೆ, ಭರವಸೆ, ಹತಾಶೆಗಳನ್ನ ಪೂರ್ಣವಾಗಿ ಅರ್ಥಮಾಡಿಕೊಂಡು ಬಗೆಹರಿಸಿಕೊಂಡಾಗ, ಪ್ರೇಮ ಸಹಜವಾಗಿ ಅಂತಃಕರಣದ ರೂಪದಲ್ಲಿ ಅವತಾರ ತಾಳುತ್ತದೆ.

ಮಹತ್ವಾಕಾಂಕ್ಷಿ ಮನುಷ್ಯ ಯಾವತ್ತೂ ಪ್ರೇಮಿಸಲಾರ. ತನ್ನ ಕುಟುಂಬಕ್ಕೆ ಅಂಟಿಕೊಂಡಿರುವ ಮನುಷ್ಯನಿಗೆ ಪ್ರೇಮ ಸಾಧ್ಯವಾಗುವುದಿಲ್ಲ. ನನ್ನ ಹೆಂಡತಿಯನ್ನ ಪ್ರೀತಿಸುತ್ತೇನೆ ಎನ್ನುವ ಮಾತಿನಲ್ಲೂ ಯಾವ ಅರ್ಥ ಇಲ್ಲ, ಅಲ್ಲಿ ಇರುವುದು ಅಸೂಯೆ, ಹಕ್ಕು ಮತ್ತು ಅಧಿಕಾರಗಳೇ ಹೊರತು ಪ್ರೇಮವಲ್ಲ.

ಪ್ರೇಮ ಒಂದು ಮಹಾ ಸ್ವಾತಂತ್ರ್ಯ, ಇಲ್ಲಿ ಹತೋಟಿಗೆ ಜಾಗ ಇಲ್ಲ. ಯಾವಾಗ ಮನಸ್ಸು ಪ್ರಶಾಂತತೆಯಲ್ಲಿ, ಅನಾಸಕ್ತಿಯಲ್ಲಿ, ನಿರಹಂಕಾರದಲ್ಲಿ ನೆಲೆಯಾಗುವುದೋ ಆಗಲೇ ಪ್ರೇಮದ ಬೀಜ ಮೊಳಕೆಯೊಡೆಯುವುದು.

ಪ್ರೇಮ ಇಲ್ಲದೇ, ಎಷ್ಟು ದೇವರನ್ನ ಪೂಜಿಸಿದರೂ, ಏನೇ ದಾನ ಧರ್ಮ ಮಾಡಿದರೂ, ಎಂಥ ಅದ್ಭುತ ಸಾಹಿತ್ಯ ರಚಿಸಿದರೂ ಎಲ್ಲ ಪ್ರಾಣವಿಲ್ಲದ ದೇಹದಂತೆ. ಪ್ರೇಮದ ಅನುಪಸ್ಥಿತಿಯಲ್ಲಿ ನಿಮ್ಮ ಸಮಸ್ಯೆಗಳು ಕೊನೆಯಿಲ್ಲದಂತೆ ಹೆಚ್ಚುತ್ತಲೇ ಹೋಗುತ್ತವೆ. ಪ್ರೇಮವಿರುವಾಗ ಅಪಾಯದ ಭೀತಿಯಿಲ್ಲ, ಸಂಘರ್ಷದ ಸಾಧ್ಯತೆಯಿಲ್ಲ.

ಪ್ರೇಮದ ಸ್ಥಿತಿಯಲ್ಲಿರದ ಮನಸ್ಸು ಧಾರ್ಮಿಕವಾಗಲು ಸಾಧ್ಯವೇ ಇಲ್ಲ ಮತ್ತು ತನ್ನ ಎಲ್ಲ ಸಮಸ್ಯೆಗಳನ್ನ ನೀಗಿಸಿಕೊಂಡ ಧಾರ್ಮಿಕ ಮನಸ್ಸಿಗೆ ಮಾತ್ರ ಪ್ರೇಮದ ಚೆಲುವು ಮತ್ತು ಸತ್ಯದ ಬೆಳಕಿನ ಅನುಭವ ಸಾಧ್ಯ.

Leave a Reply