ಅಹಂಕಾರದ ಜ್ವರ ಇಳಿಸುವ ವಿದ್ವಾಂಸರ ಸಹವಾಸ : ನೀತಿಶತಕದಿಂದ, ಸುಭಾಷಿತ…

ನಮ್ಮ ವಿದ್ವತ್ತಿನ ಮಟ್ಟವನ್ನು ನಮಗಿಂತಲೂ ಹೆಚ್ಚು ವಿದ್ವಾಂಸರಾದರೊಡನೆ ತುಲನೆ ಮಾಡಿದಾಗ ನಾವೆಷ್ಟು ಚಿಕ್ಕವರು, ನಾವು ಓದುವುದು ಇನ್ನೂ ಇದೆ ಎನ್ನುವ ಅರಿವು ಮೂಡುತ್ತದೆ. ಆ ಅರಿವು ಮುಂದಿನ ಪ್ರಗತಿಗೆ ಪೂರಕವಾಗುತ್ತದೆ : ಭರ್ತೃಹರಿ


ಯದಾ ಕಿಂಚಿತ್ ಜ್ಞೋsಹಂ ದ್ವಿಪ ಇವ ಮದಾಂಧಃ ಸಮಭವಂ –
ತದಾ ಸರ್ವಜ್ಞೋsಸ್ಮೀತ್ಯ ಭವದಲಿಪ್ತಂ ಮಮ ಮನಃ |
ಯದಾ ಕಿಂಚಿತ್ ಕಿಂಚಿತ್ ಬುಧ ಜನ ಸಕಾಶಾದವಗತಮ್
ತದಾ ಮೂರ್ಖೋಸ್ಮೀತಿ ಜ್ವರ ಇವ ಮದೋಂ ಮೇ ವ್ಯಪಗತಃ ||ನೀತಿಶತಕ ||
ಅರ್ಥ: ಅಲ್ಪ ಜ್ಞಾನವಿದ್ದಾಗ ನಾನು ಮದಗಜದಂತೆ ಮದಾಂಧನಾಗಿದ್ದೆ. ನನ್ನ ಚಿತ್ತ ಭಿತ್ತಿಯಲ್ಲಿ ನಾನೇ ಸರ್ವಜ್ಞನೆಂಬ ಗರ್ವವಿತ್ತು. ಆದರೆ ಯಾವಾಗ ವಿದ್ವಾಂಸರ ಸಹವಾಸಕ್ಕೆ ಬರತೊಡಗಿದನೋ ಆಗ ನನಗೆ ಸ್ವಲ್ಪಮಟ್ಟಿಗೆ ಜ್ಞಾನೋದಯವಾಯಿತು. ನಾನು ಮೂರ್ಖನೆಂಬುದು ಅರಿವಾಯಿತು. ನನ್ನ ತಲೆಗೆ ಏರಿದ್ದ ಅಹಂಕಾರವು ವಿಷಮ ಜ್ವರ ಇಳಿದಂತೆ ಇಳಿದು ಹೋಯಿತು.
ತಾತ್ಪರ್ಯ: ದೊಡ್ಡ ದೊಡ್ಡ ಮರಗಳು ಇರದೇ ಇರುವ ಸ್ಥಳದಲ್ಲಿ ಚಗಟೆ ಗಿಡಗಳೂ ಸಹ ತಾವೇ ಹೆಮ್ಮರವೆಂದು ಹಿಗ್ಗುತ್ತವೆಯಂತೆ. ಹಾಗೆ ತನಗಿಂತಲೂ ದೊಡ್ಡವರಾದ ವಿದ್ವಾಂಸರ ಸಂಪರ್ಕಕ್ಕೆ ಬಾರದೇ ಇರುವ ವ್ಯಕ್ತಿ ತಾನೇ ದೊಡ್ಡ ಪಂಡಿತನೆಂದು ತಿಳಿದು ಗರ್ವ ಪಡುತ್ತಾನೆ. ಅಲ್ಪ ವಿದ್ಯೆಗೆ ಮಹಾಗರ್ವವಂತೆ. ಆದರೆ ತುಂಬಿದ ಕೊಡ ಎಂದೂ ತುಳುಕುವುದಿಲ್ಲ. ತುಂಬಾ ವಿದ್ಯಾವಂತರು ಮತ್ತು ವಿದ್ವಾಂಸರು ಯಾವಾಗಲೂ ವಿನಯದಿಂದಲೇ ಕೂಡಿರುತ್ತಾರೆ. ಇದು ಲೋಕದಲ್ಲಿ ಕಾಣುವ ಸತ್ಯ. ಜಗತ್ತಿನಲ್ಲಿ ಒಂದು ಪರ್ವತಕ್ಕಿಂತ ಇನ್ನೊಂದು ಪರ್ವತ ಯಾವಾಗಲೂ ಎತ್ತರವಾಗಿರುತ್ತದೆ. ನಮ್ಮ ವಿದ್ವತ್ತಿನ ಮಟ್ಟವನ್ನು ನಮಗಿಂತಲೂ ಹೆಚ್ಚು ವಿದ್ವಾಂಸರಾದರೊಡನೆ ತುಲನೆ ಮಾಡಿದಾಗ ನಾವೆಷ್ಟು ಚಿಕ್ಕವರು, ನಾವು ಓದುವುದು ಇನ್ನೂ ಇದೆ ಎನ್ನುವ ಅರಿವು ಮೂಡುತ್ತದೆ. ಆ ಅರಿವು ಮುಂದಿನ ಪ್ರಗತಿಗೆ ಪೂರಕವಾಗುತ್ತದೆ.
ವಿದ್ಯೆಯಿದ್ದಲ್ಲಿ ವಿನಯ ಇರುವುದು ಬಹಳ ಅಪರೂಪ. ಅಧಿಕಾರ ಇದ್ದಲ್ಲಿ ಅಹಂಕಾರ, ಯೌವ್ವನ ಇದ್ದಲ್ಲಿ ಸೊಕ್ಕು ಮೊದಲಾದವುಗಳು ಇದ್ದೇ ಇರುತ್ತವೆ. ಆದರೆ ಕೆಲವರು ಇದನ್ನೆಲ್ಲ ಮೀರಿ ನಿಂತಿರುತ್ತಾರೆ. ಸಂಪತ್ತು ತರುವ ಅಹಂಕಾರಕ್ಕಿಂತಲೂ ವಿದ್ಯೆ ಮತ್ತು ಅದರಿಂದ ಬರುವ ಲೋಕ ಗೌರವ ತರುವ ಅಹಂಕಾರ ಇನ್ನೂ ದೊಡ್ಡದು. ಅದು ಆನೆಗೆ ಬಂದ ಮದದಂತೆ. ಮನಸ್ಸಿಗೆ ಬಂದಂತೆ ಯಾರನ್ನೂ ಲಕ್ಷಿಸದೇ ಧಾವಿಸಿ ಹೋಗುತ್ತದೆ. ಆದರೆ ಆನೆಯ ಮದ ಶಾಶ್ವತವಲ್ಲ. ಹಾಗೆಯೇ ಮಿಥ್ಯಾ ಅಹಂಕಾರವೂ ಶಾಶ್ವತವಲ್ಲ.
ಅಲ್ಪ ಸ್ವಲ್ಪ ತಿಳಿದವರು ತಮಗೆ ಎಲ್ಲವೂ ತಿಳಿದಿದೆ ಎಂದು ಭಾವಿಸುತ್ತಾರೆ. ಅವರಲ್ಲಿ ವಿದ್ಯೆಗಿಂತ ಹೆಚ್ಚು ಅಹಂಕಾರವೇ ಇರುತ್ತದೆ. ಆದರೆ ಯಾವುದೋ ಸುಕೃತದಿಂದ ಶ್ರೇಷ್ಠರಾದ ವಿದ್ವಾಂಸರ ಸಂಪರ್ಕ ಅವರಿಗೆ ಬಂದಾಗ, ತಮ್ಮ ಜ್ಞಾನ ಏನೂ ಅಲ್ಲವೆಂಬ ಅರಿವು ಮೂಡುತ್ತದೆ. ಈ ಅರಿವು ಸಾಧ್ಯವಾದವರು ಮುಂದಿನ ಜೀವನದಲ್ಲಿ ಪ್ರಗತಿ ಸಾಧಿಸುವ ಅವಕಾಶ ಇರುತ್ತದೆ. ಇಲ್ಲವಾದರೆ ಅಂಥವರು ಜೀವಮಾನವಿಡೀ ಅಹಂಕಾರ ಮತ್ತು ಮೂರ್ಖತನಗಳಲ್ಲೇ ಉಳಿಸುಬಿಡುತ್ತಾರೆ.

Leave a Reply