ಶ್ರೀರಾಮ ಹೇಳಿದ ‘ವೃದ್ಧರ ಮಹತ್ವ’

ದಶರಥ ಮಹಾರಾಜ ತಾನು ತನ್ನ ಮಗನಿಗೆ ಪಟ್ಟಾಭಿಷೇಕ ಮಾಡಿ ವಾನಪ್ರಸ್ಥ ಸ್ವೀಕರಿಸುತ್ತೇನೆಂದು ಹೇಳುತ್ತಾನೆ. ವಾನಪ್ರಸ್ಥ ಅಂದರೆ ಮನೆ ತೊರೆದು ಕಾಡಿಗೆ ಹೋಗುವುದು. ತಂದೆಯ ಈ ನಿರ್ಧಾರವನ್ನು ಕೇಳಿ ವಿಚಲಿತನಾಗುವ ಶ್ರೀರಾಮ ತನ್ನ ದುಃಖವನ್ನು ಸೀತೆಯೊಡನೆ ತೋಡಿಕೊಳ್ಳುತ್ತಾ ಮನೆಯಲ್ಲಿ ವೃದ್ಧರು ಯಾಕೆ ಇರಬೇಕು ಎಂದು ಹೇಳುತ್ತಾನೆ. ಈ ಸಂಭಾಷಣೆ ಹೀಗಿದೆ:

ಪರಿವಾರದ ವೃದ್ಧರು, ನಮ್ಮ ಮಾರ್ಗದರ್ಶಕರು. ನಮ್ಮ ಶ್ರದ್ಧೆಯ ಕೇಂದ್ರ. ನಮ್ಮ ಪಾಲಿನ ದೇವರು. ಅವರು ತೋರಿದ ಮಾರ್ಗದಲ್ಲೇ ನಾವು ನಡೆಯುವುದು. ಅವರು ನಮ್ಮ ಗುರುಗಳು. ನಮ್ಮ ಶಿಕ್ಷಕರು. ಸೀತೆ, ಕೆಲವು ಭಾಗ್ಯಶಾಲಿಗಳಿರುತ್ತಾರೆ, ಅವರ ಪರಿವಾರದಲ್ಲಿ ವೃದ್ಧರು ಇರುತ್ತಾರೆ ಮತ್ತು ಮನೆಯವರು ಅವರ ಮಹತ್ವ ಅರಿತಿರುತ್ತಾರೆ.

ಆದರೆ ಕೆಲವರು ಮನೆಯಲ್ಲಿ ವೃದ್ದರು ಇದ್ದರೂ ಅವರು ವೃದ್ಧರ ಮಹತ್ವ ಅರಿತಿರುವುದಿಲ್ಲ. ಅವರನ್ನು ಹೊರೆ ಅಂದುಕೊಳ್ಳುತ್ತಾರೆ. ನಮ್ಮ ಅಜ್ಜ ಮತ್ತು ನಮ್ಮ ಪಿತಾಶ್ರೀಯಂಥ ಹಿರಿಯರ ಕಾರಣದಿಂದ  ನಮ್ಮ ಪರಿವಾರ ಶ್ರೀಮಂತವಾಗಿರುತ್ತದೆ. ಇಂಥವರ ಸಹವಾಸವೇ ನಮಗೆ ಧನ ಸಂಪತ್ತು. ನಮ್ಮ ಸಮೃದ್ಧಿ.

ಸೀತೆ, ಮನೆ ರಾಜಭವನವಾಗಿರಬಹುದು ಅಥವಾ ಗುಡಿಸಲು, ಅದಕ್ಕೆ ಸೂರು ಇರುತ್ತದೆ. ನಾವು ಮನೆಯನ್ನು ಪ್ರವೇಶಿಸುವಾಗ ನಾವು ನಿಶ್ಚಿಂತೆಯಿಂದ ಪ್ರವೇಶಿಸುತ್ತೇವೆ. ಏಕೆಂದರೆ ನಮಗೆ ಗೊತ್ತಿದೆ, ಸೂರು ನಮ್ಮ ರಕ್ಷಣೆ ಮಾಡುವುದೆಂದು. ಅದೇ ಪ್ರಕಾರ, ವೃದ್ಧರೂ ಒಂದು ಪರಿವಾರದಲ್ಲಿ ಸೂರಿನಂತೆ ಇರುತ್ತಾರೆ. ಅವರನ್ನು ಪರಿವಾರದ ಎಲ್ಲ ಸದಸ್ಯರೂ ಅವಲಂಬಿಸಿರುತ್ತಾರೆ. ಈ ವೃದ್ಧರು ಗೃಹಪರಿವಾರದ ಆಧಾರವಾಗಿರುತ್ತಾರೆ. ಸ್ತಂಭವಾಗಿರುತ್ತಾರೆ. ಇಂಥಾ ವ್ಯವಸ್ಥೆ ನಮಗೆ ಸಂಸ್ಕಾರ ನೀಡುತ್ತದೆ. ಶಿಕ್ಷಣ ನೀಡುತ್ತದೆ. ಮತ್ತು ನಾವು ತಪ್ಪು ಕೆಲಸ ಮಾಡಿದಾಗ ನಮ್ಮನ್ನು ಗದರುತ್ತದೆ. ಮತ್ತು ನಾವು ಒಳ್ಳೆಯ ಕೆಲಸ ಮಾಡಿದಾಗ ನಮ್ಮ ಬೆನ್ನು ತಟ್ಟುತ್ತ ನಮ್ಮ ಉತ್ಸಾಹ ಹೆಚ್ಚಿಸುತ್ತದೆ. ಇಂಥಾ ವೃದ್ಧರು ಪ್ರತಿ ಮನೆಯ ಗುರುತಾಗಿರುತ್ತಾರೆ. ಸೂರೇ ಇಲ್ಲದ, ಸ್ತಂಭವೇ ಇಲ್ಲದ ಮನೆ ಮನೆಯಾಗಿ ನಿಲ್ಲಬಲ್ಲದೆ ಸೀತೆ? ಹಾಗೇ ವೃದ್ಧರಿಲ್ಲದ ಮನೆಯೂ ಏಕಸೂತ್ರದಲ್ಲಿ ತನ್ನನ್ನು ಬಂಧಿಸಿಕೊಳ್ಳಲಾರದು.

ಈ ರಾಮನನ್ನು ಜನ ಹೇಗೆ ಗುರುತಿಸುತ್ತಾರೆ ಸೀತೆ? ಏನು ಕರೆಯುತ್ತಾರೆ? ರಘುನಂದನ ರಾಮ. ದಶರಥಿ ರಾಮ. ಕೌಸಲ್ಯಾನಂದನ ರಾಮ. ನನ್ನ ಸ್ವಂತ ಗುರುತು ನನ್ನ ತಂದೆ ತಾಯಿ ಮತ್ತು ಪೂರ್ವಜರಿಂದ ಬಂದಿದೆ. ಆದ್ದರಿಂದ ತಂದೆಯ ನಿವೃತ್ತರಾಗುವ ವಿಚಾರದಿಂದ ನಾನು ವಿಚಲಿತನಾಗಿದ್ದೇನೆ. ನನ್ನ ತಂದೆ ಇಲ್ಲದಿದ್ದರೆ ನನಗೂ ಅಸ್ತಿತ್ವವಿಲ್ಲ. ನನ್ನ ತಂದೆಯನ್ನು ಬಿಟ್ಟುಕೊಡುವುದು ಅಂದರೆ ನನ್ನ ಅಸ್ತಿತ್ವವನ್ನೇ ಬಿಟ್ಟುಕೊಟ್ಟಂತೆ. ಹೀಗಿರುವಾಗ ಅಪ್ಪ ವಾನಪ್ರಸ್ಥ ಸ್ವೀಕರಿಸುವುದನ್ನು ಹೇಗೆ ಒಪ್ಪಿಕೊಳ್ಳಲಿ ಸೀತೆ?

ರಾಮಚಂದ್ರನ ಈ ಮಾತುಗಳು ತನ್ನ ತಂದೆಯ ಕುರಿತಾಗಿ ಮಾತ್ರವಲ್ಲದೆ, ತನ್ನ ತಂದೆಯ ಆಯುವಿನ ಪ್ರತಿಯೊಬ್ಬರ ಕುರಿತಾಗಿಯೂ ಇರುವುದನ್ನು ಗಮನಿಸಬೇಕು. ಈ ಮಾತುಗಳು ರಾಮನ ಸಮಷ್ಟಿ ದೃಷ್ಟಿಗೆ ಒಂದು ಉದಾಹರಣೆಯಾಗಿದೆ.

Leave a Reply