ಪ್ರೇಮಿಯು ಪ್ರಿಯನನ್ನೇ ಎಲ್ಲದರಲ್ಲೂ ಕಾಣುವಂತೆ; ಬ್ರಹ್ಮಸತ್ತೆಯನ್ನು ಮಾತ್ರವೇ ಭಾವಿಸಿ, ಪ್ರತಿಮೆಯಲ್ಲಿ ಪ್ರತಿಮಾಪನೆಯು ಹಾರಿ ಹೋಗಲಿ, ಚೈತನ್ಯ ಸ್ವರೂಪ ಭಗವಂತನನ್ನು ಮಾತ್ರವೇ ದರ್ಶಿಸಿ ~ ಸ್ವಾಮಿ ರಾಮತೀರ್ಥ
ತನ್ನ ವಿಚಾರಗಳು ಮತ್ತು ಚಿಂತನೆಗಳಂತೆ ಮನುಷ್ಯನು ರೂಪುಗೊಳ್ಳುತ್ತಾನೆ. ಬ್ರಹ್ಮಚಿಂತನೆಯನ್ನೇ ದೃಢಗೊಳಿಸಿಕೊಂಡರೆ, ಅವನೂ ಸ್ವತಃ ಬ್ರಹ್ಮರೂಪನೇ ಆಗುತ್ತಾನೆ. ಇದರ ಬಗ್ಗೆ ಶೃತಿಯು ಹೀಗೆ ಹೇಳುತ್ತದೆ:
ಬ್ರಹ್ಮವೇದ ಬ್ರಹ್ಮೈವ ಭವತಿ : ಯಾರು ಬ್ರಹ್ಮವನ್ನು ತಿಳಿಯುತ್ತಾರೋ, ಅವರು ಬ್ರಹ್ಮನೇ ಆಗುತ್ತಾರೆ.
ಪ್ರತೀಕ ಮತ್ತು ಅಹಂಗ್ರಹ ಉಪಾಸನೆ ಎರಡೂ ನಾಮರೂಪಿ ಸಂಸಾರವನ್ನು ಕೆಡವಲು ಇಷ್ಟಪಡುತ್ತವೆ ಹೊರತು, ಕಟ್ಟಲು ಅಲ್ಲ. ಜಲವು ಬ್ರಹ್ಮ, ಸ್ಥಳವು ಬ್ರಹ್ಮ, ಗಾಳಿಯು ಬ್ರಹ್ಮ ಆಕಾಶವು ಬ್ರಹ್ಮ, ಗಂಗೆಯು ಬ್ರಹ್ಮ ಇತ್ಯಾದಿ ಪ್ರತೀಕ ಉಪಾಸನೆಯ ರೂಪದರ್ಶಕ ವಾಕ್ಯಗಳಲ್ಲಿ ಜಲ, ಸ್ಥಳ, ಗಾಳಿ ಇತ್ಯಾದಿಗಳ ಜೊತೆಯಲ್ಲಿ ಬ್ರಹ್ಮನನ್ನು ಎಲ್ಲಿಯೂ ಸೇರಿಸಬಾರದು. ಉಪಾಸನೆ ಮಾಡುವಾಗ ಧಾರೆಯ ರೂಪದ ಜಲವು ದೃಷ್ಟಿಯಲ್ಲಿ ಇರದಿರಲಿ, ಬ್ರಹ್ಮ ಚಿತ್ತದಲ್ಲಿ ಕರಗಿ, ಸ್ಪರ್ಶ ರೂಪದ ಗಾಳಿಯು ದೃಷ್ಟಿಯಿಂದ ಬಿದ್ದು ಹೋಗಲಿ. ಬ್ರಹ್ಮಸತ್ತೆಯನ್ನು ಮಾತ್ರವೇ ಭಾವಿಸಿ, ಪ್ರತಿಮೆಯಲ್ಲಿ ಪ್ರತಿಮಾಪನೆಯು ಹಾರಿ ಹೋಗಲಿ, ಚೈತನ್ಯ ಸ್ವರೂಪ ಭಗವಂತನನ್ನು ಮಾತ್ರವೇ ದರ್ಶಿಸಿ.
ಇದು ಹೇಗೆಂದರೆ;
ಪ್ರೇಮದ ಉತ್ಕಟತೆಯಲ್ಲಿರುವ ಪ್ರೇಮಿಕೆಯು ಪ್ರಿಯತಮನ ಪತ್ರವನ್ನು ಓದುತ್ತಾಳೆ. ಅವಳ ದೃಷ್ಟಿಯು ಪ್ರಿಯನ ಸ್ವರೂಪದಿಂದ ತುಂಬಿಹೋಗಿದೆ. ಈಗ ಆ ಪತ್ರವು ಅವಳಿಗೆ ಹೇಗೆ ಕಾಣಿಸುತ್ತದೆ? ಕೇವಲ ಕಾಗದ ಮತ್ತು ಅಕ್ಷರಗಳಾಗಿಯೇ? ಅಲ್ಲ! ಸ್ವತಃ ಪ್ರಿಯತಮನಂತೆ ಕಾಣುತ್ತದೆ!!
ಗೋಪಿಯರ ಬಳಿಗೆ ಉದ್ಧವನು ಕೃಷ್ಣ ಪತ್ರವನ್ನು ಒಯ್ಯುತ್ತಾನೆ. ಆಗ ಗೋಪಿಕೆಯರು ಹೇಳುತ್ತಾರೆ, “ಈ ಪತ್ರವನ್ನು ನಾವು ಎಲ್ಲಿಟ್ಟುಕೊಳ್ಳೋಣ? ಎದೆಯ ಮೇಲಿಟ್ಟುಕೊಂಡರೆ ದಹಿಸಿ ಹೋಗುತ್ತದೆ. ಕಣ್ಣುಗಳ ಮೇಲಿಟ್ಟುಕೊಂಡರೆ ತೊಯ್ದು ಒದ್ದೆಯಾಗಿಬಿಡುತ್ತದೆ!!
ಪ್ರೇಮದಲ್ಲಿ ತಾದಾತ್ಮ್ಯಗೊಂಡವರ ಅವಸ್ಥೆ ಇದು. ಹೀಗೆಯೇ ಉಪಾಸನೆಯೂ.
ಅದು ಪ್ರಿಯನು ಕಳುಹಿಸಿದ ಪತ್ರವಾಗಿರಲಿ, ಸ್ಮರಣಿಕೆಯಾಗಿರಲಿ ಅದು ಸ್ವತಃ ಪ್ರೇಮಿಯೇ.
ಅದು ಜಲವಿರಲಿ, ಸ್ಥಳವಿರಲಿ, ಗಾಳಿಯಿರಲಿ…. ಅವನ್ನು ಬ್ರಹ್ಮವೆಂದು ಪ್ರತ್ಯೇಕ ಹೇಳಬೇಕಿಲ್ಲ. ಜಲವೆಂದರೆ ಬ್ರಹ್ಮವೇ. ಸ್ಥಳವೆಂದರೆ, ಗಾಳಿಯೆಂದರೆ ಬ್ರಹ್ಮವೇ.