ಭಕ್ತಿಯಲ್ಲಿ ಏಕನಿಷ್ಠೆಯ ಅಪಾಯ : ವಿವೇಕ ವಿಚಾರ

ಏಕನಿಷ್ಠರಾಗಿದ್ದೂ ಪರರನ್ನು ದೂಷಿಸದೆ ಗೌರವಿಸುವ ಭಕ್ತಿಯೇ ಸಾರ್ಥಕ ಭಕ್ತಿ ಎಂದು ಸ್ವಾಮಿ ವಿವೇಕಾನಂದರು ತಮ್ಮ ಈ ಭಾಷಣದಲ್ಲಿ ವಿವರಿಸಿದ್ದಾರೆ । 1896, ಜನವರಿ 20ರಂದು ನ್ಯೂಯಾರ್ಕ್ ನಲ್ಲಿ ನೀಡಿದ ತರಗತಿಯ ಉಪನ್ಯಾಸದ ಆಯ್ದ ಭಾಗ

ಭಗವಂತನ ಪೂಜೆಯೇ ಭಕ್ತಿ. ಆದರೆ ಭಗವಂತನನ್ನು ಅನೇಕ ರೂಪಗಳಲ್ಲಿ ಅನೇಕ ಭಾವನೆಗಳ ಮೂಲಕ ಪೂಜಿಸಬಹುದು. ಈ ಎಲ್ಲ ಭಾವನೆಗಳೂ ಸರಿಯಾದವು ಮತ್ತು ಒಳ್ಳೆಯವು. ನಮ್ಮ ಪುರಾತನ ಭಕ್ತನ ಬೋಧನೆ ಹೇಳುವಂತೆ, ‘ಎಲ್ಲ ಹೂವುಗಳಿಂದಲೂ ಮಕರಂದವನ್ನು ಹೀರಿ, ಎಲ್ಲರೊಡನೆಯೂ ಗೌರವದಿಂದ ಬೆರೆಯಿರಿ, ಎಲ್ಲದಕ್ಕೂ ಸಮ್ಮತಿ ತೋರಿಸಿ. ಆದರೆ ನಿಮ್ಮ ನೆಲೆಯಿಂದ ಮಾತ್ರ ಕದಲಬೇಡಿ.”

ಈ ರೀತಿ ನಿಮ್ಮ ನೆಲೆಯನ್ನು ಬಿಡದಿರುವುದೇ ನಿಷ್ಠೆ. ಇತರರ ಆದರ್ಶಗಳನ್ನು ದ್ವೇಷಿಸ ಬೇಕಾಗಿಲ್ಲ, ನಿಂದಿಸಬೇಕಾಗಿಲ್ಲ. ಎಲ್ಲವೂ ಯಥಾರ್ಥವಾದವುಗಳೇ. ಆದರೆ ಅದೇ ಸಂದರ್ಭದಲ್ಲಿ, ನಮ್ಮ ಆದರ್ಶವನ್ನು ಗಟ್ಟಿಯಾಗಿ ಹಿಡಿದುಕೊಂಡಿರಬೇಕು.


ರಾಮಭಕ್ತ ಹನುಮಂತನ ಒಂದು ಕಥೆಯಿದೆ. ಅವನ ಜೀವನಾವಧಿಯಲ್ಲಿಯೇ ರಾಮನು ಮತ್ತೆ ಕೃಷ್ಣನಾಗಿ ಅವತರಿಸಿದನು. ಯೋಗಿಯಾದ ಹನುಮಂತನಿಗೆ ದೇವರು ಪುನಃ ಶ್ರೀಕೃಷ್ಣನಾಗಿ ಅವತರಿಸಿರುವುದು ತಿಳಿದಿತ್ತು. ಅವನು ಬಂದು ಶ್ರೀಕೃಷ್ಣನ ಸೇವೆ ಮಾಡಿದನು. ಆದರೆ ಅವನಿಗೆ ಹೇಳಿದನು. ‘ನಾನು ನಿನ್ನ – ರಾಮರೂಪವನ್ನು ನೋಡಲು ಇಚ್ಛಿಸುತ್ತೇನೆ.” ಕೃಷ್ಣನು ಹೇಳಿದನು: – “ಈ ರೂಪವೇ ಸಾಲದೆ? ನಾನೇ ಕೃಷ್ಣ ನಾನೇ ರಾಮ. ಈ ಎಲ್ಲ ರೂಪಗಳೂ ನನ್ನವೇ.” ಹನುಮಂತನು ಹೇಳಿದ : “ಅದು ನನಗೆ ಗೊತ್ತು. ಆದರೆ ನನಗೆ ರಾಮನ ರೂಪವೇ ಇಷ್ಟ, ಶ್ರೀನಾಥ ಮತ್ತು ಜಾನಕೀನಾಥ ಇಬ್ಬರೂ ಒಂದೇ, “ಇಬ್ಬರೂ ಪರಮಾತ್ಮನ ಅವತಾರಗಳೇ ಆದರೂ ಕಮಲಲೋಚನನಾದ ರಾಮನೇ ನನ್ನ ಸರ್ವಸ್ವ.” ಇದು ಏಕನಿಷ್ಠೆ.

ವಿವಿಧ ರೂಪದ ಪೂಜೆಗಳು
ಸರಿಯೆಂದು ಗೊತ್ತಿದ್ದರೂ ಒಂದಕ್ಕೆ ನಿಷ್ಠರಾಗಿದ್ದು ಉಳಿದವನ್ನು ನಿರಾಕರಿಸಿದರೂ, ನಾವು ಅವನ್ನು ದ್ವೇಷಿಸುವುದಾಗಲಿ ನಿಂದಿಸುವುದಾಗಲಿ ಮಾಡಕೂಡದು ಬದಲಿಗೆ ಗೌರವಿಸಬೇಕು.


ಗಿಡದ ಸುತ್ತ, ಪ್ರಾಣಿಗಳು ಅದನ್ನು ತಿನ್ನದಿರಲೆಂದು ಬೇಲಿ ಕಟ್ಟಬೇಕು. ಆದರೆ ಅದು ಬೆಳೆದು ಹೆಮ್ಮರವಾದಮೇಲೆ ಯಾವ ಬೇಲಿಯ ಅವಶ್ಯಕತೆಯೂ ಇಲ್ಲ. ಹಾಗೆಯೇ ಆಧ್ಯಾತ್ಮಿಕತೆಯು ಬಿಜ ಬೆಳೆಯುತ್ತಿರುವಾಗ ಅದನ್ನು ಎಚ್ಚರಿಕೆಯಿಂದ ರಕ್ಷಿಸಬೇಕು. ಪ್ರಾರಂಭದ ಹಂತದಲ್ಲಿ ನಾವು ಮತೀಯರಾಗುವುದು ಅನಿವಾರ್ಯ. ಆದರೆ ಆ ಮತೀಯತೆ ಯಾರನ್ನೂ ನಿರಾಕರಿಸುವುದಾಗಿರಬಾರದು.

ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಮತವಿರಬೇಕು. ಆ ಮತವೇ ನಮ್ಮ ಇಷ್ಟ, ನಮ್ಮ ಆಯ್ಕೆಯ ಮಾರ್ಗ. ಆದರೆ ಆ ಆದರ್ಶವನ್ನು ಹಿಡಿದುಕೊಳ್ಳುವುದಕ್ಕಾಗಿ ನಾವು ಇತರರನ್ನು ನಾಶ ಮಾಡಬಾರದು. ನನ್ನ ಇಷ್ಟ ನನಗೆ ಪವಿತ್ರವಾದುದು ಅದನ್ನು ನನ್ನ ಸಹೋದರನ ಮೇಲೆ ಹೇರುವಂತಿಲ್ಲ. ಪ್ರತಿಯೊಬ್ಬರಿಗೂ ಅವರವರ ಇಷ್ಟ ಪವಿತ್ರ. ಆದ್ದರಿಂದ ಆ ಇಷ್ಟವನ್ನು ನಿಮ್ಮದಾಗಿಯೇ ಇಟ್ಟುಕೊಳ್ಳಿ.

ಪ್ರತಿಯೊಬ್ಬ ಸಾಧಕನೂ ಈ ಭಾವವನ್ನು ಅನುಸರಿಸಬೇಕು. ನಿಮ್ಮ ಇಷ್ಟದೇವತೆಯನ್ನು ಪ್ರಾರ್ಥಿಸು ವಾಗ ಆ ದೇವತೆಯೊಂದೇ ನಿಮ್ಮ ಸರ್ವಸ್ವವಾಗಬೇಕು. ಭಗವಂತನ ಅನೇಕ ರೂಪಗಳಿರಬಹುದು, ಆದರೆ ಆ ಸಂದರ್ಭದಲ್ಲಿ ನಿಮ್ಮ ಇಷ್ಟದೇವತೆಯೊಂದೇ ನಿಮ್ಮ ಪಾಲಿಗಿರುವುದು.
ಈ ಇಷ್ಟಸಾಧನೆಯಲ್ಲಿ ತುಂಬ ಮುಂದುವರಿದಮೇಲೆ- ಆಧ್ಯಾತ್ಮಿಕ ಸಸಿಯು ಸಾಕಷ್ಟು ಬೆಳೆದ ಮೇಲೆ, ನಿಮ್ಮ ಅಂತರಂಗವು ಬಲಿಷ್ಠವಾದ ಮೇಲೆ, ಮತ್ತು ನಿಮ್ಮ ಇಷ್ಟದೇವತೆಯೇ ಎಲ್ಲೆಲ್ಲಿಯೂ ಇರುವುದೆಂದೂ ಅರಿತಮೇಲೆ-ಸ್ವಾಭಾವಿಕವಾಗಿಯೇ ಈ ಎಲ್ಲ ಬಂಧನಗಳೂ ಕಳಚಿಬೀಳುವುವು. ಹಣ್ಣು ಗಳಿತಮೇಲೆ ತನ್ನ ಭಾರದಿಂದಲೇ ಕೆಳಕ್ಕೆ ಬೀಳುತ್ತದೆ. ನೀವು ಅಪಕ್ವವಾದ ಹಣ್ಣನ್ನು ಕಿತ್ತರೆ ಅದು ಹುಳಿಯಾಗಿರುತ್ತದೆ. ಆದ್ದರಿಂದ ನಾವು ಈ ಆಲೋಚನೆಯಲ್ಲಿ ಬೆಳೆಯಬೇಕು.


ಒಂದು ಭಾವನೆಯನ್ನು ತೆಗೆದುಕೊಳ್ಳಿ, ಒಂದು ಇಷ್ಟವನ್ನು ಸ್ವೀಕರಿಸಿ. ನಿಮ್ಮ ಇಡೀ ವ್ಯಕ್ತಿತ್ವವನ್ನು ಅದಕ್ಕೆ ಅರ್ಪಿಸಿ. ಪ್ರತಿಫಲ ದೊರೆಯುವವರೆಗೂ, ನಿಮ್ಮಾತ್ಮ ಬೆಳೆಯುವವರೆಗೂ ದಿನದಿನವೂ ಅದನ್ನೇ ಅಭ್ಯಾಸ ಮಾಡುತ್ತ ಹೋಗಿ. ಸಾಧನೆ ಪ್ರಾಮಾಣಿಕವಾಗಿದ್ದರೆ, ಸರಿಯಾಗಿದ್ದರೆ, ಆ ಇಷ್ಟವೇ ಸಾಲವಾಗುತ್ತ ಹೋಗಿ, ಇಡೀ ವಿಶ್ವವ್ಯಾಪ್ತಿಯಾಗುತ್ತದೆ. ಅದು ತಾನಾಗಿಯೇ ಬೆಳೆಯಲಿ, ಅದು ಒಳಗಿನಿಂದ ಹೊರಗೆ ಬೆಳೆಯುತ್ತದೆ. ಆಗ ನಿಮ್ಮ ಇಷ್ಟವೇ ಎಲ್ಲೆಲ್ಲಿಯೂ ಇದೆ ಅದೇ ಎಲ್ಲವೂ ಆಗಿದೆ ಎಂದು ಹೇಳುತ್ತೀರಿ.

ನಿಷ್ಠಾಭಕ್ತಿಯ ಮುಖ್ಯ ಅಪಾಯವೆಂದರೆ, ಅದು ರಾಕ್ಷಸೀಯ – ಮತಾಂಧತೆಯಾಗಿ ಪರಿಣಮಿಸುವುದು. ಪ್ರಪಂಚ ಇಂಥವರಿಂದ – ತುಂಬಿ ಹೋಗುವುದು. ದ್ವೇಷಿಸುವುದು ಬಹಳ ಸುಲಭ. ಜನ ಸಾಮಾನ್ಯರು ಎಷ್ಟು ದುರ್ಬಲರಾಗಿರುತ್ತಾರೆಂದರೆ, ಒಬ್ಬನನ್ನು ಪ್ರೀತಿಸಬೇಕಾದರೆ ಮತ್ತೊಬ್ಬನನ್ನು ದ್ವೇಷಿಸುತ್ತಾರೆ. ಒಂದರಲ್ಲಿ ಅವರು ಶಕ್ತಿಯನ್ನು ಕೇಂದ್ರೀಕರಿಸಬೇಕಾದರೆ ಮತ್ತೊಂದರಿಂದ ಅದನ್ನು ತೆಗೆಯಬೇಕು. ಒಬ್ಬ ಪರುಷನು ಒಬ್ಬ ಮಹಿಳೆಯನ್ನು – ಪ್ರೀತಿಸುತ್ತಾನೆ, ಆನಂತರ ಮತ್ತೋರ್ವಳನ್ನು ಪ್ರೀತಿಸುತ್ತಾನೆ. ಹೀಗೆ ಮತ್ತೋರ್ವಳನ್ನು ಪ್ರೀತಿಸಬೇಕಾದರೆ ಮೊದಲಿನವಳನ್ನು ಅವನು ದ್ವೇಷಿಸಲೇಬೇಕು. ಸ್ತ್ರೀಯರ ವಿಷಯವೂ ಹೀಗೆಯೇ. ಈ ಲಕ್ಷಣ ನಮ್ಮ ಸ್ವಭಾವದಲ್ಲಿಯೇ ಇದೆ, ಆದ್ದರಿಂದ ಅದು ಧರ್ಮದಲ್ಲಿಯೂ ಇದೆ. ಅಪಕ್ವ ಮನಸ್ಸಿನ ಸಾಮಾನ್ಯ ವ್ಯಕ್ತಿಯು ಇನ್ನೊಬ್ಬನನ್ನು ದ್ವೇಷಿಸದೆ ಒಬ್ಬನನ್ನು ಪ್ರೀತಿಸಲಾರನು. ಈ ಲಕ್ಷಣವೇ ಧರ್ಮದಲ್ಲಿ ಮತಾಂಧತೆಯಾಗಿ ಕಾಣಿಸಿಕೊಳ್ಳುವುದು. ತಮ್ಮ ಆದರ್ಶವನ್ನು ಪ್ರೀತಿಸುವುದೆಂದರೆ ಇತರ ಎಲ್ಲ ಆದರ್ಶಗಳನ್ನೂ ದ್ವೇಷಿಸುವುದು ಅಂದುಕೊಳ್ಳುವರು. ಭಕ್ತಿಯಲ್ಲಿ ಮುಂದುವರಿಯಬೇಕು ಅಂದರೆ, ಎಲ್ಲಕ್ಕಿಂತ ಮೊದಲು ಇದನ್ನು ನಿವಾರಿಸಬೇಕು. ಆಗ ಮಾತ್ರ ನಮ್ಮ ಭಕ್ತಿ ಸಾರ್ಥಕವಾಗುವುದು.

Leave a Reply