ಖಯಾಮನ ರುಬಾಯಿಗಳು : ಗುಚ್ಛ 4

ಪರ್ಶಿಯಾದ ದಾರ್ಶನಿಕ ಕವಿ ಉಮರ್ ಖಯ್ಯಾಮನ ರುಬಾಯಿಗಳ ‘ಚಿತ್ರಿಕೆ ಗುಚ್ಛ’ ನಿಮಗಾಗಿ… | ಕನ್ನಡಕ್ಕೆ ಚಿದಂಬರ ನರೇಂದ್ರ

8

ಇರುವಿಕೆಯ ಸಾಗರ ಎಲ್ಲಿಂದ ಮೊದಲಾಯ್ತು? ಯಾರಿಗೂ ಗೊತ್ತಿಲ್ಲ,
ಈ ನಿಜದ ಗಣಿಯ ಬಗೆಯುವುದು,ಯಾರಿಗೂ ಸಾಧ್ಯವಾಗಿಲ್ಲ;
ಪ್ರತಿಯೊಬ್ಬರೂ ಹಬ್ಬಿಸಿದ್ದಾರೆ ವದಂತಿಗಳನ್ನು, ತಮಗೆ ಸಾಧ್ಯವಾದಂತೆ
ಇರುವುದನ್ನ ಇದ್ದಂತೆ ಬಣ್ಣಿಸಲಿಕ್ಕೆ ಯಾರಿಗೂ ಸಾಧ್ಯವಾಗುವುದಿಲ್ಲ.

9

ನಮ್ಮ ಬರುವಿಕೆ ಮತ್ತು ಹೋಗುವಿಕೆಗೆ ಕಾರಣವಾಗಿರುವ ಚಕ್ರಕ್ಕೆ
ಮೊದಲಿಲ್ಲ, ಕೊನೆಯೂ ಇಲ್ಲ ನಿಖರವಾಗಿ ಗುರುತಿಸುವುದಕ್ಕೆ ;
ಈ ವಿಷಯದ ಬಗ್ಗೆ ಯಾರಿಗೂ ಗೊತ್ತಿಲ್ಲ ನೇರವಾಗಿ
ಎಲ್ಲಿಂದ ಬಂದಿದ್ದೇವೆ ನಾವು ಮತ್ತು ಹೋಗುವುದು ಯಾವ ಜಾಗಕ್ಕೆ.

10

ದೇವನೇ ಅಲ್ಲವೆ ಎಲ್ಲ ಸಂಗತಿಗಳ ಚಂದಗಾಣಿಸಿದ್ದು,
ಮತ್ತೆ ಯಾವ ಕಾರಣಕ್ಕೆ ಅವ ಎಲ್ಲದರ ಕೊನೆ ನಿರ್ಧರಿಸಿದ್ದು ?
ಸೃಷ್ಟಿ ಚೆನ್ನಾಗಿರುವುದಾದರೆ ನಾಶ ಮಾಡುವುದಾದರೂ ಯಾಕೆ?
ಕೆಟ್ಟದಾಗಿದೆಯೆಂದರೆ ಆ ತಪ್ಪು ಯಾರದ್ದು ?

ಹನ್ನೊಂದನೇ ಶತಮಾನದ ಪರ್ಶಿಯಾದ ದಾರ್ಶನಿಕ, ಕವಿ, ತತ್ವಜ್ಞಾನಿ, ಗಣಿತಜ್ಞ, ಖಗೋಳ ಶಾಸ್ತ್ರಜ್ಞ ಉಮರ್ ಖಯ್ಯಾಮ್ ನ ರುಬಾಯಿ ಗಳು ಜಗತ್ತಿನಾದ್ಯಂತ ಕಾವ್ಯಾಸಕ್ತರ ಮನಸೂರೆಗೊಂಡಿವೆ. ಕನ್ನಡಕ್ಕೆ ಈ ಮೊದಲು ಅನುವಾದಗೊಂಡಿರುವ ಉಮರ್ ಖಯ್ಯಾಮ್ ನ ರುಬಾಯಿಗಳು ಬಹುತೇಕ ಫಿಟ್ಸ್ ಜೆರಾಲ್ಡ್ ನ ಇಂಗ್ಲೀಷ್ ಅನುವಾದದ ಮೂಲಕ ಬಂದವು. ಪರ್ಷಿಯನ್ ವಿದ್ವಾಂಸ Peter Avery ಮತ್ತು ಕವಿ John Heath-Stubbs ಅವರ ಇಂಗ್ಲೀಷ್ ಅನುವಾದವನ್ನು ಆಧರಿಸಿ, ಚಿದಂಬರ ನರೇಂದ್ರ ಅರಳಿ ಮರಕ್ಕಾಗಿ ಈ ರುಬಾಯಿಗಳನ್ನು ಕನ್ನಡಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಗುಚ್ಛ 3: ಇಲ್ಲಿ ನೋಡಿ: https://aralimara.com/2020/11/07/khayam/

1 Comment

Leave a Reply