ಪ್ರೇಮದ ಗುರುತ್ವವೇ ಜಗತ್ತನ್ನು ಕಾಯ್ದಿಡುವುದು…| ಸ್ವಾಮಿ ರಾಮತೀರ್ಥರ ಬೋಧನೆ

ಯಾವುದಾದರೊಂದು ಸಂಗತಿ, ಅಥವಾ ಯಾವುದಾದರೂ ವ್ಯಕ್ತಿಯೆಡೆಗಿನ ಆಕರ್ಷಣೆಯೇ ಪ್ರೇಮ. ಜಗತ್ತನ್ನು ಸಮತೋಲನದಲ್ಲಿಟ್ಟಿರುವುದು ಇದೇ ಪ್ರೇಮ ಅಥವಾ ಆಕರ್ಷಣೆ ಅನ್ನುವುದು ರಾಮತೀರ್ಥರ ಹೇಳಿಕೆಯ ಸಾರ.


ಸ್ವಾಮಿ ರಾಮತೀರ್ಥರು ಪ್ರಕೃತಿ ನಿಯಮಗಳ ಬಗ್ಗೆ ಹೇಳುತ್ತಾ, ಹೇಗೆ ಕೆಲವೇ ಕೆಲವು ನಿಯಮಗಳು ಪ್ರತಿಯೊಂದರಲ್ಲೂ ಹಾಸುಹೊಕ್ಕಾಗಿದೆ ಎಂದು ಹೇಳುತ್ತಾರೆ. ಅದಕ್ಕೆ ಉದಾಹರಣೆಯಾಗಿ, ವಿಶ್ವದಲ್ಲಿ ಗ್ರಹಾದಿಗಳ ಪರಿಭ್ರಮಣೆಯಲ್ಲೂ ಪ್ರೇಮಿಯೊಬ್ಬನಿಂದ ಕಂಬನಿಯ ಉರುಳುವಲ್ಲೂ ಹೇಗೆ ಒಂದೇ ನಿಯಮ ಕೆಲಸ ಮಾಡುತ್ತದೆ ಎಂದವರು ವಿವರಿಸುತ್ತಾರೆ. “ಹೊರಗಿನ ನೋಟಕ್ಕೆ ಸಾವಿರಾರು ಬಗೆ ಬಣ್ಣಗಳು ಕಾಣುತ್ತಿದ್ದರೂ ಪ್ರಕೃತಿಯ ನಿಯಮಗಳು ಅತ್ಯಂತ ಸೀಮಿತವಾಗಿವೆ” ಎಂದು ಅವರು ಹೇಳುತ್ತಿರುವುದು ಈ ಹಿನ್ನೆಲೆಯಲ್ಲಿಯೇ.

“ಪ್ರೇಮಿಯ ಕಣ್ಣಿನಿಂದ ಒಂದು ಕಂಬನಿ ಕೆಳಗುದುರಲು ಯಾವ ನಿಯಮವು ಕಾರಣವೋ ಅದೇ ನಿಯಮವು ಸೂರ್ಯ ಚಂದ್ರ ನಕ್ಷತ್ರಾದಿಗಳ ಪರಿಭ್ರಮಣಕ್ಕೂ ಕಾರಣವಾಗಿದೆ.” ಎಂದು ರಾಮತೀರ್ಥರು ಹೇಳುವಾಗ ಗುರುತ್ವಾಕರ್ಷಣೆ ನಿಯಮದ ಬಗ್ಗೆ ಮಾತಾಡುತ್ತಿದ್ದಾರೆ.

ಕಂಬನಿ ಕೆಳಗೆ ಉದುರುವುದು ಗುರುತ್ವಾಕರ್ಷಣೆಯ ಬಲದಿಂದಲೇ. ಇಡಿಯ ವಿಶ್ವದಲ್ಲಿ ಗ್ರಹಾದಿಗಳನ್ನು ಅವುಗಳ ಸ್ಥಾನದಲ್ಲಿ ಕಾಯ್ದಿಡುವುದೂ ಇದೇ ಗುರುತ್ವಾಕರ್ಷಣೆಯೇ. ಇಬ್ಬರು ವ್ಯಕ್ತಿಗಳನ್ನು ಬೆಸೆದು ಸಂಸಾರದ ಸಮತೋಲನವನ್ನು ಕಾಯ್ದಿಡುವ ಆಕರ್ಷಣೆ ಅಥವಾ ಪ್ರೇಮವೇ ಆಕಾಶದಲ್ಲಿ ಗ್ರಹಗಳನ್ನು ಆಯಾ ಪರಿಧಿಯಲ್ಲಿ ಕೂರಿಸಿ ಸಮತೋಲನ ಕಾಯುತ್ತದೆ. ಪ್ರೇಮವೆಂಬ ಗುರುತ್ವ ಮಹತ್ತಿನಿಂದ ಮಣ್ಣಿನ ಕಣಗಳವರೆಗೆ ಪ್ರತಿಯೊಂದನ್ನೂ ಕಾಯುತ್ತದೆ ಎಂಬುದನ್ನು ನಾವು ಇದರಿಂದ ಅರ್ಥ ಮಾಡಿಕೊಳ್ಳಬಹುದು.

“ಅತ್ಯಂತ ಸೂಕ್ಷ್ಮವಾದ ಪರಮಾಣುವಿನಿಂದ ಹಿಡಿದು ಅತ್ಯಂತ ದೂರದಲ್ಲಿರುವ ಮಹಾದ್ಭುತವಾದ ನಕ್ಷತ್ರದವರೆಗೂ ಕೈಬೆರಳುಗಳಲ್ಲಿ ಎಣಿಸಬಹುದಾದಷ್ಟು, ಒಂದೇ ಬಗೆಯ ಸರಳ ಸಾಮಾನ್ಯ ನಿಯಮಗಳೇ ಈ ವಿಶ್ವದಲ್ಲಿ ಸಕಲವನ್ನೂ ಸ್ವಾಧೀನದಲ್ಲಿಟ್ಟುಕೊಂಡು ಅಧಿಕಾರ ನಡೆಸುತ್ತಿವೆ.” ಎಂದು ಸ್ವಾಮಿ ರಾಮತೀರ್ಥರು ನಿಯಮಗಳ ಅನ್ವಯದ ಕುರಿತು ಹೇಳುತ್ತಾರೆ.

ಆದ್ದರಿಂದ, ನಾವು ಯಾವುದೇ ಸಂಗತಿಯನ್ನು ಅರ್ಥ ಮಾಡಿಕೊಳ್ಳಲು ಸಂಕೀರ್ಣ ವಿಧಾನಗಳ ಮೊರೆ ಹೋಗಬೇಕಾಗಿಲ್ಲ. ಕಬ್ಬಿಣದ ಕಡಲೆಗಳನ್ನು ಜಗಿಯಬೇಕಾಗಿಲ್ಲ. ನಮ್ಮ ಸುತ್ತಮುತ್ತಲಿನ ಸಂಗತಿಗಳನ್ನು ವಿವೇಚನೆಯಿಂದ ಗ್ರಹಿಸಿದರೂ ಸಾಕು. ಸಮಷ್ಟಿಯ ತಿಳಿವನ್ನು ಮುಷ್ಟಿಯಲ್ಲಿ ಗ್ರಹಿಸುವುದು ಕಷ್ಟವೇನಾಗುವುದಿಲ್ಲ. ಇದು ಸ್ವಾಮಿ ರಾಮತೀರ್ಥರ ಈ ಬೋಧನೆಯಿಂದ ನಾವು ಪಡೆಯಬಹುದಾದ ತಿಳಿವು.

Leave a Reply