ಖಯಾಮನ ರುಬಾಯಿಗಳು : ಗುಚ್ಛ 5

ಪರ್ಶಿಯಾದ ದಾರ್ಶನಿಕ ಕವಿ ಉಮರ್ ಖಯ್ಯಾಮನ ರುಬಾಯಿಗಳ ‘ಚಿತ್ರಿಕೆ ಗುಚ್ಛ’ ನಿಮಗಾಗಿ… | ಕನ್ನಡಕ್ಕೆ ಚಿದಂಬರ ನರೇಂದ್ರ

11

ಜ್ಞಾನ, ಸಂಸ್ಕೃತಿ ಎಂದೆಲ್ಲ ವಾದ ಮಾಡುವವರು,
ತಮ್ಮ ಜನಗಳ ನಡುವೆ ಮಾತ್ರ ಮಿಣುಕು ದೀಪದಂಥವರು ;
ಬೆಳಕು ಹರಿದ ಮೇಲೂ ಇವರು ಪಾರಾಗಿಲ್ಲ ಕತ್ತಲೆಯಿಂದ ,
ಕಾರಣ ಕೇಳಿದರೆ ಏನೋ ಕತೆ ಹೇಳಿ ಮತ್ತೆ ನಿದ್ದೆಗಿಳಿಯುವವರು.

12

ಓಹ್ ಅವರು, ನಮಗಿಂತಲೂ ಮೊದಲು ಆಗಿ ಹೋದವರು,
ಸ್ವಂತದ ಭ್ರಮೆಯಲ್ಲಿ ಧೂಳಿನ ಹಾಸಿಗೆ ಅಪ್ಪಿಕೊಂಡವರು ;
ಹೋಗು ಕುಡಿ ವೈನ್ ಮತ್ತು ಕೇಳು ನಾನು ಹೇಳುವ ಸತ್ಯಗಳನ್ನ,
ಎಂದೋ ಕಾಣೆಯಾಗಿವೆ ಅವರ ಮಾತೆಲ್ಲ ಹತ್ತಿ ಗಾಳಿಯ ತೇರು.

13

ಅರ್ಥದ ಗಣಿಯ ಅಚಾನಕ್ ಆಗಿ ಹೊಕ್ಕು ಕಕ್ಕಾವಿಕ್ಕಿಯಾದವರು,
ಬದುಕಿನ ಗಾಲಿಗೆ ಮನಸೋ ಇಚ್ಛೆ ಹಲವು ಹೆಸರನಿಟ್ಟವರು ;
ಅವರಿಗೆ ನಿಲುಕಿಲ್ಲ ಜಗತ್ತಿನ ನಿಗೂಢಗಳ ಮಾಯೆ,
ಮೊದ ಮೊದಲು ಬಡಿವಾರ ಮಾಡಿ ಆಮೇಲೆ ಸುಮ್ಮನಾದವರು.

ಹನ್ನೊಂದನೇ ಶತಮಾನದ ಪರ್ಶಿಯಾದ ದಾರ್ಶನಿಕ, ಕವಿ, ತತ್ವಜ್ಞಾನಿ, ಗಣಿತಜ್ಞ, ಖಗೋಳ ಶಾಸ್ತ್ರಜ್ಞ ಉಮರ್ ಖಯ್ಯಾಮ್ ನ ರುಬಾಯಿ ಗಳು ಜಗತ್ತಿನಾದ್ಯಂತ ಕಾವ್ಯಾಸಕ್ತರ ಮನಸೂರೆಗೊಂಡಿವೆ. ಕನ್ನಡಕ್ಕೆ ಈ ಮೊದಲು ಅನುವಾದಗೊಂಡಿರುವ ಉಮರ್ ಖಯ್ಯಾಮ್ ನ ರುಬಾಯಿಗಳು ಬಹುತೇಕ ಫಿಟ್ಸ್ ಜೆರಾಲ್ಡ್ ನ ಇಂಗ್ಲೀಷ್ ಅನುವಾದದ ಮೂಲಕ ಬಂದವು. ಪರ್ಷಿಯನ್ ವಿದ್ವಾಂಸ Peter Avery ಮತ್ತು ಕವಿ John Heath-Stubbs ಅವರ ಇಂಗ್ಲೀಷ್ ಅನುವಾದವನ್ನು ಆಧರಿಸಿ, ಚಿದಂಬರ ನರೇಂದ್ರ ಅರಳಿ ಮರಕ್ಕಾಗಿ ಈ ರುಬಾಯಿಗಳನ್ನು ಕನ್ನಡಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಗುಚ್ಛ 4 ಇಲ್ಲಿ ನೋಡಿ: https://aralimara.com/2020/11/15/khayyam-3/

Leave a Reply