ಗೀತಾಚಾರ್ಯ ಶ್ರೀಕೃಷ್ಣ ಹೇಳಿದ 8 ತಾಮಸ ಗುಣಗಳು

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಈ ತಾಮಸ ಗುಣಗಳು ಆಧ್ಯಾತ್ಮಿಕ ನಷ್ಟ ಮಾತ್ರವಲ್ಲ, ಲೌಕಿಕದಲ್ಲೂ ನಷ್ಟವನ್ನೇ ತಂದುಕೊಡುತ್ತದೆ. ತಾಮಸ ಗುಣಗಳನ್ನು ಬೆಳೆಸಿಕೊಂಡ ನೀವು ಇಹಕ್ಕೂ ಪರಕ್ಕೂ ಸಲ್ಲದವರಾಗಿಬಿಡುತ್ತೀರಿ. ಆದ್ದರಿಂದ, ನಿಮ್ಮೊಳಗಿನ ತಾಮಸಿಕ ಪ್ರವೃತ್ತಿಯನ್ನು ಗುರುತಿಸಿಕೊಂಡು, ಅದರಿಂದ ಹೊರಬರಲು ಯತ್ನಿಸಿ.


ಕೆಲವರಿರುತ್ತಾರೆ. ಅವರು ಏನು ಮಾಡಿದರೂ ಜೀವನದಲ್ಲಿ ಪ್ರಗತಿ ಸಾಧಿಸುವುದಿಲ್ಲ. ತಮ್ಮ ವೈಫಲ್ಯ ಅವರಿಗೂ ತಿಳಿದಿರುತ್ತದೆ. ಅದಕ್ಕೆ ಕಾರಣವಾದ ತಪ್ಪುಗಳ ಅರಿವೂ ಇರುತ್ತದೆ. ಆದರೆ ಸುಧಾರಿಸಿಕೊಳ್ಳುವ ಮನಸ್ಸು ಇರುವುದಿಲ್ಲ. ಬದುಕನ್ನು ಅವರು Taken for granted ರೀತಿಯಲ್ಲಿ ಉಡಾಫೆಯಿಂದ ನೋಡುತ್ತಾರೆ. ಇದರಿಂದಾಗಿ ಅವರ ಬದುಕು ನಿರರ್ಥಕವಾಗಿ ಕಳೆದುಬಿಡುತ್ತದೆ.
ಗೀತಾಚಾರ್ಯ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಇಂಥವರ ಕುರಿತು ಹೇಳುತ್ತಾ, ಇವರನ್ನು ‘ತಾಮಸರು’ ಎಂದು ಕರೆಯುತ್ತಾನೆ.
ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಕೃತಿಕೋSಲಸಃ ।
ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ ॥18.28॥
ಅರ್ಥ : ದುರ್ನಡತೆಯುಳ್ಳವರು, ಅಸಂಸ್ಕೃತರು, ಹಿರಿಯರನ್ನು ಗೌರವಿಸದವರು, ಉದ್ಧಟರು, ಮೋಸಗಾರರು, ಸೋಮಾರಿಗಳು, ಪೇಲವವಾಗಿರುವವರು, ಸದಾ ಮತ್ತೊಬ್ಬರ ದೋಷಗಳನ್ನೆ ಎತ್ತಿ ಆಡುವವರು – ಇಂಥ ಗುಣಗಳಿರುವವರೇ ಈ ತಾಮಸರು.
ಇದನ್ನು ವಿಸ್ತರಿಸಿ ಹೇಳುವುದಾದರೆ:
ಅಯುಕ್ತಃ : ತಾನು ಮಾಡುವ ಕೆಲಸದಲ್ಲಿ ತನಗೇ ಶ್ರದ್ಧೆ – ನಂಬಿಕೆಗಳು ಇಲ್ಲದಿರುವವರು. ಇಂಥವರು ಯಾವ ಕೆಲಸಕ್ಕೆ ಕೈಹಾಕಿದರೂ ಯಶ ಕಾಣೂವುದು ಕಷ್ಟ.
ಪ್ರಾಕೃತಃ : ಕೇವಲ ಐಹಿಕ ಪ್ರಪಂಚದಲ್ಲಿ ಆಸಕ್ತಿ ಉಳ್ಳವರು. ಇಂದ್ರಿಯ ತೃಪ್ತಿಯೇ ಇವರ ಗುರಿ.
ಸ್ತಬ್ಧಃ : ತಾನು ಮಾಡುವ ಕರ್ಮದಲ್ಲಿ ತಪ್ಪಿದ್ದರೂ ಕೂಡ ಅದನ್ನು ತಿದ್ದಿಕೊಳ್ಳದೆ, ತಿಳುವಳಿಕೆ ಇಲ್ಲದೆ, ತಪ್ಪು ನಂಬಿಕೆಯನ್ನೇ ಆಚರಿಸಿಕೊಂಡು ಸಾಗುವವರು. ಒಂದು ರೀತಿಯಲ್ಲಿ ಬುದ್ಧಿಗುರುಡರು.
ಶಠಃ : ತಪ್ಪು ಎಂದು ಗೊತ್ತಿದ್ದರೂ ತಿದ್ದಿಕೊಳ್ಳುವ ಅಪೇಕ್ಷೆ ಇಲ್ಲದೆ ಇರುವವರು. ನಾನೇಕೆ ತಲೆ ತಗ್ಗಿಸಬೇಕು ಎನ್ನುವ ಮನೋವೃತ್ತಿ ಇರುವವರು. ಒಂದು ಬಗೆಯಲ್ಲಿ ದುರ್ಯೋಧನನ “ಜಾನಾಮಿ ಧರ್ಮಂ…” ಪ್ರವೃತ್ತಿ ಇವರದು. ಅಧರ್ಮವೆಂದು ಗೊತ್ತಿದ್ದೂ ಅದನ್ನು ಮಾಡುತ್ತಾ, ಧರ್ಮವೇನೆಂದು ಗೊತ್ತಿದ್ದರೂ ಅದನ್ನು ಬಿಡುತ್ತಾ ಜೀವಿಸುವವರು.
ನೈಕೃತಿಕಃ : ಒಳ್ಳೆಯತನದ ವೇಷಹಾಕಿಕೊಂಡು ಬುದ್ಧಿಪೂರ್ವಕವಾಗಿ ಇನ್ನೊಬ್ಬರಿಗೆ ಮೋಸಮಾಡಿ ಲಾಭ ಪಡೆಯುವವರು. ಇವರಿಗೆ ಆತ್ಮಸಾಕ್ಷಿಯೇ ಇರುವುದಿಲ್ಲ.
ಅಲಸಃ : ಯಾವುದು ಒಳ್ಳೆಯದು, ಯಾವುದರಿಂದ ಲಾಭವಾಗುತ್ತದೆ ಎನ್ನುವುದು ಗೊತ್ತಿದ್ದರೂ, ಅದನ್ನು ಮಾಡಲು ಸೋಮಾರಿತನ ತೋರುವವರು. ಇಂಥವರನ್ನು ಸರಿಪಡಿಸುವುದು ಬಹಳ ಕಷ್ಟ.
ವಿಶಾದೀ: ಯಾವುದೇ ಕೆಲಸವಾದರೂ ಅದನ್ನು ‘ಅಯ್ಯೋ ಮಾಡಬೇಕಲ್ಲಾ’ ಎಂದು ಕಾಲೆಳೆದುಕೊಂಡೇ ಮಾಡುವವರು. ಮಾಡಿದ ಮೇಲೂ ಗೊಣಗುತ್ತ ಬೇಸರ ತೋರುತ್ತಲೇ ಇರುವವರು. ಇವರಿಗೆ ತೃಪ್ತಿ ಎಂಬುದೂ ಇರುವುದಿಲ್ಲ, ಉತ್ಸಾಹವೂ ಇರುವುದಿಲ್ಲ.
ದೀರ್ಘಸೂತ್ರಿ: ಮತ್ತೆ ಮಾಡಿದರಾಯ್ತು ಎಂದು ದೀರ್ಘಕಾಲ ಕೆಲಸವನ್ನು ಮುಂದೂಡುವವರು. ಇನ್ನೊಬ್ಬರ ಒಳ್ಳೆಯ ಗುಣವನ್ನು ಕಾಣದೇ ಅವರ ಯಾವುದೋ ಹಳೆಯ ತಪ್ಪನ್ನೇ ಎತ್ತಿ ಹೇಳುವವರು. ಯಾವುದೇ ಕೆಲಸ ಅಥವಾ ವಿಷಯವನ್ನು ಚೂಯಿಂಗ್ ಗಮ್ಮಿನಂತೆ ಎಳೆದೆಳೆದು ಜಗಿಯುತ್ತಲೇ ಇರುವವರು.

ಈ ಗುಣಗಳಲ್ಲಿ ಯಾವುದಾದರೂ ಒಂದು ನಿಮ್ಮಲ್ಲಿದ್ದರೂ ಅದು ನಿಮ್ಮನ್ನು ಪ್ರಗತಿ ಪಥದಿಂದ ದೂರ ತಳ್ಳುತ್ತದೆ. ಈ ಗುಣಗಳು ನಿಮಗೆ ಆಧ್ಯಾತ್ಮಿಕ ನಷ್ಟ ಮಾತ್ರವಲ್ಲ, ಲೌಕಿಕದಲ್ಲೂ ನಷ್ಟವನ್ನೇ ತಂದುಕೊಡುತ್ತದೆ. ತಾಮಸ ಗುಣಗಳನ್ನು ಬೆಳೆಸಿಕೊಂಡ ನೀವು ಇಹಕ್ಕೂ ಪರಕ್ಕೂ ಸಲ್ಲದವರಾಗಿಬಿಡುತ್ತೀರಿ. ಈ ಮೂಲಕ ಅಪರೂಪದ, ಉತ್ಕೃಷ್ಟವಾದ ಮನುಷ್ಯ ಜನ್ಮವನ್ನು ನಷ್ಟ ಮಾಡಿಕೊಳ್ಳುತ್ತೀರಿ.

ಆದ್ದರಿಂದ, ಪ್ರತಿ ದಿನ ಬೆಳಗ್ಗೆ ನಿಮ್ಮ ಗುಣಾವಗುಣಗಳನ್ನು ಒಮ್ಮೆ ಪ್ರಾಮಾಣಿಕವಾಗಿ ನೋಡಿಕೊಳ್ಳಿ. ನಿಮ್ಮೊಳಗಿನ ತಮಸ್ಸನ್ನು, ಕತ್ತಲನ್ನು ತಿಳಿವಿನ ಬೆಳಕಿನಿಂದ ಗುಡಿಸಿ ತೊಲಗಿಸಿ. ತಾಮಸ ಗುಣದಿಂದ ಹೊರಬರಲು ಪ್ರಯತ್ನ ಮಾಡಿ.
ಸತತ ಚಿಂತನೆ, ಪ್ರಾಮಾಣಿಕ ಬಯಕೆ ಮತ್ತು ಪ್ರಯತ್ನಗಳಿಂದ ಖಂಡಿತವಾಗಿಯೂ ನೀವು ಇದರಲ್ಲಿ ಯಶಸ್ಸು ಸಾಧಿಸುವಿರಿ.

Leave a Reply