ಖಯಾಮನ ರುಬಾಯಿಗಳು : ಗುಚ್ಛ 6

ಪರ್ಶಿಯಾದ ದಾರ್ಶನಿಕ ಕವಿ ಉಮರ್ ಖಯ್ಯಾಮನ ರುಬಾಯಿಗಳ ‘ಚಿತ್ರಿಕೆ ಗುಚ್ಛ’ ನಿಮಗಾಗಿ… | ಕನ್ನಡಕ್ಕೆ ಚಿದಂಬರ ನರೇಂದ್ರ

15

ಆಕಾಶದಲ್ಲಿ ಪ್ಲಯೇಡಿಸ್ * ಪಕ್ಕದಲ್ಲಿಯೇ ಒಂದು ಗೂಳಿ,
ಭೂಮಿಯ ಕೆಳಗೆ ಅಡಗಿಕೊಂಡಿದೆ ಇನ್ನೊಂದು ಗೂಳಿ ; **
ನೀವು ಕುರುಡರಲ್ಲರಾದರೆ, ಸತ್ಯದ ಎದುರು ಕಣ್ತೆರಿಯಿರಿ,
ಈ ಎರಡು ಗೊಳಿಗಳ ಕೆಳಗೆ ಮತ್ತು ಮೇಲೆ ಕತ್ತೆಗಳ ಜಂಗುಳಿ.

*ಪ್ಲಯೇಡಿಸ್ (Pleiades), ಅಟ್ಲಾಸ್ ನ ಏಳು ಹೆಣ್ಣುಮಕ್ಕಳು (Seven sisters) ಒಂದು ನಕ್ಷತ್ರ ಸಮೂಹ ಆಗಿರುವ ಗ್ರೀಕ್ ಪುರಾಣ.

**ಗೂಳಿಯ ಕೋಡುಗಳು ಜಗತ್ತಿನ ಭಾರ ಹೊತ್ತಿವೆ ಎನ್ನುವ ಹಳೆಯ ನಂಬಿಕೆ

16

ನನ್ನ ಜೀವನದ ಈ ವಸಂತದ ಹೆಸರು ಯೌವನ,
ವೈನ್ ಒಂದೇ ಈಗ ನನ್ನ ಬಾಳಿನ ಸಾಂತ್ವನ ;
ದೂರದಿರು, ಒಗರಾದರೂ ಅದ್ಭುತ ಈ ಆಹ್ಲಾದ
ಹೌದು ಒಗರೇ, ಏಕೆಂದರೆ ಇದು ನನ್ನ ಜೀವನ.

17

ಖಂಡಿತ ನಾನು ಬರುತ್ತಲೇ ಇರಲಿಲ್ಲ, ಇಲ್ಲಿ ಕಾಲಿಡುವುದು ನನ್ನ ಕೈಯಲ್ಲಿದ್ದರೆ,
ಹೇಗೆ ಹೋಗಲಿ ನಾನು ಇಲ್ಲಿಂದ? ಹೋಗುವುದು ನನ್ನ ನಿಯಂತ್ರಣದಲ್ಲಿದ್ದರೆ ;
ಬರದಿರುವುದು, ಬಂದ ಮೇಲೆ ಇರದಿರುವುದು, ಮತ್ತು ಎದ್ದು ಹೋಗದಿರುವುದು,
ಈ ಪಾಳುಬಿದ್ದ ಧರ್ಮ ಛತ್ರದಲ್ಲಿ ಇವಕ್ಕಿಂತ ಉತ್ತಮ ಯಾವುದು ಬೇರೆ ?

Leave a Reply