ನಾವು ಕೆಡವಬೇಕಾದದ್ದು ಮಾನಸಿಕವಾಗಿ, ಪ್ರಜ್ಞಾಪೂರ್ವಕ ಅಥವಾ ಅಪ್ರಜ್ಞಾಪೂರ್ವಕವಾಗಿ ನಾವು ನಮ್ಮ ಸುತ್ತಲೂ ರಕ್ಷಣಾ ವ್ಯವಸ್ಥೆಗಳನ್ನ ಮತ್ತು ತರ್ಕಬದ್ಧವಾಗಿ, ವೈಯಕ್ತಿಕವಾಗಿ , ಆಳವಾಗಿ, ಕೆಲವೊಮ್ಮೆ ತೋರಿಕೆಗಾಗಿ ಕಟ್ಟಲಾಗಿರುವ ಭದ್ರತೆಗಳನ್ನ | ಜಿಡ್ಡು ಕೃಷ್ಣಮೂರ್ತಿ; ಅನುವಾದ : ಚಿದಂಬರ ನರೇಂದ್ರ
ಸ್ವತಂತ್ರರಾಗಿರುವುದೆಂದರೆ ಅಧಿಕಾರದ ಸ್ವರೂಪವನ್ನು ಅದರ ಬಾಹ್ಯರೂಪದಲ್ಲಷ್ಟೇ ಅಲ್ಲ ಅದರ ಅಸ್ಥಿಪಂಜರದ ರಚನೆಯ ಮಟ್ಟದಲ್ಲಿಯೂ ಸಂಪೂರ್ಣವಾಗಿ ಗ್ರಹಿಸಿ ಅರ್ಥಮಾಡಿಕೊಳ್ಳುವುದು ಮತ್ತು ಈ ಅಸಹ್ಯವನ್ನು ಕುಟ್ಟಿ ಪುಡಿ ಪುಡಿ ಮಾಡುವುದು. ಅಧಿಕಾರವನ್ನು ನಿಗ್ರಹಿಸಲು ದೈಹಿಕ ಶಕ್ತಿಯಷ್ಟೇ ಅಲ್ಲ ಅಪಾರ ಮಾನಸಿಕ ಶಕ್ತಿಯೂ ಅವಶ್ಯಕ. ಆದರೆ ಮನುಷ್ಯ ತನ್ನೊಳಗೆ ಮತ್ತು ತನ್ನ ಸುತ್ತಮುತ್ತಲಿನೊಡನೆ ಸಂಘರ್ಷದಲ್ಲಿರುವಾಗ ದೈಹಿಕ ಮತ್ತು ಮಾನಸಿಕ ಶಕ್ತಿಗಳೆರಡೂ ನಷ್ಟವಾಗುತ್ತವೆ ಮತ್ತು ನಾಶವಾಗುತ್ತವೆ.
ಆದರೆ ಈ ಸಂಘರ್ಷವನ್ನು ಅದರ ಪೂರ್ಣ ರಚನೆಯನ್ನು ಮತ್ತು ಅದು ಕಾರ್ಯನಿರ್ವಹಿಸುವ ಪದ್ಧತಿಯನ್ನು ಅರ್ಥಮಾಡಿಕೊಂಡಾಗ, ಸಂಘರ್ಷ ತಾನೇ ತಾನಾಗಿ ಇಲ್ಲವಾಗುವುದು ಮತ್ತು ವ್ಯಯವಾಗುತ್ತಿದ್ದ ಅಪಾರ ಶಕ್ತಿ ನಿಮ್ಮ ಕೈಂಕರ್ಯಕ್ಕೆ ಲಭ್ಯವಾಗುವುದು. ಆಗ ನೀವು ಶತಮಾನಗಳಿಂದ ನೀವೇ ಕಟ್ಟಿಕೊಂಡಿರುವ ಮತ್ತು ಯಾವುದಕ್ಕೆ ಅರ್ಥವೇ ಇಲ್ಲೋ ಆ ಅಧಿಕಾರದ ಕಟ್ಟಡವನ್ನು ಧ್ವಂಸ ಮಾಡುವ ಕೆಲಸಕ್ಕೆ ಮುಂದಾಗಬಹುದು.
ಕೆಡವುವುದೆಂದರೆ ಹೊಸದಾಗಿ ಕಟ್ಟುವುದು. ಹೌದು ಕೆಡವಲೇಬೇಕು ಆದರೆ, ಹೊರಗೆ ಕಾಣುವ ಕಟ್ಟಡದ ರಚನೆಗಳನ್ನಲ್ಲ, ಸಂಬಂಧಿಸಿದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗಳನ್ನಲ್ಲ – ಇದು ಹೇಗೋ ಆಗೇ ಆಗುತ್ತದೆ ಆದರೆ ನಾವು ಕೆಡವಬೇಕಾದದ್ದು ಮಾನಸಿಕವಾಗಿ, ಪ್ರಜ್ಞಾಪೂರ್ವಕ ಅಥವಾ ಅಪ್ರಜ್ಞಾಪೂರ್ವಕವಾಗಿ ನಾವು ನಮ್ಮ ಸುತ್ತಲೂ ರಕ್ಷಣಾ ವ್ಯವಸ್ಥೆಗಳನ್ನ ಮತ್ತು ತರ್ಕಬದ್ಧವಾಗಿ, ವೈಯಕ್ತಿಕವಾಗಿ , ಆಳವಾಗಿ, ಕೆಲವೊಮ್ಮೆ ತೋರಿಕೆಗಾಗಿ ಕಟ್ಟಲಾಗಿರುವ ಭದ್ರತೆಗಳನ್ನ. ನಮ್ಮ ಸುತ್ತಲಿರುವ ಎಲ್ಲ ರಕ್ಷಣೆಗಳನ್ನ, ಭದ್ರತೆಗಳನ್ನ ಕಿತ್ತುಹಾಕಿ ಪೂರ್ತಿ ನಿರಾಯುಧರಾಗಬೇಕು, ಏಕೆಂದರೆ ಪ್ರೀತಿಸಲು ಮತ್ತು ಪ್ರೇಮವನ್ನು ಪಡೆಯಲು ನಿರಾಯುಧರಾಗಲೇಬೇಕು.
ಆಗ ನಿಮಗೆ ಮಹತ್ವಾಕಾಂಕ್ಷೆ, ಅಧಿಕಾರಗಳನ್ನು ಸೂಕ್ಷ್ಮವಾಗಿ ಗಮನಿಸಲು, ಅರ್ಥಮಾಡಿಕೊಳ್ಳಲು ಮತ್ತು ಯಾವ ಹಂತವರೆಗೆ ಮತ್ತು ಎಷ್ಟು ಪ್ರಮಾಣದಲ್ಲಿ ಅಧಿಕಾರ ಅವಶ್ಯಕ ಎನ್ನುವದನ್ನ ನಿರ್ಧರಿಸಲು ಸಾಧ್ಯವಾಗುವುದು. ಆಗ ಯಾವ ಕಲಿಕೆಯ ಅಧಿಕಾರವಿಲ್ಲ, ಜ್ಞಾನದ ಅಧಿಕಾರವಿಲ್ಲ, ಸಾಮರ್ಥ್ಯದ ಅಧಿಕಾರವಿಲ್ಲ, ಮತ್ತು ಮಾಡುವ ಕ್ರಿಯೆ ತನ್ನದೆಂದುಕೊಳ್ಳುವ ಅಂತಸ್ತಿನ ಅಧಿಕಾರವಿಲ್ಲ. ನಮ್ಮ ಮೇಲೆ ಎಲ್ಲ ಗುರುಗಳ, ಮಾಸ್ಟರ್ ಗಳ ಅಧಿಕಾರದ ಸ್ವರೂಪವನ್ನು ಗ್ರಹಿಸಲು ಮತ್ತು ಅರ್ಥಮಾಡಿಕೊಳ್ಳಲು
ಹರಿತವಾದ ಬುದ್ಧಿ ಮನಸ್ಸುಗಳು ಮತ್ತು ಸ್ಪಷ್ಟ ತಿಳುವಳಿಕೆ ಬೇಕು.