ಬದುಕು ಕಲೆಯಲ್ಲ, ಪ್ರಜ್ಞೆ; ಪ್ರಜ್ಞಾವಂತರಾಗಿ ಬದುಕಲು ಕಲಿಯೋಣ…

ಬದುಕುವ ಕಲೆ ನಮಗೆ ಮೇಲ್ಪದರದ ಕಸುವನ್ನಷ್ಟೆ ನೀಡುತ್ತದೆ. ಅದು ನಮ್ಮ ಅಂತರಂಗವನ್ನು ಪೋಷಿಸಲಾರದು. ನಮ್ಮ ಅಂತರಂಗವನ್ನು ಪೋಷಿಸುವುದು ಪ್ರಜ್ಞೆ. ಪ್ರಜ್ಞಾವಂತಿಕೆ ಚೈತನ್ಯದ ಮೂಲ ಸ್ರೋತದೊಡನೆ ಸಂಬಂಧ ಹೊಂದಿರುವಂಥದ್ದು  । ಅಲಾವಿಕಾ

ನಾವು ನಮ್ಮ ದೈನಂದಿನ ಕೆಲಸಗಳನ್ನು ಮಾಡುತ್ತಿರುವಾಗಲೂ, ಬೇಕಿದ್ದನ್ನೆಲ್ಲ ಪಡೆಯುತ್ತಲೋ, ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಲೋ ಇರುವಾಗಲೂ ಒಂದು ಅಸಹನೀಯ ಭಾವದಲ್ಲಿ ಚಡಪಡಿಸುತ್ತಾ ಇರುತ್ತೇವೆ. ಏನೋ ಒಂದು ಕೊರತೆ, ಏನೋ ಒಂದು ತಡೆ ನಮ್ಮನ್ನು ಕಾಡುತ್ತಿರುತ್ತದೆ. ಅದೇನೆಂದು ನಾವು ಸುತ್ತ ಮುತ್ತಲೆಲ್ಲಾ ಹುಡುಕತೊಡಗುತ್ತೇವೆ. ನಮ್ಮ ಜೊತೆಯಲ್ಲೇ ಇರುವ ವ್ಯಕ್ತಿಗಳು; ನಮಗೆ ಇಷ್ಟವಿಲ್ಲದವರು; ನಮ್ಮ ವೃತ್ತಿ; ನಮ್ಮ ದುಡಿಮೆ – ಹೀಗೆ ನಮ್ಮ ಅಸಮಾಧಾನದ ಕಾರಣವನ್ನು ಪ್ರತಿಯೊಂದರಲ್ಲೂ ಹುಡುಕುತ್ತೇವೆ. ಎಲ್ಲದರ ಮೇಲೂ ಗೂಬೆ ಕೂರಿಸುತ್ತೇವೆ. ನಮ್ಮ ಹತಾಶೆಗೆ ಅವರನ್ನು ನೆವವಾಗಿಸುತ್ತೇವೆ. ಅಷ್ಟಾದರೂ ಆ ಕೊರತೆ, ಆ ತಡೆ ನಮಗೆ ಸಿಗುವುದೇ ಇಲ್ಲ.

ಏಕೆ ಹೀಗಾಗುತ್ತದೆ? ಎಲ್ಲಿರುತ್ತದೆ ಆ ತಡೆ!? ಅದು ಇರುವುದು ನಮ್ಮೊಳಗೇ. ನಮಗೆ ನಾವೇ ತಡೆ. ಒಂದು ವ್ಯಕ್ತ ಚೇತನದಲ್ಲಿ ಅದೆಷ್ಟು ಪ್ರಚಂಡ ಶಕ್ತಿ ಇರುತ್ತದೆ ಎಂದರೆ, ಹೊರಗಿನ ಯಾವ ಮತ್ತೊಂದೂ ಅದಕ್ಕೆ ಅಡ್ಡಿಯಾಗುವ ಸಾಹಸ ಮಾಡಲಾರದು. ಯಾವ ಚೈತನ್ಯವನ್ನು ತಡೆಯುವ ಶಕ್ತಿ ಯಾವ ಮತ್ತೊಂದು ಜಡ – ಚೇತನಕ್ಕೂ ಇರುವುದಿಲ್ಲ. ಊರೆಲ್ಲಾ ಹುಡುಕಿ ಅಲೆಯುವ ಬದಲು ಕಣ್ಮುಚ್ಚಿ ಕುಳಿತು ನಮ್ಮೊಳಗೆ ನಾವೇ ನೋಡಿಕೊಂಡರೆ ಆ ತಡೆ ಸಿಕ್ಕುಹೋಗುವುದು. ಕಳ್ಳ ಸಿಕ್ಕಿಬಿದ್ದ ಮೇಲೆ ಹೊರಹಾಕುವುದು ಎಷ್ಟು ಹೊತ್ತಿನ ಕೆಲಸ!?

ಆದ್ದರಿಂದಲೇ ಎಲ್ಲ ಅನುಭಾವಿಗಳೂ ಹೇಳಿರುವುದು; “ನಿಮ್ಮೊಳಗೆ ನೋಡಿ. ನಿಮ್ಮ ಅಂತರಂಗವನ್ನು ಅರಿಯಿರಿ” ಎಂದು.
ತಡೆಯನ್ನು ಕಂಡುಹಿಡಿದು ನಿವಾರಿಸಿಕೊಂಡ ಮೇಲೆ, ಮುಂದಿನ ಪ್ರಶ್ನೆ ಎದುರಾಗುತ್ತದೆ. ಅದು, “ಬದುಕುವುದು ಹೇಗೆ?” ಎಂಬುದು.

ಕೆಲವರು ಬದುಕನ್ನು ಒಂದು ಕಲೆ ಎಂದು ಹೇಳುತ್ತಾರೆ. ಕಲೆ ಒಂದು ಅಭಿವ್ಯಕ್ತಿ ಮಾಧ್ಯಮ. ಅಥವಾ ಅದೊಂದು ಅಭಿವ್ಯಕ್ತಿ. ಅದು ಮೂಲಸ್ರೋತವಲ್ಲ. ಮೂಲಸ್ರೋತ ಏನಿದೆಯೋ ಅದನ್ನು ಪ್ರದರ್ಶಿಸುವ ಅಥವಾ ಅನ್ವಯಗೊಳಿಸಿಕೊಳ್ಳುವ ದಾರಿಯಷ್ಟೆ. ಬದುಕುವ ಕಲೆ ನಮಗೆ ಮೇಲ್ಪದರದ ಕಸುವನ್ನಷ್ಟೆ ನೀಡುತ್ತದೆ. ಅದು ನಮ್ಮ ಅಂತರಂಗವನ್ನು ಪೋಷಿಸಲಾರದು. ನಮ್ಮ ಅಂತರಂಗವನ್ನು ಪೋಷಿಸುವುದು ಪ್ರಜ್ಞೆ. ಪ್ರಜ್ಞಾವಂತಿಕೆ ಚೈತನ್ಯದ ಮೂಲ ಸ್ರೋತದೊಡನೆ ಸಂಬಂಧ ಹೊಂದಿರುವಂಥದ್ದು.

ತತ್ತ್ವಜ್ಞಾನಿ ಫ್ರೆಡ್ರಿಕ್ ನೀಷೆ ಹೇಳುವಂತೆ, “ನಾನು ಏಕೆ ಬದುಕುತ್ತೇನೆ ಎಂದು ತಿಳಿದರೆ, ನಾನು ಹೇಗೆ ಬದುಕಬೇಕೆಂದು ತನ್ನಿಂತಾನೆ ತಿಳಿಯುತ್ತದೆ”. ಮೊದಲಿಗೆ ನಾವು ನಮ್ಮ ಬದುಕಿನ ಉದ್ದೇಶವನ್ನು ಅರಿಯಬೇಕು. ಅದನ್ನು ಅರಿತಾಗ, ಆ ಉದ್ದೇಶವನ್ನು ತಲುಪುವ ದಾರಿಯೇ ನಮ್ಮ ಬದುಕಾಗುತ್ತದೆ. ಈ ಯಾನದಲ್ಲಿ ದಾರಿಯನ್ನು ಸೃಷ್ಟಿಸಿಕೊಳ್ಳಬೇಕಾದವರೂ ನಾವೇ. ಮತ್ತು ಅದನ್ನು ಕಲೆ ಸೃಷ್ಟಿಸಲಾರದು. ನಮ್ಮ ಜೀವನಪಥವನ್ನು ನಮ್ಮ ಪ್ರಜ್ಞಾವಂತಿಕೆಯೇ ರೂಪಿಸಬೇಕು. ಆದ್ದರಿಂದ, ಮೊದಲು ನಾವು ಅರಿವನ್ನು ಬೆಳೆಸಿಕೊಳ್ಳಬೇಕು.

ಈ ಸಂದರ್ಭದಲ್ಲಿ ಜನರಲ್ ಓಮರ್ ಬ್ರಾಡ್ಲಿಯ ಮಾತುಗಳು ನೆನಪಾಗುತ್ತವೆ. ಬ್ರಾಡ್ಲಿ ಹೇಳುತ್ತಾನೆ, “ನಮ್ಮಲ್ಲಿ ವಿಜ್ಞಾನ ಬಲ್ಲವರು ಬಹಳಿದ್ದಾರೆ. ಆದರೆ ಅನುಭಾವಿಗಳ ಸಂಖ್ಯೆ ಬಹಳ ಕಡಿಮೆ. ನಾವು ಪರಮಾಣು ರಹಸ್ಯವನ್ನು ಗ್ರಹಿಸಿದೆವು, ಆದರೆ ಪರ್ವತೋಪದೇಶವನ್ನು (ಏಸು ಕ್ರಿಸ್ತ ಬೆಟ್ಟದ ಮೇಲೆ ಕುಳಿತು ನೀಡಿದ ಬೋಧನೆಗಳು) ಮರೆತುಬಿಟ್ಟೆವು. ಪ್ರಪಂಚವು ಪ್ರಚಂಡ ಬುದ್ಧಿಶಕ್ತಿಯನ್ನು ಸಾಧಿಸಿತು, ಆದರೆ ವಿವೇಕವನ್ನೆ ಕಳೆದುಕೊಂಡಿತು. ಅಪಾರ ಶಕ್ತಿಯನ್ನು ಪಡೆಯಿತು, ಆದರೆ ಅಂತಃಸಾಕ್ಷಿ ಮಾಯವಾಯಿತು. ನಮಗೆ ಯುದ್ಧದ ಬಗ್ಗೆ ತಿಳಿದಿರುವಷ್ಟು ಶಾಂತಿಯ ಬಗ್ಗೆ ತಿಳಿದಿಲ್ಲ. ಕೊಲ್ಲುವುದರ ಬಗ್ಗೆ ತಿಳಿದಿರುವಷ್ಟು ಬದುಕುವುದರ ಬಗ್ಗೆ ತಿಳಿದಿಲ್ಲ” ಎಂದು.

ಈ ಮಾತುಗಳು ತೀರ ನಿಜ ಅಲ್ಲವೆ? ವಿಜ್ಞಾನ, ಅಭಿವೃದ್ಧಿ ಎಲ್ಲವೂ ಕಾಲದ ಅಗತ್ಯಗಳೇ ಹೌದು. ಆದರೆ ಅವುಗಳನ್ನು ಹೊಂದುವ ಭರದಲ್ಲಿ ನಾವೇನು ಕಳೆದುಕೊಂಡಿದ್ದೇವೆ ಅನ್ನುವ ಅರಿವಾದರೂ ನಮಗಿದೆಯೇ? ಹೀಗೆ ನಾವು ಕಳೆದುಕೊಂಡಿರುವುದರ ಅರಿವು ಹೊಂದುವುದೇ ಪ್ರಜ್ಞಾವಂತಿಕೆ. ಅದನ್ನು ಮತ್ತೆ ಪಡೆಯುವ ಪ್ರಕ್ರಿಯೆಯೇ ಬದುಕು.

ಮಹತಾ ಪುಣ್ಯಪಣ್ಯೇನ ಕ್ರೀಧೇಯಂ ಕಾಯನೌಕಸ್ತ್ವಯಾ |
ಪಾರಂ ದುಃಖೋದಧೇಃ ಗಂತುಂ ತರ ಯಾವನ್ನ ಬಿಧ್ಯತೇ ||
“ದುಃಖ ಸಾಗರವನ್ನು ದಾಟುವುದಕ್ಕಾಗಿ ನೀನು ಮಹತ್ತರವಾದ ಪುಣ್ಯದ ಬೆಲೆಯನ್ನು ತೆತ್ತು ಈ ಮಾನವ ಶರೀರವೆಂಬ ನೌಕೆಯನ್ನು ಕೊಂಡುಕೊಂಡಿರುವೆ. ಇದು ಮುರಿದುಹೋಗುವುದಕ್ಕೆ ಮೊದಲು ಅದನ್ನು ದಾಟು” ಎಂದು ಕಿವಿಮಾತು ಹೇಳಿಹೋಗಿದ್ದಾರೆ ನಮ್ಮ ಪೂರ್ವಜರು. ಹೀಗೆ ದಾಟಬೇಕು, ಈ ಶರೀರವನ್ನು ಭವಸಾಗರ ದಾಟಲು ಬಳಸಬೇಕು ಅನ್ನುವ ಅರಿವು ನಮಗೆ ಬಾಯಿಪಾಠ ಮಾತ್ರವಾಗಿ ಪದಶಃ ಅರ್ಥದಲ್ಲಿ ಇರಬಹುದು. ಆದರೆ ಅದನ್ನು ಆತ್ಮಗತಗಳಿಸಿಕೊಂಡು ಬದುಕಿನ ದಿಕ್ಸೂಚಿಯಾಗಿ ಮಾಡಿಕೊಳ್ಳುವುದು ಪ್ರಜ್ಞಾವಂತಿಕೆ. ದೋಣಿ ನಡೆಸುವುದು ಒಂದು ಕಲೆ. ಆದರೆ, ಹಾಗೆ ದೋಣಿಯನ್ನು ನಡೆಸಬೇಕು, ಅದನ್ನು ದುಃಖಸಾಗರ ದಾಟುವುದಕ್ಕಾಗಿ ನಡೆಸಬೇಕು ಅನ್ನುವ ಪರಿವೆಯೇ ಇಲ್ಲದೆ ಹುಟ್ಟುಹಾಕುವ ಕಲೆ ಕರಗತ ಮಾಡಿಕೊಂಡು ಪ್ರಯೋಜನವೇನು!?

ಆದ್ದರಿಂದ, ಮೊದಲು ಪ್ರಜ್ಞಾವಂತರಾಗೋಣ. ಈ ದೇಹವೆಂಬ ನೌಕೆಯನ್ನು ಸಾರ್ಥಕಪಡಿಸಿಕೊಂಡು, ಬದುಕನ್ನೂ ಅರ್ಥಪೂರ್ಣವಾಗಿಸಿಕೊಳ್ಳೋಣ.

Leave a Reply