ವ್ರತಕ್ಕೆ ಪಾರಣೆಯು ತೀರ್ಥವು. ಆರ್ಜವ (ಋಜುಮಾರ್ಗದಲ್ಲಿರುವುದು ಉತ್ತಮ) ಗುಣವು ತೀರ್ಥವೆನಿಸುತ್ತದೆ. ದೇವಶುಶ್ರೂಷೆಯು ತೀರ್ಥವು. ಗುರು ಶುಶ್ರೂಷೆಯು ತೀರ್ಥವು. ಅತಿಥಿಯನ್ನು ಪೂಜಿಸುವುದು ಉತ್ತಮ ತೀರ್ಥ. ಬ್ರಹ್ಮತೀರ್ಥವು ಸನಾತನವಾದುದು. ಬ್ರಹ್ಮಚರ್ಯೆಯು ಉತ್ತಮ ತೀರ್ಥವು. ತ್ರೇತಾಗ್ನಿಯು ತೀರ್ಥವೆನಿಸಿದೆ.
ಹೀಗೆ ಧರ್ಮಮೂಲವನ್ನು ಚೆನ್ನಾಗಿ ತಿಳಿದು ಅಲ್ಲಿ ಮನಸ್ಸನ್ನಿಡಬೇಕು. ಹೀಗೆ ತೀರ್ಥಗಳನ್ನು ತಿಳಿಯಬೇಕು. ತೀರ್ಥ ಯಾತ್ರೆಯಿಂದ ತೀರ್ಥಸ್ನಾನ ಮಾಡಬೇಕು. ಧರ್ಮದಿಂದ ಧರ್ಮವು ವೃದ್ಧಿಯಾಗುತ್ತದೆ. ತೀರ್ಥವನ್ನು ಸ್ಥಾವರವೆಂದೂ ಜಂಗಮವೆಂದೂ ಎರಡು ವಿಧವೆನ್ನುತ್ತಾರೆ. ಸ್ಥಾವರದಕ್ಕಿಂತಲೂ ಸಂಚರಿಸುತ್ತಿರುವ (ಜಂಗಮ) ತೀರ್ಥವು ಶ್ರೇಷ್ಠ.
ಅದಕ್ಕಿಂತಲೂ ಜ್ಞಾನ ಸಂಪಾದಿಸಿರುವನಾಗಿ ಕರ್ಮದಿಂದಲೂ ವಿಶುದ್ಧನಾಗಿರುವ ಪುರುಷನಲ್ಲಿ ಸರ್ವತೀರ್ಥಗಳಿರುವುವು ಅಂಥವನು ತೀರ್ಥಭೂತನೆನೆಸುವನು. ಜ್ಞಾನವು ಉತ್ತಮ ತೀರ್ಥವು. ಅದರಲ್ಲೂ ಉಪದೇಶಮಾಡುವ ಗುರುತೀರ್ಥಕ್ಕಿಂತ ಶೇಷ್ಠವಾದುದಿಲ್ಲ. ಜ್ಞಾನತೀರ್ಥವೇ ಉತ್ತಮ ತೀರ್ಥವಾದಾಗ್ಯೂ ಬ್ರಹ್ಮಜ್ಞಾನವು ಸನಾತನ ತೀರ್ಥವೆಂದು ತಿಳಿಯುವುದು. ಆದರೆ ಸಕಲತೀರ್ಥಗಳಲ್ಲೂ ಕ್ಷಮಾತೀರ್ಥವು ಉತ್ತಮೋತ್ತಮವೆಂದು ಹೇಳಲಾಗಿದೆ.
ಕ್ಷಮಾವತಾಮಯಂ ಲೋಕಃ ಪರಶ್ಚೈವ ಕ್ಷಮಾವತಾಮ್ – ಕ್ಷಮೆಯುಳ್ಳವರಿಗೆ ಇಹಪರ ಲೋಕಗಳೆರಡೂ ಲಭಿಸುವುದೆಂಬ ಸೂಕ್ತಿ ಇದೆ.
ಮಾನಿತೋಽಮಾನಿತೋವಾಪಿ ಪೂಜಿತೋಽಪೂಜಿತೋಪಿವಾ |
ಆಕೃಷ್ಟಸ್ತರ್ಜಿತೋಽವಾಪಿ ಕ್ಷಮಾವಾಂಸ್ತೀರ್ಥ ಉಚ್ಯತೇ ||
ಕ್ಷಮಾ ಯಶಃ ಕ್ಷಮಾ ದಾನಂ ಕ್ಷಮಾ ಯಜ್ಞಂ ಕ್ಷಮಾ ದಮಃ |
ಕ್ಷಮಾಽಹಿಂಸಾ ಕ್ಷಮಾಧರ್ಮಃ ಕ್ಷಮಾಚೇಂದ್ರಿಯ ನಿಗ್ರಹಃ ||
ಎಂದೂ
ಕ್ಷಮಾವಾನ್ ಪ್ರಾಪ್ನುಯಾತ್ ಸ್ವರ್ಗಂ ಕ್ಷಮಾವಾನ್ ಪ್ರಾಪ್ನುಯಾದ್ಯಶಃ |
ಕ್ಷಮಾವಾನ್ ಪ್ರಾಪ್ನುಯಾನ್ಮೋಕ್ಷಂ ತಸ್ಮಾತ್ಸಾಧುಃ ಸ ಉಚ್ಯತೇ ||
ಎಂದೂ ಮಹಾಭಾರತವು ಹೇಳುತ್ತದೆ.
ಇದರ ಅರ್ಥ: ಕ್ಷಮೆಯೇ ಯಶಸ್ಸು, ಕ್ಷಮೆಯೇ ದಾನವು, ಕ್ಷಮೆಯೇ ಯಜ್ಞವು, ಕ್ಷಮೆಯೇ (ದಮ) ಇಂದ್ರಿಯ ನಿಗ್ರಹವು, ಕ್ಷಮೆಯೇ ಅಹಿಂಸೆಯು, ಕ್ಷಮಾಗುಣವೇ ಧರ್ಮವು, ಕ್ಷಮೆಯೇ ಇಂದ್ರಿಯ ನಿಗ್ರಹವು, ಕ್ಷಮೆಯೇ ದಯೆಯು, ಕ್ಷಮೆಯೇ ಯಜ್ಞವು, ಧರ್ಮವು ಸರ್ವ ಜಗತ್ತು ಕ್ಷಮೆಯಿಂದಲೇ ಧರಿಸಲ್ಪಟ್ಟಿದೆ. ಕ್ಷಮೆಯುಳ್ಳ ಬ್ರಹ್ಮಜ್ಞಾನಿಯು ದೇವನು, ಕ್ಷಮಾವಂತನೇ ಶ್ರೇಷ್ಠನು. ಕ್ಷಮೆಯುಳ್ಳವನು ಸ್ವರ್ಗವನ್ನು ಪಡೆಯುತ್ತಾನೆ. ಯಶಸ್ಸನ್ನು ಹೊಂದುತ್ತಾನೆ, ಮೋಕ್ಷವನ್ನು ಪಡೆಯುತ್ತಾನೆ. ಆದುದರಿಂದಲೇ ಕ್ಷಮಾವಂತನು ಸಾಧುವೆನಿಸುತ್ತಾನೆ ಎಂಬುದಾಗಿ; ಹಾಗೂ ಸನ್ಮಾನಿತನಾಗಲಿ, ಮಾನಿತನಾಗದಿರಲಿ, ಪೂಜಿತನಾಗಲಿ, ಪೂಜೆಯನ್ನು ಪಡೆಯದವನಾಗಲಿ, ಎಳೆದಾಡಲ್ಪಡಲಿ, ಹೆದರಿಸಿ, ಬೆದರಿಸಿ, ಜಬರಿಸಲ್ಪಡಲಿ, ಕೋಪಗೊಳ್ಳದೆ ಶಾಂತನಾಗಿ ಕ್ಷಮಾವಂತನಾಗಿರುವಿಕೆಯೇ ಕ್ಷಮಾತೀರ್ಥ ಎಂದಾಗಿದೆ.
ಸಕಲತೀರ್ಥಗಳಲ್ಲಿ ಕ್ಷಮಾತೀರ್ಥವೇ ಅತ್ಯುತ್ತಮ : ಇಂದಿನ ಸದ್ವಿಚಾರ
