ಪಂಚಭೂತಗಳ ಸಾಕ್ಷಿ ನೀನು, ಆ ಚಿದ್ರೂಪ ನೀನು….

“ನೀನು ಮುಕ್ತಿ ಪಡೆಯಬೇಕು ಎಂದಾದರೆ, ಮೊದಲು ನಿನ್ನನ್ನು ನೀನು ಅರಿಯಬೇಕು. ನಾನು ಮುಕ್ತಿ ಬಯಸುತ್ತೇನೆ ಎಂದಾದರೆ, ಮೊದಲು ನಾನು ಯಾರು ಎಂಬ ಅರಿವಿರಬೇಕು” ಎಂದು ಅಷ್ಟಾವಕ್ರನು ಜನಕ ಮಹಾರಾಜನಿಗೆ ವಿವರಿಸುತ್ತಾನೆ | ಭಾವಾರ್ಥ : ಸಾ.ಹಿರಣ್ಮಯಿ

ಜನಕ ಮಹಾರಾಜ ಅಷ್ಟಾವಕ್ರ ಮುನಿಯ ಬಳಿ “ಜ್ಞಾನ ಪಡೆಯುವುದು ಹೇಗೆ? ಮುಕ್ತಿ ಪಡೆಯುವುದು ಹೇಗೆ?” ಎಂದು ಪ್ರಶ್ನಿಸುತ್ತಾನೆ. ಈ ಪ್ರಶ್ನೆಗೆ ಅಷ್ಟಾವಕ್ರ ಉತ್ತರಿಸುತ್ತಾ ಹೀಗೆ ಹೇಳುತ್ತಾನೆ; 

ನ ಪೃಥ್ವೀ ನ ಜಲಂ ನಾಗ್ನಿರ್ನವಾಯುರ್ದ್ಯೌನ ವಾ ಭವಾನ್ |
ಯೇಷಾಂ ಸಾಕ್ಷಿಣಮಾತ್ಮಾನಂ ಚಿದ್ರೂಪಂ ವಿದ್ಧಿ ಮುಕ್ತಯೇ || 1.3 ||

ಅರ್ಥ : ನೀನು ಪೃಥ್ವಿಯಲ್ಲ, ಅಗ್ನಿಯಲ್ಲ, ವಾಯುವಲ್ಲ, ಜಲವಲ್ಲ, ಆಕಾಶವಲ್ಲ. ಮುಕ್ತಿಯನ್ನು ಪಡೆಯಬೇಕಾದರೆ, ಇವುಗಳ ಸಾಕ್ಷಿಯೇ ನೀನು; ಆ ಚಿದ್ರೂಪವೇ ನೀನು ಎಂಬುದನ್ನು ಅರಿ.

ಭಾವಾರ್ಥ: ಅಷ್ಟಾವಕ್ರ ಜನಕ ರಾಜನಿಗೆ ಹೇಳುತ್ತಿದ್ದಾನೆ; ನೀನು ಮುಕ್ತಿ ಪಡೆಯಬೇಕು ಎಂದಾದರೆ, ಮೊದಲು ನಿನ್ನನ್ನು ನೀನು ಅರಿಯಬೇಕು ಎಂದು. 

ಹೌದಲ್ಲವೆ? ನಾನು ಮುಕ್ತಿ ಬಯಸುತ್ತೇನೆ ಎಂದಾದರೆ, ಮೊದಲು ನಾನು ಯಾರು ಎಂಬ ಅರಿವಿರಬೇಕು. ನಾನು ಯಾರು ಎಂದು ತಿಳಿದರೆ ಮಾತ್ರ ನನಗೆ ಯಾವುದರಿಂದ ಮುಕ್ತಿ ಬೇಕು ಎಂದು ಅರಿವಾಗುವುದು. ಇಲ್ಲವಾದರೆ ನಾನು ಯಾವುದರಿಂದ ಮುಕ್ತಗೊಳ್ಳಬೇಕು?

ಅಗಳಿ ಹಾಕಿ ಬೀಗ ಜಡಿಯಲಾಗಿದೆ. ನೀವು ಬಾಗಿಲ ಹಿಂದೆ ಇದ್ದೀರಿ. ಹೊರಗೆ ಹೋಗಬೇಕೆಂದು ಬಯಸುತ್ತಿದ್ದೀರಿ. ಹಾಗೆ ಬಯಸುವ ಮೊದಲು ನೀವು ಬಂಧಿಯಾಗಿರುವುದು ಎಲ್ಲಿ ಎಂದು ನೋಡಬೇಕಲ್ಲವೆ? ನೀವು ಕದವನ್ನು ಮಾತ್ರ ನೋಡುತ್ತಿದ್ದೀರಿ. ನಿಮಗೆ ಬೀಗ ಹಾಕಿರುವುದಷ್ಟೆ ಗೊತ್ತು. ನೀವು ‘ಮುಕ್ತಿ ಬೇಕು’ ಅನ್ನುವುದನ್ನು ಬಾಯಿಪಾಠ ಮಾಡಿಕೊಂಡಿದ್ದೀರಿ. ಸರಿಯಾಗಿ ನೋಡಿ. ಗಮನವಿಟ್ಟು ಪರೀಕ್ಷಿಸಿ. ನೀವು ಎಲ್ಲಿದ್ದೀರಿ ಎಂದು ಅರ್ಥ ಮಾಡಿಕೊಳ್ಳಿ.  

ವಾಸ್ತವದಲ್ಲಿ ಅಲ್ಲಿ ಬಾಗಿಲು ಮಾತ್ರವೇ ಇದೆ. ಅದರ ಆಚೀಚೆ ಗೋಡೆಗಳೇ ಇಲ್ಲ! ಅಲ್ಲಿರುವುದು ಕೇವಲ ಬಾಗಿಲು. ಗೋಡೆಗಳಿಲ್ಲದ ಬಯಲಿಗೆ ಹುಟ್ಟೆಂಬ ಬಾಗಿಲನ್ನು ಇಡಲಾಗಿದೆ. ಬಾಗಿಲ ಮೇಲೆ ಮಾತ್ರ ಗಮನ ಇಡುವ ನೀವು ಅಲ್ಲಿ ಗೊಡೆಗಳಿಲ್ಲ ಎಂಬುದನ್ನು ಗಮನಿಸುವುದೇ ಇಲ್ಲ. ವಾಸ್ತವದಲ್ಲಿ ನೀವು ಬಂಧಿಯಾಗಿಲ್ಲ ಎಂಬ ಅರಿವಾಗುವುದೇ ಇಲ್ಲ.

ಆದ್ದರಿಂದ, ಮೊದಲು ನೀವು ಎಲ್ಲಿದ್ದೀರಿ ಎಂಬುದನ್ನು ಅರಿಯಿರಿ. ಅದನ್ನು ಅರಿತರೆ ಮುಕ್ತಿಗೆ ಮಾರ್ಗ ಸುಲಭವಾಗಿ ದೊರೆಯುವುದು.
ಇಲ್ಲಿ ಅಷ್ಟಾವಕ್ರ ಹೇಳುತ್ತಿದ್ದಾನೆ, “ನೀನು ಭೂಮಿ, ಅಗ್ನಿ, ವಾಯು, ಜಲ, ಆಕಾಶ – ಯಾವುದೂ ಅಲ್ಲ” ಎಂದು. ಇವು ಪಂಚಭೂತಗಳು. ದೇಹ ನಿರ್ಮಾಣವಾಗುವುದು ಪಂಚಭೂತಗಳಿಂದ. ನಾವು ಮಿಥ್ಯಾಹಂಕಾರದ ಪ್ರಭಾವಕ್ಕೆ ಸಿಲುಕಿ ಪಂಚಭೂತಗಳನ್ನೇ ನಾವೆಂದು, ಅವುಗಳಿಂದಾದ ದೇಹವೇ ನಾವೆಂದು ಭಾವಿಸಿಬಿಡುತ್ತೇವೆ. ಈ ತಪ್ಪು ತಿಳುವಳಿಕೆಯೇ ಎಲ್ಲ ಸಮಸ್ಯೆಗೂ ಮೂಲ. ಆದ್ದರಿಂದ, “ಮೊಟ್ಟಮೊದಲು ನೀನು ಪಂಚಭೂತಗಳಿಂದಾದ ದೇಹವಲ್ಲ ಎಂಬುದನ್ನು ತಿಳಿ” ಅನ್ನುತ್ತಿದ್ದಾನೆ ಅಷ್ಟಾವಕ್ರ.

ನೀನು ಶರೀರವಲ್ಲ. ಪಂಚಭೂತಗಳೂ ಅಲ್ಲ, ಅವುಗಳಿಂದಾದ ದೇಹವೂ ಅಲ್ಲ. ನೀನು ಅವೆಲ್ಲವನ್ನೂ ಸಾಕ್ಷಿಮಾತ್ರವಾಗಿ ನೋಡುತ್ತಿರುವ ಪರಮಾತ್ಮ. ಯಾವುದನ್ನೂ ಒಳಗೊಳಿಸಿಕೊಳ್ಳದೆ, ಯಾವುದರಲ್ಲೂ ಆಸಕ್ತನಾಗದೆ, ಯಾವುದನ್ನೂ ಮೋಹಿಸದೆ, ಯಾವುದನ್ನೂ ಅಂಟಿಸಿಕೊಳ್ಳದೆ ಇರುವ ಚಿದ್ರೂಪಿ ಭಗವಂತನೇ ನೀನು ಅನ್ನುತ್ತಿದ್ದಾನೆ ಅಷ್ಟಾವಕ್ರ.

ನಮಗೆ ಲೌಕಿಕದಿಂದ, ಜನನಮರಣ ಚಕ್ರದಿಂದ ಮುಕ್ತಿ ಬೇಕೆಂದರೆ ಮೊದಲು ನಾನೇ ದೇಹವೆಂಬ ಮಿಥ್ಯಾಹಂಕಾರದಿಂದ ಹೊರಗೆ ಬರಬೇಕು ಅನ್ನುವುದಂತೂ ಸರಿಯೇ. ನಮ್ಮ ದೈನಂದಿನ ಬಂಧನಗಳಿಂದ, ದೈನಂದಿನ ಚಿಂತೆಗಳಿಂದ, ಸಮಸ್ಯೆಗಳಿಂದ ಹೊರಗೆ ಬರುವುದಕ್ಕೂ ಈ ಅರಿವು ಮುಖ್ಯ.

ನಾವು ನಮ್ಮ ದೇಹದ ಬಗ್ಗೆ ವಿಪರೀತ ಮೋಹಿತರಾಗಿದ್ದೇವೆ. ಅದನ್ನು ಸುರೂಪಗೊಳಿಸುವುದಕ್ಕೆ, ಅದನ್ನು ಆರಾಮವಾಗಿ ಇಡಲಿಕ್ಕೆ, ಇಂದ್ರಿಯಗಳ ತೃಪ್ತಿಗೆ; ಆ ದೇಹದೊಡನೆ ಅಂಟಿಸಿಕೊಂಡ ಹೆಸರಿಗೆ, ಗುರುತಿಗೆ, ಜನಪ್ರಿಯತೆಗೆ ಏನೆಲ್ಲ ಕಸರತ್ತು ನಡೆಸುತ್ತೇವೆ. ಅದಕ್ಕಾಗಿ ತಪ್ಪು ದಾರಿ ಹಿಡಿಯುವುದಕ್ಕೆ, ಇತರರನ್ನು ವಂಚಿಸಲಿಕ್ಕೂ ಹಿಂದೆಮುಂದೆ ನೋಡುವುದಿಲ್ಲ. ಕೆಲವೊಮ್ಮೆ ಇತರರನ್ನು ಘಾಸಿಗೊಳಸಿಸುವುದು, ಹಿಂಸೆಗಿಳಿಯುವುದಕ್ಕೂ ಹೇಸುವುದಿಲ್ಲ. ನಮ್ಮ ದೇಹಸುಖಕ್ಕಾಗಿ, ಮಿಥ್ಯಾಹಂಕಾರದ ತೃಪ್ತಿಗಾಗಿ ಅಧಿಕಾರ ಬಯಸುತ್ತೇವೆ. ಅದನ್ನು ಪಡೆಯಲು ಸುಳ್ಳುಗಳ ಸರಮಾಲೆಯನ್ನೆ ಪೋಣಿಸುತ್ತೇವೆ. ಭ್ರಷ್ಟಾಚಾರಕ್ಕೆ ಇಳಿಯುತ್ತೇವೆ.
ಮನೆಯ ಹೊರಗೆ ಮಾತ್ರವಲ್ಲ, ಮನೆಯ ಒಳಗೂ ನಮ್ಮ ದೇಹದೊಂದಿಗಿನ ಗುರುತಿಗೆ ಆತುಕೊಂಡು ಸಂಬಂಧಗಳ ಸರಪಳಿ ಕಟ್ಟಿಕೊಳ್ಳುತ್ತೇವೆ. ಅದರಲ್ಲಿ ಇತರರನ್ನೂ ಬಂಧಿಸಲು ಯತ್ನಿಸುತ್ತೇವೆ.

ಈ ಎಲ್ಲದರಿಂದ ಹೊರಗೆ ಬರಬೇಕೆಂದರೆ, ಮುಖ್ಯವಾಗಿ ನಾವು ತಿಳಿಯಬೇಕಾದುದು ಇಷ್ಟೇ; “ನಾನು ಪಂಚಭೂತಗಳಿಂದಾದ ದೇಹವಲ್ಲ, ಅವುಗಳನ್ನು ಸಾಕ್ಷಿ ಮಾತ್ರವಾಗಿ ನೋಡುತ್ತಿರುವವನು/ಳು” ಎಂದು.

2 Comments

Leave a Reply