ಸುಖದಿಂದ ಶಾಂತಿ, ಶಾಂತಿಯಿಂದ ಮುಕ್ತಿ…

“ಮುಕ್ತಿ ದೊರೆಯಬೇಕೆಂದರೆ ಮೊದಲು ನಮ್ಮಲ್ಲಿ ಶಾಂತಿ ನೆಲೆಸಬೇಕು. ಶಾಂತಿ ನೆಲೆಸಬೇಕೆಂದರೆ ಮೊದಲು ನಮ್ಮನ್ನು ನಾವು ಪಂಭೂತಗಳಿಂದ ನಿರ್ಮಾಣವಾಗಿರುವ ಈ ದೇಹದ ಗುರುತಿನಿಂದ ನಮ್ಮನ್ನು ಬಿಡಿಸಿಕೊಂಡು ಚಿದ್ರೂಪದಲ್ಲಿ ನೆಲೆಸಬೇಕು ” ಅನ್ನುತ್ತಾನೆ ಅಷ್ಟಾವಕ್ರ | ಭಾವಾರ್ಥ : ಸಾ.ಹಿರಣ್ಮಯೀ

ಜನಕ ರಾಜನಿಗೆ ಅಷ್ಟಾವಕ್ರ ಹೇಳುತ್ತಾನೆ:
ಯದಿ ದೇಹಂ ಪೃಥಕ್ಕೃತ್ಯ ಚಿತಿ ವಿಶ್ರಾಮ್ಯ ತಿಷ್ಠತಿ|
ಅಧುನೈವ ಸುಖೀ ಶಾಂತೋ ಬಂಧಮುಕ್ತೋ ಭವಿಷ್ಯಸಿ|| 1.4 ||
ಅರ್ಥ: ನೀನು ದೇಹಬುದ್ಧಿಯಿಂದ ಪಾರಾಗಿ ಚಿತ್ ಸ್ವರೂಪದಲ್ಲಿ ನೆಲೆಸುವೆಯಾದರೆ ತತ್’ಕ್ಷಣವೇ ನಿನಗೆ ಶಾಂತಿ ದೊರೆಯುವುದು. ಆಗ ನೀನು ಸುಖಿಯಾಗುವೆ. ನಿನ್ನಲ್ಲಿ ಶಾಂತಿ ನೆಲೆಸುವುದು. ಆಗ ನೀನು ಎಲ್ಲ ಬಂಧನಗಳಿಂದ ಮುಕ್ತನಾಗುವೆ.
ಪಂಚಭೂತಗಳಿಂದಾದ ಶರೀರವೇ ತಾನೆಂಬ ಗುರುತಿನಿಂದ ಹೊರಬಂದರೆ ಮುಕ್ತಿಯ ದಾರಿ ದೊರೆಯುವುದು ಹೇಗೆ ಸಾಧ್ಯವಾಗುತ್ತದೆ ಎಂಬುದನ್ನು ಮುಂದಿನ ಶ್ಲೋಕಗಳಲ್ಲಿ ಅಷ್ಟಾವಕ್ರ ಮುನಿ ವಿವರಿಸುತ್ತಾ ಹೋಗುತ್ತಾನೆ.

“ತಾನು ಈ ಶರೀರವಲ್ಲ ಎಂದು ತಿಳಿಯಬೇಕು. ಅದನ್ನು ಮನದಟ್ಟು ಮಾಡಿಕೊಂಡು ಎಲ್ಲವನ್ನೂ ಸಾಕ್ಷೀಭಾವದಿಂದ ನೋಡುವ ಚಿದ್ರೂಪವೇ ತಾನೆಂದು ಅರಿಯಬೇಕು”. ಅದೇನೋ ಸರಿ. ಸತತ ಧ್ಯಾನ, ಚಿಂತನ – ಮನನಗಳಿಂದ ನಾವು ಇದನ್ನು ಸಾಧಿಸಿದೆವು ಎಂದು ತಿಳಿಯೋಣ. ಮುಂದೇನು? ನಮ್ಮನ್ನು ನಾವು ದೇಹದ ಗುರುತಿನಿಂದ ಹೊರಗೆ ತಂದುಕೊಂಡ ಮೇಲೆ ನಮಗೆ ನೆಲೆ ಯಾವುದು?

ಅಷ್ಟಾವಕ್ರ ಹೇಳುತ್ತಾನೆ, ‘ಚಿತಿ ವಿಶ್ರಾಮ್ಯ’ – ಚಿತ್ತದಲ್ಲಿ ನೆಲೆಸು. ನಿನ್ನ ಗಮನವನ್ನು ದೇಹದಿಂದ ತೆಗೆದು ಚಿತ್ತದಲ್ಲಿ ಇರಿಸು. ದೇಹದಲ್ಲಿ ಗಮನವಿದ್ದಾಗ ಅದರ ಸುಖ ದುಃಖಗಳು ನಿಮ್ಮನ್ನು ಬಾಧಿಸುತ್ತಲೇ ಇರುತ್ತದೆ. ನಿಮ್ಮ ಜೀವನದ ಉದ್ದೇಶವೇ ನಿಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸುವುದಾಗಿಬಿಡುತ್ತದೆ.

ಆದರೆ ಚಿತ್ತ ನಿಮ್ಮಿಂದ ಏನನ್ನೂ ಬಯಸುವುದಿಲ್ಲ. ಅದಕ್ಕೆ ನೀವು ಏನನ್ನೂ ಉಣಿಸಬೇಕಿಲ್ಲ. ಅದನ್ನು ತೃಪ್ತಿಗೊಳಿಸಬೇಕಿಲ್ಲ. ಚಿತ್ತದಲ್ಲಿ ನೆಲೆಸಿದರೆ ನೀವು ಅದಕ್ಕೆ ಏನೂ ನೀಡಬೇಕಿಲ್ಲ, ಬದಲಿಗೆ ಅದೇ ನಿಮಗೆ ನೀಡುತ್ತದೆ. ಎಲ್ಲಿ ಯಾವ ಬಯಕೆಯೂ ಉದ್ದೇಶವೂ ಇರುವುದಿಲ್ಲವೋ ಅಲ್ಲಿ ಶಾಂತಿ ಸಹಜವಾಗಿರುತ್ತದೆ. ಎಲ್ಲಿ ‘ಬೇಡಿಕೆ’ ಇರುವುದಿಲ್ಲವೋ, ಡಿಮಾಂಡ್ ಇರುವುದಿಲ್ಲವೋ, ಅಲ್ಲಿ ಸುಖವೂ ತಾನೇ ತಾನಾಗಿರುತ್ತದೆ. ಹಾಗೆಯೇ ಎಲ್ಲಿ ‘ಗುರುತು’ ಇರುವುದಿಲ್ಲವೋ, ಎಲ್ಲಿ ನೀವು ಗುರುತುಗಳಿಂದ, ಎಲ್ಲ ಉಪಾಧಿಗಳಿಂದ ಮುಕ್ತವಾಗಿರುತ್ತೀರೋ ಅಲ್ಲಿ ಬಂಧನವಿರುವುದಿಲ್ಲ. ಗುರುತೇ ಬಂಧನ. ಹೆಸರೇ ಬಂಧನ. ದೇಹವೇ ಬಂಧನ. ಆಕಾರವೇ ಬಂಧನ. ಚಿತ್ತ ನಿರಾಕಾರ. ಚಿತ್ತ ಸ್ವತಂತ್ರ. ಆದ್ದರಿಂದ, ಚಿತ್ತದಲ್ಲಿ ನೆಲೆಸಿದ ನೀವೂ ಸ್ವತಂತ್ರರು.

‘ಕಟ್ಟು ಕಟ್ಟನೆ ಹೆರುವುದು’ ಅನ್ನುವ ಮಾತಿದೆ. ದೇಹವೊಂದು ಬಂಧನ. ಆಕಾರವಿರುವ, ಅವಕಾಶವನ್ನು ಆವರಿಸುವ ಪ್ರತಿಯೊಂದೂ ಬಂಧನವೇ. ದೇಹಕ್ಕೆ ಹೆಸರು, ಗುರುತುಗಳಿರುವುದರಿಂದ ಜೀವಿಗೆ ಅದು ಹೆಚ್ಚುವರಿ ಬಂಧನ. ಈ ಬಂಧನದಲ್ಲಿ ನೆಲೆಸಿದ ನೀವು ಕೂಡಾ ಒಂದು ಪಂಜರವೇ ಆಗಿಬಿಡುವುದು ಸಹಜ.
ಆದ್ದರಿಂದ, “ದೇಹಭಾವನೆ ತೊರೆಯಿರಿ. ಚಿತ್ತದಲ್ಲಿ ನೆಲೆಸಿ. ಶಾಂತರಾಗಿ… ಸ್ವತಂತ್ರರಾಗಿ… ಮುಕ್ತರಾಗಿ” ಅನ್ನುತ್ತಾನೆ ಅಷ್ಟಾವಕ್ರ.

2 Comments

Leave a Reply