ವಿವೇಕಾನಂದರ ಸಾರ್ವಕಾಲಿಕ ಚಿಂತನೆಗಳು

ಇಂದು ಭಾರತ ಕಂಡ ಕ್ರಾಂತಿಕಾರಿ ಸಂತರಲ್ಲಿ ಒಬ್ಬರಾದ ಮತ್ತು ಅತ್ಯಂತ ಜನಪ್ರಿಯರಾದ ಸ್ವಾಮಿ ವಿವೇಕಾನಂದರ ಜನ್ಮದಿನ. ಸದಾ ಪ್ರಸ್ತುತವಾಗಿರುವ ವಿವೇಕಾನಂದರ ಕೆಲವು ಚಿಂತನೆಯ ಹೊಳಹುಗಳು ಇಲ್ಲಿವೆ… 

ಜನರಿಗೆ ವಿದ್ಯಾಭ್ಯಾಸ ಅತ್ಯಗತ್ಯವಾಗಿ ಬೇಕು. ಈ ದಿನಗಳಲ್ಲಿ ಡೆಮಾಕ್ರಸಿಯ ಮಾತನಾಡುತ್ತಿರುವರು. ಡೆಮಾಕ್ರಸಿ ಎಂದರೆ ಜನರೆಲ್ಲ ಒಂದೇ ಸಮಾನವಾಗಿರುವ ವ್ಯವಸ್ಥೆ. ಯಾವುದೇ ವ್ಯಕ್ತಿ ತಾನು ಇತರರಿಗೆ ಸರಿಸಮಾನ ಎಂದು ತಿಳಿಯುವುದು ಹೇಗೆ? ಅವರ ಬುದ್ಧಿ ಚುರುಕಾಗಿರಬೇಕು, ಮೂಢನಂಬಿಕೆಗಳಿಂದ ಮುಕ್ತವಾಗಿರಬೇಕು. ತನ್ನ ಸತ್ಯವನ್ನು, ತನ್ನ ಶಕ್ತಿಯನ್ನು ಅರಿತಿರಬೇಕು. ಮತ್ತು ತನ್ನೊಳಗಿನ ಶಕ್ತಿಯನ್ನು ಹೊರಗಿನವರಾರೋ ಕೊಟ್ಟಿರುವುದಲ್ಲ, ಅದನ್ನು ತಾನೇ ಗಳಿಸಿರುವುದು ಎಂಬ ಅರಿವಿರಬೇಕು. ಈ ಅರಿವನ್ನು ಹೊಂದುವ ಕ್ಷಣವೇ ವ್ಯಕ್ತಿಯು ಸ್ವತಂತ್ರರಾಗುವರು. ಮತ್ತು ಈ ಸ್ವಾತಂತ್ರ್ಯ ಅವರಿಗೆ ಸಮಾನತೆಯ ಅರಿವನ್ನು ತಂದುಕೊಡುವುದು.

 

ನಾನು ಎಲ್ಲರಿಗೂ ಸರಿಸಮಾನವಾಗಿದ್ದೇನೆ, ಎಲ್ಲರೂ ನನಗೆ ಸರಿಸಮಾನವಾಗಿದ್ದಾರೆ ಎಂಬುದು ಸಮಾಜದೊಳಗಿನ ಪ್ರತಿ ವ್ಯಕ್ತಿಗೂ ಮನದಟ್ಟಾಗದ ಹೊರತು ಸಮಾನತೆ ಸಾಧಿಸಲು ಸಾಧ್ಯವಾಗುವುದಿಲ್ಲ. ಸಮಾನತೆಯ ಅರಿವನ್ನು ಪಡೆದ ವ್ಯಕ್ತಿಯು ಯಾರ ಮೇಲೂ ತನ್ನ ಅಭಿಪ್ರಾಯಗಳನ್ನು ಹೇರಲುಹೋಗುವುದಿಲ್ಲ. ದಬ್ಬಾಳಿಕೆ ಮಾಡುವುದಿಲ್ಲ. ತಾರತಮ್ಯ ತೋರುವುದಿಲ್ಲ.

 

ಕೆಲವರು ಸುಮ್ಮನೆ ಸಮಾನತೆಯ ಮಾತನ್ನಾಡುತ್ತಾರೆ. ಆದರೆ ಅವರು ಅದನ್ನು ಆಚರಿಸುವುದು ಕಷ್ಟ. ಯಾವ ವ್ಯಕ್ತಿಯು “ತನಗಿಂತ ಕೀಳಾದವರು ಎಂದಾದರೂ ಯಾರಾದರೂ ಇದ್ದರು” ಎಂಬ ಭಾವನೆಯನ್ನು ತೊರೆಯುತ್ತಾರೋ ಅವರು ಮಾತ್ರ ಸಮಾನತೆಯ ಮಾತನ್ನಾಡಬಲ್ಲರು. ಈ ಅರಿವು ಸಾಧ್ಯವಾಗುವುದು ವಿದ್ಯಾಭ್ಯಾಸದಿಂದ. ಜನಸಾಮಾನ್ಯರನ್ನು ವಿದ್ಯಾವಂತರನ್ನಾಗಿ ಮಾಡುವುದರಿಂದ ತಾರತಮ್ಯ ಭಾವನೆ ತೊಲಗುವುದು. ಆದರೆ ಆ ವಿದ್ಯಾಭ್ಯಾಸವು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವಂಥ ವಿದ್ಯಾಭ್ಯಾಸವಾಗಿರಬೇಕು.

 

ಸ್ತ್ರೀಯರು ಸ್ವತಂತ್ರರಾಗದೆ ಸಮಾನತೆಯನ್ನು ಸಾಧಿಸಲು ಸಾಧ್ಯವಿಲ್ಲ. “ಸಮಾಜದ ಪ್ರತಿಯೊಬ್ಬರೂ” ಎಂಉ ಹೇಳುವಾಗ ಅದರಲ್ಲಿ ಸ್ತ್ರೀಯರೂ ಸೇರುತ್ತಾರೆ. ಹೆಣ್ಣುಮಕ್ಕಳಿಗೆ ಸೂಕ್ತ ಶಿಕ್ಷಣ ಪಡೆಯುವ ಅವಕಾಶ ಇರಬೇಕು. ವಿದ್ಯಾಭ್ಯಾಸದಿಂದ ಅವರು ಸ್ವತಂತ್ರ ಆಲೋಚನೆ ನಡೆಸಬಲ್ಲರು. ಸ್ವತಂತ್ರವಾಗಿ ನಿರ್ಧಾರ ತಳೆಯಬಲ್ಲರು.

 

ವಾಸ್ತವದಲ್ಲಿ ಈ ಎಲ್ಲ ಜ್ಞಾನವೂ ನಮ್ಮೊಳಗೇ ಇದೆ. ಅದನ್ನು ಜಾಗೃತಗೊಳಿಸುವುದು ಅವಶ್ಯಕ. ವಿದ್ಯಾಭ್ಯಾಸವು ಈ ಜಾಗೃತಿಯನ್ನು ಉಂಟುಮಾಡುತ್ತದೆ. ಹಾಗೊಮ್ಮೆ ನಾವು ಪಾಠಶಾಲೆಗೆ ಹೋಗಿ ಕಲಿಕೆ ನಡೆಸಿಯೂ ನಮ್ಮಲ್ಲಿ ಜ್ಞಾನ ಜಾಗೃತಿಯಾಗದೆ ಹೋದರೆ, ನಾವು ಸ್ವತಂತ್ರಗೊಳ್ಳದೆ ಹೋದರೆ, ಸಮಾನತೆಯನ್ನು ಅರಿಯದೆ ಹೋದರೆ, ನಾವು ಸರಿಯಾದ ವಿದ್ಯಾಭ್ಯಾಸ ಪಡೆಯುತ್ತಿಲ್ಲ ಎಂದರ್ಥ. ಅಥವಾ, ಸರಿಯಾಗಿ ವಿದ್ಯಾಭ್ಯಾಸ ನಡೆಸುತ್ತಿಲ್ಲ ಎಂದರ್ಥ.

 

ಭೌತಿಕ ವಿಷಯವನ್ನು ಆಧರಿಸಿದ ನಾಗರಿಕತೆಗೆ ವಿರೋಧವಾಗಿ ನಾವು ಬಹಳ ಮಾತನಾಡುತ್ತೇವೆ. ಕೈಗೆ ಸಿಗದ ದ್ರಾಕ್ಷಿ ಹಣ್ಣು ಹುಳಿಯೇ ಸರಿ ಎನ್ನುವಂತೆ! ಈ ಹುಚ್ಚು ಮಾತನ್ನು ನಾವೊಮ್ಮೆ ಒಪ್ಪಿಕೊಂಡರೂ ಕೂಡ; ಭರತ ಖಂಡದಲ್ಲೆಲ್ಲ ಒಂದು ಲಕ್ಷ ಆಧ್ಯಾತ್ಮಿಕ ನಿಷ್ಠೆಯುಳ್ಳ ಸ್ತ್ರೀ – ಪುರುಷರು ಇರುತ್ತಾರೆ ಎಂದುಕೊಳ್ಳೋಣ. ಈ ಅಲ್ಪ ಮಂದಿಯ ಆಧ್ಯಾತ್ಮಿಕ ಉ್ನತಿಗೋಸ್ಕರ ಮೂವತ್ತು ಕೋಟಿ ಜನರು ಅನಾಗರಿಕರಾಗಬೇಕೇನು? ಯಾವನೇ ಆಗಲಿ, ಅವನು ಉಪವಾಸದಿಂದ ಏಕೆ ನರಳಬೇಕು?

 

ಬಾಹ್ಯ ಸಂಪತ್ತು ಮಾತ್ರವಲ್ಲದೆ, ಭೋಗವೂ ಕೂಡ ಬಡವನಿಗೆ ಕೆಲಸವನ್ನು ಒದಗಿಸಲು ಅತ್ಯಾವಶ್ಯಕ. ಬೇಕಾಗಿರುವುದು ಅನ್ನ! ಇಹಲೋಕದಲ್ಲಿ ಹೊಟ್ಟೆಗೆ ಹಿಟ್ಟಿಲ್ಲದೆ ಪರಲೋಕದಲ್ಲಿ ಸಾಯುಜ್ಯ ಏಕೆ ಬೇಕು?

 

ಭರತ ಖಂಡ ಉದ್ಧಾರವಾಗಬೇಕು ಎಂದರೆ ಬಡವರಿಗೆ ಹೊಟ್ಟೆ ತುಂಬ ಅನ್ನ ಕೊಡಬೇಕು. ವಿದ್ಯಾಭ್ಯಾಸ ಜನಸಮೂಹದಲ್ಲಿ ಹರಡಬೇಕು. ಸಮಾಜದಲ್ಲಿ ಅತ್ಯಾಚಾರವಿರಕೂಡದು.

 

ಭಾರತದಲ್ಲಿ ಹುಟ್ಟಿದ ಪ್ರತಿಯೊಂದು ವ್ಯಕ್ತಿಯೂ ತಾನು ಸಮಾಜದ ಗುಲಾಮನೆಂದು ತಿಳಿದುಕೊಂಡಿರುವನು. ಬೆಳವಣಿಗೆಗೆ ಮುಖ್ಯವಾಗಿ ಬೇಕಾಗುವುದು ಸ್ವಾತಂತ್ರ್ಯ. ಅದು ಇಲ್ಲವಾದರೆ ಅವನತಿಯೇ ಫಲ. ಯಾರು ಇನ್ನೊಬ್ಬರಿಗೆ ಸ್ವಾತಂತ್ರ್ಯವನ್ನು ಕೊಡಲು ಯಾರು ಸಿದ್ಧರಾಗಿಲ್ಲವೋ ಅವರು ಸ್ವಾತಂತ್ರ್ಯವನ್ನು ಸ್ವೀಕರಿಸಲು ಸಿದ್ಧರಾಗಿರುವುದಿಲ್ಲ. ಗುಲಾಮರು ಸ್ವಾತಂತ್ರ್ಯವನ್ನು ಬಯಸಿದರೂ ಅದು ಇತರರನ್ನು ಗುಲಾಮಗಿರಿಗೆ ಎಳೆಯುವುದಕ್ಕಷ್ಟೆ.

 

ತ್ಯಾಗವಿಲ್ಲದೆ ಯಾವುದೂ ಸಾಧ್ಯವಿಲ್ಲ. ಇತರರಗೆ ನೀವು ಸಹಾಯ ಮಾಡಬೇಕೆಂದಿದ್ದರೆ ಮೊದಲು ನಿಮ್ಮ ಸ್ವಾರ್ಥ ಹೋಗಬೇಕು. ಹೌದು. ಕ್ರಿಸ್ತನು ಹೇಳುವಂತೆ ನೀವು ದೇವರನ್ನೂ ಸಂಪತ್ತನ್ನೂ ಒಟ್ಟಿಗೆ ಒಲಿಸಿಕೊಳ್ಳಲಾರಿರಿ. ಒಟ್ಟಿಗೆ ಪೂಜಿಸಲಾರಿರಿ. ಜನರು ತಮ್ಮ ಸ್ವಂತ ಮೋಕ್ಷಕ್ಕಾಗಿ ಮಾತ್ರ ಐಹಿಕ ಬಿಡುತ್ತಾರೆ. ಎಲ್ಲವನ್ನೂ ತ್ಯಜಿಸಿಬಿಡಿ. ನಿಮ್ಮ ಸ್ವಂತ ಮೋಕ್ಷವನ್ನೂ ಬಿಸಾಡಿ ಹೋಗಿ, ಇತರರ ಸೇವೆ ಮಾಡಿ.

 

ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಮತವಿರಬೇಕು. ಆ ಮತವೇ ನಮ್ಮ ಇಷ್ಟ, ನಮ್ಮ ಆಯ್ಕೆಯ ಮಾರ್ಗ. ಆದರೆ ಆ ಆದರ್ಶವನ್ನು ಹಿಡಿದುಕೊಳ್ಳುವುದಕ್ಕಾಗಿ ನಾವು ಇತರರನ್ನು ನಾಶ ಮಾಡಬಾರದು. ನನ್ನ ಇಷ್ಟ ನನಗೆ ಪವಿತ್ರವಾದುದು ಅದನ್ನು ನನ್ನ ಸಹೋದರನ ಮೇಲೆ ಹೇರುವಂತಿಲ್ಲ. ಪ್ರತಿಯೊಬ್ಬರಿಗೂ ಅವರವರ ಇಷ್ಟ ಪವಿತ್ರ. ಆದ್ದರಿಂದ ಆ ಇಷ್ಟವನ್ನು ನಿಮ್ಮದಾಗಿಯೇ ಇಟ್ಟುಕೊಳ್ಳಿ.

 

(ಆಧಾರ: ವಿವೇಕಾನಂದ ಕೃತಿಶ್ರೇಣಿ)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.