ನೀನು ಬೇರೇನೂ ಅಲ್ಲ, ನೀನು ವಿಶ್ವಸಾಕ್ಷಿ

ಭಗವಂತ ಸಂಪೂರ್ಣವಾಗಿ ಶ್ರೇಷ್ಠನಾಗಿರುವಾಗ, ಆ ಶ್ರೇಷ್ಠತೆಯಲ್ಲೂ ಈ ಭಾಗ ಉಚ್ಚ, ಈ ಭಾಗ ನೀಚ ಎನ್ನುವ ಭೇದದೊಂದಿಗೆ ಓದಿಕೊಳ್ಳುವುದು ಸರಿಯಾದ ಮಾರ್ಗವಲ್ಲ….  | ಭಾವಾರ್ಥ : ಸಾ.ಹಿರಣ್ಮಯೀ

ನ ತ್ವಂ ವಿಪ್ರಾದಿಕೋ ವರ್ಣೋ ನಾಶ್ರಮೀ ನಾಕ್ಷಗೋಚರಃ|
ಅಸಂಗೋSಸಿ ನಿರಾಕಾರೋ ವಿಶ್ವಸಾಕ್ಷೀ ಸುಖೀ ಭವ || 5 ||
ಅರ್ಥ: ನೀನು ವಿಪ್ರಾದಿ ವರ್ಣಕ್ಕಾಗಲೀ ಬ್ರಹ್ಮಚರ್ಯವೇ ಮೊದಲಾದ ಆಶ್ರಮಕ್ಕಾಗಲೀ ಸೇರಿದವನಲ್ಲ. ನೀನು ಕಣ್ಣುಗಳಿಗೆ ಗೋಚರನಲ್ಲ. ನೀನು ಅಸಂಗನೂ ನಿರಾಕಾರನೂ ವಿಶ್ವ ಸಾಕ್ಷಿಯೂ ಆಗಿರುವೆ. ನೀನು (ಚಿಂತೆ ಮಾಡದೆ) ಸುಖಿಯಾಗಿರು.

ಅಷ್ಟಾವಕ್ರ ನೀನು ಪಂಚಭೂತಗಳಿಂದಾದ ದೇಹವಲ್ಲ. ಆದ್ದರಿಂದ ದೇಹಭಾವನೆ ತೊರೆದು ಚಿತ್ತದಲ್ಲಿ ನೆಲೆಸು ಎಂದು ಹೇಳುತ್ತಾನೆ.
ವ್ಯಕ್ತಿಯು ಪಂಚಭೂತಗಳಿಂದಾದ ದೇಹವಲ್ಲದೆ ಹೋದರೆ ಮತ್ತೇನು? ವ್ಯಕ್ತಿಯ ಅಸ್ತಿತ್ವ ಇದೆ ಎಂದಾದರೆ, ಆತ/ಆಕೆ ಏನಾದರೊಂದು ಆಗಿರಲೇಬೇಕಲ್ಲವೆ? ಅಷ್ಟಾವಕ್ರ ಹೇಳುತ್ತಾನೆ, “ನೀನು ವಿಪ್ರಾದಿವರ್ಣಕ್ಕೆ ಸೇರಿದವನಲ್ಲ”.

ಅಷ್ಟಾವಕ್ರ ಹೀಗೇಕೆ ಹೇಳುತ್ತಿದ್ದಾನೆ? ಕ್ಷತ್ರಿಯನಾದ ಜನಕ ಮಹಾರಾಜನಿಗೆ “ನೀನು ಕ್ಷತ್ರಿಯನಾಗಲೀ ಮತ್ಯಾವ ವರ್ಣಕ್ಕೆ ಸೇರಿದವನಾಗಲೀ ಅಲ್ಲ”ವೆಂದು ಏಕೆ ಹೇಳಲಿಲ್ಲ? ಕಾರಣ ಇಷ್ಟೇ; ಈಗಿನ ತಿಳಿವಳಿಕೆಯಂತೆ ವರ್ಣಗಳು ಜಾತಿಗಳಲ್ಲ. ವರ್ಣಗಳು ಕರ್ಮಕ್ಕನುಸಾರವಾಗಿ ನೀಡಲಾಗುತ್ತಿದ್ದ ಪದವಿಯ ಹೆಸರು. ಇಲ್ಲಿ ಕೂಡಾ ಈ ಕರ್ಮ ಉಚ್ಚ, ಈ ಕರ್ಮ ನೀಚ ಎಂಬ ಭೇದವಿಲ್ಲ. ‘ಬ್ರಾಹ್ಮಣೋSಸ್ಯ ಮುಖಮಾಸೀತ್… ಪದ್ಭ್ಯೋ ಶೂದ್ರೋಭಿಜಾಯತ’ ಅನ್ನುವಾಗ ಮುಖ ಶ್ರೇಷ್ಠ, ಪಾದ ಕನಿಷ್ಠ ಅನ್ನುವ ಭೇದವಿಲ್ಲ. ಬ್ರಾಹ್ಮಣ ಪದವಿ ಹೊಂದಿದವರ ಕರ್ಮ ಜ್ಞಾನಕ್ಕೆ, ಪಾಂಡಿತ್ಯಕ್ಕೆ, ವಾಕ್ಕಿಗೆ ಸಂಬಂಧಿಸಿದ್ದರಿಂದ ಭಗವಂತನ ಮುಖದಿಂದ ಬ್ರಾಹ್ಮಣ ಜನಿಸಿದ; ಪಾದಗಳು ಶ್ರಮಕ್ಕೆ ಆಧಾರವಾದ್ದರಿಂದ ಶ್ರಮಿಕ ವರ್ಗವಾದ ಶೂದ್ರ ವರ್ಣದವರು ಜನಿಸಿದರು ಎಂಬ ಭಾವಾರ್ಥ. ಭಗವಂತ ಸಂಪೂರ್ಣವಾಗಿ ಶ್ರೇಷ್ಠನಾಗಿರುವಾಗ, ಆ ಶ್ರೇಷ್ಠತೆಯಲ್ಲೂ ಈ ಭಾಗ ಉಚ್ಚ, ಈ ಭಾಗ ನೀಚ ಎನ್ನುವ ಭೇದದೊಂದಿಗೆ ಓದಿಕೊಳ್ಳುವುದು ಸರಿಯಾದ ಮಾರ್ಗವಲ್ಲ.

ಇಲ್ಲಿ ಅಷ್ಟಾವಕ್ರ ‘ನೀನು ವಿಪ್ರಾದಿ ವರ್ಣಕ್ಕೆ ಸೇರಿದವನಲ್ಲ’ ಎಂದು ಹೇಳಲು ಕಾರಣವಿದೆ. ಜನಕ ಮಹಾರಾಜ ಆಡಳಿತ, ರಕ್ಷಣೆ ಮತ್ತು ಯುದ್ಧವೇ ಕರ್ಮವಾದ ರಾಜರ ಮನೆತನದಲ್ಲಿ ಹುಟ್ಟಿದ್ದರೂ; ಅಂದರೆ ಅವನ ಮನೆತನ ಕ್ಷತ್ರಿಯ ಮನೆತನವಾಗಿದ್ದರೂ ಅವನು ವೇದಜ್ಞಾನ, ತಪೋಸಾಧನೆಗಳಿಂದ ರಾಜರ್ಷಿ ಅನ್ನಿಸಿಕೊಂಡಿದ್ದ. ಅರಿವಿನಿಂದಲೂ ನಡವಳಿಕೆಯಿಂದಲೂ ವಿಪ್ರನಾಗಿದ್ದ. ಆದ್ದರಿಂದಲೇ ಅಷ್ಟಾವಕ್ರ ಆತನಿಗೆ ‘ವಿಪ್ರಾದಿ ವರ್ಣಕ್ಕೆ ನೀನು ಸೇರಿಲ್ಲ’ ಎಂದು ಹೇಳುವ ಮೂಲಕ ನಿನ್ನ ಜ್ಞಾನ – ಸಾಧನೆಗಳೊಡನೆ ನಿನ್ನನ್ನು ಗುರುತಿಸಿಕೊಳ್ಳಬೇಡ ಎಂಬ ಸೂಚನೆ ನೀಡುತ್ತಿದ್ದಾನೆ.

‘ಬ್ರಹ್ಮಚರ್ಯವೇ ಮೊದಲಾದ ಆಶ್ರಮಕ್ಕೆ ಸೇರಿದವನಲ್ಲ’ ಅನ್ನುವಾಗಲೂ ಅಷ್ಟೇ. ಜನಕ ಮಹಾರಾಜನ ನೇಮ ಬ್ರಹ್ಮಚರ್ಯ ನೇಮವಾಗಿದ್ದರಿಂದ ನಿನ್ನ ಗುರುತು ಅದಕ್ಕೆ ಸೀಮಿತವಲ್ಲ ಎಂದು ಎಚ್ಚರಿಸುತ್ತಿದ್ದಾನೆ.

ಮುಂದುವರಿದು, ‘ನೀನು ಕಣ್ಣುಗಳಿಗೆ ಗೋಚರನಲ್ಲ’ ಅನ್ನುತ್ತಿದ್ದಾನೆ ಅಷ್ಟಾವಕ್ರ.
ಅರೆ! ಅಷ್ಟುದ್ದ, ಅಷ್ಟಗಲ ನಿಂತಿರುವ ಜನಕ ಮಹಾರಾಜ ಕಾಣಿಸುತ್ತಿಲ್ಲವೆ? ಖಂಡಿತ ಕಾಣಿಸುತ್ತಿದ್ದಾನೆ. ಆದರೆ ಅಲ್ಲಿ ಕಾಣುತ್ತಿರುವುದು ಜನಕ ಎಂಬ ಹೆಸರಿನ, ಮಹಾರಾಜ ಪದವಿಯಲ್ಲಿರುವ ವ್ಯಕ್ತಿಯೇ ಹೊರತು, ಚಿದ್ರೂಪಿ ಆತ್ಮವಲ್ಲ. ದೇಹಕ್ಕೆ ಗುರುತಿದೆ, ಆ ದೇಹದೊಡನೆ ನಾವು ನಮ್ಮನ್ನು ಗುರುತಿಸಿಕೊಳ್ಳಬಾರದು. ಹಾಗೆ ದೇಹದ ಗುರುತಿನಿಂದ ಹೊರಬಂದೊಡನೆ ನಾವು ಕೇವಲ ಸಾಕ್ಷಿಯಾಗಿ ಉಳಿಯುತ್ತೇವೆ. ‘ನಾನು ದೇಹವಲ್ಲ, ಆತ್ಮ’ ಎನ್ನುವ ಬೋಧೆ ನಮಗೆ ಇರುವಂತೆಯೇ, ಇತರರಿಗೂ ನೀವು ದೇಹವಲ್ಲ ಅನ್ನುವ ಅರಿವು ಮೂಡಿದಾಗ ಅವರು ‘ನೀನು ಗೋಚರನಲ್ಲ’ ಎಂದು ಘೋಷಿಸುತ್ತಾರೆ.

ಏಕೆಂದರೆ, ನಿರ್ಗುಣ – ನಿರಾಕಾರಿ ಆತ್ಮ ಕಣ್ಣಿಗೆ ಕಾಣದ ಸತ್ ವಸ್ತು. ಈ ಸತ್ ವಸ್ತು, ಅಥವಾ ಆತ್ಮ ಅಸಂಗಿಯಾದುದು. ಅಂದರೆ ಎಲ್ಲ ಬಗೆಯ ಸಾಂಗತ್ಯದಿಂದ ಮುಕ್ತವಾದುದು. ಪಂಚೇಂದ್ರಿಯಗಳಿಗೆ ಸಂಬಂಧಿಸಿದ ಎಲ್ಲ ಬಗೆಯ ಕ್ರಿಯೆ – ಪ್ರತಿಕ್ರಿಯೆಗಳಿಂದ ಹೊರತಾದುದು. ಯಾವುದೇ ಬಂಧನವಿಲ್ಲದ್ದು. ತಾನು ಆಶ್ರಯ ಪಡೆದಿರುವ ದೇಹ ಜಗತ್ತನ್ನು ಅನುಭವಿಸುತ್ತಿರುವ ಬಗೆಯನ್ನು ಸಾಕ್ಷಿ ಮಾತ್ರವಾಗಿ ನೋಡುವಂಥದ್ದು. ದೇಹದ ಕರ್ಮಗಳೊಡನೆ ತನ್ನನ್ನು ಬೆಸೆದುಕೊಳ್ಳದೆ ಸುಖ – ದುಃಖಗಳನ್ನು ಮೀರಿ ನೆಲೆಸಿರುವಂಥದ್ದು.
ಆದ್ದರಿಂದ, ಅಷ್ಟಾವಕ್ರ ಹೇಳುತ್ತಾನೆ, “ನಿರಾಕಾರೋ ವಿಶ್ವಸಾಕ್ಷೀ ಸುಖೀಭವ” – “ಯಾವ ಚಿಂತೆಯನ್ನೂ ಮಾಡದೆ ನೀನು ಸುಖಿಯಾಗಿರು” ಎಂದು. 

2 Comments

Leave a Reply