ಸಂಬಂಧವೆಂಬ ನದಿಯ ಬಿಂಬ : ಅಧ್ಯಾತ್ಮ ಡೈರಿ

ಯಾವುದೇ ಸಂಬಂಧ ಅದೆಷ್ಟು ಆಪ್ತವಾಗಿದ್ದರೂ; ಅದು ನೆನೆಯದ, ಮುಳುಗದ, ಜೊತೆ ಹರಿಯದ ಬಿಂಬ ಮಾತ್ರ ಅನ್ನುವುದನ್ನು ಒಪ್ಪಿಕೊಳ್ಳಬೇಕು ~ ಅಲಾವಿಕಾ

ನದಿಯೊಳಗೆ
ತೇಲುವ ಬಿಂಬ
ಹರಿಯುವುದಿಲ್ಲ
ಜೊತೆಗೆ.

ಸಂಬಂಧಗಳು ಬಿಂಬದ ಹಾಗೆ. ಒಂದು ವ್ಯಕ್ತಿ ನದಿಯಾದರೆ, ಮತ್ತೊಂದು ವ್ಯಕ್ತಿ ದಡ ಅಥವಾ ಆಕಾಶದಲ್ಲಿರುವ ವಸ್ತು. ಒಮ್ಮೆ ಒಬ್ಬರ ಪಾಲಿಗೆ ನದಿಯಾದವರು ಮತ್ತೊಮ್ಮೆ ಮತ್ತೊಬ್ಬರ ಪಾಲಿಗೆ ವಸ್ತುವಾಗಬಹುದು. ಹೀಗೆ ಪ್ರತಿಯೊಬ್ಬರೂ ನದಿಯೂ ವಸ್ತುವೂ ಆಗುತ್ತ ಬಿಂಬ ಬೆಸೆಯುವರು. ಅಂದರೆ, ಸಂಬಂಧ ಹೊಸೆಯುವರು.

ನದಿಯ ಹರಿವಿನೆದೆ ಮೇಲೆ ಬಿಂಬ ಮೂಡುತ್ತದೆ. ಯಥಾವತ್ ವಸ್ತುವಿನ ತದ್ರೂಪು. ಹಾಗೆಂದ ಮಾತ್ರಕ್ಕೆ ನದಿ ಆ ಬಿಂಬವನ್ನು ಜೊತೆಗೆ ಹೊತ್ತೊಯ್ಯಲಾಗುತ್ತದೆಯೇ? ಅದು ನನ್ನ ಬಿಂಬವೆಂದು ಹಕ್ಕು ಸಾಧಿಸಲು ಬರುತ್ತದೆಯೇ?
ಆಕಾಶದಲ್ಲಿ ಚಂದಿರ ಮೂಡುತ್ತಾನೆ. ಅದರ ಬಿಂಬ ನದಿಯಲ್ಲಿ. ಚಂದಿರ ಇರುವಷ್ಟು ಕಾಲ ಮಾತ್ರ ಬಿಂಬ ನದಿಯ ಪಾಲಿಗೆ. ಚಂದ್ರನ ವರ್ತಮಾನ ಏನಿದೆಯೋ ಅದು ಮಾತ್ರ ನದಿಗೆ ಸಂಬಂಧ ಪಡುತ್ತದೆ.

ನಮ್ಮ ಬದುಕಿನಲ್ಲೂ ಹೀಗೆ ಹಲವರು ಬರುತ್ತಾರೆ. ಅಥವಾ ನಾವು ಹಲವರ ಪಾಲಿಗೆ ಒದಗುತ್ತೇವೆ. ಯಾವಾಗ ಯಾರೊಡನೆ ಎಷ್ಟು ಕಾಲ ಇರುತ್ತೇವೋ ಅಲ್ಲಿಯವರೆಗೆ ಅವರೊಡನೆ ಒಂದು ‘ಸ್ಥಾಯಿ’ ಸಂಬಂಧ. ಅವರ ಬದುಕಿನ ಜೊತೆ ನಾವು ಬದುಕುವುದಿಲ್ಲ. ಒಟ್ಟಿಗೇ ಇದ್ದರೂ, ಹರಿವಲ್ಲಿ ಬಿಂಬ ಮೂಡಿದ್ದರೂ, ವ್ಯಕ್ತಿ – ವ್ಯಕ್ತಿಯ ನಡುವೆ ಸಂಬಂಧ ಬೆಸೆದಿದ್ದರೂ; ನದಿಯ ಪಾಡು ನದಿಗೆ, ಚಂದ್ರನದ್ದು ಚಂದ್ರನಿಗೆ.

ಅಪ್ಪ – ಅಮ್ಮ ನಮಗೆ ಬದುಕಲ್ಲ, ನಾವು ಅವರಿಗೂ ಅಲ್ಲ. ಅವರ ಬದುಕಲ್ಲಿ ನಾವೊಂದು ಬಿಂಬ. ಮತ್ತೆ ನಾವು ನದಿಯಾಗಿ ಹರಿಯುವಾಗ ನಮ್ಮ ಮಕ್ಕಳು ನಮಗೊಂದು ಬಿಂಬ. ನಾವು ಯಾರೊಡನೆಯೂ ಹರಿಯಲಾರೆವು, ಯಾರನ್ನೂ ನಮ್ಮೊಡನೆ ಕರೆದೊಯ್ಯಲೂ ಆಗದು. ಅದು ದಾಂಪತ್ಯವಿರಲಿ, ಸಾಂಗತ್ಯವಿರಲಿ, ಗೆಳೆತನವೇ ಇರಲಿ… ಯಾರೂ ಮತ್ತೊಬ್ಬರ ಪ್ರಯಾಣ ಮಾಡಲಾಗದು.  ಹಾಗೊಮ್ಮೆ ನಾವು ಹಠ ಹಿಡಿದು ಕುಳಿತರೆ, ಹರಿವು ನಿಲ್ಲಿಸಬೇಕಾಗುತ್ತದೆ ಅಷ್ಟೆ. ನಿಂತ ನೀರು ಯಾವತ್ತೂ ಕೊಚ್ಚೆ ರಾಡಿ. ಇನ್ನು ಬದುಕು ಅದಕ್ಕಿಂತ ಉತ್ತಮವಾಗಿರಲು ಸಾಧ್ಯವೇ!?

ಆದ್ದರಿಂದ, ಸಂಬಂಧಗಳ ಯಥಾರ್ಥ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಸಂಬಂಧ ಅದೆಷ್ಟು ಆಪ್ತವಾಗಿದ್ದರೂ; ಅದು ನೆನೆಯದ, ಮುಳುಗದ, ಜೊತೆ ಹರಿಯದ ಬಿಂಬ ಮಾತ್ರ ಅನ್ನುವುದನ್ನು ಒಪ್ಪಿಕೊಳ್ಳಬೇಕು. ಅದು ಸಂಪೂರ್ಣವಾಗಿ, ಯಥಾವತ್ತಾಗಿ ಇರುತ್ತದೆಯೇನೋ ಹೌದು. ನಿಮ್ಮ ಪ್ರೇಮ ತುಂಬಿದ ಎದೆಗನ್ನಡಿಯಲ್ಲಿ ತನ್ನನ್ನು ನೋಡಿಕೊಳ್ಳುತ್ತಾ ಸುಖಿಸುವುದೂ ಹೌದು. ಆದರೆ ಅದು ತನ್ನ ಮೂಲಕ್ಕೆ ಅಧೀನ. ಮತ್ತು ಆ ಮೂಲಕ್ಕೆ ತನ್ನದೇ ಚಲನೆ ಇದೆ. ಪೂರೈಸಬೇಕಾದ ಚಕ್ರವಿದೆ. ಅದರ ಬದ್ಧತೆ ಏನಿದ್ದರೂ ಆ ಚಕ್ರದ ಚಲನೆಯತ್ತಲೇ ಹೊರತು, ನಿಮ್ಮ ಹರಿವಿನೊಡನೆ ಅಲ್ಲ. 

ಆದ್ದರಿಂದ, ಸಂಬಂಧಗಳಲ್ಲಿ ನಿರೀಕ್ಷೆ ಬೇಡ. ಇರುವುದನ್ನು ಇರುವಂತೆಯೇ ಒಪ್ಪಿಕೊಳ್ಳಿ. ನಿಮಗೂ ನಿಮ್ಮ ಬದುಕಿದೆ. ಯಾರನ್ನೋ ನಿಮ್ಮೊಳಗೆ ಹೊತ್ತು ನಡೆಯುವ ಬದಲು, ನಿಮ್ಮನ್ನು ನೀವು ಹೊತ್ತುಕೊಳ್ಳಿ. ಮಕ್ಕಳಾಗಲೀ ಸಂಗಾತಿಗಳಾಗಲೀ, ಅಪ್ಪ ಅಮ್ಮಂದಿರಾಗಲೀ ಬ್ಯಾಂಕಿನಲ್ಲಿ ಹೂಡುವ ಬಂಡವಾಳ ಅಲ್ಲ. ಮಾನವೀಯ ಸ್ಪಂದನೆಯಿಂದ ಕಷ್ಟಸುಖಕ್ಕೆ ಮಿಡಿಯಲು ಸಂಬಂಧಗಳೇ ಇರಬೇಕೆಂದಿಲ್ಲ. ಅಂತಃಕರಣವಿದ್ದವರು ನಿಮಗೆ ಅಂಟಿಕೊಳ್ಳದೆಯೂ ಜೊತೆಗಿರುತ್ತಾರೆ. ಅದು ಇಲ್ಲದವರನ್ನು ಕಟ್ಟಿಕೊಂಡು ಸುತ್ತಿದರೂ ಸಮಯಕ್ಕೆ ಕೈಕೊಡುವುದು ಖಾತ್ರಿ!

ಅಭದ್ರತೆಯನ್ನೆ ಪ್ರೇಮವೆಂದುಕೊಂಡಿದ್ದೀರಿ. ಅದಕ್ಕೆ ಮಮತೆ, ಬದ್ಧತೆ ಎಂದೆಲ್ಲ ಹೆಸರುಗಳನ್ನೂ ಹಚ್ಚುತ್ತೀರಿ. ಆದ್ದರಿಂದಲೇ ಬಿಂಬವನ್ನು ನಿಮ್ಮದೆಂದು ಕ್ಲೈಮ್ ಮಾಡುತ್ತೀರಿ. ಅದು ನಿಮ್ಮೊಡನೆ ಹರಿಯುತ್ತಿಲ್ಲವೆಂದು ಎದೆ ನೋಯುತ್ತೀರಿ. ನಷ್ಟ ನಿಮಗೆ ಹೊರತು ಬಿಂಬ ಮೂಡಿಸಿದ ವಸ್ತುವಿಗಲ್ಲ.

ನೀವು ನದಿಯನ್ನು ನೋಡಿದ್ದೀರಿ. ಅದರೊಳಗೆ ತೇಲುತ್ತಲೇ ಇರುವ ಬಿಂಬವನ್ನೂ.
ಇದು ಬಹಳ ಸರಳ. ಅರ್ಥವಾದರೆ, ಬದುಕು ಸುಲಭ.

Leave a Reply