ನೀನು ‘ಕರ್ತ’ನಲ್ಲ, ಆದ್ದರಿಂದ ಭೋಕ್ತನೂ ಅಲ್ಲ

ಬಹುತೇಕರಿಗೆ ತಮ್ಮ ದುಷ್ಕರ್ಮಗಳ ಫಲದಿಂದ ತಪ್ಪಿಸಿಕೊಳ್ಳುವುದರಲ್ಲಿ ಆಸಕ್ತಿಯೇ ಹೊರತು, ಸತ್ಕರ್ಮಗಳ ಫಲವನ್ನು ಬಿಟ್ಟುಕೊಡುವುದರಲ್ಲಿ ಅಲ್ಲ!  ~ ಸಾ.ಹಿರಣ್ಮಯೀ

ಧರ್ಮಾಧರ್ಮೌ ಸುಖಂ ದುಃಖಂ ಮಾನಸಾನಿ ನ ತೇ ವಿಭೋ|
ನ ಕರ್ತಾಸಿ ನ ಭೋಕ್ತಾಸಿ ಮುಕ್ತ ಏವಾಸಿ ಸರ್ವದಾ || 6 ||
ಅರ್ಥ : ಹೇ ವಿಭೋ! ಧರ್ಮ, ಅಧರ್ಮ, ಸುಖ, ದುಃಖ ಇವೆಲ್ಲ ಮನಸ್ಸಿಗೆ ಸಂಬಂಧ ಪಟ್ಟಿದ್ದು; ನಿನಗಲ್ಲ. ನೀನು ಕರ್ತನೂ ಅಲ್ಲ, ಭೋಕ್ತನೂ ಅಲ್ಲ. ಸರ್ವದಾ ನೀನು ಮುಕ್ತ.

ಅಷ್ಟಾವಕ್ರ ಹೇಳುತ್ತಿದ್ದಾನೆ; ಧರ್ಮಾಧರ್ಮಗಳು, ಸುಖದುಃಖಗಳಿಂದ ವಿಚಲಿತನಾಗಬೇಡ. ವಾಸ್ತವದಲ್ಲಿ ಅವು ನಿನಗೆ ಸಂಬಂಧವೇ ಪಡುವುದಿಲ್ಲ. ಈ ಎಲ್ಲ ಫಲಗಳು ಸಿಗುವಂಥ ಕರ್ಮಗಳನ್ನು ಯಾರು ನಡೆಸಿದ್ದಾರೋ ಅವರೇ ಅವನ್ನು ಅನುಭವಿಸುವವರು. ನೀನು ಈ ಯಾವ ಕರ್ಮಗಳನ್ನೂ ನಡೆಸಿಲ್ಲ. ನೀನು ‘ಕರ್ತ’ನಲ್ಲ. ಆದ್ದರಿಂದ ನೀನು ಭೋಕ್ತನೂ ಅಲ್ಲ. ಯಾರು ಕರ್ತನೋ, ಯಾರು ಕ್ರಿಯೆ ನಡೆಸಿರುವನೋ ಅವನೇ ಅದರ ಫಲಕ್ಕೆ ಅಧಿಕಾರಿ. ನೀನು ಸಾಕ್ಷಿ ಮಾತ್ರವಾಗಿ ಇದನ್ನು ನೋಡುತ್ತಿರುವವನು. ನಿನಗೂ ಆ ಯಾವ ಫಲಾಫಲಗಳಿಗೂ ಸಂಬಂಧವಿಲ್ಲ. ಆದ್ದರಿಂದ ನಿನಗೆ ಅವುಗಳೊಡನೆ ಬಂಧನವೂ ಇಲ್ಲ. ನೀನು ಸದಾ ಸರ್ವದಾ ಮುಕ್ತನಾಗಿರುವೆ.

“ಸರಿ ಹಾಗಾದರೆ! ನನ್ನಿಂದ ಅಪರಾಧ ನಡೆದರೆ ಅದಕ್ಕೆ ನಾನು ಹೊಣೆಯಲ್ಲ. ನಾನು ಸಾಕ್ಷಿ ಮಾತ್ರ. ಆದ್ದರಿಂದ ನನಗೆ ಶಿಕ್ಷೆಯೂ ಇಲ್ಲ!! ಅಲ್ಲವೆ?” ಕರ್ಮ ಮಾಡುವವರು ನೀವಲ್ಲ ಎಂದಾಗ ಬಹುತೇಕರು ಕೇಳುವ ಪ್ರಶ್ನೆ ಇದು. ಬಹಳ ಕುತೂಹಲದ ಸಂಗತಿ ಎಂದರೆ, ವೈಯಕ್ತಿಕ ಚರ್ಚೆಯಲ್ಲಿ ಈವರೆಗೆ ಈ ಕುರಿತು ಕೇಳಿದವರೆಲ್ಲರೂ “ಅಪರಾಧ ನಡೆದರೆ”, “ತಪ್ಪಾದರೆ” ಎಂಬ ನಕಾರಾತ್ಮಕ ಕ್ರಿಯಯ ಫಲದ ಕುರಿತೇ ಕೇಳಿದ್ದಾರೆ ಹೊರತು; “ನಮ್ಮ ಸತ್ಕರ್ಮಗಳ ಫಲ ನಾವು ಅನುಭವಿಸಬೇಕಿಲ್ಲ ಅಲ್ಲವೆ?” ಎಂದು ಪ್ರಶ್ನಿಸಿಲ್ಲ! ಬಹುತೇಕರಿಗೆ ತಮ್ಮ ದುಷ್ಕರ್ಮಗಳ ಫಲದಿಂದ ತಪ್ಪಿಸಿಕೊಳ್ಳುವುದರಲ್ಲಿ ಆಸಕ್ತಿಯೇ ಹೊರತು, ಸತ್ಕರ್ಮಗಳ ಫಲವನ್ನು ಬಿಟ್ಟುಕೊಡುವುದರಲ್ಲಿ ಅಲ್ಲ!

ಇರಲಿ. ಅದು ಬೇರೆಯದೇ ಚರ್ಚೆ. ಇಲ್ಲಿ ಅಷ್ಟಾವಕ್ರ ಮಾಡುವವನು ನೀನಲ್ಲವಾದ್ದರಿಂದ ಉಣ್ಣುವವನೂ ನೀನಲ್ಲ ಅನ್ನುತ್ತಿದ್ದಾನೆ. ‘ಉಳುವವನೇ ಹೊಲದೊಡೆಯ’ ಎನ್ನುವಂತೆ, ಯಾರು ಈ ಎಲ್ಲಕ್ಕೂ ಕಾರಣರೋ ಅವರೇ ಅದರ ಫಲವನ್ನೂ ಭೋಗಿಸುವರು. ಇದು ಸತ್ಯಸ್ಯ ಸತ್ಯವಾದರೂ ನಮ್ಮ ಲೌಕಿಕದಲ್ಲಿ, ನಮ್ಮ ದೃಷ್ಟಿಕೋನದಿಂದ, ನಮ್ಮ ಅನುಭವದಲ್ಲಿ ಸುಳ್ಳೆನಿಸುವ ಸಂಗತಿ. ಏಕೆಂದರೆ ನಾವು ನಮ್ಮ ತಪ್ಪುಗಳಿಗೆ ಶಿಕ್ಷೆಯನ್ನೂ ಶ್ರಮದ ಪ್ರತಿಫಲವನ್ನೂ ಪಡೆಯುತ್ತಲೇ ಇದ್ದೇವೆ. ನಮಗೆ ದುಃಖವೂ ಆಗುತ್ತದೆ, ಸುಖದ ಸಂತೋಷವೂ ಸಿಗುತ್ತದೆ. ಸಮಾಜದಲ್ಲಿ ಬದುಕಲು ಧರ್ಮಾಧರ್ಮಗಳ ನಿಯಮಗಳಿವೆ. ಅಷ್ಟಾವಕ್ರ “ಅನುಭವಿಸುವವನು ನೀನಲ್ಲ, ನಿನಗೆ ಧರ್ಮಾಧರ್ಮಗಳು ಇಲ್ಲ” ಅಂದಮಾತ್ರಕ್ಕೆ ಅವೆಲ್ಲವೂ ಇಲ್ಲವಾಗಿಬಿಡುತ್ತವೆಯೆ? ನಾವು ಅನುಭವಿಸುತ್ತಿದ್ದೇವಲ್ಲ?

ಪ್ರಶ್ನೆ ಸರಿಯಾಗಿದೆ. ನಾವು ಯಾಕೆ ಈ ಎಲ್ಲವನ್ನೂ ಅನುಭವಿಸುತ್ತಿದ್ದೇವೆ? ನಮಗೇಕೆ ಧರ್ಮಾಧರ್ಮಗಳ ನಿಯಮವಿದೆ? ಏಕೆಂದರೆ ನಾವು ದೇಹದೊಡನೆ ಗುರುತಿಸಿಕೊಂಡಿದ್ದೇವೆ. ತಾನು ದೇಹಕ್ಕೆ ಸಂಬಂಧಿಸಿದ್ದೇನೆ ಎಂದು ಭಾವಿಸಿ ಅದಕ್ಕೆ ಅಂಟಿಕೊಂಡಿರುವ ಮನಸ್ಸು, ದೇಹದ ಎಲ್ಲ ಕರ್ಮಗಳ ಪ್ರತಿಫಲವನ್ನೂ ಅನುಭವಿಸುತ್ತದೆ. ಅದೇ ನೀವು ದೇಹಭಾವನೆಯಿಂದ ಹೊರಗೆ ಬಂದು ನೋಡಿ! ಮನಸ್ಸು ಕೂಡಾ ದೇಹದೊಡನೆ ಸಂಬಂಧ ಕಡಿದುಕೊಳ್ಳುತ್ತದೆ. ಈ ದೇಹ ಏನೆಲ್ಲ ನಡೆಸುತ್ತಿದೆಯಲ್ಲ ಎಂದು ಸಾಕ್ಷೀ ಭಾವದಿಂದ ನೋಡಲಾರಂಭಿಸುತ್ತದೆ.  ಇದು ಸಾಧ್ಯವಾದಾಗ ಸುಖದುಃಖಗಳು ನಿಮ್ಮನ್ನು ಬಾಧಿಸಲಾರವು.

ಇನ್ನೂ ಸರಳವಾಗಿ ಹೇಳುವುದಾದರೆ, ದೇಹದ ಆಶ್ರಯ ಪಡೆದ ನಿಮ್ಮ ಬದುಕು ನದಿಯಂತೆ. ಅದಕ್ಕೊಂದು ನಿಶ್ಚಿತ ಆರಂಭ ಇರುವಂತೆ, ನಿಶ್ಚಿತ ಅಂತ್ಯವೂ ಇದೆ. ಆದರೆ, ಈ ಆರಂಭ ದೃಗ್ಗೋಚರ ಆಯಾಮದಿಂದ ಮಾತ್ರ. ಜಲಮೂಲದಲ್ಲಿ ನೀರು ಹೊಮ್ಮುವುದು ಕಾಣುತ್ತದೆಯೇ ಹೊರತು, ಅಲ್ಲಿ ಆ ನೀರು ಹೇಗೆ ಉತ್ಪತ್ತಿಯಾಯಿತು ಅನ್ನುವುದು ನಿಗೂಢ. ಮುಂದೆ ಹರಿಯುತ್ತಾ ನದಿ ಸಮುದ್ರ ಸೇರುತ್ತದೆಯಷ್ಟೆ? ಅದು ಅಂತ್ಯದಂತೆ ತೋರಿದರೂ ಅಂತ್ಯವಲ್ಲ. ಪ್ರತಿಕ್ಷಣವೂ ಕಡಲ ನೀರು ಆವಿಯಾಗುತ್ತಲೇ ಇರುತ್ತದೆ. ಮೋಡಗಟ್ಟುತ್ತಲೇ ಇರುತ್ತದೆ. ಮತ್ತೆ ಮಳೆಯಾಗಿ ಸುರಿದು, ನೀರಿಂಗಿ ನದಿಯಾಗಿ ಹರಿಯುತ್ತಲೇ ಇರುತ್ತದೆ. ಇದು ಜನನ – ಮರಣ ಚಕ್ರ. ಹುಟ್ಟು – ಸಾವುಗಳು ಸ್ಪಷ್ಟವಾಗಿ ಕಂಡರೂ ‘ಹುಟ್ಟಲ್ಲದ ಹುಟ್ಟು’ ಮತ್ತು ‘ಸಾವಲ್ಲದ ಸಾವು’ ಪ್ರತಿ ಜೀವಿ ಎದುರುಗೊಳ್ಳುವ ಸತ್ಯ.
ಈ ನಡುವೆ ನದಿ ಸುತ್ತಮುತ್ತಲಿನ ನೆಲವನ್ನು ಹಸನು ಮಾಡುತ್ತಾ, ಕೆಲವೆಡೆ ನೆರೆಬಿದ್ದು ಹರಿಯುತ್ತಾ, ಧುಮ್ಮಿಕ್ಕುತ್ತಾ ತನ್ನ ಪಾತ್ರವಿರುವಂತೆ ಸಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅದಕ್ಕೆ ದೊರೆಯುವುದೆಲ್ಲವನ್ನೂ ಅದು ಸ್ವೀಕರಿಸಲೇಬೇಕು. ಬತ್ತಬೇಕು, ಪ್ರವಾಹವಾಗಬೇಕು, ಕೊಳಕಾಗಬೇಕು, ಪೂಜಿಸಲ್ಪಡಬೇಕು…. ಹರಿವಿಗೆ ತಕ್ಕಂತೆ ಜನ ನದಿಗೆ ಸ್ಪಂದಿಸುತ್ತಾರೆ. ಅವೆಲ್ಲ ಏನೇ ಇದ್ದರೂ ನದಿ ನಿರ್ಲಿಪ್ತ.

ಹಾಗೇ ನಾವು ಕೂಡಾ. ನಮ್ಮ ಪಾತ್ರಕ್ಕೆ ತಕ್ಕಂತೆ ಕರ್ಮ ನಡೆಸುತ್ತಿದ್ದೇವೆ. ಅದರ ಫಲಾಫಲಗಳು ದೇಹಕ್ಕೆ ನಿಶ್ಚಿತವಾದರೂ ನಾವು ದೇಹದೊಡನೆ ಗುರುತಿಸಿಕೊಳ್ಳದೆ ಉಳಿಯುವುದರಿಂದ ಅವಕ್ಕೆ ಬಾಧ್ಯಸ್ಥರಾಗುವುದಿಲ್ಲ. ಈ ಡಿಟ್ಯಾಚ್’ಮೆಂಟ್, ಈ ನಿರ್ಮಮ ನಮ್ಮನ್ನು ಶಾಂತಿಯಿಂದ ಇರಿಸುತ್ತದೆ. ನಮ್ಮನ್ನು ಬಂಧನಗಳಿಂದ ಮುಕ್ತವಾಗಿರಿಸುತ್ತದೆ.

3 Comments

Leave a Reply