ಯಾವುದಕ್ಕೆ ಅಂತ್ಯವಿಲ್ಲವೋ ಅದೇ ಸತ್ಯ, ಅದೇ ಶಾಶ್ವತ

ಯಾವೆಲ್ಲವನ್ನು ನಾವು ಅರಿಯಬಲ್ಲೆವೋ ಅವೆಲ್ಲಕ್ಕೂ ಆಕಾರವಿದೆ. ಅಥವಾ, ಆಕಾರ ಇರುವ ಪ್ರತಿಯೊಂದನ್ನೂ ನಾವು ಅರಿಯಬಲ್ಲೆವಾಗಿದ್ದೇವೆ. ಹಾಗಾದರೆ, ಆಕಾರ ಹೊಂದಿದ ಈ ಜೀವಿ ನಿರ್ಜೀವಿಗಳು ಸುಳ್ಳಾಗುವುದು ಹೇಗೆ? ಹಾಗೆಯೇ, ನಿರಾಕಾರವು ನಿಶ್ಚಲವಾಗಿದೆ ಅಂದರೆ ಏನರ್ಥ?  ~ ಸಾ.ಹಿರಣ್ಮಯಿ

ಸಾಕಾರಮನೃತಂ ವಿದ್ಧಿ ನಿರಾಕಾರಂ ತು ನಿಶ್ಚಲಂ |
ಏತತ್ವೋಪದೇಶೇನ ನ ಪುನರ್ಭವಸಮ್ಭವಃ || 1.18 ||

ಅರ್ಥ : ಸಾಕಾರವೆಂಬುದೇ ಸುಳ್ಳು. ನಿರಾಕಾರವೇ ಸತ್ಯ. ಈ ತತ್ವೋಪದೇಶವನ್ನು ಅರಿತವರು ಪ್ರಪಂಚದಲ್ಲಿ ಪುನಃ ಹುಟ್ಟಿಬರುವ ಪ್ರಶ್ನೆಯೇ ಇಲ್ಲ.

ತಾತ್ಪರ್ಯ : ಅಷ್ಟಾವಕ್ರ ಹೇಳುತ್ತಿದ್ದಾನೆ, “ರೂಪು ತಳೆದು ಕಣ್ಣಿಗೆ ಕಾಣುವಂಥವು ಏನಿವೆಯೋ ಅವೆಲ್ಲವೂ ಸುಳ್ಳು. ಯಾವುದು ನಿರಾಕಾರವೋ ಅದು ನಿಶ್ಚಲವಾಗಿದೆ. ಆದ್ದರಿಂದ ಅದು ಸತ್ಯವಾಗಿದೆ”

ಯಾವುದಕ್ಕೆ ಆಕಾರವಿದೆಯೋ ಅದು ಕಣ್ಣಿಗೆ ಕಾಣಿಸುತ್ತದೆ. ಬರಿಗಣ್ಣಿಗೆ ಕಾಣದೆಹೋದಂಥವು ಕೂಡಾ ವೈಜ್ಞಾನಿಕ ಸಲಕರಣೆಗಳ ಮೂಲಕ ನೋಡಬಹುದಾಗಿದೆ. ರಾಸಾಯನಿಕ ಕಣಗಳಿಗೂ ನಾವು ಅದರ ಸಂರಚನಾ ಚಿತ್ರ ಬರೆದು ವಿವರಿಸಬಲ್ಲೆವಾಗಿದ್ದೇವೆ. ಯಾವೆಲ್ಲವನ್ನು ನಾವು ಅರಿಯಬಲ್ಲೆವೋ ಅವೆಲ್ಲಕ್ಕೂ ಆಕಾರವಿದೆ. ಅಥವಾ, ಆಕಾರ ಇರುವ ಪ್ರತಿಯೊಂದನ್ನೂ ನಾವು ಅರಿಯಬಲ್ಲೆವಾಗಿದ್ದೇವೆ.
ಹಾಗಾದರೆ, ಆಕಾರ ಹೊಂದಿದ ಈ ಜೀವಿ ನಿರ್ಜೀವಿಗಳು ಸುಳ್ಳಾಗುವುದು ಹೇಗೆ? ಹಾಗೆಯೇ, ನಿರಾಕಾರವು ನಿಶ್ಚಲವಾಗಿದೆ ಅಂದರೆ ಏನರ್ಥ?

ಯಾವುದು ಆಕಾರ ಹೊಂದಿದೆಯೋ ಅದು ನಿರಂತರ ಬದಲಾವಣೆಗೆ ಒಳಗಾಗುತ್ತಲೇ ಇರುತ್ತದೆ. ಬದಲಾವಣೆ ಎಂದರೆ ಚಲನೆ ಎಂದೂ ಅರ್ಥ. ಕಣ್ಣಿಗೆ ಸಾವಿರಾರು ವರ್ಷಗಳಿಂದ ನಿಂತಲ್ಲೇ ನಿಂತಂತೆ ಕಾಣುವ ಪರ್ವತ, ನೂರಾರು ವರ್ಷಗಳಿಂದ ಬೇರು ಬಿಟ್ಟು ನಿಂತಿರುವ ಮರ – ಇವು ಕೂಡಾ ಚಲಿಸುತ್ತಲೇ ಇರುತ್ತವೆ. ಚಲನೆ ಅಂದರೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗುವ ಪ್ರಕ್ರಿಯೆ ಅಲ್ಲ. ಚಲನೆ ಅಂದರೆ, ಕಾಲದೊಡನೆ ಬದಲಾಗುವ ಪ್ರಕ್ರಿಯೆ. ಚಲನೆ ಅಂದರೆ ಜೀವ – ನಿರ್ಜೀವಗಳ ಕಣಗಳು ಕಾಲದೊಡನೆ ಚಲಿಸುತ್ತಲೇ ಬದಲಾಗುವ, ಮುಪ್ಪಡರಿಸುವ, ಕರಗಿಸುವ, ಗಟ್ಟಿಗೊಳಿಸುವ, ಪೆಡಸಾಗಿಸುವ, ಕೊನೆಗೊಮ್ಮೆ ಸತ್ತು ಹೋಗುವ ಅಥವಾ ನಾಶವಾಗುವ ಪ್ರಕ್ರಿಯೆ. ಹೊರಮೈಯಲ್ಲಿ ಬದಲಾವಣೆ ಆಗಿದೆ ಅಂದರೆ, ಒಳಗಿನಲ್ಲಿ ಕಣಗಳು ಚಲಿಸುತ್ತಿವೆ ಎಂದೇ ಅರ್ಥ. ಯಾವುದು ಚಲಿಸುತ್ತದೋ, ಯಾವುದು ಬದಲಾವಣೆಗೆ ಪಕ್ಕಾಗುತ್ತದೆ ಅದಕ್ಕೊಂದು ಅಂತ್ಯವಿದ್ದೇ ಇರುತ್ತದೆ. ಏಕೆಂದರೆ, ಚಲನೆಯ ಉದ್ದೇಶವೇ ಏನಾದರೊಂದನ್ನು ‘ಮುಟ್ಟುವುದು’. ಮತ್ತು ಆ ಮುಟ್ಟುವ ಗುರಿ, ‘ಅಂತ್ಯ’ವೇ ಆಗಿರುತ್ತದೆ.

ಅಷ್ಟಾವಕ್ರ, ನಿರಾಕರವನ್ನು ನಿಶ್ಚಲ ಎಂದಿದ್ದಾನೆ. ಕಣಗಳ ಚಲನೆಯಿಲ್ಲದೆ ಜೀವ – ನಿರ್ಜೀವಗಳು ಆಕಾರ ಹೊಂದಲು ಸಾಧ್ಯವಿಲ್ಲ. ಯಾವುದಕ್ಕೆ ಆಕಾರವೇ ಇಲ್ಲವೋ ಅದು ಬದಲಾವಣೆಗೆ ಪಕ್ಕಾಗಲೂ ಸಾಧ್ಯವಿಲ್ಲ. ಯಾವುದು ಬದಲಾಗುವುದಿಲ್ಲವೋ ಅದು ಅಂತ್ಯ ಹೊಂದಲು ಸಾಧ್ಯವಿಲ್ಲ. ಯಾವುದಕ್ಕೆ ಅಂತ್ಯವಿಲ್ಲವೋ ಅದೇ ಸತ್ಯ, ಅದೇ ಶಾಶ್ವತ.

ಇದನ್ನು ಅರ್ಥ ಮಾಡಿಸಲಿಕ್ಕಾಗಿ ಒಂದು ಉದಾಹರಣೆ. ಚಲನೆ, ಅದು ದೈಹಿಕವೋ ಜೀವಕೋಶ – ಕಣಗಳ ಚಲನೆಯೋ, ಒಟ್ಟಾರೆ ಚಲನೆ ನಮ್ಮನ್ನು ಹೆಚ್ಚು ಬೇಗ ಅಂತ್ಯದತ್ತ ಕರೆದೊಯ್ಯುತ್ತದೆ; ಸಾವಧಾನ ಅಥವಾ ಚಲನೆಯಲ್ಲಿ ನಿಧಾನಗತಿಯಿದ್ದರೆ ಅಂತ್ಯವೂ ದೂರವಾಗುತ್ತದೆ. ನಮಗೆ ಪರಿಚಿತವಿರುವ ಪ್ರಾಣಿಗಳಲ್ಲೇ ಅತ್ಯಂತ ನಿಧಾನಗತಿಯ ಆಮೆಯ ಲೈಫ್ ಸ್ಪ್ಯಾನ್ ಅನ್ನೇ ನೋಡಿ. ಈ ಜೀವಪ್ರಭೇದ ನೂರಾರು ಸಾವಿರಾರು ವರ್ಷ ಬದುಕುತ್ತದೆ. ರೂಪುಗೊಳ್ಳುವುದಕ್ಕೇ ಸಾವಿರಾರು ವರ್ಷ ತೆಗೆದುಕೊಳ್ಳುವ ಚಿಕ್ಕ ಗುಡ್ಡ, ನಾಶವಾಗುವುದಕ್ಕೆ ಲಕ್ಷಾಂತರ ವರ್ಷ ತೆಗೆದುಕೊಳ್ಳುತ್ತದೆ!

ನಿಮಗೆ ಉಪಯೋಗವಾಗುವ ಗುಟ್ಟು ಇಲ್ಲಿದೆ ನೋಡಿ. ನಿಧಾನ ಗತಿಯಲ್ಲಿ ಉಸಿರಾಟ ನಡೆಸಿದರೆ ನೀವು ಹೆಚ್ಚು ವರ್ಷ ಬಾಳುತ್ತೀರಿ. ಅಷ್ಟೇ ಅಲ್ಲ, ನಿಧಾನ ಉಸಿರಾಟವನ್ನು ಪ್ರಜ್ಞಾಪೂರ್ವಕವಾಗಿ ಅನುಸರಿಸಿದರೆ ನಿಮ್ಮ ದೇಹದ ಮುಪ್ಪನ್ನು ಮುಂದೂಡಬಹುದು! ಧ್ಯಾನ ನಿಮ್ಮ ಚರ್ಮದ ಕಾಂತಿಯನ್ನೂ ಕಣ್ಣಿನ ಹೊಳಪನ್ನೂ ಕಾಯ್ದಿಡುವುದು ಚಲನೆಯ ಮಂದಗತಿಯ ಕಾರಣದಿಂದಲೇ! ಚಲನೆ ಮಂದವಾದಷ್ಟೂ ಬದಲಾವಣೆಯ ಗತಿ ಮಂದವಾಗುತ್ತದೆ.
ಈ ತರ್ಕಕ್ಕೆ ಖಂಡಿತವಾಗಿಯೂ ಕೆಲವು ಅಪವಾದಗಳು ಇರುತ್ತವೆ. ಆದರೆ, ಎಲ್ಲ ತರ್ಕಗಳೂ ಅಂತಿಮವಾಗಿ ಸುಳ್ಳೇ ಆಗಿಬಿಡುವ ಈ ಜಗತ್ತಿನಲ್ಲಿ ಇದನ್ನೊಂದು ಸಾಂದರ್ಭಿಕ ಸತ್ಯವನ್ನಾಗಿ ತೆಗೆದುಕೊಂಡು ಅನುಸರಿಸಿ ನೋಡಬಹುದು.

ಅಷ್ಟಾವಕ್ರ ಯಾವುದು ಮಿಥ್ಯೆ, ಯಾವುದು ನಿಶ್ಚಲ ಎಂದು ಹೇಳಿ, “ಈ ತತ್ವೋಪದೇಶವನ್ನು ತಿಳಿದವರಿಗೆ ಪುನರ್ಜನ್ಮವಿಲ್ಲ” ಎಂದು ಘೋಷಿಸುತ್ತಾನೆ. ಸಾಕಾರ ಅಂದರೆ ದೇಹ. ತನ್ನನ್ನು ತಾನು ದೇಹ ಎಂದು ಭಾವಿಸಿದವರಿಗೆ ಅದರ ಕರ್ಮವಾಸನೆಗಳು ಅಂಟಿಕೊಂಡು ಜನನಚಕ್ರ ಮುಂದುವರಿಸುವುದು ಅನಿವಾರ್ಯವಾಗುತ್ತದೆ. ಅವರು ಮತ್ತೆ ಮತ್ತೆ ಹುಟ್ಟಿ ಬರುತ್ತಲೇ ಇರಬೇಕಾಗುತ್ತದೆ.
ಯಾರು ತಾನು ನಿರಾಕಾರಿ ಆತ್ಮ, ಬದಲಾವಣೆಯಿಲ್ಲದ ನಿಶ್ಚಲ ಆತ್ಮ ಅನ್ನುವುದನ್ನು ಅರಿತಿರುತ್ತಾರೋ ಅವರು ಕರ್ಮಗಳಿಗೆ ಜವಾಬ್ದಾರರಾಗುವುದಿಲ್ಲ, ವಾಸನೆಗಳಿಗೂ ಅಂಟಿಕೊಳ್ಳುವುದಿಲ್ಲ. ಆದ್ದರಿಂದ ಅವರು ಚಲನೆ ಕಳೆದುಕೊಂಡು ಅನಂತ – ಪರಮ ಆತ್ಮದಲ್ಲಿ ಲೀನವಾಗಿ ಶಾಶ್ವತರಾಗುತ್ತಾರೆ. – ಇದು ಅಷ್ಟಾವಕ್ರನ ಬೋಧನೆಯ ವಿವರಣೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

5 Responses

  1. […] ಜನಕ ಮಹಾರಾಜ ಅಷ್ಟಾವಕ್ರ ಮುನಿಯ ಬಳಿ “ಜ್ಞಾನ ಪಡೆಯುವುದು ಹೇಗೆ? ಮುಕ್ತಿ ಪಡೆಯುವುದು ಹೇಗೆ?” ಎಂದು ಪ್ರಶ್ನಿಸುತ್ತಾನೆ. ಈ ಪ್ರಶ್ನೆಗೆ ಅಷ್ಟಾವಕ್ರ ಉತ್ತರ ನೀಡಲಾರಂಭಿಸುತ್ತಾನೆ. ಈ ಸಂವಾದದ ಮುಂದುವರಿದ ಭಾಗ ಇದು. ಈ ಸಂಚಿಕೆಯಲ್ಲಿ 19 ಮತ್ತು 20ನೇ ಶ್ಲೋಕಗಳ ವಿವರಣೆಯಿದೆ ~ ಸಾ.ಹಿರಣ್ಮಯಿ ಹಿಂದಿನ ಭಾಗಗಳನ್ನು ಇಲ್ಲಿ ನೋಡಿ : https://aralimara.com/2019/02/26/ashta-15/ […]

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.