ಸೋಲುವುದು ಸುಲಭವಲ್ಲ, ಮೊದಲು ಅದನ್ನು ಕಲಿಯೋಣ : ಅಧ್ಯಾತ್ಮ ಡೈರಿ

ಕೆಲವೆಡೆ ನಾವು ಸೋಲುವುದೇ ಹೆಚ್ಚು ಲಾಭಾದಯಕವಾಗಿರುತ್ತದೆ. ಕೆಲವು ಸೋಲುಗಳು ಜಾಣತನವೆನಿಸುತ್ತವೆ ಕೂಡಾ. ಸೋಲು ನಮಗೆ ಗೆಲುವಿನ ಅವಕಾಶಗಳನ್ನು ನಿಚ್ಚಳಗೊಳಿಸುವ ಸಂಗತಿ ~ ಅಲಾವಿಕಾ

ನಾವು ಓಡುತ್ತಲೇ ಇದ್ದೇವೆ. ಎಂಥಾ ಧಾವಂತ! ನಮ್ಮ ಬದುಕು ಒಂದು ಓಟದ ಸ್ಪರ್ಧೆಯೇನೋ ಅನ್ನುವಂತೆ, ಸೋತರೆ ಸತ್ತೇಹೋಗುವೆವು ಅನ್ನುವಂತೆ. ನಾವು ಗೆಲುವಿನ ಹಪಾಹಪಿಗೆ ಅದೆಷ್ಟು ಒಗ್ಗಿಕೊಂಡಿದ್ದೇವೆ ಅಂದರೆ, ಚಿಕ್ಕ ಸೋಲು ಕೂಡ ನಮ್ಮನ್ನು ಹಿಂಡಿಹಾಕಿಬಿಡುತ್ತದೆ. ಅದರಿಂದ ಪಾಠ ಕಲಿತು ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳುವ ಬದಲು ನಾವು ಆತ್ಮವಿಶ್ವಾಸ ಕಳೆದುಕೊಳ್ಳುವುದೇ ಹೆಚ್ಚು. ಅಲ್ಲಿಂದ ಮುಂದೆ, ಸೋಲಿನ ಸರಮಾಲೆ ನಮ್ಮ ಕೊರಳು ಬಾಗಿಸಲು ಕಾಯತೊಡಗುತ್ತದೆ.

ಯಾರು ಮೊದಲ ಸೋಲನ್ನು ಒಪ್ಪಿಕೊಳ್ಳುತ್ತಾರೋ, ಅವರು ಗೆಲುವಿನ ಹಾದಿ ಹಿಡಿಯುತ್ತಾರೆ ಎಂದರ್ಥ. ಆದ್ದರಿಂದ, ಸೋಲುವುದನ್ನು ಕಲಿಯಬೇಕು.

ಸೋಲನ್ನು ಕಲಿಯುವುದು ಎಂದರೇನು? ಗೆಲ್ಲದರಿರುವುದು, ಗೆಲುವಿನ ಪ್ರಯತ್ನ ಮಾಡದಿರುವುದು ಎಂದೇ? ಖಂಡಿತಾ ಹಾಗಲ್ಲ. ಸೋಲನ್ನು ಕಲಿಯುವುದು ಅಂದರೆ, ವರ್ತಮಾನಕ್ಕೆ ಶರಣಾಗುವುದು. ನಮ್ಮನ್ನು ಅದಕ್ಕೆ ಕೊಟ್ಟುಕೊಳ್ಳುವುದು. ನಮ್ಮೆಲ್ಲ ಪ್ರಯತ್ನದ ನಂತರವೂ ಬರುವ ಫಲಿತಾಂಶದ ಹೊಣೆಯನ್ನು ಬಿಟ್ಟುಕೊಡುವುದು. ಸೋಲನ್ನು ಕಲಿಯುವುದು ಅಂದರೆ, ಅದನ್ನು ಪ್ರೀತಿಯಿಂದಲೇ ಸ್ವೀಕರಿಸುವುದು. ಸೋಲು ಕೂಡಾ ನಮ್ಮದೇ ಕೂಸು. ನಮ್ಮ ಸೋಲಿಗೆ ಜನ್ಮದಾತರು ನಾವೇ. ಅದನ್ನು ಅಪ್ಪಿ ನೇವರಿಸಿದರಷ್ಟೆ ಮುಂದೆ ಅದು ಗೆಲುವಾಗಿ ಬೆಳೆಯಲು ಸಾಧ್ಯ. ನಿರಾಕರಣೆಯಿಂದ, ರೇಜಿಗೆಯಿಂದ ಅದನ್ನು ದೂರ ತಳ್ಳಿದರೆ ರಕ್ತಬೀಜಾಸುರನಂತೆ ಮತ್ತೆ ಮತ್ತೆ, ಮತ್ತೆ ಮತ್ತೆ ಬೆಳೆಸು ತಬ್ಬುತ್ತಲೇ ಇರುತ್ತದೆ.

ಆದ್ದರಿಂದ, ಸೋಲನ್ನು ಸಂತೈಸಬೇಕು. ಅದಕ್ಕೆ ಅನುಕಂಪ ತೋರಬಾರದು. ಹುಲಿ ಕೂಡಾ ಒಂದು ಹೆಜ್ಜೆ ಹಿಂದಿಟ್ಟೇ ಮುಂದೆ ನೆಗೆಯುತ್ತದೆ ಅನ್ನುವುದನ್ನು ನೆನೆಯಬೇಕು. ಬಾಣ ಬಿಡುವಾಗಲೂ ಮೊದಲು ಹೆದೆಯನ್ನು ಹಿಂದಕ್ಕೆ ಜಗ್ಗಿಯೇ ಮುಂದೆ ಬಿಡುವುದು. ಸೋಲು ಇಂಥದೇ ಒಂದು ನಡೆ. ಅದು ನಮ್ಮನ್ನು ಮುಂದಕ್ಕೆ, ಗೆಲುವಿನತ್ತ ಚಿಮ್ಮಿಸುವ ಪ್ರಕ್ರಿಯೆಯ ಭಾಗ.  

ಮತ್ತು, ಕೆಲವೆಡೆ ನಾವು ಸೋಲುವುದೇ ಹೆಚ್ಚು ಲಾಭಾದಯಕವಾಗಿರುತ್ತದೆ. ಕೆಲವು ಸೋಲುಗಳು ಜಾಣತನವೆನಿಸುತ್ತವೆ ಕೂಡಾ. ಪ್ರೇಮಕ್ಕೆ ನಾವು ಸೋತಾಗ, ಅದು ನಮ್ಮನ್ನು ಗೆಲ್ಲಿಸುತ್ತದೆ. ನಿಯತಿಗೆ ಸೋತಾಗ, ನಮ್ಮನ್ನು ಮುನ್ನಡೆಸುತ್ತದೆ. ಪ್ರಾಣಾಂತಕ ವೀರರೆದುರು ನಾವು ಸೋಲುವುದರಿಂದ ನಮ್ಮ ಮಾನವೇನೂ ಹೋಗುವುದಿಲ್ಲ. ಜೀವ ಉಳಿದರೆ ಅದಕ್ಕಿಂತ ದೊಡ್ಡ ಬಹುಮಾನವಿದೆಯೇ? ಬಲಶಾಲಿಗಳ ದುರ್ಬಲರು ಗೆಲ್ಲಲೇಬೇಕೆಂದು ಸೆಣಸುವುದು ಅಹಂತೃಪ್ತಿಯ ಆಲೋಚನೆಯಷ್ಟೇ. ಆದ್ದರಿಂದ, ಮೊದಲನೆಯದಾಗಿ ಅಂಥ ಸ್ಪರ್ಧೆಯೇ ಸಲ್ಲದು. ಎರಡನೆಯದಾಗಿ, ಸ್ಪರ್ಧಿಸಿದರೂ ಗೆಲ್ಲಲೇಬೇಕೆಂಬ ಹಠ ಸಲ್ಲದು!

ಕೊನೆಯದಾಗಿ, ಸೋಲು ನಮಗೆ ಗೆಲುವಿನ ಅವಕಾಶಗಳನ್ನು ನಿಚ್ಚಳಗೊಳಿಸುವ ಸಂಗತಿ. ನಾವು ಒಂದನ್ನು ಸೋತಾಗ ಗೆಲ್ಲಬೇಕಾದ ಹತ್ತು ಗುರಿಗಳೂ ದಾರಿಗಳೂ ತೆರೆದುಕೊಳ್ಳುತ್ತವೆ! ಆದ್ದರಿಂದ, ಮೊದಲ ಏಟಿಗೇ ಗೆಲ್ಲುವ ಹುಕಿಯನ್ನು ಬಿಟ್ಟು, ಸೋಲಲು ಕಲಿಯೋಣ. ಸೋಲು ಕಲಿಸುವ ವಿನಯವಂತಿಕೆ ಮತ್ತು ಪ್ರಯತ್ನಶೀಲತೆ ಬದುಕಿಡೀ ಬೆಳಕೂಡುವ ಕಂದೀಲುಗಳಾಗುತ್ತವೆ ಎಂಬುದನ್ನು ಮರೆಯದಿರೋಣ.

Leave a Reply