ನಿಜದ ಗುರು ಮಹಾ ಅಪಾಯಕಾರಿ | Hsin Hsin Ming : ಅಧ್ಯಾಯ 7.4

ಗುರುವಿನ ಹತ್ತಿರ ಹೋಗುವುದೆಂದರೆ ಸಾವಿನ ಹತ್ತಿರ ಹೋದಂತೆ. ಸಾಯದೇ ಹೊಸ ಹುಟ್ಟು ಸಾಧ್ಯವಿಲ್ಲ. ಕನಸುಗಳು ನಾಶವಾದಾಗ, ಸತ್ಯ ಹಾಜರಾಗುತ್ತದೆ.~ ಸೊಸಾನ್; ಓಶೋ ವ್ಯಾಖ್ಯಾನ | ಭಾವಾನುವಾದ: ಚಿದಂಬರ ನರೇಂದ್ರ

All dreams must cease | ಅಧ್ಯಾಯ 7.4

ಸಮಾಧಾನ ಮತ್ತು ಕ್ಷೋಭೆ ಎರಡೂ
ಭ್ರಮೆಯ ವಾರಸುದಾರರು.
ನಿರ್ವಾಣ,
ಇಷ್ಟ ಆಗುವುದು ಮತ್ತು ಆಗದಿರುವುದು
ಎರಡರಿಂದಲೂ ದೂರ
| ಸೊಸಾನ್

ನಾವು, ಯಾವುದನ್ನಾದರೂ ಇಷ್ಟಪಡುವ ಅಥವಾ
ಇಷ್ಟಪಡದಿರುವುದರ ಹಿಂದೆ
ಮನಸ್ಸಿನ ಯಾವ ಮೆಕ್ಯಾನಿಸಂ ಕೆಲಸ ಮಾಡುತ್ತದೆ?
ಯಾವತ್ತಾದರೂ ಈ ಮೆಕ್ಯಾನಿಸಂ
ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನ
ಕಂಡುಕೊಳ್ಳಲು ಪ್ರಯತ್ನ ಮಾಡಿದ್ದೀರಾ ?

ಇವತ್ತು ನೀವು ಒಬ್ಬ ವ್ಯಕ್ತಿಯನ್ನ ಇಷ್ಟಪಡುತ್ತಿದ್ದೀರಿ
ಮತ್ತು ಇನ್ನೊಬ್ಬರನ್ನ ದ್ವೇಷಿಸುತ್ತಿದ್ದೀರಿ,
ಕೆಲ ದಿನಗಳ ನಂತರ ಇದ್ದಕ್ಕಿದ್ದಂತೆ
ನೀವು ಇಷ್ಟಪಡುತ್ತಿದ್ದ ವ್ಯಕ್ತಿ ನಿಮಗೆ ವೈರಿ ಹಾಗು
ನೀವು ಮೊದಲು ದ್ವೇಷಿಸುತ್ತಿದ್ದ ವ್ಯಕ್ತಿ
ನಿಮಗೆ ಅತ್ಯಂತ ಪ್ರೀತಿಪಾತ್ರ.
ಇದು ಹೇಗೆ ಸಾಧ್ಯವಾಯಿತು ?

ವಿಷಯ ಬಹಳ ಸರಳ.
ನಿಮ್ಮ ಅಹಂ ಅನ್ನು ಪೋಷಿಸುವ ವ್ಯಕ್ತಿಯನ್ನ
ನೀವು ಪ್ರೀತಿಸುತ್ತೀರಿ.
ಅವನು ನಿಮಗೆ ಪರದೆಯಾಗಿ, ನೀವು ಪ್ರೊಜೆಕ್ಟ್ ಮಾಡಿದ
ನಿಮ್ಮ ಕನಸುಗಳನ್ನ ತನ್ನ ತೆರೆಯ ಮೇಲೆ ಧರಿಸಬಲ್ಲವನನ್ನ
ನೀವು ಪ್ರೀತಿಸುತ್ತೀರಿ.
ನಿಮ್ಮ ಕನಸುಗಳಿಗೆ ಸಹಕರಿಸುವ, ಶಕ್ತಿ ತುಂಬುವ
ವ್ಯಕ್ತಿಯನ್ನ ನೀವು ಪ್ರೀತಿಸುತ್ತೀರಿ.
ನಿಮ್ಮ ಕನಸುಗಳಿಗೆ ಅಡ್ಡಗಾಲಾಗುವ,
ಸಹಕರಿಸಲು, ಪರದೆಯಾಗಲು ನಿರಾಕರಿಸುವ ವ್ಯಕ್ತಿ
ನಿಮಗೆ ಅಸಹನೀಯನಾಗುತ್ತ ಹೋಗುತ್ತಾನೆ.

ತತ್ವಜ್ಞಾನಿ ಗುರ್ಜೀಫ್ ನ ಪ್ರಸಿದ್ಧ ಶಿಷ್ಯ ಔಸ್ಪೆನ್ಸ್ಕೀ
ತನ್ನ ಪುಸ್ತಕ ‘In search of miraculous’ ನ್ನು
ತನ್ನ ಮಾಸ್ಟರ್ ಗುರ್ಜೀಫ್ ನಿಗೆ ಅರ್ಪಣೆ ಮಾಡುತ್ತ
ಈ ಮಾತುಗಳನ್ನ ಬರೆದಿದ್ದಾನೆ “ನನ್ನ ಕನಸುಗಳನ್ನ ಛಿದ್ರ ಛಿದ್ರಗೊಳಿಸಿದ ಮಹಾಗುರುವಿಗೆ”

ಆದರೆ ನಿಮ್ಮ ಕನಸುಗಳನ್ನ ನಾಶಮಾಡುವ
ವ್ಯಕ್ತಿಯನ್ನ ನೀವು ಇಷ್ಟಪಡುವುದಿಲ್ಲ.
ಔಸ್ಪೆನ್ಸ್ಕೀ ಕೂಡ ಗುರ್ಜೀಫ್ ನ ತೊರೆದು ಹೋಗಬೇಕಾಯಿತು.
ಮುಂದೆ ಆತ ಗುರ್ಜೀಫ್ ನ ಭೇಟಿಯಾಗಲೇ ಇಲ್ಲ,
ಗುರ್ಜೀಫ್ ನನ್ನು ದ್ವೇಷಿಸುತ್ತಲೇ ತೀರಿಕೊಂಡ.

ಔಸ್ಪೆನ್ಸ್ಕೀಯಂಥ ಎಚ್ಚರದ ಮನುಷ್ಯ
ಈ ಸ್ಥಿತಿಯನ್ನ ಅನುಭವಿಸಬಹುದಾದರೆ
ನಮ್ಮ ಕನಸುಗಳ ಬಗೆಗಿನ ನಮ್ಮ ಸೆಳೆತ
ಎಷ್ಟು ಬಲವಾದದ್ದು ಎನ್ನುವುದನ್ನ ಊಹಿಸಬಹುದು.

ನಿಜವಾದ ಗುರು
ಯಾವಾಗಲೂ ವೈರಿಯಂತೆ ಭಾಸವಾಗುತ್ತಾನೆ.
ಇದು ಒಂದು ಬಹುಮುಖ್ಯ ಮಾನದಂಡ.
ನಕಲಿ ಗುರು ನಿಮ್ಮ ಕನಸುಗಳಿಗೆ ನೀರು ಎರೆಯುತ್ತಾನೆ
ಯಾವತ್ತೂ ನಿಮ್ಮ ಕನಸುಗಳಿಗೆ ಭಂಗ ತರುವುದಿಲ್ಲ
ಬದಲಾಗಿ ನಿಮ್ಮನ್ನು ಸಂತೈಸುತ್ತಾನೆ, ನಿಮ್ಮ ನೆಮ್ಮದಿಗೆ ಬೇಕಾಗುವ
ಪರಿಕರಗಳನ್ನು ಹೊಂದಿಸಿಕೊಡುತ್ತಾನೆ.
ಅವನ ಮಾತುಗಳು ನಿಮಗೆ ಲಾಲಿಯ ಹಾಗೆ ಕೇಳಿಸುತ್ತದೆ
ನಿಮ್ಮ ಸುಖ ನಿದ್ರೆಗೆ, ಸವಿಗನಸುಗಳಿಗೆ
ಅನುಕೂಲಕರ ವಾತಾವರಣ ನಿರ್ಮಿಸುತ್ತಾನೆ.

ಆದರೆ ನಿಜದ ಗುರು ಮಹಾ ಅಪಾಯಕಾರಿ,
ಅವನ ಹತ್ತಿರ ಸುಳಿದಾಡುವುದೆಂದರೆ
ಆತಂಕಕ್ಕೆ ಆಹ್ವಾನ ನೀಡಿದಂತೆ
ಅವನು ನಿಮ್ಮ ಕನಸುಗಳನ್ನ ಕತ್ತರಿಸಿ ನಿಮ್ಮನ್ನ ಬೆತ್ತಲೆ ಮಾಡುತ್ತಾನೆ.
ಆದರೆ ನಿಮ್ಮ ಕನಸುಗಳು ನಿಮ್ಮ ಹೃದಯಕ್ಕೆ ತುಂಬ ಹತ್ತಿರ
ನಿಮ್ಮ ಕನಸುಗಳನ್ನೇ ನಿಮ್ಮ ಹೃದಯ ಎಂದುಕೊಂಡಿರುವಿರಿ.
ಯಾವಾಗ ನಿಮ್ಮ ಕನಸುಗಳಿಗೆ ಘಾಸಿಯಾಗುವುದೋ
ನೀವೇ ನಾಶವಾದ ಹಾಗೆ ದುಃಖ ಪಡುವಿರಿ.
ಯಾರೋ ನಿಮ್ಮನ್ನ ಕೊಲೆ ಮಾಡಲು ಬಂದವರಂತೆ
ಗಾಬರಿಗೆ ಒಳಗಾಗುವಿರಿ.
ಹಿಂದೂಗಳು ಗುರುವನ್ನು ಸಾವು ಎಂದು
ಸಂಬೋಧಿಸುವುದು ಈ ಕಾರಣಕ್ಕಾಗಿಯೇ.

ಗುರುವಿನ ಹತ್ತಿರ ಹೋಗುವುದೆಂದರೆ
ಸಾವಿನ ಹತ್ತಿರ ಹೋದಂತೆ.
ಸಾಯದೇ ಹೊಸ ಹುಟ್ಟು ಸಾಧ್ಯವಿಲ್ಲ.
ಕನಸುಗಳು ನಾಶವಾದಾಗ, ಸತ್ಯ ಹಾಜರಾಗುತ್ತದೆ.

ನಿಮ್ಮ ಅಹಂ ತೃಪ್ತಿಗೊಳಿಸುವ ವ್ಯಕ್ತಿ ನಿಮಗೆ ಇಷ್ಟವಾಗುತ್ತಾನೆ.
ನಿಮ್ಮನ್ನು ಪರಿಪೂರ್ಣ ಎಂದು ಹೊಗಳುವ ಹುಡುಗಿ / ಹುಡುಗ
ನಿಮಗೆ ಇಷ್ಟವಾಗುತ್ತಾಳೆ/ನೆ.

ಒಮ್ಮೆ ನಾನು ಸಮುದ್ರದ ದಂಡೆಯಲ್ಲಿ ಕುಳಿತಿದ್ದ
ಇಬ್ಬರು ಪ್ರೇಮಿಗಳ ಮಾತು ಕೇಳಿಸಿಕೊಂಡೆ.
ತಮ್ಮತ್ತ ಏರಿ ಬರುತ್ತಿದ್ದ ಅಲೆಗಳನ್ನು ಕಂಡು ಹುಡುಗ,
“ ಸುಂದರ ಅಲೆಗಳೇ, ಇನ್ನೂ ದೊಡ್ಡದಾಗಿ, ಇನ್ನೂ ದೊಡ್ಡದಾಗಿ
ಎಂದು ಕೂಗಿಕೊಂಡ
ಅಲೆಗಳು ದೊಡ್ಡದಾಗುವಂತೆ ಕಾಣಿಸಿದ ಕಾರಣಕ್ಕೋ ಏನೋ
ಹುಡುಗಿ “ ಅದ್ಭುತ, ಅಲೆಗಳು ನಿನ್ನ ಮಾತು ಕೇಳುತ್ತಿವೆ” ಎಂದು
ಹುಡುಗನನ್ನು ಹುರಿದುಂಬಿಸಿದಳು.
ನಿಮ್ಮ ಅಹಂ ನ್ನು ಪೋಷಿಸುವ
ಇಂಥ ಹುಡುಗಿ ನಿಮಗೆ ಇಷ್ಟ ಆಗುತ್ತಾಳೆ,
ನೀವು ಅವಳ ಅಹಂ ಗೆ ನೀರೆರೆಯಲು ಅವಕಾಶಗಳನ್ನು ಹುಡುಕುತ್ತೀರಿ.
ಇದೊಂದು ಪರಸ್ಪರರ ಅಹಂ ಪೋಷಿಸುವ
ಅಘೋಷಿತ ಕರಾರು.

ಯಾವಾಗ ಆ ಇನ್ನೊಬ್ಬ ವ್ಯಕ್ತಿ
ತನ್ನ ಕನಸುಗಳನ್ನ ಬದುಕಲು ಆರಂಭ ಮಾಡುತ್ತಾನೋ
ಯಾವಾಗ ಹಟಮಾರಿಯಾಗುತ್ತಾನೋ
ಡಾಮಿನೇಟ್ ಮಾಡಲು ಶುರು ಮಾಡುತ್ತಾನೋ
ಆಗ ನಿಮ್ಮ ಅಹಂ ಗಾಯಗೊಳ್ಳತೊಡಗುತ್ತದೆ.
ಇದು ಹೀಗಾಗಲೇ ಬೇಕು.
ಆ ವ್ಯಕ್ತಿ ನಿಮ್ಮನ್ನ ಇಷ್ಟ ಪಡುತ್ತಿರುವುದು
ನಿಮ್ಮ ಅಹಂ ಗಟ್ಟಿಯಾಗುತ್ತಿದೆ ಎಂದಲ್ಲ ಬದಲಾಗಿ
ನೀವು ಕೂಡ ಅವನ ಅಹಂ ಪೋಷಿಸುತ್ತಿದ್ದೀರಿ ಎನ್ನುವ ಕಾರಣಕ್ಕೆ .
ಇಬ್ಬರ ಉದ್ದೇಶಗಳೂ ಬೇರೆ ಬೇರೆ ಅಷ್ಟೆ ಅಲ್ಲ
ಅವು ವೈರುಧ್ಯದಿಂದ ಕೂಡಿವೆ.

ಶುರುವಾತಿನಲ್ಲಿ ಎಲ್ಲ ಹೊಸದಾಗಿರುವಾಗ
ವಾತಾವರಣ ಮಧುರಾತಿಮಧುರ,
ಯಾವಾಗ ಸಂಗತಿಗಳು ಸ್ಪಷ್ಟವಾಗತೊಡಗುತ್ತವೆಯೋ
ಆಗ, ಹಟ, ಹೇರಿಕೆ, ದಬ್ಬಾಳಿಕೆ, ಆಕ್ರಮಣ ಎಲ್ಲ
ಒಂದೊಂದಾಗಿ ಆರಂಭ.
ಆಗ ನೀವು ದ್ವೇಷಿಸಲು ಶುರು ಮಾಡುತ್ತೀರಿ.
ನಿಮ್ಮನ್ನು ಶ್ರೇಷ್ಠ ಎಂದು ಒಪ್ಪಲಾರದವರನ್ನ
ನೀವೂ ನಿರಾಕರಿಸತೊಡಗುತ್ತೀರಿ.

ಅಹಂ ಸತತವಾಗಿ ಕೀಳರಿಮೆಯಿಂದ ಬಳಲುತ್ತದೆ.
ನೀವು ಹೆಣ್ಣನ್ನು / ಗಂಡನ್ನು ಗೆಲ್ಲಬಯಸುತ್ತೀರಿ
ಇದು ಶುರುವಿನಲ್ಲಿ ಮಾತ್ರ ಸಾಧ್ಯ.
ಎಲ್ಲ ಪ್ರೇಮ ಸಂಬಂಧಗಳೂ ಸುಂದರವಾಗಿರೋದು
ಆರಂಭದಲ್ಲಿ ಮಾತ್ರ..
ಕೊನೆವರೆಗೂ ಚಂದವಾಗಿರುವ ಸಂಬಂಧಗಳನ್ನು
ನೀವು ಕಷ್ಟಪಟ್ಟು ಹುಡುಕಬೇಕು
ಅಂಥದೊಂದು ಸಂಬಂಧ ನಿಮಗೆ ಸಿಕ್ಕರೆ
ಅದು ನಿಜವಾದ ಪ್ರೇಮ ಸಂಬಂಧ.

(ಮುಂದುವರೆಯುತ್ತದೆ ...)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.