ಇದು ನಮ್ಮ ಎಲ್ಲ ಬಗೆಯ ವರ್ತನೆಗಳಿಗೂ ಅನ್ವಯವಾಗುತ್ತದೆ. ನಾವು ಯಾವುದಾದರೂ ವಸ್ತು ಅಥವಾ ಸಂಗತಿಯ ಬಗ್ಗೆ ಅಸಹನೆಯಿಂದ ಇದ್ದೇವೆ ಎಂದರೆ ಅದರ ಅರ್ಥ, ಆ ವಸ್ತು ಅಥವಾ ಸಂಗತಿಯಲ್ಲಿ ದೋಷವಿದೆ ಎಂದಲ್ಲ, ನಮ್ಮೊಳಗಿನ ದೋಷವನ್ನು ಆ ವಸ್ತು/ಸಂಗತಿಯು ಪ್ರತಿಬಿಂಬಿಸುತ್ತಿದೆ ಎಂದಷ್ಟೆ | ಅಲಾವಿಕಾ
ಚಿಗುರ ಚಿನ್ನದ ನಡುವೆ ಹೂವ ಬಯಸುವರು
ಹೂವುಗಳ ಕಾಲದಲ್ಲಿ ಹಣ್ಣ ಹೊಗಳುವರು
ಹಣ್ಣಿನ ಗಾತ್ರ ಪೀಚು ಎಂದಿವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
– ಇದು ಕನ್ನಡದ ಕವಿ ಕೆ.ಎಸ್.ನರಸಿಂಹ ಸ್ವಾಮಿಯವರ ‘ಮನುಜ ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ’ ಕವಿತೆಯ ಆರಂಭಿಕ ಚರಣ. ಸ್ವರ್ಗವನ್ನೇ ತಂದು ಅಂಗೈಲಿ ಇರಿಸಿದರೂ ತೃಪ್ತಿ ಕಾಣದ ಮನುಷ್ಯನ ಬಗೆಯನ್ನಿದು ಮಾರ್ಮಿಕವಾಗಿ ಹೇಳುತ್ತದೆ.
ಹೌದು, ಗೊಣಗುವುದು ನಮ್ಮ ನಿತ್ಯರೂಢಿಯಾಗಿಬಿಟ್ಟದೆ. ಪ್ರತಿನಿತ್ಯದ ಬದುಕನ್ನು ನಾವು ಅಸಹನೆಯಿಂದಲೇ ದೂಡುತ್ತಿದ್ದೇವೆ. ಕೆಲವೊಮ್ಮೆ, ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಪ್ರತಿಯೊಂದೂ ನಮಗೆ ಅಪರಾಧವಾಗಿ ತೋರುತ್ತದೆ. ಬೆಳಗ್ಗೆಯಾದಾಗ “ಯಾಕಾದರೂ ಬೆಳಗಾಯ್ತೋ!’ ಎನ್ನುವ ಉದ್ಗಾರ; ರಾತ್ರಿಯಾದಾಗ “ಇವತ್ತಿನ ಕೆಲಸಗಳೊಂದೂ ಸುಸೂತ್ರ ನಡೆಯಲಿಲ್ಲ ಆಗಲೇ ರಾತ್ರಿಯಾಗಿ ಹೋಯ್ತು! ಅನ್ನುವ ಹಳಹಳಿ… ತಮಗಾಗಿಯೇ ತಮ್ಮಿಚ್ಛೆಯಂತೆ ಜಗತ್ತು ನಡೆಯುತ್ತಿಲ್ಲ ಎನ್ನುವ ಹತಾಶೆ; ಅದರಿಂದ ಹೊಮ್ಮುವ ಅಸಹಾಯಕತೆ ಮತ್ತು ಪರಿಣಾಮ ರೂಪವಾಗಿ – ಕೋಪ!
ಈ ಚಕ್ರ ನಿಲ್ಲುವುದೇ ಇಲ್ಲ. ರಾತ್ರಿ ಮಲಗುವಾಗಿನ ಕೋಪದ ಪಸೆ ಬೆಳಗ್ಗೆ ಏಳುವಾಗಲೂ ಕೊಂಚ ಉಳಿದಿರುತ್ತದೆ. ಮತ್ತೆ ರಾತ್ರಿಗೆ ಅದು ದಟ್ಟವಾಗುತ್ತದೆ. ಇದರ ಪರಿಣಾಮ – ನಮ್ಮನ್ನು ನಾವೇ ದ್ವೇಷಿಸಿಕೊಳ್ಳಲಾರಂಭಿಸ್ಟೇವೆ. “ನನಗೆ ಸಮಾಧಾನ ಇಲ್ಲ ಎನ್ನುವ ಅಂಶವೇ ಬಾಧಿಸತೊಡಗಿ, ಇರುವ ಸಮಾಧಾನವನ್ನೂ ಬಲಿ ಕೊಡುತ್ತೇವೆ. ಬರುಬರುತ್ತ ಸದಾ ಅಸಮಾಧಾನದ, ಗೊಣಗಾಟದ ಸ್ಥಿತಿಯೇ ಸ್ಥಾಯಿಯಾಗಿಬಿಡುತ್ತದೆ. ಇದು ನಮ್ಮನ್ನೂ ನೆಮ್ಮದಿಯಾಗಿ ಇರಲು ಬಿಡುವುದಿಲ್ಲ ನಮ್ಮ ಸುತ್ತಲಿನವರನ್ನೂ.
ಇದಕ್ಕೆ ಕಾರಣವೇನು?
ನಮ್ಮ ಗೊಣಗಾಟಕ್ಕೆ ಮುಖ್ಯ ಕಾರಣ, ಅತೃಪ್ತಿ. ಇದು ಒದಗುವುದು ನಿರೀಕ್ಷೆಯಿಂದ. ಯಾವಾಗ ನಮ್ಮ ನಿರೀಕ್ಷೆ ನಮ್ಮ ಸಾಧ್ಯತೆಯ ಮಿತಿಯನ್ನು ಮೀರಿ ಬೆಳೆಯುತ್ತದೆಯೋ ಮತ್ತು ನಮ್ಮಲೋಭ ಅದನ್ನು ಅರ್ಥ ಮಾಡಿಕೊಳ್ಳಲು ಬಿಡುವುದಿಲ್ಲವೋ, ಆಗ ನಮ್ಮೊಳಗಿನ ಅತೃಪ್ತಿ ಹೆಚ್ಚತೊಡಗುತ್ತದೆ.
ಇಲ್ಲೊಂದು ತಮಾಷೆಯಿದೆ. ಯಾವುದೋ ಒಂದು ವಿಷಯದಲ್ಲಿ ನಮ್ಮ ನಿರೀಕ್ಷೆ ಹುಸಿಯಾದಾಗ ನಾವು ಮತ್ಯಾವುದೋ ವಿಷಯದಲ್ಲಿ ಅದರ ಅಸಮಾಧಾನವನ್ನು ಹೊರಹಾಕುತ್ತೇವೆ. ಮೇಲೆ ಹೇಳಿದ ಕವಿತೆಯ ಉದಾಹರಣೆಯನ್ನೆ ಗಮನಿಸಿ; ಇಲ್ಲಿಹೂವು, ಹಣ್ಣು ಅದರ ಗಾತ್ರಗಳ ಕುರಿತಾದ ಅಸಮಾಧಾನ ನೇರವಾಗಿ ಅವಕ್ಕೇ ಸಂಬಂಧಿಸಿದ್ದಲ್ಲ, ವ್ಯಕ್ತಿಯ ಒಳಗಿನ ಅಸಮಾಧಾನ ಆ ಹೂ, ಹಣ್ಣು ಇತ್ಯಾದಿಗಳ ನೆವದಲ್ಲಿ ಹೊರಹೊಮ್ಮುತ್ತಿದೆ – ಸರ್ಫೇಸ್ ಆಗುತ್ತಿದೆಯಷ್ಟೆ. ಸಮಸ್ಯೆ ಆ ಹೂವಿನಲ್ಲಾಗಲೀ ಹಣ್ಣಿನಲ್ಲಾಗಲೀ ಇಲ್ಲ. ಅದು ಇರುವುದು ನಮ್ಮೊಳಗೆ. ಆ ವಸ್ತುಗಳು ನಮ್ಮ ಮನಸ್ಥಿತಿಯ ಪ್ರತಿಬಿಂಬಗಳಷ್ಟೆ.
ಇದು ನಮ್ಮ ಎಲ್ಲ ಬಗೆಯ ವರ್ತನೆಗಳಿಗೂ ಅನ್ವಯವಾಗುತ್ತದೆ. ನಾವು ಯಾವುದಾದರೂ ವಸ್ತು ಅಥವಾ ಸಂಗತಿಯ ಬಗ್ಗೆ ಅಸಹನೆಯಿಂದ ಇದ್ದೇವೆ ಎಂದರೆ ಅದರ ಅರ್ಥ, ಆ ವಸ್ತು ಅಥವಾ ಸಂಗತಿಯಲ್ಲಿ ದೋಷವಿದೆ ಎಂದಲ್ಲ, ನಮ್ಮೊಳಗಿನ ದೋಷವನ್ನು ಆ ವಸ್ತು/ಸಂಗತಿಯು ಪ್ರತಿಬಿಂಬಿಸುತ್ತಿದೆ ಎಂದಷ್ಟೆ
ನಿತ್ಯ ಗೊಣಗಾಟದ ಮನಸ್ಥಿತಿ ಒಮ್ಮೆ ರೂಢಿಯಾಗಿಬಿಟ್ಟರೆ ಅದರಿಂದ ಹೊರಬರುವುದು ತುಸು ಕಷ್ಟ, ಆದರೆ ಖಂಡಿತ ಅಸಾಧ್ಯವಲ್ಲ. ನಾವು ನಮ್ಮ ಪ್ರತಿ ನಡೆಯನ್ನು ಗಮನಿಸುವ ಅಭ್ಯಾಸ ಮಾಡಿಕೊಂಡರೆ ನಾವು ಅಂತಹದೊಂದು ಅಭ್ಯಾಸಕ್ಕೆ ಬಲಿಯಾಗುತ್ತಿದ್ದೀವಿ ಅನ್ನುವುದು ಅರಿವಿಗೆ ಬರುತ್ತದೆ. ಹಾಗೇನಾದರೂ ಇದ್ದರೆ, ಆ ಕ್ಷಣದಿಂದಲೇ ಎಚ್ಚರಿಕೆ ಬೆಳೆಸಿಕೊಂಡು ಮುಂದಡಿಯಿಡಬೇಕು.
ಮುಖ್ಯವಾಗಿ ನಮ್ಮನ್ನುನಾವು ಪ್ರೀತಿಸಿಕೊಳ್ಳುವುದನ್ನು, ನಮಗೇನು ದಕ್ಕಿದೆಯೋ ಅದಕ್ಕೆ ಕೃತಜ್ಞರಾಗುವುದನ್ನು, ಇತರರೊಂದಿಗೆ ತುಲನೆ ಮಾಡಿಕೊಳ್ಳದೆ ಇರುವುದನ್ನು ನಾವು ರೂಢಿಸಿಕೊಳ್ಳಬೇಕು. ಅಸ್ತಿತ್ವ ನಮಗೆ ಸದೃಢವಾದ ದೇಹವನ್ನು ಕೊಟ್ಟಿದೆ. ಅಕಸ್ಮಾತ್ ದೇಹದಲ್ಲಿ ಊನಗಳಿದ್ದರೂ ಯೋಚಿಸಬಲ್ಲ, ಚಿಂತಿಸಬಲ್ಲ ಬುದ್ಧಿಯನ್ನು ಕರುಣಿಸಿದೆ. ಸಂವಹನಕ್ಕೆ ಭಾಷೆಯನ್ನು ಕೊಟ್ಟಿದೆ. ಪ್ರಕೃತಿಯ ಬಹುತೇಕ ಎಲ್ಲ ವಸ್ತುಗಳೂ ಮನುಷ್ಯನ ಉಪಯೋಗಕ್ಕಾಗಿಯೇ ಇರುವುದೇನೋ ಎನ್ನುವಷ್ಟು ಸವಲತ್ತುಗಳಿವೆ. ಈ ಎಲ್ಲವನ್ನು ನೆನೆದು ನಾವೆಷ್ಟು ಭಾಗ್ಯಶಾಲಿಗಳು ಎನ್ನುವುದನ್ನು ಮನವರಿಕೆಮಾಡಿಕೊಳ್ಳಬೇಕು. ಆಗ ಗೊಣಗಾಟದ ದುಶ್ಚಟ ತನ್ನಿಂತಾನೆ ಮರೆಯಾಗಿ ಹೋಗುತ್ತದೆ.