ಶ್ರೀರಾಮಕೃಷ್ಣ ಪರಮಹಂಸರ ಗುರುಭಾವ

ಶ್ರೀ ರಾಮಕೃಷ್ಣ ಪರಮಹಂಸರು ಭಾರತದ ಧಾರ್ಮಿಕ ಪುನರುತ್ಥಾನಕ್ಕೆ ಕಾರಣವಾದ ಮಹಾ ಸಾಧಕರಲ್ಲಿ ಪ್ರಮುಖರು. ಇಂದು ಪರಮಹಂಸರ ಜನ್ಮದಿನ. ತನ್ನಿಮಿತ್ತಿ ಎ.ಆರ್. ಕೃಷ್ಣ ಶಾಸ್ತ್ರಿಯವರ “ಶ್ರೀ ರಾಮಕೃಷ್ಣ ಪರಮಹಂಸರ ಚರಿತ್ರೆ” ಕೃತಿಯಿಂದ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ.

ನಮ್ಮಲ್ಲಿ ಬಹುತೇಕರು ರಾಮಕೃಷ್ಣ ಪರಮಹಂಸರ ಮೊತ್ತಮೊದಲ ಶಿಷ್ಯೆ ನರೇಂದ್ರ (ವಿವೇಕಾನಂದ) ಎಂದೂ, ನರೇಂದ್ರನ ಭೇಟಿಯ ನಂತರವೇ ಪರಮಹಂಸರು ಗುರುವಾಗಿ ಮನ್ನಣೆ ಪಡೆದರೆಂದೂ ತಪ್ಪು ತಿಳಿದಿದ್ದಾರೆ. ಪರಮಹಂಸರ ಜೀವನ ಚರಿತ್ರೆಯನ್ನು ನೋಡಿದರೆ, ವಾಸ್ತವದಲ್ಲಿ ಅವರಲ್ಲಿ ಬಾಲ್ಯದಿಂದಲೂ ಗುರುಭಾವವು ಆಗ್ಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇತ್ತು. ಅಲ್ಲಿಂದೀಚೆಗೆ, ಕಲ್ಕತ್ತೆಗೆ ಬಂದ ಮೇಲೆ, ವಿವೇಕಾನಂದ ಸ್ವಾಮಿಗಳು ಬರುವುದಕ್ಕೆ ಬಹಳ ಮುಂಚೆಯೇ, ಪರಮಹಂಸರ ಹತ್ತಿರಕ್ಕೆ, ಕರ್ತಾಭಜಾ, ರಾಮಾಯಿತ, ವೈಷ್ಣವ, ತಾಂತ್ರಿಕ ಮುಂತಾದ ಸಕಲ ಸಂಪ್ರದಾಯಗಳ ಸಾಧುಗಳೂ, ಸಾಧಕರೂ, ವೈಷ್ಣವಚರಣ ಗೌರೀಪಂಡಿತ ಮುಂತಾದ ಶಾಸ್ತ್ರಜ್ಞರೂ, ಪಂಡಿತರೂ ಬಂದು ಅವರ ಸಹಾಯದಿಂದ ಧರ್ಮ ಲಾಭವನ್ನು ಹೊಂದಿ ಹೊರಟು ಹೋಗಿದ್ದರು. ಇದನ್ನು ಕಲ್ಕತ್ತೆಯ ನಿವಾಸಿಗಳೇ ಅನೇಕರು ಅರಿಯರು.

ಗುರುಭಾವವು ಪೂರ್ಣವಾಗಿ ವಿಕಾಸವಾದ ಮೇಲೆ ಅದೇ ಸಹಜವಾದ ಭಾವವಾಗಿ ನಿಂತುಕೊಂಡಿತು. ಆಗ ಪರಮಹಂಸರು ಜಗನ್ಮಾತೆಯಿಂದ ನಿರ್ದಿಷ್ಟರಾದ ಭಕ್ತರ ಆಗಮನವನ್ನೇ ನಿರೀಕ್ಷಿಸಿಕೊಂಡು ಕುಳಿತಿದ್ದರು. ಜಾಗ್ರತೆಯಲ್ಲಿಯೇ ಇವರೂ ಇತರರೂ ಬರಲು ಮೊದಲು ಮಾಡಿದರು. ಅಲ್ಲಿಂದ ದೇಹತ್ಯಾಗ ಮಾಡುವವರೆಗೂ ಮಿಕ್ಕಿದ್ದ ಐದಾರು ವರ್ಷಗಳೂ ಶಿಕ್ಷಣ, ಉಪದೇಶ ಇವುಗಳಲ್ಲಿಯೇ ವಿಶೇಷವಾಗಿ ಕಳೆದು ಹೋದುವು.

ನಿಜವಾದ ಗುರುಗಳ ಚರಿತ್ರೆಗಳೆಲ್ಲಾ ಹೀಗೆಯೇ ! ಅ೦ಥವರು ಗುರುಭಾವವನ್ನು ಬೆನ್ನಿಗೆ ಕಟ್ಟಿಕೊಂಡೇ ಹುಟ್ಟುವರು. ಕುಂಬಳಕಾಯಿ ಪಡವಲಕಾಯಿ ಮುಂತಾದ ಗಿಡಗಳಲ್ಲಿ ಕಾಯಿ ಬಿಡುವ ಹೂಗಳನ್ನು ಹೂ ಅರಳುವುದಕ್ಕೆ ಮುಂಚೆಯೇ ಹೇಳಿ ಬಿಡಬಹುದು. ಏಕೆಂದರೆ ಅಂಥ ಮೊಗ್ಗಿನ ಹಿಂದೆ ಒಂದು ಸಣ್ಣ ಹೀಚು ಅಂಟಿಕೊಂಡಿರುವುದು. ನಿಜವಾದ ಗುರುವಿನಲ್ಲಿಯೂ ಹೀಗೆಯೇ; ಮೊದಲು ಗುರುಭಾವ; ಆಮೇಲೆ ಮಾನುಷಭಾವ. ಅದಕ್ಕೆ ತಕ್ಕಂತೆ ಹುಟ್ಟಿದ್ದು ಮೊದಲ್ಗೊಂಡು ಆ ಗುರುಭಾವವು ಬಲಿತು ರಸತುಂಬಿ ಪ್ರಕಾಶಕ್ಕೆ ಬರಲು ಅನುಕೂಲವಾದ ಸಂದರ್ಭಗಳು ತಾವಾಗಿಯೇ ಒದಗಿ ಬರುತ್ತವೆ. ಇವೆಲ್ಲಾ ಗುರುಭಾವವನ್ನು ಸಂಪಾದಿಸಿಕೊಡುತ್ತವೆ ಎಂದರ್ಥವಲ್ಲ. ಆ ಗುರುಭಾವವಿರುವುದರಿಂದ ಅದರ ಪ್ರಕಾಶಕ್ಕೋಸ್ಕರ ಇವೆಲ್ಲಾ ಸಂಘಟಿಸುತ್ತವೆ.

ರಾಮಕೃಷ್ಣ ಪರಮಹಂಸರು ದಕ್ಷಿಣೇಶ್ವರದಲ್ಲಿ ಕಾಳಿ ದೇಗುಲದ ಅರ್ಚಕನಾಗಿ ನೇಮಕಗೊಂಡಿದ್ದರು.  ಇಲ್ಲಿ ಪೂಜೆಮಾಡುತ್ತ ಅನನ್ಯವಾದ ಭಕ್ತಿಯಿಂದ ಜಗನ್ಮಾತೆಯ ರೂಪವಾಗಿ ಅಲ್ಲಿ ನೆಲೆಸಿದ್ದ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡರು. ಇದಾದ ಮೇಲೆ ಕ್ರಮವಾಗಿ ವೈಷ್ಣವ, ವೇದಾಂತ, ಯೋಗ, ತಾಂತ್ರಿಕ, ಮಹಮ್ಮದೀಯ, ಕ್ರೈಸ್ತ ಮುಂತಾದ ನಾನಾ ಮಾರ್ಗಗಳನ್ನು ಅನುಸರಿಸಿ ಅದೇ ಅನುಭವವನ್ನು ಪಡೆದು “ ಕ೦ಸದ್ವಿಪ್ರಾ ಬಹುಧಾ ವದಂತಿ ” ಎಂಬುದನ್ನು ತಿಳಿದುಕೊಂಡರು. ಈ ಹನ್ನೆರಡುವರ್ಷ ಸಾಧನಕಾಲದಲ್ಲಿ ಅವರೊಡನೆ ಹುಟ್ಟಿದ ಗುರುಭಾವವು ಕ್ರಮೇಣ ವಿಕಸಿತವಾಗಿ ಪ್ರಫುಲ್ಲವಾಯಿತು. ಇದರಲ್ಲಿ ವಿಶೇಷವಾದ ಸಂಗತಿ ಏನೆಂದರೆ ಅವರಿಗೆ ಯಾವ ಕಾಲದಲ್ಲಿ ಯಾವ ಮಾರ್ಗವನ್ನು ಅಭ್ಯಾಸಮಾಡಬೇಕೆಂದು ಮನಸ್ಸಿಗೆ ಬರುತ್ತಿತ್ತೋ ಆ ಕಾಲಕ್ಕೆ ತಕ್ಕಹಾಗೆ ವೇದಾಂತ ಪಂಡಿತನಾಗಲಿ, ಯೋಗಿಯಾಗಲಿ, ವಿಷ್ಣು ಭಕ್ತನಾಗಲಿ, ಖಾಜಿಯಾಗಲಿ ಬಂದುಬಿಡುತ್ತಿದ್ದರು. ಬಂದವರೆಲ್ಲರೂ ಇವರು ಮಹಾತ್ಮರೆಂದೂ ಅವತಾರಪುರುಷರೆಂದೂ ಹೊಗಳಿ ತಮಗೆ ತಿಳಿದಿದ್ದನ್ನು ಸ್ವಲ್ಪ ಸೂಚಿಸುತ್ತಲೇ ಪರಮಹಂಸರು ಎಲ್ಲವನ್ನೂ ಗ್ರಹಿಸಿ ಬಿಡುತ್ತಿದ್ದರು. ಕೊನೆಗೆ ಗುರುಗಳೇ ಶಿಷ್ಯನಿಂದ ಎಷ್ಟೋ ವಿಷಯಗಳನ್ನು ಕಲಿತುಕೊಂಡು ತಾವು ಧನ್ಯರಾಗಿ ಹೊರಟುಹೋದರು.

ರಾಮಕೃಷ್ಣ ಪರಮಹಂಸರು ಗುರುಗಳು ಬೋಧಿಸಿದುದರಲ್ಲಿ ಹೊಸವಿಷಯವೇನು? ಯಾರೂ ಹೇಳಿಲ್ಲದ ವಿಷಯವನ್ನು ಅವರೇನು ಹೇಳಿದರು ? ಎಂದು ಕೇಳಬಹುದು. ಧರ್ಮವಿಚಾರದಲ್ಲಿ ಹೊಸದಾಗಿ ಹೇಳುವುದೇನಿದೆ ? ಎಲ್ಲವೂ ಹಿಂದೆ ರಾಷ್ಟ್ರದಲ್ಲಿ ಉಕ್ತವಾಗಿರುವುದೇ : ಎಲ್ಲವೂ ಒಂದೆ ಅವತಾರ ಪುರುಷರು ಬೋಧಿಸಿರುವುದೇ ; “ ನರಿಗಳು ಕೂಗುವುದೆಲ್ಲ ಒಂದೇ ವಿಧ” ವೆಂದು ಪರಮಹಂಸರು ಹೇಳುತ್ತಿದ್ದರು. ಮಹಾಪುರುಷರಾದವರು ಎಂದಿಗೂ ರಾಷ್ಟ್ರಕ್ಕೆ ಸಿರುದ್ಧವಾದ ಅಥವಾ ಹೊರಗಾದ ವಿಷಯಗಳನ್ನು ಬೋಧಿಸುವದಿಲ್ಲ. ಶಾಸ್ತ್ರಸಂಪ್ರದಾಯವನ್ನು ರಕ್ಷಿಸುವುದು ಅವರ ಮುಖ್ಯ ಕರ್ತವ್ಯ. ಅದೇ ಅವರ ಲಕ್ಷಣ. 

ಈ ಮಹಾತ್ಮರು, ಅವತಾರ ಮಾಡುವುದು ಶಾಸ್ತ್ರದಲ್ಲಿಲ್ಲದ ಹೊಸ ವಿಷಯವನ್ನು ಹೇಳುವುದಕ್ಕಲ್ಲ. ಕಾಲಗುಣದಿಂದ ಧರ್ಮದ ಮೇಲೆ ಬಿದ್ದಿರುವ ದೂಳನ್ನು ತೊಡೆದು, ದೇಶಕಾಲ ಮುಂತಾದುವುಗಳಿ೦ದ ಬದಲಾಯಿಸಿರುವ ನಮ್ಮ ಮನೋಭಾವಗಳಿಗೆ ತಕ್ಕಂತೆ ಆ ಹಳೆಯ ವಿಷಯವನ್ನೇ ವಿವರಿಸಿ ಅದೇ ಸತ್ಯವೆಂದು ಸ್ಥಾಪಿಸುವುದಕ್ಕೆ; ಆ ಕಾಲದಲ್ಲಿ ಉಂಟಾದ ಧರ್ಮಗ್ಲಾನಿಯ ಮೂಲಕಾರಣವನ್ನು ಕಿತ್ತು ಹಾಕಿ ಎಲ್ಲರಿಗೂ ದಾರಿಯನ್ನು ತೋರಿಸಿ ಮೇಲ್ಪಂಕ್ತಿಯಾಗಿರುವಂತೆ ತಾವು ಜೀವಿಸಿಕೊಂಡಿದ್ದು ತತ್ಕಾಲಕ್ಕೆ ಅನುಕೂಲವಾದ ರೀತಿಯಲ್ಲಿ ಬೋಧಿಸಿ ಹೋಗುವುದಕ್ಕೆ. ಎಲ್ಲಾ ಮಹಾ ಪುರುಷರೂ ಹೀಗೆಯೇ : ಅವರು ಎಷ್ಟೇ ಕಠಿನವಾದ ವಿಷಯಗಳನ್ನು ತೆಗೆದುಕೊಂಡರೂ ಸುಲಭವಾದ ಮಾತುಗಳಿಂದ ಮನಸ್ಸಿಗೆ ಅಂಟುವಂತೆಯೂ ಮರೆಯದಂತೆಯೂ ಅವುಗಳನ್ನು ವಿವರಿಸಿ ಹೇಳುವರು. ಸಂದರ್ಭಕ್ಕೆ ಅನುಕೂಲವಾದ ಕಥೆಗಳನ್ನೂ ಉವಮಾನಗಳನ್ನೂ ಹೇಳುವುದೂ ಇವರಲ್ಲಿ ಒಂದು ಸಾಮಾನ್ಯವಾದ ಗುಣ.

ಬುದ್ಧ, ಶಂಕರಾಚಾರ್ಯ, ರಾಮಾನುಜಾಚಾರ್ಯ, ಕ್ರಿಸ್ತ ಮುಂತಾದ ಅವತಾರ ಪುರುಷರ ಚರಿತ್ರೆಯನ್ನು ವಿಚಾರಮಾಡಿ ನೋಡಿದರೆ ಅವರು ತಮ್ಮ ತಮ್ಮ ಕಾಲಗಳಲ್ಲಿ ಧರ್ಮ ಗ್ಲಾನಿಯುಂ ಟಾಗುವುದಕ್ಕೆ ಮೂಲಕಾರಣವನ್ನು ತಿಳಿದು ಮುಖ್ಯವಾಗಿ ಅದನ್ನು ಬೇರುಸಹಿತ ಕಿತ್ತು ಹಾಕಿ ಧರ್ಮವನ್ನು ಪುನಃ ಉದ್ಘಾರಮಾಡುವುದಕ್ಕೆ ಪ್ರಯತ್ನಪಟ್ಟು ಅದರಲ್ಲಿ ಕೃತಕೃತ್ಯರಾದ ಬಳಿಕ ದೇಹವನ್ನು ತ್ಯಜಿಸಿದಂತೆ ತೋರುತ್ತದೆ.

ಪರಮಹಂಸರು ಸಾರಿಸಾರಿ “ಎಲ್ಲಾ ಧರ್ಮವೂ ಸತ್ಯ ; ಎಷ್ಟು ಮತವೋ ಅಷ್ಟು ಪಥ ; ನಮ್ಮ ದೇವರು ಹೆಚ್ಚು ನಿಮ್ಮ ದೇವರು ಕಡಿಮೆ ಎಂದು ಕೀಳುಬುದ್ಧಿಯಿಂದ ಜಗಳವಾಡಬಾರದು ಯಾರು ಯಾವ ಮಾರ್ಗವನ್ನು ಅನುಸರಿಸಿದ್ದರೆ ಆ ಮಾರ್ಗವನ್ನೇ ಅನುಸರಿಸಲಿ, ಅವರ ಮಾರ್ಗವನ್ನು ಕೆಡಿಸಬೇಡಿ. ಹಿಂದೂ ಮತದಲ್ಲಿಯೂ ದ್ವೈತಾ ದ್ವೈತ ವಿಶಿಷ್ಟಾದ್ವೈತ ಮತಗಳು ಬೇರೆ ಬೇರೆಯಲ್ಲ. ಅವೆಲ್ಲವೂ ಒಬ್ಬೊಬ್ಬ ಸಾಧಕನ ಜೀವಮಾನದಲ್ಲಿಯೂ ಒಂದಾದ ಮೇಲೆ ಒ೦ದರಂತೆ ಬರತಕ್ಕ ಅವಸ್ಥಾಭೇಧಗಳು ” ಎಂದು ಮುಂತಾಗಿ ಹೇಳುತ್ತಿದ್ದರು. ಅವರ ಆಚರಣೆಯೂ “ಎಷ್ಟು ಮತವೋ ಅಷ್ಟು ಪಥ”ಎಂಬುದಕ್ಕೆ ತಕ್ಕಂತೆಯೇ ಇತ್ತು.

ಪರಮಹಂಸರು ತಲೆಗೆಲ್ಲ ಒಂದೇ ಸೂತ್ರವನ್ನು ಅವರು ಎಂದಿಗೂ ವಿಧಿಸಿದವರಲ್ಲ. ಒ೦ದು ಜನರಿಗೂ ಮತ್ತೊಂದು ಜನರಿಗೂ ಒಬ್ಬ ಮನುಷ್ಯನಿಗೂ ಮತ್ತೊಬ್ಬ ಮನುಷ್ಯನಿಗೂ ಸ್ವಭಾವಗುಣ, ಮುಂತಾದವುಗಳಲ್ಲಿ ವ್ಯತ್ಯಾಸವಿರುವತನಕ ಅವರ ಮಾರ್ಗವೂ ಬೇರೆಯಾಗಬೇಕು. ಆದ್ದರಿಂದ ಪರಮಹಂಸರು ಶಿಷ್ಯರ ಯೋಗ್ಯತೆಯನ್ನು ನೋಡಿ ಅವರವರಿಗೆ ತಕ್ಕ ಶಿಕ್ಷಣವನ್ನು ಕೊಡುತ್ತಿದ್ದರು. ತಮ್ಮ ಶಿಷ್ಯ ಮಂಡಲಿಯಲ್ಲಿಯೇ ಸ್ವಾಮಿ ವಿವೇಕಾನಂದರಿಗೆ ಬಲವಂತಪಡಿಸಿಯಾದರೂ ಜ್ಞಾನಮಾರ್ಗವನ್ನೂ ಮತ್ತೆ ಕೆಲವರಿಗೆ ಭಕ್ತಿ ಮಾರ್ಗವನ್ನೂ ಬೋಧಿಸುತ್ತಿದರು. ಸ್ವಾಮಿ ಅಭೇದಾನಂದರವರು ಭಕ್ತಿ ಮಾರ್ಗವನ್ನು ಅನುಸರಿಸುತ್ತಿದ್ದಾಗ ಮಧ್ಯೆ, ವಿವೇಕಾನಂದರವರು ಅವರನ್ನು ಜ್ಞಾನಮಾರ್ಗಕ್ಕೆ ತಿರುಗಿಸಲು, ಪರಮಹಂಸರು ಬಹಳ ಬೇಸರಪಟ್ಟುಕೊಂಡು ದಾರಿತಪ್ಪಿ ಹೋದ ಸಾಧಕನಿಗೆ ದಾರಿ ತೋರಿಸಿದರು. ಗಿರೀಶ ಚಂದ್ರಘೋಷರಿಗೆ ಇದಾವುದನ್ನೂ ಹೇಳದೇ “ ನನಗೆ ವಕಾಲತ್ತುನಾಮೆ ಕೊಟ್ಟುಬಿಡು. ನೀನು ಮಾಡಬೇಕಾದ ದೇವರ ಪೂಜೆ, ಪುರಸ್ಕಾರ, ಧ್ಯಾನ, ಜಪ ಮುಂತಾದ್ದನ್ನೆಲ್ಲಾ ನಾನು ಮಾಡಿಬಿಡುತ್ತೇನೆ, ನೀನು ಮಾಡುವ ಒಳ್ಳೆಯದು ಕೆಟ್ಟದ್ದೆಲ್ಲಾ ನನಗಿರಲಿ” ಎಂದು ಹೇಳಿ ಅವರ ಭಾರವನ್ನೆಲ್ಲ ತಾವು ಹೊತ್ತುಕೊಂಡರು. ಅಘೋರಮಣಿ ಅಥವಾ “ ಗೋಪಾಲೇರಮಾ” (ಗೋಪಾಲನ ತಾಯಿ) ಎಂಬಾಕೆಗೆ ಭಕ್ತಿ ಮಾರ್ಗದಲ್ಲಿಯೇ ಕೊನೆಯವರೆಗೂ ಶಿಕ್ಷಣವನ್ನು ಕೊಟ್ಟರು. ಯೋಗಾನಂದ ಸ್ವಾಮಿಗಳು ಒಬ್ಬ ಹಠಯೋಗಿಯ ಹತ್ತಿರಕ್ಕೆ ಹೋಗಿಬರುತ್ತಿದ್ದದ್ದನ್ನು ಕಂಡುಹಿಡಿದು ಬಲವಂತವಾಗಿ ಅದನ್ನು ಬಿಡಿಸಿ “ ನೀನು ಅಲ್ಲಿಗೆ ಏಕೆ ಹೋದದ್ದು ? ಅಲ್ಲಿಗೆ ಹೋಗಬೇಡ ; ಅದೆಲ್ಲಾ ಕಲಿತು ಕೊಂಡರೆ ಶರೀರದ ಮೇಲೆಯೇ ಮನಸ್ಸು ಹೋಗುತ್ತದೆ; ದೇವರ ಕಡೆಗೆ ತಿರುಗುವುದೇ ಇಲ್ಲ” ಎಂದು ಹೇಳಿ ಹರಿಧ್ಯಾನ ಮಾಡುವ ಹಾಗೆ ಏರ್ಪಾಡುಮಾಡಿದರು.

ಒಮ್ಮೆ ಒಬ್ಬ ಹೆಂಗಸು ಬಂದು, ಧ್ಯಾನ ಜಪಮಾಡುವುದಕ್ಕೆ ಕುಳಿತುಕೊಂಡಾಗಲೆಲ್ಲಾ ಸಂಸಾರದ ಕಡೆಯೇ ಮನಸ್ಸು ಹೋಗುವುದೆಂದೂ, ಅವರ ಯೋಚನೆ, ಇವರ ಮುಖ ಇವೇ ಜ್ಞಾಪಕಕ್ಕೆ ಬರುತ್ತಿದನೆಂದೂ ಮನಸ್ಸಿಗೆ ಸಮಾಧಾನವೇ ಇರುತ್ತಿರಲಿಲ್ಲವೆಂದೂ ಹೇಳಲು, ಆಕೆಗೆ ಯಾರಮೇಲೋ ವಿಶೇಷವಾದ ಮಮತೆಯಿದ್ದದರಿಂದ ಹೀಗಾಗುತ್ತಿತ್ತೆಂದು ತಿಳಿದು, ಆಕೆಯನ್ನು ಕುರಿತು “ ಯಾರಮುಖ ಜ್ಞಾಪಕಕ್ಕೆ ಬರುತ್ತದಮ್ಮ? ಸಂಸಾರದಲ್ಲಿ ಯಾರ ಮೇಲೆ ನಿಮಗೆ ವಿಶೇಷ ಅಂತಃಕರಣ, ಹೇಳಿ” ಎಂದು ಕೇಳಿದರು. ಆಕೆಯು ತನ್ನ ಅಣ್ಣನಮಗು ಒ೦ದು ಇತ್ತೆಂದೂ, ಅದನ್ನು ಸಾಕುತ್ತಿದ್ದಳೆಂದೂ ಅದರಮೇಲೆ ಆಕೆಗೆ ವಿಶೇಷ ಮಮತೆಯೆಂದೂ ಹೇಳಿದಳು. ಅದನ್ನು ಕೇಳಿ ಪರಮಹಂಸರು “ ಒಳ್ಳೆಯದು; ಹಾಗಾದರೆ ಇನ್ನು ಮೇಲೆ ಆ ಹುಡುಗನಿಗೆ ನೀವು ಏನೇನು ಮಾಡುತ್ತೀರಿ—ಊಟ ಮಾಡಿಸುವುದು ಬಟ್ಟೆ ಹಾಕುವುದು—ಅದೆಲ್ಲಾ ಸಾಕ್ಷಾತ್ ಗೋಪಾಲನಿಗೆ ಮಾಡುವಹಾಗೆ ಭಾವಿಸಿ ಮಾಡಿ ; ಗೋಪಾಲರೂಪಿಯಾದ ಭಗವಂತನೇ ಆ ಹುಡುಗನೊಳಗಿರುವ ಹಾಗೂ, ಅವನಿಗೇ ಊಟ ಮಾಡಿಸುವುದು, ಬಟ್ಟೆ ಹಾಕುವುದು, ಸೇವೆಮಾಡುವುದು ಇವನ್ನೆಲ್ಲಾ ಮಾಡುವಹಾಗೂ ಭಾವಿಸಿಕೊಂಡು ಮಾಡಿ ; ಮನುಷ್ಯನಿಗೆ ಮಾಡುತ್ತೇನೆಂದು ಯಾಕಮ್ಮ ಭಾವಿಸಿ ಕೊಳ್ಳಬೇಕು ? ಎಂಥ ಭಾವವೋ ಅಂಥ ಲಾಭ! ” ಎಂದು ಹೇಳಿದರು. ಆ ಕ್ರಮವನ್ನು ಅನುಸರಿಸುತ್ತ ಬರಲು ಆಕೆಗೆ ಶೀಘ್ರದಲ್ಲಿಯೇ ವಿಶೇಷವಾದ ಮಾನಸಿಕ ಉನ್ನತಿ ಯುಂಟಾಯಿತಂತೆ.

ಮತ್ತೊಬ್ಬಾಕೆಯು ಬಂದು ” ಸ್ವಾಮಿ ನನಗೆ ಬಹಳವಾಗಿ ದೇವರ ಧ್ಯಾನ ಮಾಡಬೇಕೆಂದಾಶೆಯಿದೆ. ಮನಸ್ಸನ್ನೆಲ್ಲಾ ಅವನಮೇಲೆ ಇಟ್ಟುಬಿಡಬೇಕೆನ್ನುತ್ತೇನೆ; ಆದರೆ ಏನೇನು ಮಾಡಿದರೂ ಮನಸ್ಸೇ ಬಗ್ಗುವುದಿಲ್ಲವಲ್ಲ! ಏನುಮಾಡಲಿ ?” ಎಂದು ಕೇಳಿದಳು. ಅದಕ್ಕೆ ಪರಮಹಂಸರು “ ಅವನಮೇಲೆ (ದೇವರಮೇಲೆ) ಭಾರಹಾಕಿ ಬಿಡಬೇಕಮ್ಮ! ಗಾಳಿಗೆ ಸಿಕ್ಕಿದ ಎಂಜಲೆಲೆಯ ಹಾಗಿದ್ದು ಬಿಡಬೇಕು. ಅದು ಹ್ಯಾಗೆ ಅಂತೀರಿ ? ಎಲೆ ಬಿದ್ದಿದೆ. ಅದನ್ನು ಗಾಳಿ ಎಲ್ಲೆಲ್ಲಿಗೆ ಎತ್ತಿಕೊಂಡುಹೋದರೆ ಅಲ್ಲಲ್ಲಿಗೆ ಹೊರಟುಹೋಗುತ್ತದೆ. ಅದರ ಹಾಗೆ ಅವನ ಮೇಲೆ ಭಾರಹಾಕಿದ್ದು ಬಿಡಬೇಕು. ಚೈತನ್ಯವಾಯುವು ಹ್ಯಾಗೆ ಹ್ಯಾಗೆ ಮನಸ್ಸನ್ನು ತಿರುಗಿಸುತ್ತೋ ಹಾಗೆ ಹಾಗೆತಿರುಗಬೇಕು—ಇಷ್ಟೆ! ಇನ್ನೇನು? ” ಎಂದರು.

ಆದರೆ ಕೆಲವು ಅಸಹ್ಯಕರಗಳಾದ ಕೈಶಕರಗಳಾದ ತಾಂತ್ರಿಕ, ಕಾಪಾಲಿಕ ಮುಂತಾದ ಮಾರ್ಗಗಳನ್ನು ಮಾತ್ರ ಯಾರಿಗೂಅನುಸರಿಸುವ ಹಾಗೆ ಹೇಳುತ್ತಿರಲಿಲ್ಲ. ಅವೆಲ್ಲ ನಿರುಪಯೋಗವೆಂದಾಗಲಿ ಸುಳ್ಳೆಂದಾಗಲಿ ಅವರ ಅಭಿಪ್ರಾಯವಲ್ಲ. ಆ ವಿಚಾರವಾಗಿ “ಎಲೋ ದ್ವೇಷಬುದ್ದಿ ಯಾಕೋ ? ಅದೂ (ಕಾಪಾಲಿಕಅಥವಾ ತಾಂತ್ರಿಕಮಾರ್ಗ) ಒಂದುಮಾರ್ಗ. ಆದರೆ ಕೊಳಕುಮಾರ್ಗ. ಒಂದು ಮನೆಯೊಳಗೆ ಹೋಗುವುದಕ್ಕೆ ಎಷ್ಟೋ ಬಾಗಿಲುಗಳಿವೆ. ದೊಡ್ಡ ಬೀದಿಯ ಬಾಗಿಲಿದೆ, ಕಿಟಕಿಯ ಬಾಗಿಲಿದೆ.ಗುಡಿಸುವವನು ಬರುವುದಕ್ಕೆ ಹಿತ್ತಿಲುಕಡೆ ಒಂದು ಬಾಗಿಲೂ ಇದೆ. ಎಲ್ಲವನ್ನೂ ಬಿಟ್ಟು ಈ ಹಿತ್ತಿಲಿನ ಕೊಳಕು ಬಾಗಿಲಿಂದ ಏಕೆ ಬರಬೇಕು ? ” ಎಂದು ಹೇಳುತ್ತಿದರು. ಇದಕ್ಕೆ ಕಾರಣವೇನೆಂದರೆ ಅವರು ನಮ್ಮಂತೆ ಸ್ಕೂಲವಾದ ದೇಹವನ್ನು ನೋಡದೆ ಪ್ರತಿಯೊಬ್ಬರ ಮನಸ್ಸನ್ನೂ ಹೃದಯವನ್ನೂ ನೋಡಬಲ್ಲವರಾಗಿದರು. ರೋಗಿಯ ಸ್ಥಿತಿಯನ್ನು ತಿಳಿದುಕೊಂಡ ವೈದ್ಯನಂತೆ ಅವರವರ ಮನಸ್ಸು, ಸ್ವಭಾವ, ಸಂಸ್ಕಾರ, ಮುಂತಾದುವುಗಳಿಗೆ ಸರಿಯಾದ ಮಾರ್ಗವನ್ನು ವಿಧಿಸಿ ಅವಶ್ಯವಿದ್ದರೆ ಅವುಗಳನ್ನು ಹೇಗೆಬೇಕೋ ಹಾಗೆ ತಿರುಗಿಸುತ್ತಿದ್ದರು!

ಹೀಗೆ ಪರಮಹಂಸರು ಹೆಂಗಸರು, ಗಂಡಸರು, ಯುವಕರು, ಯುವತಿಯರು ಯಾರು ಬಂದರೂ ಅವರವರಿಗೆ ತಕ್ಕ ಮಾರ್ಗವನ್ನು ಅವರವರಿಗೆ ತಕ್ಕ ರೀತಿಯಲ್ಲಿ ಬೋಧಿಸುತ್ತಿದ್ದುದನ್ನು ಅವರ ಜೀವನದುದ್ದಕ್ಕೂ ನಾವು ನೋಡಬಹುದು.  

Leave a Reply