ನಮಗೆ ಇಂದು ಬೇಕಾಗಿರುವುದು ಶಕ್ತಿ. ಅದಕ್ಕಾಗಿಯೇ ಆತ್ಮವಿಶ್ವಾಸವಿರಲಿ. ನಾವು ದುರ್ಬಲರಾಗಿರುವೆವು. ಅದಕ್ಕಾಗಿಯೇ ಈ ರಹಸ್ಯ, ಈ ಮಾಯಮಂತ್ರಗಳೆಲ್ಲ ನಮ್ಮನ್ನು ಆವರಿಸಿರುವವು! ~ ಸ್ವಾಮಿ ವಿವೇಕಾನಂದ
ಮೊದಲು ನಿಮ್ಮ ನರಗಳನ್ನು ದೃಢಗೊಳಿಸಿಕೊಳ್ಳಿ. ನಮಗೆ ಇಂದು ಬೇಕಾಗಿರುವುದು ಕಬ್ಬಿಣದಂಥ ಮಾಂಸಖಂಡಗಳು, ಉಕ್ಕಿನಂತಹ ನರಗಳು. ನಾವು ಬೇಕಾದಷ್ಟು ಅತ್ತಿರುವೆವು. ಇನ್ನು ಸಾಕು. ನಿಮ್ಮ ಕಾಲಿನ ಮೇಲೆ ನಿಂತು ಪುರುಷಸಿಂಹರಾಗಿ.
ನಮಗೆ ಇಂದು ಬಹಳ ಮುಖ್ಯವಾಗಿ ಬೇಕಾಗಿರುವುದು ಶ್ರದ್ಧೆ. ದುರದೃಷ್ಟವಶಾತ್ ಅದು ಇಂದು ಮುಕ್ಕಾಲುಪಾಲು ಮರೆಯಾಗಿದೆ. ಅದಕ್ಕಾಗಿಯೇ ನಾವು ಇಂತಹ ಅಧೋಗತಿಗೆ ಬಂದಿರುವುದು. ಯಾವುದೇ ವ್ಯಕ್ತಿಯನ್ನು ಉನ್ನತಿಗೇರಿಸುವುದು ಶ್ರದ್ಧೆ. ಅಧೋಗತಿಗೇರಿಸುವುದು ಅಶ್ರದ್ಧೆ. ಯಾರು ತಾನು ದುರ್ಬಲ ಎಂದು ಆಲೋಚಿಸುತ್ತಿರುವನೋ ಅವನು ದುರ್ಬಲನೇ ಆಗುತ್ತಾನೆ ಎಂದು ರಾಮಕೃಷ್ಣ ಪರಮಹಂಸರು ಹೇಳುತ್ತಿದ್ದರು. ಇದು ಸತ್ಯ. ಇಂಥಾ ಶ್ರದ್ಧೆಯನ್ನು ನೀವು ರೂಢಿಸಿಕೊಳ್ಳಬೇಕು.
ನಮ್ಮಪೂರ್ವಜರಾದ ಋಷಿಗಳು ಆತ್ಮ ಅನಂತವಾದುದು, ಶಕ್ತಿ ಅನಂತವಾದುದು ಎಂದು ಏಕವಾಣಿಯಿಂದ ಬೋಧಿಸಿದ್ದಾರೆ. ಅದನ್ನು ನಂಬಿ. ಆತ್ಮನನ್ನು ಯಾವುದೂ ನಾಶ ಮಾಡಲಾರದು. ಅದರಲ್ಲಿ ಅನಂತ ಶಕ್ತಿ ಇದೆ. ಅದನ್ನು ವ್ಯಕ್ತಪಡಿಸಬೇಕಷ್ಟೆ.
ನಮಗೆ ಇಂದು ಬೇಕಾಗಿರುವುದು ಆತ್ಮಶ್ರದ್ಧೆ. ಎಲ್ಲವನ್ನೂ ಅಪಹಾಸ್ಯ ಮಾಡುವ, ಹುಡುಗಾಟಿಕೆಯಿಂದ ನೋಡುವ ಸ್ವಭಾವ ನಮ್ಮ ಜನಾಂಗದ ಜೀವನದ ಮೇಲೆ ದಾಳಿ ಇಡುತ್ತಿದೆ. ಅದನ್ನು ತ್ಯಜಿಸಿ. ಧೀರರಾಗಿ, ಶ್ರದ್ಧಾವಂತರಾಗಿ, ಉಳಿದುದೆಲ್ಲ ಸ್ವಾಭಾವಿಕವಾಗಿ ಸಿದ್ಧಿಸುವುದು.
ಅಗಾಧವಾದ ಸಮುದ್ರದಲ್ಲಿ ಒಬ್ಬರು ಒಂದು ಸಣ್ಣ ನೀರಗುಳ್ಳೆಯಾಗಿಯೂ, ಮತ್ತೊಬ್ಬರು ದೊಡ್ಡ ಅಲೆಯಾಗಿಯೂ ಇರಬಹುದು. ಆದರೆ ಇಬ್ಬರ ಹಿಂದೆಯೂ ಇರುವುದು ಒಂದೇ ವಿಸ್ತಾರವಾದ ಸಮುದ್ರ. ಇಬ್ಬರ ಹಿಂದೆಯೂ ಜೀವಶಕ್ತಿ ಎಂಬ, ಆತ್ಮಚೈತನ್ಯವೆಂಬ ಅನಂತ ಸಾಗರವಿರುವುದು. ಇದನ್ನು ನಾವು ಅರಿತಿರಬೇಕು.
ನಾನು ಮತ್ತೆ ಮತ್ತೆ ಹೇಳುವುದು ಇದನ್ನೇ. ಶ್ರದ್ಧೆ ಬೆಳೆಸಿಕೊಳ್ಳಿ. ನಿಮ್ಮಲ್ಲಿ ನೀವು ಶ್ರದ್ಧೆಯಿಡಿ. ನಿಮ್ಮ ಸಾಮರ್ಥ್ಯವನ್ನು ನೆನೆಸಿಕೊಳ್ಳಿ. ನಿಮಗೆ ಲೌಕಿಕ ಸಂಪತ್ತು ಬೇಕಾದರೆ ಸಾಹಸದಿಂದ ಕೆಲಸ ಮಾಡಿ. ನಿಮಗದೆ ಲಭಿಸಿಯೇ ತೀರುತ್ತದೆ. ಮಾನಸಿಕ ಭೂಮಿಕೆಯಲ್ಲಿ ನಿಮ್ಮೆಲ್ಲ ಶ್ರಮ ವಿನಿಯೋಗಿಸಿದರೆ ನೀವು ಮಹಾ ಮೇಧಾವಿಗಳಾಗುತ್ತೀರಿ. ನಿಮಗೆ ಮುಕ್ತಿ ಬೇಕಾದರೆ ಧಾರ್ಮಿಕ ಭೂಮಿಕೆಯಲ್ಲಿ ಸಾಧನೆ ಮಾಡಿ; ನಿಮಗೆ ಮುಕ್ತಿ ಖಚಿತವಾಗಿ ದೊರಕುವುದು.
ನಿಮ್ಮನ್ನು ನೀವು ಮೇಲಿಂದ ಮೇಲೆ ದುರ್ಬಲರು. ಅಶಕ್ತರು ಎಂದು ಹೇಳಿಕೊಳ್ಳುತ್ತಾ, ಭಾವಿಸುತ್ತಾ ಇದ್ದರೆ ಶಾಶ್ವತವಾಗಿ ದುರ್ಬಲರಾಗಿಯೇ ಉಳಿದುಹೋಗುತ್ತೀರಿ. “ನನಗೆ ಅಸಾಧ್ಯವಾದ್ದು ಯಾವುದೂ ಇಲ್ಲ” ಅನ್ನುವುದನ್ನು ಖಚಿತವಾಗಿ ನಂಬಿ. ಪ್ರಯತ್ನದ ಹೆಜ್ಜೆಗಳನ್ನಿಡಿ. ನಿಮಗೆ ಗೆಲುವು ಶತಃಸಿದ್ಧ.